ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಾಯುವ ನಿಯತ್ತಿನ ಸಾಧನ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ನಗರಗಳಲ್ಲಿ ಏರುತ್ತಿರುವ ಜನಸಂಖ್ಯೆ ವಸತಿ ಪ್ರದೇಶಗಳ ವಿಸ್ತರಣೆಗೂ ಕಾರಣವಾಗುತ್ತಿದೆ.  ಹೀಗಾಗಿ ಇಲ್ಲಿ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ. ಅದರಲ್ಲೂ ಜನನಿಬಿಡತೆ ಕಡಿಮೆಯಿರುವ ಪ್ರದೇಶಗಳಲ್ಲಿ ಇರುವ ಮನೆಗಳು ಡಕಾಯಿತರಿಗೆ ಆಹ್ವಾನ ನೀಡುವಂತಿರುತ್ತವೆ. ಪ್ರತಿಯೊಬ್ಬರಿಗೂ ಎಲ್ಲ ಕಾಲದಲ್ಲೂ ಪೊಲೀಸ್ ರಕ್ಷಣೆ ನೀಡುವುದು ಅಸಾಧ್ಯ.  ಆದ್ದರಿಂದ ತಮ್ಮ ಮನೆಗೆ ತಮ್ಮದೇ ಆದ ಸುರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಈಗ ಹೆಚ್ಚಾಗಿದೆ.

ಅನೇಕ ರೀತಿಯ ಇಲೆಕ್ಟ್ರಾನಿಕ್ ರಕ್ಷಣಾ ಉಪಕರಣಗಳು ಈಗ ಬಳಕೆಗೆ ಬರುತ್ತಿವೆ. ಇವುಗಳ ಅಳವಡಿಕೆಯ ವೇಳೆಯಲ್ಲಿ ಅಪರಿಚಿತರು ಬಂದಾಗ ಅದು ನೀಡುವ ಎಚ್ಚರಿಕೆ ಗಂಟೆಯಿಂದ ಮನೆಯಲ್ಲಿರುವವರು/ಸುತ್ತ ಮುತ್ತಲಿನವರು ಜಾಗ್ರತಗೊಂಡು  ಸೂಕ್ತ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಕಾರುಗಳಲ್ಲಿ ಇದರ ಬಳಕೆಯನ್ನು ಸಾಮಾನ್ಯವಾಗಿ ಕಾಣಬಹುದು.  ಇದರ ಉಪಯುಕ್ತತೆಯನ್ನು ಮನಗಂಡು ಅನೇಕ ವಸತಿ ಸಮುಚ್ಚಯಗಳಲ್ಲಿ ನಿರ್ಮಾಣದ ಹಂತದಲ್ಲಿಯೇ ಇವುಗಳ ಅಳವಡಿಕೆಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅತ್ಯಂತ ಸರಳವಾದ ಅಲಾರ್ಮ್‌ ವ್ಯವಸ್ಥೆಯಿಂದ ಮೊದಲಾಗಿ ಹೆಚ್ಚು ತಾಂತ್ರಿಕತೆಯಿಂದ ಕೂಡಿದ ಬಹೂಪಯೋಗಿ ಸಾಧನಗಳೂ ಬಳಕೆಯಲ್ಲಿವೆ.

ಮನೆ ಬಾಗಿಲಿಗೆ ಒಂದು ಸಣ್ಣ ರಂಧ್ರವನ್ನು ಕೊರೆದು ಅದಕ್ಕೆ ಸಣ್ಣ ಮಸೂರವನ್ನು ಅಳವಡಿಸಿರುತ್ತಾರೆ.  ಈ ಕಿಂಡಿಯಿಂದಲೇ ಪೂರ್ತಿ ಬಾಗಿಲು ತೆರೆಯದೆಯೇ ಅಪರಿಚಿತರನ್ನು ವಾಪಸ್ ಕಳುಹಿಸಬಹುದಾಗಿದೆ.  ಇದನ್ನು ಹೆಚ್ಚು ತಾಂತ್ರಿಕವಾಗಿ  ವಿನ್ಯಾಸಗೊಳಿಸಿರುವ  ‘ವಿಡಿಯೋ ಡೋರ್ ಫೋನ್’ ಹಲವು ವರ್ಷಗಳಿಂದ ವ್ಯಾಪಕ ಬಳಕೆಯಲ್ಲಿದೆ. ಮುಂಬಾಗಿಲಿನ ಕರೆಗಂಟೆಯನ್ನುಒತ್ತಿದಾಗ ಮನೆಯೊಳಗೆ ಜೋಡಿಸಿರುವ ಟೀವಿ ಪರದೆಯಂತಹ ಉಪಕರಣಕ್ಕೆ ಅಳವಡಿಸಿರುವ ಫೋನ್ ಮೊಳಗುತ್ತದೆ. 

ಈ ಟೆಲಿಫೋನನ್ನು ಕೈಗೆತ್ತಿಕೊಂಡರೆ ಹೊರಗಿನವರ ಚಿತ್ರ ಪರದೆಯ ಮೇಲೆ ಮೂಡುತ್ತದೆ. ಇದರಿಂದ ಹೊರಗಿನವರನ್ನು ಗುರುತಿಸಲು ಸಾಧ್ಯವಾಗಿ, ಅವರ ಪರಿಚಯವನ್ನು ತಿಳಿಯಬಹುದು.  ಇದನ್ನು ಮನೆಯಲ್ಲಿನ ಟೀವಿಗೂ ಹೊಂದಿಸಿಕೊಂಡು ರಿಮೋಟ್ ಬಳಕೆಯಿಂದ ಕುಳಿತಲ್ಲೇ ಇದರ ಉಪಯೋಗ ಮಾಡಿಕೊಳ್ಳಬಹುದು. ಇನ್ನಷ್ಟು ಮುಂದುವರಿದದ್ದು ‘ಇನ್ಟ್ರೂಷನ್ ಅಲಾರ್ಮ್ ಸಿಸ್ಟಂ’. ಇದರ ಕಂಟ್ರೋಲ್  ಪ್ಯಾನೆಲ್ ಅನ್ನು ಮನೆಯೊಳಗೆ ಅಳವಡಿಸಿ ಅದನ್ನು ಮನೆಯಲ್ಲಿ ಸುಲಭವಾಗಿ ತೆರೆಯಬಲ್ಲ ಬಾಗಿಲು, ಕಿಟಕಿ ಮುಂತಾದ ಕಡೆ ಮ್ಯಾಗ್ನೆಟಿಕ್  ಕನೆಕ್ಟರ್ ಮೂಲಕ ಜೋಡಿಸಿರುತ್ತಾರೆ.

ಇದರ ಪರಿಮಿತಿಯಲ್ಲಿ ಯಾರಾದರೂ ಬಂದಲ್ಲಿ ಅಥವಾ ಕಿಟಕಿ ಗಾಜನ್ನು ಒಡೆಯುವ ಪ್ರಯತ್ನ ಮಾಡಿದಲ್ಲಿ ಎಚ್ಚರಿಕೆ ಗಂಟೆ ಶಬ್ದವಾಗುತ್ತದೆ. ಇದನ್ನು ನಿಸ್ತಂತುವಾಗಿ ಕೂಡ ಜೋಡಿಸಬಹುದು. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಈ ರೀತಿಯ ಪ್ಯಾನೆಲ್‌ಗಳನ್ನು ಒಂದೆಡೆ ಸೇರುವಂತೆ ಮಾಡುವ ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂಗೆ  ಹೊಂದಿಸಿರುತ್ತಾರೆ.

ಇಡೀ ಕಟ್ಟಡದಲ್ಲಿ ಯಾವುದೇ ಮನೆಯಲ್ಲಿ ಉಂಟಾಗುವ ಆಕಸ್ಮಿಕಗಳನ್ನು ಇಲ್ಲಿ ದಾಖಲಾಗುವ ಸೂಚಕಗಳಿಂದ ಗುರುತಿಸಿ, ಅವರಿಗೆ ಅವಶ್ಯವಾದ ನೆರವನ್ನು ನೀಡುವ ವ್ಯವಸ್ಥೆ ಇರುತ್ತದೆ.  ಅದೇ ರೀತಿ ಈ ಉಪಕರಣಗಳ ತಯಾರಿಕಾ ಸಂಸ್ಥೆಗಳು ತಮ್ಮದೇ ಆದ ಮಾನಿಟರಿಂಗ್ ವ್ಯವಸ್ಥೆಯನ್ನು ಮಾಡಿ, ಅಲ್ಲಿಂದ ತಮ್ಮ ಗ್ರಾಹಕರಿಗೆ ಬೇಕಾದ ಸಹಾಯವನ್ನು ಒದಗಿಸಬಹುದು. ಕಳ್ಳ–ಕಾಕರಿಂದ ರಕ್ಷಣೆಯೇ ಅಲ್ಲದೆ ಬೆಂಕಿ ಅನಾಹುತ, ಅಡುಗೆ ಅನಿಲ ಸೋರಿಕೆ, ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಿಕೊಳ್ಳಲೂ ಉಪಯೋಗವಾಗುತ್ತದೆ.  

ಪೋಲಿಸ್, ಅಗ್ನಿಶಾಮಕ ದಳ,  ವೈದ್ಯಕೀಯ ನೆರವು ಹೀಗೆ ವಿವಿಧ ರೀತಿಯ ತುರ್ತು ನೆರವಿಗೂ ಈ ವ್ಯವಸ್ಥೆ ಸಹಾಯಕ ವಾಗುತ್ತದೆ.  ಇದಕ್ಕೆ ಆಟೊ ಡಯಲಿಂಗ್ ಸೌಲಭ್ಯ ಹೊಂದಿಸಿದಲ್ಲಿ ಅದರಲ್ಲಿ ಆದ್ಯತೆಯ ಆಧಾರದ ಮೇಲೆ ಮನೆಯವರು/ಹತ್ತಿರದವರು, ವೈದ್ಯರು ಇವರುಗಳ ಟೆಲಿಫೋನ್ ಸಂಖ್ಯೆಗಳನ್ನು ದಾಖಲಿಸಿಕೊಂಡು ಅಗತ್ಯ ಬಿದ್ದಲ್ಲಿ ನೇರವಾಗಿ ಅವರ ದೂರವಾಣಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿಕೊಳ್ಳಬಹುದು.

ಇಂತಹ ಸಂಪರ್ಕ ಸಾಧನಗಳನ್ನು ಕಟ್ಟಡಗಳಿಗೆ ಅಳವಡಿಸಿದಾಗ ಬೆಕ್ಕು ನಾಯಿಯಂತಹ ಸಾಕುಪ್ರಾಣಿಗಳು  ಓಡಾಡಿದರೂ ಮೂಡುವಂತಹ ‘ಹುಸಿ ಕರೆ’ಯನ್ನು ನಿವಾರಿಸುವಂತೆ ಮಾಡಿರುತ್ತಾರೆ. ಇದು ಸಾಮಾನ್ಯವಾಗಿ ಮೂರೂವರೆ ಅಡಿ ಎತ್ತರ ಮತ್ತು ಇಪ್ಪತ್ತೈದು ಕೆ.ಜಿ.ಗಿಂತ ಕಡಿಮೆ ತೂಕದ ವಸ್ತುಗಳನ್ನು ಗ್ರಹಿಸುವುದಿಲ್ಲ.

ಈ ರೀತಿಯ ಆಧುನಿಕ ತಂತ್ರಜ್ಞಾನದ ನೆರವಿನಿಂದ ದೊಡ್ಡ ಕಟ್ಟಡಗಳೇ ಅಲ್ಲದೇ ಮನೆಗಳಲ್ಲೂ ಪ್ರಾಣಹಾನಿ, ಆಸ್ತಿಹಾನಿ ಇಂತಹ ಆಕಸ್ಮಿಕಗಳನ್ನು ತಡೆಯಬಹುದು.  ಕ್ಲೋಸ್ಡ್ ಸರ್ಕ್ಯೂಟ್ ಟೀವಿ(ಸಿಸಿಟಿವಿ), ಆಕ್ಸೆಸ್ ಕಂಟ್ರೋಲ್ ಸಿಸ್ಟಂ ಈ ರೀತಿಯ ಸಾಧನಗಳು ಕಟ್ಟಡಗಳಿಗೆ ಬರುವವರನ್ನು ಗುರುತಿಸುವುದೇ ಅಲ್ಲದೇ ಅವರುಗಳ ಚಟುವಟಿಕೆಗಳನ್ನೂ ಗಮನಿಸಲು ಸಾಧ್ಯವಾಗುತ್ತದೆ.

ಈಗಂತೂ ಯಾವುದೇ ಕಚೇರಿಯಲ್ಲಿ ಉದ್ಯೋಗಿಗಳು ಒಳಗೆ ಹೋಗಬೇಕಾದರೆ ಅವರ ಗುರುತಿನ ಪಟ್ಟಿಗೆ ಅಳವಡಿಸಿರುವ ಮ್ಯಾಗ್ನೆಟಿಕ್ ಉಪಕರಣವನ್ನು ಕಚೇರಿಯ ಬಾಗಿಲಿಗೆ ಅಳವಡಿಸಿರುವ ಸೆನ್ಸಾರ್‌ಗೆ ಹೊಂದಿಸಿದಾಗಲಷ್ಟೇ ಒಳಹೋಗಲು  ಸಾಧ್ಯವಾಗುವ ಸಾಧನಗಳನ್ನು ಕಾಣಬಹುದು. ಇನ್ನಷ್ಟು ಆಧುನಿಕ ಸಾಧನವಾದ ‘ಬಯೋಮೆಟ್ರಿಕ್ ಸಾಧನ’ ಕೂಡ ಬಳಕೆಯಲ್ಲಿದೆ. ಇದು ವ್ಯಕ್ತಿಯ ಬೆರಳಚ್ಚು ಮತ್ತವರ ಅಕ್ಷಿಪಟಲವನ್ನು ಗುರುತಿಸುವಂತಹ ಸಾಮರ್ಥ್ಯ ಹೊಂದಿರುತ್ತದೆ. ಲಕ್ಷಾಂತರ ಜನರು ಸೇರುವ ತಿರುಪತಿ ದೇವಸ್ಥಾನದಂತಹ ಜನನಿಬಿಡ ಸ್ಥಳಗಳಲ್ಲಿ ಇದರ ಬಳಕೆಯಾಗುತ್ತಿದೆ.

ಈಗಂತೂ ‘ವರ್ಚುಯಲ್ ಹೋಂ’ ಅಂದರೆ ಒಂದು ರಿಮೋಟ್ ಬಳಕೆಯಿಂದ ಅಥವಾ ಸ್ಮಾರ್ಟ್‌ಫೋನ್ ಬಳಕೆಯಿಂದ  ಮನೆಯಲ್ಲಿ ಇಲ್ಲದಾಗಲೂ ಅಲ್ಲಿನ ದೀಪಗಳು ಮೊದಲಾಗಿ ಗ್ಯಾಸ್‌, ಗೀಸರ್ ಇವುಗಳನ್ನು ನಿಯಂತ್ರಿಸಬಲ್ಲ ಸಾಧನಗಳು ಬಳಕೆಗೆ ಬರುತ್ತಿವೆ. ಈ ಇಲೆಕ್ಟ್ರಾನಿಕ್ ರಕ್ಷಣಾ ಸಾಧನಗಳು ದೊಡ್ಡ ಕಟ್ಟಡಗಳಲ್ಲಿ ಹೆಚ್ಚು ಬಳಕೆಗೆ ಬರುತ್ತಿದ್ದರೂ ಅವುಗಳ ಬಳಕೆ ಮನೆಗಳಲ್ಲೂ ಏರುಗತಿಯಲ್ಲಿದೆ.  ಮನೆಯ ಎರಡೂ ಕಡೆ ಕಬ್ಬಿಣದ ಬಾಗಿಲುಗಳನ್ನು ಅಳವಡಿಸುವುದು ಹೆಚ್ಚು ಸುರಕ್ಷಿತ ಮತ್ತು ಅಷ್ಟೇನೂ ದುಬಾರಿಯದಲ್ಲ ಎಂಬ ಆಭಿಪ್ರಾಯ ಬಹಳವಾಗಿದೆ.

ಇಲೆಕ್ಟ್ರಾನಿಕ್ ಉಪಕರಣಗಳು ಅತಿ ಕಡಿಮೆಯೆಂದರೂ ಹತ್ತು ಸಾವಿರ ರೂಪಾಯಿಯಿಂದ ಪ್ರಾರಂಭವಾಗಿ, ತಾಂತ್ರಕತೆ ಹೆಚ್ಚಾದಷ್ಟೂ ಬೆಲೆ ಏರುತ್ತಾ ಹೋಗುತ್ತದೆ. ಇವುಗಳ ಅಳವಡಿಕೆಗೆ ಸರಿಯಾದ ತಂತ್ರಜ್ಞರ ಅವಶ್ಯಕತೆ ಇದೆ. ನಂತರ ನಿರ್ವಹಣೆಗೆ ಬೇಕಾಗಬಹುದಾದ ತಾಂತ್ರಿಕ ಸೇವೆಯ ಬಗ್ಗೆಯೂ ಸಾಮಾನ್ಯ ಜನರಲ್ಲಿ ಅನುಮಾನ ಇರುತ್ತದೆ.  ಇಂತಹ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟಗಾರರಿಗೆ ಅದನ್ನು ಮಾರಾಟ ಮಾಡುವಲ್ಲಿನ ಆಸ್ಥೆ ಆನಂತರದ ಸೇವೆಗೆ ಇರುವುದಿಲ್ಲ. ಹೀಗಾಗಿ ಆಯಾ ತಯಾರಕರೇ ಉತ್ತಮ ಮಾರಾಟ ನಂತರದ ತಾಂತ್ರಿಕ ಸೇವೆ ಬಗ್ಗೆಯೂ ಮುತುವರ್ಜಿ ವಹಿಸಿವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT