ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂದಕ್ಕೆ ಸೆರಾಮಿಕ್ಸ್‌ ಮೆರುಗು

Last Updated 29 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮನೆ ಚಿಕ್ಕದಾಗಿದ್ದರೂ ಚೊಕ್ಕವಾಗಿರಬೇಕೆಂಬುದು ವಾಡಿಕೆಯ ಮಾತು. ಮನೆ ಅಂದವಾಗಿದ್ದರೆ ಮನಸ್ಸು ಕೂಡ ಉಲ್ಲಾಸದಾಯಕವಾಗಿರುತ್ತದೆ. ಗೃಹಾಲಂಕಾರವೆಂದರೆ ಎಂಥವರಿಗೂ ಬಹಳ ಇಷ್ಟ. ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಅಲಂಕರಿಸುವ ಹವ್ಯಾಸ ಅನೇಕ ಗೃಹಿಣಿಯರಿಗೆ ಇರುತ್ತದೆ. ಇರುವ ಸ್ಥಳಾವಕಾಶದಲ್ಲಿ ಮನೆಯನ್ನು ಅಲಂಕರಿಸುವುದು ಒಂದು ಕಲೆಯೇ ತಾನೆ.

ಅಂದಹಾಗೆ ಇತ್ತೀಚೆಗೆ ಮನೆಯನ್ನು ಅಲಂಕರಿಸುವ ವಸ್ತುವಾಗಿ ಪ್ರಮುಖ ಸ್ಥಾನದಲ್ಲಿರುವುದು ಸೆರಾಮಿಕ್ಸ್‌ನಿಂದ ತಯಾರಾದ ಗೃಹಾಲಂಕಾರ ವಸ್ತುಗಳು. ಮೊದಲ ನೋಟಕ್ಕೇ ಮನಸೆಳೆವ ಅಂದ ಹೊಂದಿರುವ ಇವುಗಳು ಮನೆಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಏನಪ್ಪ ಈ ಸೆರಾಮಿಕ್ಸ್‌?
ಪಿಂಗಾಣಿಯ ಮತ್ತೊಂದು ರೂಪವೇ   ಸೆರಾಮಿಕ್ಸ್‌. ಚೀನಾ ಕ್ಲೇಯಿಂದ ತಯಾರಿಸುವ ವಸ್ತುಗಳನ್ನು ಸೆರಾಮಿಕ್ಸ್‌ ಎಂದು ಕರೆಯುತ್ತಾರೆ. ಇದು ಬಿಳಿ ಮಣ್ಣಿನಿಂದ ತಯಾರಾಗುತ್ತದೆ.

ಹಲವು ವಸ್ತುಗಳು
ಮಗ್‌, ಜಾಡಿ, ಕಪ್‌ ಅಂಡ್‌ ಸಾಸರ್, ಹೂದಾನಿ, ಬಟ್ಟಲು,  ಲ್ಯಾಂಪ್‌, ಪ್ಲೇಟ್‌ಗಳು, ಗೊಂಬೆಗಳು, ಬಾತ್‌ರೂಮ್‌ ಪರಿಕರಗಳು, ಆಟಿಕೆಗಳು, ಪಾಟ್‌, ಅಡುಗೆ ಮನೆಯ ಹಲವಾರು ಸಾಮಗ್ರಿಗಳು ಸೆರಾಮಿಕ್ಸ್‌ನಿಂದ ರೂಪು ತಳೆದಿವೆ.

ಅದರಲ್ಲೂ ಅಡುಗೆ ಮನೆಯ ಅಂದ ಹೆಚ್ಚಿಸುವಲ್ಲಿ ಪಿಂಗಾಣಿಗಳ ಪಾತ್ರ ಮಹತ್ವದ್ದು. ಸೆರಾಮಿಕ್ಸ್‌ನಿಂದ ಟೈಲ್ಸ್‌ಗಳು,  ಮನೆಯ ಒಳಾಂಗಣದ ಗೋಡೆಯ ವಿನ್ಯಾಸಗಳು, ಆಭರಣಗಳು, ವಸ್ತ್ರದ ಬಟನ್‌ಗಳು ಇನ್ನು ಹಲವಾರು  ವಸ್ತುಗಳು ತಯಾರಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುತ್ತಿವೆ.

ಕಪಾಟಿನಲ್ಲಿ ಸೆರಾಮಿಕ್ಸ್‌
ಮನೆಯ ಅಂದವನ್ನು ಹೆಚ್ಚಿಸುವುದರಲ್ಲಿ ಕಪಾಟಿನಲ್ಲಿ ಎಂಥ ವಸ್ತುಗಳನ್ನು ಜೋಡಿಸಿದ್ದೇವೆ ಎನ್ನುವುದೂ ಮುಖ್ಯವಾಗುತ್ತದೆ. ಶೋಕೇಸ್‌  ಅಲಂಕರಿಸುವುದು ಒಂದು ಕಲೆಯೂ ಹೌದು. ಬಣ್ಣಬಣ್ಣದ ಚಿತ್ರದಿಂದ ಕೂಡಿರುವ ಸೆರಾಮಿಕ್ಸ್‌ನಿಂದ ತಯಾರಾದ ಶೋಪೀಸ್‌ಗಳನ್ನು ಬಳಸಿ ಮನೆಗೆ ಮತ್ತಷ್ಟು ಮೆರುಗು ನೀಡಬಹುದು. ಅನೇಕರು ದೊಡ್ಡ ಗಾತ್ರದ ಸೆರಾಮಿಕ್ಸ್‌ ಹೂದಾನಿಗಳನ್ನು ಶೋಕೇಸ್‌ ಪಕ್ಕದಲ್ಲಿರಿಸಿ ಅಲಂಕರಿಸುವುದು ಇಂದಿನ ಜನಪ್ರಿಯ ಟ್ರೆಂಡ್‌.

ಸೆರಾಮಿಕ್ಸ್‌ ಮತ್ತು ಪಿಂಗಾಣಿಗೆ ನಮ್ಮ ರಾಜ್ಯಕ್ಕಿಂತಲೂ ರಾಜಸ್ತಾನದಲ್ಲಿ ಹೆಚ್ಚು ಬೇಡಿಕೆ ಇದೆ. ಚೀನಾದಲ್ಲಿ ಇದರ ಬಳಕೆ ಬಹಳಷ್ಟಿದೆ. ಪಿಂಗಾಣಿ ಮತ್ತು ಸೆರಾಮಿಕ್ಸ್‌ನ ತಯಾರಿಕೆ ಹಿಂದಿನಿಂದಲೂ ಇದ್ದು ಪ್ರಸ್ತುತ ಇದರ ಬೇಡಿಕೆ ಹೆಚ್ಚಾಗಿದೆ.

ಇತ್ತೀಚೆಗಂತೂ ವಿವಿಧ ಭಂಗಿಯ ಮುಖವಾಡಗಳು, ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಮನೆಯ ಮೂಲೆಗಳಲ್ಲಿ ಸ್ಥಳಾವಕಾಶವಿದ್ದರೆ ಸೆರಾಮಿಕ್ಸ್‌ನಿಂದ ತಯಾರಾದ ಸಾಮಗ್ರಿಗಳನ್ನು ಇಟ್ಟು ಸಿಂಗರಿಸಬಹುದು.  ಮನೆಯ ಮೇಲ್ಚಾವಣಿಯಿಂದ ಇಳಿಬಿಟ್ಟ ಹ್ಯಾಂಗಿಂಗ್‌ಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಕೆಲವು ಮನೆಗಳ ಅಡುಗೆ ಕೋಣೆಯಲ್ಲಿ ಸೆರಾಮಿಕ್ಸ್‌ನಿಂದ ಕೂಡಿರುವ ಡಿನ್ನರ್‌ ಸೆಟ್‌ಗಳ ಕಾರುಬಾರು ಜೋರು. ಚಮಚದಿಂದ ಹಿಡಿದು ವಿಭಿನ್ನ ಆಕಾರದ ಬಟ್ಟಲುಗಳು ಅಡುಗೆ ಮನೆಯನ್ನು ಆವರಿಸಿರುತ್ತವೆ. ಸೆರಾಮಿಕ್ಸ್‌ಗಳು ಅತಿಥಿಗಳ ಕಣ್ಮನ ಸೆಳೆಯುತ್ತವೆ.

ಹೆಚ್ಚಿದ ಬೇಡಿಕೆ
ವಿವಿಧ ಭಂಗಿಯ ಬೊಂಬೆಯ ಮುಖವಾಡಗಳು. ಗುಂಡಾಕಾರದ, ಕೋಲಿನ ಹಾಗೆ ಇರುವ ಹೂಕುಂಡಗಳು, ಚಿತ್ರಾವಳಿಯಿಂದ ಕೂಡಿರುವ ಸೆರಾಮಿಕ್ಸ್ ವಾಲ್‌ಫ್ರೇಮ್‌ಗಳು ಲಭ್ಯ. ಗಿಫ್ಟ್‌ ನೀಡುವುದಕ್ಕೆ ಪ್ರೀತಿಪಾತ್ರರ ಛಾಯಾಚಿತ್ರಗಳನ್ನು ಕಾಫಿ ಮಗ್‌ಗಳ ಮೇಲೆ ಹಾಕಿಸಿಯೂ ನೀಡಬಹುದು. ಇಂಥ ವಸ್ತುಗಳಿಗೆ ಬೇಡಿಕೆ ಹೆಚ್ಚು.

ಸವಾಲಿನ ಕೆಲಸ
ಸೆರಾಮಿಕ್ಸ್‌ನಿಂದ ಯಾವುದೇ ವಸ್ತು ತಯಾರಿಸುವುದು ಸವಾಲಿನ ಕೆಲಸ. ಒಂದು ಮಗ್‌ ತಯಾರಿಸುವುದಕ್ಕೆ 1 ಗಂಟೆಯೂ ಹಿಡಿಯಬಹುದು 3 ಗಂಟೆಯೂ ಆಗಬಹುದು.ಅಂತಿಮ ರೂಪ ನೀಡುವಾಗ ಒಂದು ನೂಲಿನಿಂದಲೂ ಅದು ಹಾಳಾಗಬಹುದು.  ಹೀಗಾಗಿ ಕೊನೆಯ ಸ್ಪರ್ಶ ಸಿಕ್ಕಾಗಲೇ ಸಂತೋಷ ಸಿಗುವುದು. ಹೀಗೆ ಎಷ್ಟೋ ಬಾರಿ ಕೊನೆಯ ತನಕವೂ ನಿರೀಕ್ಷೆಯ ಎಳೆಯಲ್ಲೇ ಅರಳುವ ಸಿರಾಮಿಕ್ಸ್‌ಗೆ ಬಣ್ಣದ ಸ್ಪರ್ಶ ದಕ್ಕರಂತೂ ಅದರ ಅಂದಕ್ಕೆ ಸರಿಸಾಟಿಯಿಲ್ಲ.

***
ಪಿಂಗಾಣಿ ನೋಡಲು ಬಲು ಚಂದ. ಅದನ್ನು ಅಷ್ಟೇ ಜೋಪಾನವಾಗಿ ನಿರ್ವಹಿಸಬೇಕು. ಮನೆಗೆ ಸೊಬಗು ಅತಿಥಿಗಳ ಕಣ್ಣಲ್ಲಿ ಆಕರ್ಷಣೀಯ ವಸ್ತುವಾಗಿ ಮೆರೆಯುತ್ತಿದೆ.
–ವಿಶ್ವನಾಥ್‌,ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT