ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿ’ ವರ್ಗದ 11 ಗಣಿ ಕಂಪೆನಿಗಳ ಗುತ್ತಿಗೆ

ದೇಶದಲ್ಲಿ ಮೊದಲ ಬಾರಿಗೆ ಇ–ಟೆಂಡರ್‌ಗೆ ರಾಜ್ಯ ಸರ್ಕಾರ ಆಹ್ವಾನ
Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯ 10 ಹಾಗೂ ಚಿತ್ರದುರ್ಗದ ಒಂದು ಕಂಪೆನಿ ಸೇರಿದಂತೆ ರಾಜ್ಯದಲ್ಲಿನ ‘ಸಿ’ ಕೆಟಗರಿಯ 11 ಗಣಿ ಕಂಪೆನಿಗಳನ್ನು ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇ–ಹರಾಜು ಪ್ರಕ್ರಿಯೆ ನಡೆಸುತ್ತಿದ್ದು ಈ ಸಂಬಂಧ ಅರ್ಜಿ ಆಹ್ವಾನಿಸಿದೆ.

1957ರ ಗಣಿ ಮತ್ತು ಅದಿರು ಕಾಯ್ದೆಗೆ ತಿದ್ದುಪಡಿ, 2015ರ ನೂತನ ಖನಿಜ ಹರಾಜು ನಿಯಮಗಳ ಜಾರಿ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ‘ಸಿ’ ಕೆಟಗರಿ ಗಣಿಗಾರಿಕೆ ಪ್ರದೇಶಗಳ ಹರಾಜಿಗೆ ಸರ್ಕಾರ ಮುಂದಾಗಿದೆ.

ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳವಾರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದ್ದು, ಇಲಾಖೆ ವೆಬ್‌ಸೈಟ್‌ (http://www.mstcecommerce.com/auctionhome/mlcl/index.jsp) ನಲ್ಲಿ ಮಾಹಿತಿ ನೀಡಲಾಗಿದೆ.

ಇದರಿಂದ ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಣಿ ಗುತ್ತಿಗೆ ಹಂಚಿಕೆ ಪ್ರಕ್ರಿಯೆಯ ಅಬ್ಬರಕ್ಕೆ ಮತ್ತೆ ಚಾಲನೆ ಸಿಗಲಿದೆ ಎಂದೇ ಹೇಳಲಾಗುತ್ತಿದೆ.

ಅಕ್ರಮ ನಡೆಸಿದ ಹಾಗೂ ನಿಯಮ ಉಲ್ಲಂಘನೆ ಆಧಾರದಲ್ಲಿ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಒಟ್ಟು 51 ಕಂಪೆನಿಗಳ ಗಣಿಗಳನ್ನು, ಸುಪ್ರೀಂ ಕೋರ್ಟ್‌ ನಿರ್ದೇಶಿತ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸಿನ ಮೇರೆಗೆ ‘ಸಿ’ ಕೆಟಗರಿಗೆ ಸೇರಿಸಲಾಗಿತ್ತು. ಇವುಗಳಲ್ಲಿ 15 ಗಣಿ ಪ್ರದೇಶಗಳನ್ನು ಹರಾಜು ಹಾಕಲು ಗುರುತಿಸಿದ್ದ ಸರ್ಕಾರ, ಮೊದಲ ಹಂತದಲ್ಲಿ 11 ಗಣಿ ಪ್ರದೇಶಗಳನ್ನು ಆಯ್ಕೆ ಮಾಡಿದೆ.

ಸಂಡೂರಿನ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನದ ಸ್ಮಾರಕ ಸಂರಕ್ಷಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ದೂರು ನೀಡಿರುವುದರಿಂದ ಹೊತ್ತೂರು ಟ್ರೇಡರ್ಸ್‌ ಮತ್ತು ಕಾರ್ತಿಕೇಯ ಮಿನರಲ್ಸ್‌ ಗಣಿ ಪ್ರದೇಶಗಳನ್ನು ಹರಾಜು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.

ವಿರೋಧ: ‘ಸಿ’ಕೆಟಗರಿ ಗಣಿ ಕಂಪೆನಿಗಳನ್ನು ಹರಾಜು ಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಮಾಜ ಪರಿವರ್ತನಾ ಸಮುದಾಯ ಏತನ್ಮಧ್ಯೆ ವಿರೋಧಿಸಿದೆ.

ಈ ಗಣಿ ಕಂಪೆನಿಗಳಿಂದ ಹಾಳಾಗಿರುವ ಪರಿಸರದ ಪುನರುಜ್ಜೀವನಕ್ಕೆ ಕನಿಷ್ಠ 15 ವರ್ಷಗಳಾದರೂ ಬೇಕು. ಆದರೆ ರಾಜ್ಯ ಸರ್ಕಾರ 1957ರ ಗಣಿ ಮತ್ತು ಅದಿರು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 2015ರ ಖನಿಜ ಹರಾಜು ನಿಯಮಗಳ ಅನ್ವಯ ಹರಾಜು ಹಾಕಲು ಮುಂದಾಗಿದೆ.

ಇದು ಗಣಿಬಾಧಿತ ಪ್ರದೇಶಗಳ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಐ.ಜಿ. ಪುಲ್ಲಿ ಕಳವಳ ವ್ಯಕ್ತಪಡಿಸಿದರು.

ಉಕ್ಕು ಉತ್ಪಾದಕರಿಗೆ ಮಾತ್ರ ಅವಕಾಶ
ಸರ್ಕಾರ ಆಹ್ವಾನಿಸಿರುವ ‘ಸಿ’ ಕೆಟಗರಿ ಗಣಿ ಪ್ರದೇಶಗಳ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಉಕ್ಕು ಹಾಗೂ ಕಬ್ಬಿಣ ಉತ್ಪಾದಿಸುವ ಉದ್ಯಮಿಗಳು ಮಾತ್ರ ಪಾಲ್ಗೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಇದರಿಂದ ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಗಳಲ್ಲಿದ್ದ ಗಣಿ ಉದ್ಯಮಿಗಳು ಉದ್ಯಮದಿಂದ ದೂರ ಸರಿಯುವ ಅನಿವಾರ್ಯತೆ ಎದುರಾಗಿದೆ.

ಬಳ್ಳಾರಿ ಜಿಲ್ಲೆಯ ರೆಡ್ಡಿ, ಲಾಡ್‌, ಸಿಂಗ್‌ ಸಹೋದರರು ಸೇರಿದಂತೆ ನೂರಾರು ಗಣಿ ಉದ್ಯಮಿಗಳನ್ನು ಹರಾಜು ಪ್ರಕ್ರಿಯೆಯಿಂದ ಈ ಮೂಲಕ ದೂರ ಇಡಲಾಗಿದೆ.

ಅಲ್ಲದೆ, ಈ ಷರತ್ತಿನಿಂದ ಜೆಎಸ್‌ಡಬ್ಲು, ಆರ್ಸೆಲರ್‌ ಮಿತ್ತಲ್‌, ಟಾಟಾ ಸ್ಟೀಲ್ಸ್‌, ಪೋಸ್ಕೊ, ಬಿಎಂಎಂ ಇಸ್ಪಾತ್‌ ಸೇರಿದಂತೆ ಇನ್ನಿತರ ಉಕ್ಕು ಉದ್ಯಮಿಗಳಿಗೆ ಅನುಕೂಲವಾಗಲಿದ್ದು, ಹರಾಜಿನಲ್ಲಿ ಗಣಿ ಪ್ರದೇಶಗಳ ಗುತ್ತಿಗೆ ಪಡೆಯಲು ಅವಕಾಶ ದೊರೆಯಲಿದೆ. ಉಕ್ಕು ಉತ್ಪಾದನೆಯಲ್ಲಿ ತೊಡಗಿರುವ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೂ ಅವಕಾಶ ಕಲ್ಪಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT