ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂದಕ್ಕೆ ಮರದ ಮೆರುಗು...

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆಧುನಿಕತೆಗೆ ತಕ್ಕಂತೆ ಮನೆಗಳ ವಿನ್ಯಾಸವೂ ವಿಶಿಷ್ಟ ರೂಪ ಪಡೆಯುತ್ತಿವೆ. ಇರುವ ಜಾಗದಲ್ಲಿ ಎಲ್ಲಾ ರೀತಿಯ  ವ್ಯವಸ್ಥೆ    ಸೌಲಭ್ಯ ಸಿಗಬೇಕು ಎಂಬುದು ಮನೆ ಕಟ್ಟುವವರ ಅಭಿಲಾಷೆ.

ಮನೆ, ಮನಸ್ಸಿಗೆ ಶಾಂತಿ–ನೆಮ್ಮದಿ ತರುವ ತಾಣ. ಇಂತಹ ನೆಲೆಯನ್ನು ಮನ ಮೆಚ್ಚುವ ಹಾಗೆ ನಿರ್ಮಿಸಬೇಕೆನ್ನುವುದು ಬಹುತೇಕರ ಆಸೆ. ಅಂಥದೊಂದ್ದು ಆಸೆ ಪಾಪಣ್ಣ ಕೋದಂಡರಾಮ ಅವರದೂ ಆಗಿತ್ತು.

ಸ್ವಂತ ಉದ್ಯೋಗ ನಡೆಸುತ್ತಿರುವ ಪಾಪಣ್ಣ, ಹೊಸಕೆರೆಹಳ್ಳಿಯಲ್ಲಿ ವಾಸವಾಗಿದ್ದಾರೆ.  ಹಿಂದಿನಿಂದಲೂ  ಅವಿಭಕ್ತ ಕುಟುಂಬದಲ್ಲಿ ವಾಸವಾಗಿರುವ ಇವರು ಮನೆಯ ಸದಸ್ಯರಿಗೆ ತಕ್ಕಂತೆ ತಮ್ಮ ಚೆಂದದ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.

ಹಲವು ಮನೆಗಳ ಪ್ರಕಾರಗಳಲ್ಲಿ ತೊಟ್ಟಿ ಮನೆ, ಡ್ಯುಪ್ಲೆಕ್ಸ್, ಹೆಂಚಿನ ಮನೆ  ಈ ಎಲ್ಲಾ ಮನೆಗಳಿಗೆ ಒಂದಲ್ಲ ಒಂದು ಶೈಲಿ ಇರುತ್ತದೆ. ಹಾಗೆ ಇವರ ಮನೆಯು ಸಹ ಒಂದು ವಿಶಿಷ್ಟ ವಿನ್ಯಾಸದಿಂದ ಬೆರೆತಿದೆ ಎನ್ನಬಹುದು.

ಏನು ವಿಶೇಷ?
ಮೂರು ಮಹಡಿಯ ಡ್ಯುಪ್ಲೆಕ್ಸ್ ಮನೆ ಕಟ್ಟಿಸಿರುವ ಇವರು ಶೇ 50ರಷ್ಟು ಮರದ ಕುಸುರಿ ಕೆಲಸದಿಂದಲೇ ಮನೆಯನ್ನು ಸಿಂಗರಿಸಿದ್ದಾರೆ. ಹಾಲ್‌ ಸುತ್ತ ಇರುವ ಚೌಕಟ್ಟಿಗೆ ಮರದಿಂದ ಕೆತ್ತನೆ ಮಾಡಿಸಿರುವ ವಿನ್ಯಾಸ ನೋಡುಗರಿಗೆ ವಿಶಿಷ್ಟ ಎನಿಸುತ್ತದೆ.

ಮನೆಯ ಪ್ರವೇಶ ದ್ವಾರಕ್ಕೆ ಕಾಲಿಡುತ್ತಿದ್ದಂತೆಯೇ ಬಾಗಿಲಿನ ಮೇಲಿನ ಓಂ ಮತ್ತು ಕಳಶದ ಕೆತ್ತನೆ ಸ್ವಾಗತಿಸುತ್ತದೆ.

ಹಾಲ್‌ನಲ್ಲಿರುವ ಗೋಡೆಗಳ ಮೇಲಿನ ಮರದ ಕುಸುರಿ ಕೂಡ ಕಣ್ಸೆಳೆಯುತ್ತದೆ. ಬಲಭಾಗದಲ್ಲಿನ ಪೂಜಾ ಕೊಠಡಿಯು  ವಿಶಿಷ್ಟ ರೀತಿಯಲ್ಲಿದ್ದು, ಹೆಚ್ಚು ಮೆರುಗು ನೀಡುವ ಬಾಗಿಲಿನ ವಿನ್ಯಾಸವು ವೈಭವೀಕರಣಕ್ಕೆ ಸಾಕ್ಷಿಯಾಗಿದೆ.

ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ಮೂರು ಕೊಠಡಿಗಳಿದ್ದು, ಮೂರನೇ ಮಹಡಿಯಲ್ಲಿ ಸ್ಕೈಲೈಟ್‌ ಮತ್ತು ಹೋಂ ಥಿಯೇಟರ್‌ ವ್ಯವಸ್ಥೆ ಇದೆ.

ಒಂದೊಂದು ರೂಮಿನ ವಿನ್ಯಾಸವೂ ವಿವಿಧ ರೀತಿಯಲ್ಲಿ ಅಲಂಕೃತವಾಗಿದೆ. ಜಾಗದ ಉಳಿತಾಯಕ್ಕೆಂದು ವಾರ್ಡ್‌ರೋಬ್‌ ಮತ್ತು ಬಾತ್‌ರೂಂಗಳ ಬಾಗಿಲುಗಳನ್ನು ಸ್ಲೈಡ್ ರೀತಿಯಲ್ಲಿ ನಿರ್ಮಿಸಲಾಗಿದೆ. 

ಇನ್ನು ಅಡುಗೆ ಮನೆಯಲ್ಲಿ, ಅಚ್ಚುಕಟ್ಟಾಗಿ ಎಲ್ಲವೂ ಆಯಾ ಜಾಗಕ್ಕೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆ ಮಹಡಿಯ ಗ್ರಿಲ್‌ಗಳು ಸಹ ಚಿತ್ರಭರಿತವಾಗಿವೆ. ಗ್ಲಾಸ್‌ ಮತ್ತು ಮರದ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ.

ಹಿಂದಿನ ಕಾಲಗಳ ಮನೆಯ ವಿನ್ಯಾಸಕ್ಕೆ ಆಧುನಿಕ ಸವಲತ್ತುಗಳನ್ನು ಸೇರಿಸಿ ವಿಶಿಷ್ಟ ರೂಪದಲ್ಲಿ ಈ ಮನೆಯನ್ನು ಅನಾವರಣಗೊಳಿಸಿದ್ದಾರೆ.

ಮರದ ಕೆಲಸಕ್ಕೆಂದೇ ಕೇರಳದಿಂದ ಮರಗೆಲಸದವರನ್ನು ಕರೆಸಿ ಕೆಲಸ ಮಾಡಿಸಿದ್ದಾರೆ. ಅಂದದ ವಿನ್ಯಾಸವು  ಹೆಚ್ಚು ಮೆರುಗುಗೊಳ್ಳುವುದಕ್ಕೆ ಬಡಗಿಗಳ ಶ್ರಮ ಮತ್ತು ಕೈ ಚಳಕ ಕಾರಣ ಎನ್ನುತ್ತಾರೆ ಅವರು. ಮನೆಯ ಸ್ಥಳಾವಕಾಶಕ್ಕೆ ತಕ್ಕ ಪೀಠೋಪಕರಣಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಮನೆಯನ್ನು  ಮತ್ತಷ್ಟು ಅಂದಗೊಳಿಸಿದ್ದಾರೆ.

‘ಮರಗಳನ್ನು ಹೆಚ್ಚು ಉಪಯೋಗಿಸಿರುವುದರಿಂದ ಎಲ್ಲಾ ಋತುಮಾನಗಳಲ್ಲಿ ಮನೆಯ ಒಳಗಿನ ವಾತಾವರಣ ಒಂದೇ ಸಮನಾಗಿರುತ್ತದೆ’ ಎನ್ನುವುದು ಈ ವಿನ್ಯಾಸದ ಹಿಂದಿನ ಉದ್ದೇಶವಾಗಿದೆ.

ನಿರ್ವಹಣೆ...
ಮರ ಎಂದೂ ಚೆಂದವೇ. ಅಲ್ಲಿ ಮೂಡಲ ಕುಸುರಿ ಕೆಲಸ ಇನ್ನಷ್ಟು ವಿಭಿನ್ನ. ಸೂಕ್ಷ್ಮವಾಗಿ ಹಾಗೂ ನಾಜೂಕಿನಿಂದ ಮರದ ಕೆತ್ತನೆ ಕೆಲಸ ಮಾಡಲಾಗುತ್ತದೆ. ಕುಸುರಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ ಅಲಂಕಾರಗೊಳಿಸಿರುವುದರಿಂದ ಮರದ ಪೀಠೋಪಕರಣಗಳ ನಿರ್ವಹಣೆಯೂ ತುಂಬ ಮುಖ್ಯವಾಗುತ್ತದೆ. ಸರಿಯಾದ ನಿರ್ವಹಣೆ ಮಾಡಿದಾಗ ಮರಗಳ ಅಂದ ಹಾಗೇ ಉಳಿಯುತ್ತದೆ. ಅಲ್ಲದೆ ಹೆಚ್ಚು ದಿನ ಬಾಳಿಕೆ ಬರುತ್ತದೆ.

ಮರವು ದೂಳಿನಿಂದ ಕೂಡಿದ್ದರೆ ನೀರಿನ ಬಟ್ಟೆಯಿಂದ ಮರವನ್ನು ಸ್ವಚ್ಛಗೊಳಿಸದೆ,  ಉತ್ತಮ ಗುಣಮಟ್ಟದ  ಪಾಲಿಷ್‌  ಬಳಸಿ ಸ್ವಚ್ಛಗೊಳಿಸಬೇಕು. ಇದರಿಂದ ಮರಕ್ಕೆ ಮೊದಲಿನ ಹೊಳಪೇ ದಕ್ಕುತ್ತದೆ.

ಈ ಪಾಲಿಷ್‌ ಬಳಸಿರುವುದರಿಂದ ಮರಕ್ಕೆ ಕುಟ್ಟೆ (ಹುಳು)  ಹಿಡಿಯುವುದನ್ನು ತಪ್ಪಿಸಬಹುದು. ಆದರೆ, ಮರಕ್ಕೆ ನೀರು ಬೀಳದ ಹಾಗೆ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದುದು ಅತಿಮುಖ್ಯ.

ಪೇಂಟ್‌ನ ಬಳಕೆ  ಕಡಿಮೆ..
ಮನೆಯ ಗೋಡೆಗಳ ಅಂದ ಕಡಿಮೆಯಾಗುತ್ತಿದ್ದಂತೆಯೇ ಬಣ್ಣ ಬಳಿಯುವುದು ಮಾಮೂಲು. ಆದರೆ ಕೋದಂಡರಾಮ ಅವರ ಮನೆಗೆ ಬಣ್ಣ ಬಳಿಯುವ ತೊಂದರೆಯೇ ಇಲ್ಲ. ಇಲ್ಲಿ ಪೇಂಟ್‌ನ ಬಳಕೆ ಅತಿ ಕಡಿಮೆ. ಮರದಿಂದಲೇ ಹೆಚ್ಚು ವಿನ್ಯಾಸಗೊಳಿಸಿರುವುದರಿಂದ  ಪ್ರತಿ ಸಲವೂ ಬಣ್ಣ ಬಳಿಯುವ ಹೊರೆ ಇಲ್ಲಿ ಕಾಡುವುದಿಲ್ಲ.

ಮನೆಯ ಹೊರಗಡೆ ಸಹ ಕಲ್ಲು ಮತ್ತು ಟೈಲ್ಸ್‌ಗಳ ಮೆರುಗು ಇರುವುದರಿಂದ ಪೇಂಟ್‌ನ ಬಳಕೆ ಕಡಿಮೆ  ಎಂದು ಅವರು ಮಾಹಿತಿ ನೀಡುತ್ತಾರೆ.

ಸ್ಕೈಲೈಟ್‌ ವಿಶೇಷ
ಸ್ಕೈಲೈಟ್‌ ಎಂಬುದು ಇತ್ತೀಚಿನ ಟ್ರೆಂಡ್‌ ಆಗಿದೆ. ಅದು ಒಂದು ರೀತಿಯಲ್ಲಿ ಆಕರ್ಷಣೆಯ ಭಾಗವೂ ಹೌದು.  ಸ್ಕೈಲೈಟ್‌ ಬಹೂಪಯೋಗಿ ಸಾಧನವೂ ಹೌದು. ಬೆಂಗಳೂರಿನಂಥ ಕಾಂಕ್ರೀಟ್‌ ಕಾಡಿನಲ್ಲಿ ಮನೆಗಳು ಒತ್ತೊತ್ತಾಗಿ ನಿರ್ಮಾಣಗೊಂಡಿರುತ್ತವೆ. ಹೀಗಾಗಿ ಮನೆಯ ಒಳಗೆ ಗಾಳಿ ಬೆಳಕಿನ ಸಮಸ್ಯೆ ಹೆಚ್ಚು ಕಾಡುತ್ತದೆ. ಆದರೆ ಸ್ಕೈಲೈಟ್‌ ಇವೆಲ್ಲವುಗಳಿಗೆ ಉತ್ತಮ ಪರಿಹಾರ.

12 ಅಡಿ ಅಗಲ 10 ಅಡಿ ಉದ್ದದಷ್ಟು ಪಿರಮಿಡ್‌ ರೀತಿಯಲ್ಲಿ ಸ್ಕೈಲೈಟ್‌ ವ್ಯವಸ್ಥೆ  ನಿರ್ಮಿಸಿಕೊಂಡಿರುವುದರಿಂದ ನಿತ್ಯ ಹೆಚ್ಚಿನಂಶ ಸೂರ್ಯನ ಬೆಳಕೇ ಇಲ್ಲಿ ಬಳಕೆಯಾಗುತ್ತದೆ.
ಸ್ಕೈಲೈಟ್‌ನಿಂದ ಮಹಡಿಯ ಸ್ಚಲ್ಪ ಜಾಗ ವ್ಯರ್ಥವಾದಂತೆನಿಸಿದರೂ, ಗಾಳಿ, ಬಿಸಿಲಿನ ತಾಪವನ್ನು ನಿಯಂತ್ರಿಸುತ್ತದೆ ಎಂಬ ಸಮಾಧಾನವೂ ಇದೆ ಮನೆಮಂದಿಗೆ.

ಮನೆಯ ಹೊರಾಂಗಣದಲ್ಲಿ ಕಲ್ಲಿನ ಪಿಲ್ಲರ್‌ಗಳು...
ಮನೆಯ ಒಳಾಂಗಣವಷ್ಟೇ ಚೆಂದ ಕಂಡರೆ ಸಾಲದು. ಹೊರಾಂಗಣವೂ ಆಕರ್ಷಣೀಯವಾಗಬೇಕು ಎಂಬ ಕಾರಣಕ್ಕೆ ಕೋದಂಡರಾಮ ಮನೆಯ ಹೊರಗಡೆ ಕಲ್ಲಿನ ಪಿಲ್ಲರ್‌ಗಳನ್ನು ನಿರ್ಮಿಸಿದ್ದಾರೆ. ನೇಮ್‌ ಬೋರ್ಡ್‌ಗಳ ಬದಲಾಗಿ ಈ ಕಲ್ಲಿನ ಮೇಲೆ ಮನೆಯ ಸದಸ್ಯರ ಹೆಸರುಗಳನ್ನು ಕೆತ್ತಿಸಿದ್ದಾರೆ.

ಮನೆಯ ಮೇಲಿನ ಗೋಡೆಯ ಚಿತ್ತಾರ
ಮನೆಯ ಗೋಡೆಯ ಮೇಲ್ಭಾಗದಲ್ಲಿ ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುವ ವಿನ್ಯಾಸ ಮಾಡಿಸಿದ್ದಾರೆ. ಈ ಹಿಂದೆ ತಾವು ಇದ್ದ ಮನೆ ಮತ್ತು ಸುತ್ತಲು ಇದ್ದ  ತೋಟದ ಚಿತ್ರವನ್ನು 23 ಅಡಿ ಅಗಲ 15 ಅಡಿ ಉದ್ದದ ಸ್ಥಳದಲ್ಲಿ ಚಿತ್ತಾರವಾಗಿಸಿಕೊಂಡಿದ್ದಾರೆ.
ವೈಟ್‌ ಸಿಮೆಂಟ್‌ ಮತ್ತು ಟೈಲ್ಸ್‌ ಪೌಡರ್‌ ಉಪಯೋಗಿಸಿ ಬಣ್ಣಗಳ ಮಿಶ್ರಣದಿಂದ ಸುಮಾರು 3 ತಿಂಗಳ ಕಾಲ ಒಬ್ಬರೇ ಈ ಚಿತ್ರವನ್ನು ಬಿಡಿಸಿದ್ದಾರೆ. 


***
ನೆಮ್ಮದಿಯ ತಾಣವಾಗಬೇಕು
‘ಮನೆಯೆಂಬುದು ದೊಡ್ಡ ಮರದ ಹಾಗೆ. ನೆಲೆಯನ್ನು ಅರಸಿ ಬಂದ ಪಕ್ಷಿ, ಪ್ರಾಣಿಗಳಿಗೆ ಜಾಗ ನೀಡುತ್ತದೆ. ಹಾಗೆ ಒಮ್ಮೆ ನಿರ್ಮಿಸುವ ಸೂರು ಬಹುದಿನಗಳ ಕಾಲ ಮುಂದಿನ ಪೀಳಿಗೆಗೆ ಆಧಾರವಾಗಿರಬೇಕು ನೆಮ್ಮದಿಯ ಬಾಳ್ವೆ ನಡೆಸಬೇಕು’.
–ಪಾಪಣ್ಣ ಕೋದಂಡರಾಮ,  ಅಮೃತ ಬಿಲ್ಡರ್‌ ಮತ್ತು ಕನ್‌ಸ್ಟ್ರಕ್ಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT