ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಯ ಭೀಕರತೆ ತೆರೆದಿಟ್ಟ ಅಶ್ವತಿ

ಕಲಬುರ್ಗಿಯ ಅಲ್‌ ಖಮರ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ಪ್ರಕರಣ
Last Updated 3 ಜುಲೈ 2016, 0:29 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಿನ್ನ ಕಪ್ಪು ಮುಸುಡಿ ನೋಡಿದರೆ ನಮಗೆ ಭಯವಾಗುತ್ತದೆ. ಇದಕ್ಕಾಗಿಯೇ ನಿನ್ನ ತಂದೆ ನಿನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ರೇಗಿಸುತ್ತಲೇ ಮೇ 9ರ ರಾತ್ರಿ ನನ್ನ ಕೊಠಡಿಗೆ ನುಗ್ಗಿದ ಆದಿರಾ ಮತ್ತು ಲಕ್ಷ್ಮಿ  ಬಲವಂತವಾಗಿ ಶೌಚಾಲಯ ಶುಚಿಕರವನ್ನು ಕುಡಿಸಿದರು’.
ರ‍್ಯಾಗಿಂಗ್‌ಗೆ ಒಳಗಾಗಿದ್ದಾರೆ ಎನ್ನಲಾದ ಇಲ್ಲಿನ ಅಲ್ ಖಮರ್ ಕಾಲೇಜಿನ ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಅಶ್ವತಿ ಘಟನೆಯ ಕರಾಳತೆಯನ್ನು ತೆರೆದಿಟ್ಟಿದ್ದಾರೆ.

ಸದ್ಯ ಕೇರಳದ ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ (ಕೆಎಂಸಿಎಚ್‌) ಚಿಕಿತ್ಸೆ ಪಡೆಯುತ್ತಿರುವ ಅಶ್ವತಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕೇರಳ ಸರ್ಕಾರ, ಕರ್ನಾಟಕ ಸರ್ಕಾರ, ಕರ್ನಾಟಕ ಪೊಲೀಸ್‌ ಹಾಗೂ ಅಲ್‌ ಖಮರ್‌ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನಾನು ನಿತ್ರಾಣಗೊಂಡು ಉಸಿರಾಡಲೂ ಆಗದೆ ಕುಸಿದು ಬಿದ್ದದ್ದನ್ನು ಕಂಡು ಹಿರಿಯ ವಿದ್ಯಾರ್ಥಿಗಳು ನನ್ನ ಗಂಟಲಿಗೆ ಕೈ ಹಾಕಿ ರಕ್ತ ವಾಂತಿ ಮಾಡುವಂತೆ ಮಾಡಿದರು. ನಂತರ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ನಾಲ್ಕು ದಿನ ತೀವ್ರ ನಿಗಾ ಘಟಕದಲ್ಲಿಯೂ, ಒಂದು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದೆ. ಈ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ನಡೆಸಲು ಬಂದಿದ್ದರು. ಆದರೆ, ನಾನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಹಿಂದಿರುಗಿದರು. ಈ ನಡುವೆ ಅಲ್ಲಿಗೆ ಬಂದ ಹಿರಿಯ ವಿದ್ಯಾರ್ಥಿಗಳು ಈ ಸ್ಥಿತಿಗೆ ತಾನೇ ಕಾರಣ ಎಂದು ಹೇಳಿಕೆ ನೀಡಿ ತಮ್ಮ ಓದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು’ ಎಂದು ಅವರು ವಿವರಿಸಿದ್ದಾರೆ.

‘ಮೇ 15ರಂದು ಪೊಲೀಸರು ಮತ್ತೆ ವಿಚಾರಣೆಗೆ ಬರುವುದನ್ನು ಅರಿತಿದ್ದ ಅವರು ಉಳಿದಿದ್ದ ಸ್ವಲ್ಪ ಗ್ಲೂಕೋಸ್‌ ಅನ್ನು ನನಗೆ ಸಿರಿಂಜ್‌ ಮೂಲಕ ನೀಡಿ, ಆಸ್ಪತ್ರೆಗೆ ಯಾವುದೇ ಮಾಹಿತಿ ನೀಡದೆ  ತರಾತುರಿಯಲ್ಲಿ ನನ್ನನ್ನು ಕೇರಳಕ್ಕೆ ಕಳುಹಿಸಿಬಿಟ್ಟರು’ ಎಂದಿದ್ದಾರೆ.

‘ಮೇ 9ರಿಂದ ಜೂನ್‌ 18ರ ವರೆಗೆ ಅನ್ನ, ನೀರು ಸೇವಿಸಲಾಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ನನ್ನ ಈ ಸ್ಥಿತಿಗೆ ಕಾರಣರಾದ ಆದಿರಾ ಮತ್ತು ಲಕ್ಷ್ಮಿ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸಿ ನನಗೆ ಸಹಾಯ ಮಾಡಿ’ ಎಂದು ಅವರು ಮನವಿ ಮಾಡಿದ್ದಾರೆ.

‘ನಾನು ಹಾಗೂ ಚವರವಟ್ಟಂನ ಸೈನಿಹಿತಾ ಅಭ್ಯಾಸ ಮಾಡಿದ್ದನ್ನು  ಅವರಿಗೆ ಒಪ್ಪಿಸಬೇಕಿತ್ತು. ರಾತ್ರಿ ಅಡುಗೆ ಮಾಡಿಕೊಳ್ಳಲೂ ಸಮಯ ಸಿಗುತ್ತಿರಲಿಲ್ಲ. ಇದು ನಮ್ಮಿಬ್ಬರಿಗೆ ಮಾತ್ರ ಇದ್ದ ಶಿಕ್ಷೆ. ಹಿಂಸೆ ತಾಳಲಾರದೆ ಮನೆಗೆ ಕರೆ ಮಾಡಿ ಅಮ್ಮನಿಗೆ ವಿಷಯ ತಿಳಿಸಿ ಅಳುತ್ತಿದ್ದನ್ನು ಕಂಡ ಲಕ್ಷ್ಮಿ ಮತ್ತು ಆದಿರಾ, ಇನ್ನು ಮುಂದೆ ಈ ರೀತಿ ಮಾಡಿದರೆ ಫೋನ್‌ ಬಳಸಲು ಬಿಡುವುದಿಲ್ಲ ಎಂದು ಗದರಿಸಿದ್ದರು’ ಎಂದು ದಾಖಲಿಸಿದ್ದಾರೆ.

ಮೇ 9 ಕರಾಳ ದಿನ: ‘ಮೇ 9 ರ ರಾತ್ರಿ ಊಟಕ್ಕೆ ತಯಾರಿ ನಡೆಸುತ್ತಿದ್ದಾಗ ಲಕ್ಷ್ಮಿ ಮತ್ತು ಆದಿರಾ ಅವರ ಕೊಠಡಿಗೆ ಬರುವಂತೆ ಕರೆ ಬಂದಿತು. ಅಲ್ಲಿ ಲಕ್ಷ್ಮಿ, ಆದಿರಾ, ಶಿಲ್ಪಾ, ಕೃಷ್ಣಾ ಮತ್ತು ಜೋ ಇದ್ದರು. ನಾವು ಊರಿಗೆ ಹೋಗುವುದನ್ನು ಅರಿತಿದ್ದ ಅವರು ಮೇ 17ರಂದು ನೀವು ಊರಿಗೆ ಹೋಗುವುದು ಬೇಡ ಎಂದು ಕಟ್ಟಪ್ಪಣೆ ವಿಧಿಸಿದರು. ನಾವು ಅವರ ಮಾತು ಕೇಳಲಿಲ್ಲ. ಹಾಗಾದರೆ ಇಂದೇ ಹೊರಡಬೇಕು ಎಂದು ಕಠಿಣವಾಗಿ ಹೇಳಿದರು. ನಮ್ಮಲ್ಲಿ ಹಣ ಇಲ್ಲ ಎಂದು ಹೇಳಿದರೂ ಕೇಳದೆ ನಾಳೆಯೇ ಹೊರಡಬೇಕು ಎಂದರು. ಇಷ್ಟಕ್ಕೆ ತೃಪ್ತರಾಗದೇ ಇಷ್ಟ ಮತ್ತು ಇಷ್ಟವಾಗದವರ  ಹೆಸರು ಬರೆಯುವಂತೆ ಸೂಚಿಸಿದರು. ನಾವು ಬರೆದೆವು. ಆದರೂ ನಮ್ಮನ್ನು ನಿಂದಿಸಿದರು ಎಂದಿದ್ದಾರೆ.

ಸರ್ಕಾರ, ಪೊಲೀಸ್‌, ಕಾಲೇಜಿಗೆ ಪತ್ರ
‘ಅಶ್ವತಿ ಅಲ್‌ ಕಾಲೇಜಿನಲ್ಲಿ ಅನುಭವಿಸಿದ ಯಾತನೆಯನ್ನು ಅಕ್ಷರ ರೂಪಕ್ಕೆ ಇಳಿಸುವಾಗ ಯಾತನೆ ಅನುಭವಿಸಿದ್ದಾರೆ. ಅವರು ಬರೆದ ಪತ್ರವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕೇರಳ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಹಾಗೂ ಅಲ್‌ ಖಮರ್‌ ಕಾಲೇಜಿನ ಪ್ರಾಚಾರ್ಯರಿಗೆ ಅಂಚೆ ಮೂಲಕ ಕಳುಹಿಸಿಕೊಡಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ಕೋಯಿಕ್ಕೋಡ್‌ ಪೊಲೀಸರು ಪ್ರಕರಣ ದಾಖಲಿಸಿ, ಕಲಬುರ್ಗಿಯ ರೋಜಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ’ ಎಂದು ಪ್ರಕರಣ ಹೊರಬರಲು ಶ್ರಮಿಸಿದ ಯಡಪ್ಪಾಳದ ವಕೀಲ ಕೆ.ಪಿ. ಮಹಮ್ಮದ್‌ ಶಾಫಿ ‘ಪ್ರಜಾವಾಣಿ’ಗೆ ತಿಳಿಸಿದರು.

₹3 ಲಕ್ಷ ಸಾಲ
ಕೇರಳದ ಮಲಪ್ಪುರಂ ಜಿಲ್ಲೆಯ ಯಡಪ್ಪಾಳಿನವರಾದ ಅಶ್ವತಿ, ನರ್ಸಿಂಗ್‌ ಅಭ್ಯಾಸ ಮಾಡುವುದಕ್ಕಾಗಿ ಬ್ಯಾಂಕಿನಿಂದ ₹3 ಲಕ್ಷ ಸಾಲ ಪಡೆದಿದ್ದಾರೆ. ತಂದೆ ಕೂಲಿಕಾರನಾಗಿದ್ದು ಈಕೆ ಹುಟ್ಟಿದ ತಿಂಗಳಲ್ಲೇ ತೊರೆದಿದ್ದಾರೆ. ತಾಯಿ ಜಾನಕಿ ಕೂಲಿ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT