ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಲಂಕಾರಕ್ಕೆ ಸರಳ ಸೂತ್ರಗಳು

ಒಳಾಂಗಣ ವಿನ್ಯಾಸ
Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಮನೆಯ ಒಳಾಂಗಣ ವಿನ್ಯಾಸ  ಸುಲಭದ ಕೆಲಸವಲ್ಲ. ಪ್ರತಿ ಕೋಣೆಯಲ್ಲಿ ಕಲಾಕೃತಿಗಳನ್ನು ಸರಿಯಾದ ರೀತಿ ಜೋಡಿಸುವುದು ಜಾಣತನಕ್ಕೆ ಹಿಡಿವ ಕನ್ನಡಿಯೇ ಸರಿ.
 
ಕೆಲ ಸಂದರ್ಭಗಳಲ್ಲಿ ಮನೆಯ ವಿನ್ಯಾಸ ಮಾಡುವಾಗ ಚಿಕ್ಕಪುಟ್ಟ ವಿಷಯಗಳಿಗೆ ಗಮನ ನೀಡುವುದೇ ಇಲ್ಲ. ಮನೆ ವಿನ್ಯಾಸ ಅಂತಿಮಗೊಳಿಸುವ ಮೊದಲು ಗ್ಯಾಲರಿ ಹಾಗೂ ಮೆಟ್ಟಿಲುಗಳ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು. ಕೆಲವು ಸರಳ ಸೂತ್ರಗಳನ್ನು ಅನುಸರಿಸಿದರೆ ಮನೆಯನ್ನು ಆಕರ್ಷಕವಾಗಿ ಅಲಂಕರಿಸಬಹುದು.
 
ಮನೆಯನ್ನು ಅಲಂಕರಿಸುವುದಕ್ಕೂ ಮೊದಲು ಆ ಸ್ಥಳದ ಕೇಂದ್ರ ಬಿಂದು ಯಾವುದು ಎಂಬುದನ್ನು ಗುರುತಿಸಿಕೊಳ್ಳುವುದು ಮುಖ್ಯ. ಒಂದು ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಣ್ಣು ಮೊದಲು ಎತ್ತ ಹಾಯುತ್ತದೋ ಅದೇ ಕೇಂದ್ರ ಬಿಂದು. ಅಲ್ಲಿಂದಲೇ ಗೋಡೆ ವಿನ್ಯಾಸ ಆರಂಭಿಸುವುದು ಜಾಣತನ. 
 
ಕೆಲ ಸಂದರ್ಭಗಳಲ್ಲಿ ಗಾಳಿ ಬೆಳಕು ಮನೆಯೊಳಗೆ ಸರಾಗವಾಗಿ ಹರಿದು ಬರಲಿ ಎಂಬ ಕಾರಣಕ್ಕೆ ವಿಶಾಲ ಕಿಟಕಿಗಳನ್ನು ಜೋಡಿಸಲಾಗಿರುತ್ತದೆ. ಇಂಥ ಸಂದರ್ಭದಲ್ಲಿ ನಿರ್ದಿಷ್ಟ ಕೇಂದ್ರ ಬಿಂದುವನ್ನು ಗುರುತಿಸುವುದು ಕಷ್ಟ.  ಇಂಥ ಗೊಂದಲಗಳನ್ನು ಪರಿಹರಿಸಿಕೊಂಡು ಮನೆಯನ್ನು ಯಾವ ರೀತಿಯಲ್ಲಿ ಅಲಂಕರಿಸಬೇಕು ಎನ್ನುವ ಬಗ್ಗೆ ಕೆಲ ಟಿಪ್ಸ್‌ಗಳು ಇಲ್ಲಿವೆ.
 
ಸೂಕ್ತ ಬಣ್ಣ
ವಾಸದ ಕೊಠಡಿ ಅಂದ ಮೇಲೆ ಅದರ ಬಣ್ಣ ಕಣ್ಣಿಗೆ ಹಾಗೂ ಮನಸ್ಸಿಗೆ ಮುದ ನೀಡುವಂತೆ ಇರಬೇಕು. ಗೋಡೆಯ ಬಣ್ಣಗಳು ನಿಮ್ಮ ಕಣ್ಣುಗಳು ಮತ್ತು ಕೋಣೆಯ ಒಟ್ಟಾರೆ ಬೆಳಕಿನ ಪರಿಣಾಮದ ಮೇಲೆ ಪ್ರಭಾವ ಬೀರುತ್ತವೆ. ಗೋಡೆಗೆ ಗಾಢ ಬಣ್ಣಗಳನ್ನು ಹಚ್ಚಿದರೆ, ಅವು ಬೆಳಕನ್ನು ಕುಂದಿಸಬಹುದು ಮತ್ತು ನಿಮ್ಮ ಕಣ್ಣುಗಳಿಗೆ ಹೆಚ್ಚು ಆಯಾಸ ಉಂಟು ಮಾಡಬಹುದು.
 
ಕೊಠಡಿಗೆ ಬಣ್ಣ ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು. ಗೋಡೆಯ 3 ಭಾಗಕ್ಕೆ ಒಂದೇ ರೀತಿಯ (ತುಸು ಮಂದ ಶೇಡ್‌ನ) ಬಣ್ಣ ಹಾಗೂ ಉಳಿದ ಒಂದು ಭಾಗಕ್ಕೆ ಗಾಢ ಬಣ್ಣ ಬಳಸಿ. ಇದು ಇತ್ತೀಚಿನ ಟ್ರೆಂಡ್‌ ಕೂಡ ಹೌದು. ಚಿಕ್ಕ ಮನೆಗಳಿಗೆ ಆದಷ್ಟು ಬಿಳಿ ಬಣ್ಣದ ಪೀಠೋಪಕರಣವನ್ನು ಬಳಸಿ. ಇದರಿಂದ ಹೆಚ್ಚು ಸ್ಥಳಾವಕಾಶ ಇರುವಂತೆ ಭಾಸವಾಗುತ್ತದೆ. 
 
ಕೊಠಡಿ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬ ಅಂಶವೇ ಅಲ್ಲಿನ ಕೇಂದ್ರಬಿಂದುವನ್ನು ಗುರುತಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ಓದುವ ಕೋಣೆ ರೂಪಿಸುವುದು ನಿಮ್ಮ  ಉದ್ದೇಶವಾಗಿದ್ದರೆ ಪುಸ್ತಕಗಳನ್ನಿಡುವ ಶೆಲ್ಫ್‌ಗಳ ವಿನ್ಯಾಸ ನಿಮ್ಮ ಮೊದಲ ಆದ್ಯತೆ ಆಗಿರಲಿ. 
 
ಮನೆಗೆ ಬೇಕಾದ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳನ್ನು ಜೋಡಿಸಲು ಸೂಕ್ತ ಸ್ಥಳ ಆಯ್ಕೆ ಮಾಡಿ. ಆ ಸ್ಥಳದ ಕೇಂದ್ರ ಬಿಂದುವಿನಲ್ಲಿ ಯಾವ ಬಣ್ಣವಿದೆಯೊ, ಅದೇ ಬಣ್ಣವನ್ನು ಇಡೀ ಕೋಣೆಗೆ ಬಳಸಿಕೊಳ್ಳುವುದು ಒಳಿತು. ಉದಾಹರಣೆಗೆ ಕೋಣೆಯ ಕೇಂದ್ರ ಬಿಂದು ಕಿಟಕಿಯಾಗಿದ್ದಲ್ಲಿ, ಅದಕ್ಕೆ ಬಿಳಿಯ ಬಣ್ಣವಿದ್ದರೆ ಕೋಣೆಯ ಅಲ್ಲಲ್ಲಿ ಅಲಂಕಾರಿಕ ವಸ್ತುಗಳೊಂದಿಗೆ ಬಿಳಿ ಬಣ್ಣದ ಶೇಡ್‌ ಇರುವಂತೆ ಎಚ್ಚರ ವಹಿಸಿ.
 
ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆಯಿರಿ. ಇದರಿಂದ ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಕೋಣೆಯ ಅಂದ ಹೆಚ್ಚಿಸುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿಡುವ  ಪೀಠೋಪಕರಣಗಳು ಗೋಡೆಯ ಬಣ್ಣಕ್ಕೆ ಒಪ್ಪುವಂತಿರಲಿ. 
 
ಕೋಣೆಯಲ್ಲಿ ವಸ್ತುಗಳನ್ನು ಜೋಡಿಸುವಾಗ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯ. ಒಂದೇ ಕಡೆ ಎಲ್ಲ ವಸ್ತುಗಳನ್ನು ಜೋಡಿಸಿ ಮತ್ತೊಂದೆಡೆ ಖಾಲಿ ಜಾಗವನ್ನು ಬಿಡುವುದು ಸೂಕ್ತವಲ್ಲ. ಹೀಗಾಗಿ ಸೋಫಾ ಜೋಡಿಸುವಾಗಲೂ ಕೇಂದ್ರ ಬಿಂದುವನ್ನು ಗುರುತಿಸಿ ಅದರ ಸುತ್ತಲಿನ ಭಾಗದಲ್ಲಿ ಜೋಡಿಸುವುದು ಸೂಕ್ತ.
 
ಬೆಸ ಸಂಖ್ಯೆಯ ನಿಯಮವನ್ನು ಮನೆಯ ಒಳಾಂಗಣ ವಿನ್ಯಾಸಕ್ಕೂ ಅನ್ವಯಿಸುವುದರಿಂದ ನೋಡುವುದಕ್ಕೆ  ಅಂದವಾಗಿ ಕಾಣುತ್ತದೆ. ಗೋಡೆಯಲ್ಲಿ ನೇತು ಹಾಕುವ ಫೋಟೊ ಫ್ರೇಮ್‌ಗಳು ಒಂದೇ ಅಳತೆಯಲ್ಲಿರುವ ಬದಲು ಬಣ್ಣ, ಎತ್ತರ, ವಿನ್ಯಾಸಗಳಲ್ಲಿಯೂ ವಿಭಿನ್ನ ವಾಗಿದ್ದರೆ ಹೊಸ ಲುಕ್‌ನಿಂದ ಕಂಗೊಳಿಸುತ್ತದೆ. 
 
ಅಳತೆಯ ಗುಟ್ಟು
ಸಾಮಾನ್ಯವಾಗಿ ಜನರು ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಇರುವ ಅಂತರದ ಬಗ್ಗೆ ಗಮನ ನೀಡುವುದಿಲ್ಲ. ಆದರೆ ಈ ಸೂಕ್ಷ್ಮ ಅಂಶಗಳು ಮನೆಗೆ ಆಕರ್ಷಣೆ ನೀಡುವಲ್ಲಿ ವಿಶೇಷ ಪಾತ್ರ ವಹಿಸುತ್ತವೆ.
 
ಹೀಗಾಗಿ ಕೋಣೆಯಲ್ಲಿಡುವ ಪ್ರತಿ ವಸ್ತುಗಳ ನಡುವೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು. ಒಳಾಂಗಣದ ಅಗಲ, ಉದ್ದವನ್ನು ಗಮನದಲ್ಲಿಟ್ಟುಕೊಂಡು ಟೀವಿ, ಟೇಬಲ್‌, ಛಾಯಾಚಿತ್ರಗಳು, ಪರದೆಗಳನ್ನು ಖರೀದಿ ಮಾಡುವುದು ಉತ್ತಮ.
 
* ಕಾಫಿ ಟೇಬಲ್‌: ಕಾಫಿ ಟೇಬಲ್‌ ಹಾಗೂ ಸೋಫಾದ ನಡುವೆ 15–18 ಇಂಚು ಅಂತರ ಉಳಿಸಿಕೊಳ್ಳಿ
* ಟೀವಿ: ಬಳಸುವ ಟೀವಿಯ ಗಾತ್ರ ಎಷ್ಟು ಎನ್ನುವುದರ ಮೇಲೆ ಸೋಫಾದ ಅಂತರವನ್ನು ನಿರ್ಧರಿಸಬೇಕು. ಟೀವಿ ದೊಡ್ಡದಾಗಿದ್ದಲ್ಲಿ ಪೀಠೋಪಕರಣಗಳನ್ನು ಆದಷ್ಟೂ ದೂರದಲ್ಲಿಡಿ.
 
ಕರ್ಟನ್‌ ಬಳಸುವಾಗ: ಕಿಟಕಿ ಹಾಗೂ ಬಾಗಿಲಿಗೆ ಪರದೆ ಹಾಕುವಾಗ ಅನುಸರಿಬೇಕಾದ ಕ್ರಮಗಳೆಂದರೆ.
* ಕಿಟಕಿಯ ಪರದೆಗಳನ್ನು ಎರಡೂ ಕಡೆ 3 ಇಂಚು ಹೆಚ್ಚು ಇರುವಂತೆ ನೋಡಿಕೊಳ್ಳಿ.
* ಕಿಟಕಿ ಹಾಗೂ ಬಾಗಿಲಿಗೆ ತಿಳಿ ಬಣ್ಣದ ಪರದೆಗಳನ್ನು ಆಯ್ಕೆ ಮಾಡಿ. ಇದರಿಂದ ಬೆಳಕು ಸರಾಗವಾಗಿ ಮನೆಯನ್ನು  ಪ್ರವೇಶಿಸುತ್ತದೆ.
 
***
ಬಗೆಬಗೆ ಬೆಳಕು
ಮನೆಯನ್ನು ಬಗೆಬಗೆಯ ದೀಪಗಳಿಂದ ಅಲಂಕರಿಸಿ ಅಂದ ಹೆಚ್ಚಿಸಿ. ದೀಪಗುಚ್ಛ, ವಾಲ್‌ ಲೈಟ್‌ಗಳು, ಸೀಲಿಂಗ್ ಲೈಟ್‌ಗಳು, ಫ್ಲೋರ್ ಲ್ಯಾಂಪ್‌ಗಳು, ಟೇಬಲ್ ಲ್ಯಾಂಪ್‌ಗಳು, ಪೆಂಡೆಂಟ್ ಲೈಟ್‌ಗಳು, ಲ್ಯಾಂಡ್‌ಸ್ಕೇಪ್ ಲೈಟ್‌ಗಳು, ಹೊರಾಂಗಣ ಲೈಟ್‌ಗಳು ಸೇರಿದಂತೆ ಅನೇಕ ಪ್ರಕಾರಗಳ ದೀಪಗಳು ವಿವಿಧ ಬೆಲೆಯಲ್ಲಿ ಸಿಗುತ್ತವೆ. ಅವುಗಳನ್ನು ಬಳಸಿಕೊಂಡು ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಬಹುದು.
 
* ಟಾಸ್ಕ್‌ ದೀಪ: ಸಾಮಾನ್ಯವಾಗಿ ಓದುವ ಸಮಯದಲ್ಲಿ ಬಳಸಲಾಗುತ್ತದೆ.  ಇದನ್ನು ಅಡಿಗೆ ಮನೆಯಲ್ಲಿಯೂ ಬಳಸಬಹುದು 
 
* ಆಂಬಿಯೆಂಟ್‌ (Ambient): ಇದನ್ನು ಸಾಮಾನ್ಯ ದೀಪ ಎಂತಲೂ ಕರೆಯಲಾಗುತ್ತದೆ. ಗೋಡೆಯ ಪ್ರತಿ ಮೂಲೆಯಲ್ಲೂ ಈ ಬಗೆಯ ದೀಪಗಳನ್ನು ಅಳವಡಿಸುವುದರಿಂದ ಮನೆಯನ್ನು ಬೆಳಕು ಸಂಪೂರ್ಣವಾಗಿ ಆವರಿಸಿ, ಹೊಸ ನೋಟ ನೀಡುತ್ತದೆ.
 
* ಅಸೆಂಟ್‌ (Acccent): ಈ ದೀಪವನ್ನು ಯಾವುದಾದರೂ ಒಂದು ವಸ್ತು ಎದ್ದು ಕಾಣುವಂತೆ ಮಾಡಲು ಬಳಸುತ್ತಾರೆ. ಗೋಡೆ ಚಿತ್ರಗಳ  ಹಿಂಬದಿಯಲ್ಲಿ ಇದನ್ನು ಅಳವಡಿಸುವುದರಿಂದ ಗೋಡೆ ಚಿತ್ರಗಳು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತವೆ.
 
***
ಚಿಕ್ಕ ಮನೆಗಳಿಗೆ ಸಾಧ್ಯವಾದಷ್ಟು ಬಿಳಿ ಬಣ್ಣದ ಪೀಠೋಪಕರಣಗಳನ್ನು ಬಳಸಿ ಇದರಿಂದ ಹೆಚ್ಚು ಸ್ಥಳಾವಕಾಶ ಇರುವಂತೆ ಭಾಸವಾಗುತ್ತದೆ.
–ಸರೋಜಿನಿ,
ಒಳಾಂಗಣ ವಿನ್ಯಾಸಕಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT