ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸದಲ್ಲಿ ರೇಖಾಗಣಿತ

Last Updated 14 ಜನವರಿ 2016, 19:30 IST
ಅಕ್ಷರ ಗಾತ್ರ

ಇಡೀ ವಿಶ್ವವನ್ನೇ ರೇಖಾಗಣಿತ ಆಳುತ್ತಿದೆ.  ನಮ್ಮ ಮನೆ, ಬೀದಿಗಳು, ಕಟ್ಟಡಗಳು, ಅಷ್ಟೇ ಏಕೆ ನಿಸರ್ಗವೂ ರೇಖಾಗಣಿತದ ವ್ಯಾಪ್ತಿಗೇ ಬರುವುದು. ವಾಸ್ತುಶಿಲ್ಪದಲ್ಲಿ ರೇಖಾಗಣಿತ ಎಂಬ ಪರಿಕಲ್ಪನೆ ನಾವು ವಸ್ತುವೊಂದನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ರೇಖಾಗಣಿತ ಎಂದರೆ ಆಕಾರ ಮತ್ತು ರೂಪವನ್ನು ವಿವರಿಸುವುದು ಎಂಬ ಸಾಮಾನ್ಯ ಅಭಿಪ್ರಾಯದ ಹೊರತಾಗಿಯೂ ಸಾಕಷ್ಟು ಅಂಶಗಳನ್ನು ತಿಳಿಸಿಕೊಡುತ್ತದೆ. ಮನೆಯ ಸೌಂದರ್ಯದಲ್ಲಿ ರೇಖಾಗಣಿತದ ಪಾತ್ರ ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಮನೆ ಎಂದಮೇಲೆ ಮೊದಲು ಕಾಣುವುದು ಅದರ ಬಾಹ್ಯ ಅಂಶಗಳು. ಒಂದು ಕಟ್ಟಡದಲ್ಲಿ ಗೋಚರಿಸುವ ಹಾಗೂ ಮೊದಲು ಆಕರ್ಷಿಸುವ ಅಂಶಗಳೆಂದರೆ ಚಾವಣಿ, ಫಿನಿಶಿಂಗ್‌ಗಳು. ಚಾವಣಿಯ ಆಕಾರ ಮತ್ತು ರಚನೆ ವಾಸ್ತುಶಿಲ್ಪದ ಸೌಂದರ್ಯವನ್ನು ಎತ್ತಿ ಹಿಡಿಯುವ ಅಂಶಗಳು.

ಮಧ್ಯಮ ಗಾತ್ರದ ಮನೆಗೆ ಸಾಮಾನ್ಯವಾಗಿ ಟೈಲ್‌ ರೀತಿಯ ಚಾವಣಿ ಇರುತ್ತದೆ. ಯಾವುದೇ ರಚನೆಯ ಮನೆಗಳಲ್ಲೂ ಸಪಾಟು ಚಾವಣಿಯನ್ನೇ ಹೆಚ್ಚು ಮಂದಿ ಬಳಸುತ್ತಾರೆ. ಚಾವಣಿ ಗೋಪುರದ ಆಕಾರದಲ್ಲಿದ್ದರೆ, ಒಳಾಂಗಣ ದೊಡ್ಡದಾಗಿರುವಂತೆ ಗೋಚರಿಸುತ್ತದೆ.  ಈ ಎಲ್ಲಾ ಅಂಶಗಳ ನಡುವೆ ಕೆಲವು ಚಾವಣಿ ಪ್ರಕಾರಗಳು ಭಿನ್ನವಾಗಿ ನಿಲ್ಲುತ್ತವೆ.

ಅಂಥವುಗಳಲ್ಲಿ ಇಳಿಜಾರಿನಂಥ ಚಾವಣಿಯೂ ಒಂದು. ಇದು ಎತ್ತರ ಇರುವಂತೆ ಹಾಗೂ ಆಕರ್ಷಿತವಾಗಿ ಕಾಣುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ರೀತಿಯ ವಿನ್ಯಾಸದಲ್ಲಿ ಮಂಗಳೂರು ಹೆಂಚುಗಳನ್ನು ಬಳಸುತ್ತಾರೆ.  ಆದರೆ ಕಾಲ ಸರಿದಂತೆ, ಕಾಂಕ್ರೀಟಿನಿಂದ ಕಟ್ಟಿ ಅದಕ್ಕೆ ಹೆಂಚಿನ ಹೊದಿಕೆ ನೀಡಲಾಯಿತು. ಆರ್‌ಸಿಸಿ ಚಾವಣಿ ಸುರಕ್ಷೆ ದೃಷ್ಟಿಯಿಂದ ಬಳಕೆಗೆ ಬಂತು. ಆದರೆ ಅದು ಹೆಂಚುಗಳ ಸೌಂದರ್ಯವನ್ನು ಕಸಿದುಕೊಂಡಿತು.

ಇದರ ಹೊರತಾಗಿಯೂ ವಿನ್ಯಾಸಗಾರರು ಹಲವು ರೀತಿಯ ಆಕಾರಗಳಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಂಕೀರ್ಣ ಎನ್ನಿಸುವ ತ್ರಿಕೋನಾಕೃತಿಯನ್ನು ಹಲವು ಕೋನಗಳಲ್ಲಿ ಬಳಸುವುದು ವಿನ್ಯಾಸಕ್ಕೆ ಬೇರೆಯದ್ದೇ ತಿರುವು ನೀಡಿ, ಮನಸೆಳೆಯುವಂತಿರುತ್ತದೆ. ಈ ಆಕಾರಗಳ ಹೊರತಾಗಿ ಆಯತಾಕಾರ, ಚೌಕ, ವೃತ್ತಾಕಾರದ ವಿನ್ಯಾಸಗಳನ್ನೂ ಮಾಡಿಕೊಳ್ಳಬಹುದು. ಈ ರೀತಿಯ ಸಂಕೀರ್ಣ ರೇಖಾ ಆಕಾರಗಳನ್ನು ಒಳಗೊಂಡ ಚಾವಣಿ ಇರುವ ಕಟ್ಟಡ ವಿಶಿಷ್ಟವಾಗಿ ಕಾಣುತ್ತದೆ.

ಚಾವಣಿಗೆ ಉಪಯೋಗಿಸುವ ಸಾಮಗ್ರಿಗಳೂ ಒಳಾಂಗಣದ ಸೌಂದರ್ಯ ಹೆಚ್ಚಿಸಲು ಕಾರಣವಾಗಬಲ್ಲವು. ಮಣ್ಣಿನ ಟೈಲ್‌ ಚಾವಣಿ ಬೆಚ್ಚಗಿನ ಹಾಗೂ ವಿಶ್ರಾಂತ ಅನುಭವವನ್ನು ನೀಡಿದರೆ, ಗಾಜು ಅಥವಾ ಸ್ಟೀಲ್‌ನ ಚಾವಣಿ ಸಾಂಪ್ರದಾಯಿಕ ನೋಟ ನೀಡುತ್ತದೆ. ಚಾವಣಿ ಆಯ್ಕೆ ವಿಷಯಕ್ಕೆ ಬಂದರೆ ಟೆರಕೋಟಾ ಟೈಲ್‌ಗಳು ಸುರಕ್ಷಿತ.

ಇವೆಲ್ಲವುಗಳ ಹೊರತಾಗಿ ಸಾಕಷ್ಟು ವಿನ್ಯಾಸದ ಅಂಶಗಳು ಕಟ್ಟಡದ ಒಟ್ಟಾರೆ ನೋಟವನ್ನು ನಿರ್ಧರಿಸಲು ಅನುವಾಗುತ್ತವೆ. ಸಪಾಟು ಟೈಲ್‌ ವಿನ್ಯಾಸದಲ್ಲಿ ಸಹಜ ಹಾಗೂ ಸಾಂಪ್ರದಾಯಿಕ ನೋಟ ಕೊಡುತ್ತವೆ. ಒಂದಕ್ಕೊಂದು ಕೂಡಿದ ವೃತ್ತಾಕಾರದ ಟೈಲ್‌ ಮಧ್ಯದಲ್ಲಿ ಸಪಾಟಾಗಿದ್ದು, ಕೊನೆಯಲ್ಲಿ ಓರೆಕೋರೆಯಾಗಿರುತ್ತವೆ. ಇದು ಚಾವಣಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ‘ಎಸ್‌’ ಆಕಾರದ ಚಾವಣಿ ಟೈಲ್‌ಗಳು ಮತ್ತೊಂದು ಆಯ್ಕೆ. ಇವನ್ನು ಪ್ಯಾನ್‌ಟೈಲ್ಸ್‌ ಎನ್ನುತ್ತಾರೆ. ಇವನ್ನು ಒಂದಕ್ಕೊಂದು ಜೋಡಿಸಿ ವಿನ್ಯಾಸಗೊಳಿಸಬಹುದು.

ಮಣ್ಣಿನಿಂದ ತಯಾರು ಮಾಡಿದ ಮಿಷನ್ ರೂಫ್‌ ಕೂಡ ಈಗ ಹೆಚ್ಚಿನ ಜನರ ಆಯ್ಕೆಯಾಗಿದೆ. ಇದು ಸಿಲಿಂಡರ್‌ ಆಕಾರದಲ್ಲಿರುತ್ತದೆ. ಇದನ್ನು ಉಬ್ಬಾಗಿ ಅಥವಾ ನಿಮ್ನ ಆಕಾರದಲ್ಲೂ ಜೋಡಿಸಬಹುದು. ಹೆಂಚಿನ ಹೊದಿಕೆಯಂತೆ ಕಾಣುವ ‘ಗೇಬಲ್ ಚಾವಣಿ’ (ಗೋಪುರದಂತಿರುತ್ತದೆ) ಈಗ ಪ್ರಚಲಿತದಲ್ಲಿರುವ ಚಾವಣಿಯ ವಿಧ.  ದಕ್ಷಿಣ ಕರಾವಳಿ ಪ್ರದೇಶಗಳಾದ ಕೇರಳ, ಕರ್ನಾಟಕದಲ್ಲಿ ಈ ಆಕೃತಿಯನ್ನು ಹೆಚ್ಚಾಗಿ ಕಾಣಬಹುದು. ಮನೆಯಲ್ಲಿ ಇಳಿಜಾರು ಆಕೃತಿಯ ಚಾವಣಿಯು ವರಾಂಡವು ವಿಶಾಲವಾಗಿ ಗೋಚರಿಸುವಂತೆ ಮಾಡುತ್ತದೆ. ಇದು ಕರಾವಳಿ ಪ್ರದೇಶಗಳ ಧಗೆಯ ವಾತಾವರಣಕ್ಕೆ ತುಂಬಾ ಹೊಂದಿಕೊಳ್ಳುತ್ತದೆ. ಕೊಳವೆ ಅಥವಾ ದುಂಡಾಕೃತಿಯ ಚಾವಣಿಗಳೂ ಇವೆ. ಇವನ್ನು ಇಳಿಜಾರಿನ ವಿನ್ಯಾಸದೊಂದಿಗೆ ಸೇರಿಸುತ್ತಾರೆ. ಆಗ ಅದು ಕೋನಾಕಾರದಂತೆ ಕಾಣುತ್ತದೆ.

ಈ ಟೈಲ್‌ಗಳು ಕೆಂಪು, ಕಂದು, ಹಸಿರು, ಕಪ್ಪು ಬಣ್ಣಗಳಲ್ಲೂ ಲಭ್ಯ. ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಬಹುದು. ಸಪಾಟು ಚಾವಣಿಯೊಂದಿಗೆ ಇಳಿಜಾರು ಆಕಾರವನ್ನೂ ಸೇರಿಸಿ ವಿನ್ಯಾಸ ಮಾಡುವುದು ವಿಶಿಷ್ಟ ಪ್ರಯೋಗ. ಇದರಿಂದ ಕೋಣೆ ಎತ್ತರ ಇರುವಂತೆ ಕಾಣಿಸುತ್ತದೆ.

ಕಟ್ಟಡದ ರೂಪುರೇಷೆ ಅದು ನಿರ್ಮಿತವಾದ ನಿವೇಶನದ ಆಕಾರ ಹಾಗೂ ಗಾತ್ರದ ಮೇಲೆ ಅವಲಂಬಿತವಾಗಿರುತ್ತದೆ. ತ್ರಿಕೋನಾಕಾರದ ನಿವೇಶನ, ಚಿಕ್ಕ ಚೌಕಾಕಾರ, ಆಯತಾಕಾರದ ವಿನ್ಯಾಸ ಒಳಗೊಳ್ಳಬಹುದು. ಚೌಕಾಕಾರದ ನಿವೇಶನಕ್ಕೆ ತ್ರಿಕೋನಾಕೃತಿ ಅಥವಾ ಆಯತಾಕಾರ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆಯತಾಕಾರದ ನಿವೇಶನಕ್ಕೆ ವೃತ್ತಾಕಾರ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ರೇಖಾಗಣಿತ ಮನೆಯ ಒಳಾಂಗಣಕ್ಕೂ ಅನ್ವಯಿಸುತ್ತದೆ. ಕೋಣೆ ಯಾವಾಗಲೂ ಚೌಕ ಅಥವಾ ಆಯತಾಕಾರದಲ್ಲೇ ಇರಬೇಕೆಂದೇನೂ ಇಲ್ಲ. ಒಮ್ಮೊಮ್ಮೆ ಆ ನಿರ್ದಿಷ್ಟತೆಯಿಂದ ಹೊರಬಂದು ವಿಚಿತ್ರ ಆಕಾರ ನೀಡಿದರೂ ಸುಂದರವಾಗಿ ಕಾಣುತ್ತದೆ. ಉದಾಹರಣೆಗೆ,  ಅರ್ಧ ಗೋಲಾಕಾರ ಅಥವಾ ಶಂಕುವಿನಾಕಾರವೂ ಸುಂದರವಾಗಿ ಕಾಣುತ್ತದೆ. ಗೋಡೆಗಳನ್ನೂ ನೇರ ಇರುವ ಬದಲು ವಿವಿಧ ಕೋನಗಳಲ್ಲಿ ಕಟ್ಟಿದರೆ ವಿಭಿನ್ನತೆ ಕಾಣಬಹುದು.

ಒಳಾಂಗಣಕ್ಕೆ ಬಹು ಆಯಾಮದ ರೇಖಾ ರಚನೆಯನ್ನೂ ಸೇರಿಸಬಹುದು. ಅದರಲ್ಲೂ ಎರಡು ಅಥವಾ ಮೂರು ಅಂತಸ್ತಿನ ಮನೆಗಳಲ್ಲಂತೂ ಈ ಬಹು ಹಂತದ ವಿನ್ಯಾಸಗಳನ್ನು ಪ್ರಯೋಗಿಸಬಹುದು. ಈ ವಿನ್ಯಾಸಗಳು  ನಿರ್ದಿಷ್ಟ ಪರಿಕಲ್ಪನೆ ಅಥವಾ ಆಸಕ್ತಿದಾಯಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ. ಶೈಲಿ ಏನೇ ಇದ್ದರೂ ಕಣ್ಸೆಳೆಯುವಂತೆ ಮತ್ತು ಮನೆಯ ಇನ್ನಿತರ ಅಂಶಗಳೊಂದಿಗೆ ಮಿಳಿತವಾಗುವಂತಿದ್ದರೆ ಅದೇ ವಿಶಿಷ್ಟ ಮನೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT