ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ 5 ಹೊಸ ನ್ಯಾಯಮೂರ್ತಿಗಳು

Last Updated 27 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐವರು ಸರ್ಕಾರಿ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. 2013 ಮತ್ತು 2014ರಲ್ಲಿ ಹೈಕೋರ್ಟ್‌ನ ಹಲವು ಹಿರಿಯ ನ್ಯಾಯಮೂರ್ತಿಗಳು ಸೇವೆ­ಯಿಂದ ನಿವೃತ್ತರಾಗಿದ್ದಾರೆ. ಖಾಲಿ ಇರುವ ಹುದ್ದೆ­ಗಳ ಭರ್ತಿಯ ಮೊದಲ ಹಂತವಾಗಿ ಐವರು ನ್ಯಾಯ­ಮೂರ್ತಿಗಳ ನೇಮಕಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

‘ಸರ್ಕಾರಿ ವಕೀಲರಾದ ಬಿ. ವೀರಪ್ಪ, ಪವನ್ ಕುಮಾರ್ ಭಜಂತ್ರಿ, ನರೇಂದ್ರ ಗುಹಾ, ಎಸ್‌. ಸುಜಾತ ಮತ್ತು ಪಿ.ಎಸ್‌. ದಿನೇಶ್ ಕುಮಾರ್ ಅವರು ಅವರು ಜನವರಿ ಮೊದಲ ವಾರದಲ್ಲಿ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನೇಮಕ ಪೂರ್ವದಲ್ಲಿ ನಡೆಯುವ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡಿದೆ. ನ್ಯಾಯಮೂರ್ತಿಗಳ ನೇಮಕ ಆದೇಶ ಶೀಘ್ರ ಹೊರಬೀಳಬಹುದು ಎಂದು ಗೊತ್ತಾಗಿದೆ. ನ್ಯಾಯಮೂರ್ತಿಗಳಾದ ವಿ. ಜಗನ್ನಾಥನ್, ಅಜಿತ್ ಗುಂಜಾಳ, ಎಚ್.ಎನ್. ನಾಗಮೋಹನ ದಾಸ್, ಎಚ್.ಎಸ್. ಕೆಂಪಣ್ಣ, ಬಿ.ಎಸ್. ಇಂದ್ರ­ಕಲಾ, ಕೆ.ಎನ್. ಕೇಶವ ನಾರಾಯಣ, ಜವ್ವಾದ್ ರಹೀಂ, ಕೆ. ಭಕ್ತವತ್ಸಲ ಅವರು 2013ರ ಈಚೆಗೆ ಸೇವೆಯಿಂದ ನಿವೃತ್ತರಾಗಿದ್ದಾರೆ.

ನ್ಯಾಯಮೂರ್ತಿಯಾಗಿದ್ದ ಗೋವಿಂದರಾಜು ಅವರು ರಸ್ತೆ ಅಪಘಾತವೊಂದರಲ್ಲಿ ಮೃತ­ಪಟ್ಟಿ­ದ್ದರು. ನ್ಯಾ. ದಿಲೀಪ್ ಬೋಸ್ಲೆ ಅವರ ವರ್ಗಾವಣೆ ನಂತರ, ಆ ಸ್ಥಾನಕ್ಕೆ ಇನ್ನೊಬ್ಬರು ಬಂದಿಲ್ಲ. ಹೆಚ್ಚು­ವರಿ ನ್ಯಾಯಮೂರ್ತಿ ಆಗಿದ್ದ ಬಿ.ವಿ. ಪಿಂಟೊ ಅವರ ಅವಧಿ 2013ರಲ್ಲಿ ಮುಗಿದಿದೆ.

ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ­ದಲ್ಲಿ ಎಂಟು ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ. ಧಾರವಾಡ ಪೀಠದ 11 ಕೊಠಡಿಗಳ ಪೈಕಿ ಐದು ಅಥವಾ ಆರು ಕೊಠಡಿಗಳಲ್ಲಿ ಮಾತ್ರ ಕಲಾಪ ನಡೆಯುತ್ತಿದೆ. ಕಲಬುರ್ಗಿ ಪೀಠದ 11 ಕೊಠಡಿ­ಗಳ ಪೈಕಿ ಮೂರರಲ್ಲಿ ಮಾತ್ರ ಕಲಾಪ ನಡೆ­ಯುತ್ತಿದೆ. ಕಲಬುರ್ಗಿ ಮತ್ತು ಧಾರವಾಡ ಪೀಠ ಸೇರಿದಂತೆ ರಾಜ್ಯ ಹೈಕೋರ್ಟ್‌ಗೆ 60 ನ್ಯಾಯ­ಮೂರ್ತಿಗಳ ಹುದ್ದೆಯನ್ನು ಸುಪ್ರೀಂ ಕೋರ್ಟ್‌ ಮಂಜೂರು ಮಾಡಿದೆ.

ಉಳಿದ ಹುದ್ದೆ ಭರ್ತಿಗೂ ಕ್ರಮ
‘ಹೆಸರುಗಳನ್ನು ಶಿಫಾರಸು ಮಾಡುವ ಮೂಲಕ ನಮ್ಮ ಪಾಲಿನ ಪ್ರಕ್ರಿಯೆ ಪೂರ್ಣ­ಗೊಳಿ­ಸಿ­ದ್ದೆವು. ಆದರೆ ಈ ವಿಚಾರ ಕೇಂದ್ರ ಸರ್ಕಾರದ ಬಳಿ ಹಲವು ದಿನಗಳಿಂದ ಹಾಗೇ ಉಳಿ­ದಿತ್ತು. ಅಲ್ಲದೆ, ಕರ್ನಾಟಕ ಆಡಳಿತ ನ್ಯಾಯ­ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವ ಕಾರ್ಯ ಕೂಡ ಪೂರ್ಣಗೊಂಡಿಲ್ಲ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಐವರು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ನಂತರ, ಉಳಿದ ಸ್ಥಾನ­ಗಳನ್ನೂ ಭರ್ತಿ ಮಾಡಲಾಗುವುದು. ಈ ವರ್ಷದ ಆರಂಭದಲ್ಲಿ ಲೋಕಸಭೆಗೆ ನಡೆದ ಚುನಾವಣೆ ಮತ್ತಿತರ ಕಾರಣಗಳಿಂದ ನೇಮಕ ತಡವಾಯಿತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT