ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೊಂದಿಗೆ ತೆರಳುತ್ತಿದ್ದ ಕುಟುಂಬ ಸದಸ್ಯರ ಸಂಖ್ಯೆ ಇಳಿಕೆ: ಬ್ರಿಟನ್

ವೀಸಾ ನಿಯಮ ಕಠಿಣಗೊಳಿಸಿದ ಪರಿಣಾಮ
Published 1 ಮೇ 2024, 15:42 IST
Last Updated 1 ಮೇ 2024, 15:42 IST
ಅಕ್ಷರ ಗಾತ್ರ

ಲಂಡನ್‌: ವಿದ್ಯಾರ್ಥಿಗಳಿಗೆ ನೀಡುವ ವೀಸಾಕ್ಕೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಿದ ನಂತರ, ವಿದ್ಯಾರ್ಥಿಗಳೊಂದಿಗೆ ದೇಶಕ್ಕೆ ಬರುತ್ತಿದ್ದ ಅವರ ಕುಟುಂಬ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಬ್ರಿಟನ್‌ ಹೇಳಿದೆ.

ವಿದ್ಯಾರ್ಥಿ ವೀಸಾಕ್ಕೆ ಸಂಬಂಧಿಸಿ ಜನವರಿಯಿಂದ ಮಾರ್ಚ್‌ ವರೆಗಿನ ಮಾಹಿತಿಯನ್ನು ಗೃಹ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದೆ. ವೀಸಾಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಜನವರಿಯಿಂದ ಜಾರಿಗೊಳಿಸಲಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ, ಬ್ರಿಟನ್‌ಗೆ ಬಂದಿರುವ ವೀಸಾ ಪಡೆದವರ ಪತಿ ಅಥವಾ ಪತ್ನಿ, ಮಕ್ಕಳು ಇಲ್ಲವೇ ಅವರ ಕುಟುಂಬದ ಸದಸ್ಯರ ಸಂಖ್ಯೆಯಲ್ಲಿ ಶೇ 80ರಷ್ಟು ಇಳಿಕೆಯಾಗಿದೆ. ಈ ಅವಧಿಯಲ್ಲಿ 26 ಸಾವಿರ ವಿದ್ಯಾರ್ಥಿಗಳು ವೀಸಾ ಕೊರಿ ಅರ್ಜಿ ಸಲ್ಲಿಸಿದ್ದರು ಎಂದು ಇಲಾಖೆ ಹೇಳಿದೆ.

‘ವಿದ್ಯಾರ್ಥಿಗಳೊಂದಿಗೆ ಅವರ ಕುಟುಂಬ ಸದಸ್ಯರು ಬ್ರಿಟನ್‌ಗೆ ಬರುವ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದು ದೇಶ ಅನುಸರಿಸುತ್ತಿರುವ ವೀಸಾ ವಿತರಣಾ ವ್ಯವಸ್ಥೆಯಲ್ಲಿ ಮಾಡಿರುವ ಬದಲಾವಣೆಗಳು ಫಲನೀಡುತ್ತಿವೆ ಎಂಬುದನ್ನು ತೋರಿಸುತ್ತದೆ’ ಎಂದು ಪ್ರಧಾನಿ ರಿಷಿ ಸುನಕ್‌ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳ ಪೈಕಿ, ತಮ್ಮೊಂದಿಗೆ ಕುಟುಂಬದ ಸದಸ್ಯರು ಮತ್ತು ಅವಲಂಬಿತರನ್ನು ಕರೆತರುತ್ತಿದ್ದವರ ಸಂಖ್ಯೆ ಅಧಿಕವಿತ್ತು. ಆ ವ್ಯವಸ್ಥೆ ಸರಿ ಇರಲಿಲ್ಲ’ ಎಂದೂ ಅವರು ಹೇಳಿದ್ದಾರೆ.

ಈ ವರ್ಷ ಜನವರಿಯಲ್ಲಿ ಜಾರಿಗೊಳಿಸಿರುವ ವೀಸಾ ನಿಯಮಗಳ ಪ್ರಕಾರ, ಸಂಶೋಧನೆ ಕೈಗೊಳ್ಳುವವರನ್ನು ಹೊರತುಪಡಿಸಿದಂತೆ ಇತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬರುವುದರ ಮೇಲೆ ನಿರ್ಬಂಧ ಹೇರಲಾಗಿದೆ.

ಬ್ರಿಟನ್‌ನಲ್ಲಿ ಉದ್ಯೋಗ ಪಡೆಯುವುದಕ್ಕಾಗಿ, ವಿದ್ಯಾರ್ಥಿ ವೀಸಾವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದಕ್ಕಾಗಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮ ಜಾರಿಗೊಂಡಿರುವ ಕಾರಣ, ಉನ್ನತ ಅಧ್ಯಯನಕ್ಕಾಗಿ ಬ್ರಿಟನ್‌ಗೆ ತೆರಳುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT