ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ನಿವಾರಣೆಯ ವೈಫಲ್ಯ

ಕಂಪನಿಗಳ ಲಾಭ ಹೆಚ್ಚಿದರೆ ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬ ಸಿದ್ಧಾಂತ ಸರಿಯಲ್ಲ
Last Updated 28 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಅಖಿಲ ಭಾರತ ತಯಾರಕರ ಸಂಘವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಸ್ಥಿತಿಗತಿಗಳ ಕುರಿತು ಸಮೀಕ್ಷೆಯ ವರದಿಯನ್ನು ಪ್ರಕಟಿಸಿದೆ. ಸುಮಾರು 3 ಲಕ್ಷ ಕಾರ್ಖಾನೆಗಳ ಸದಸ್ಯತ್ವವನ್ನು ಹೊಂದಿರುವ ಈ ಸಂಸ್ಥೆ, 30 ಸಾವಿರ ಕಾರ್ಖಾನೆಗಳ ಮಾಲೀಕರನ್ನು ಸಂದರ್ಶಿಸಿ ಈ ವರದಿಯನ್ನು ಸಿದ್ಧಪಡಿಸಿದೆ. ಸಮೀಕ್ಷೆಯ ಪ್ರಮುಖ ಅಂಶ: ಐದು ವರ್ಷಗಳ ಅವಧಿಯಲ್ಲಿ ದೇಶದ ಎಂಎಸ್ಎಂಇಗಳಲ್ಲಿ ಶೇ 25 ರಿಂದ ಶೇ 40 ರಷ್ಟು ಉದ್ಯೋಗ ನಷ್ಟವಾಗಿದ್ದು ಇದಕ್ಕೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಮುಖ್ಯ ಕಾರಣ.

ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳ ನೀತಿಯನ್ನು ಕಳೆದೆರಡು ದಶಕಗಳಿಂದ ಗಮನಿಸೋಣ. ಜಾಗತೀಕರಣ ನೀತಿ 1990ರ ದಶಕದಲ್ಲಿ ಜಾರಿಯಾಯಿತು. ಭಾರತ, ತಯಾರಿಕಾ ವಲಯದಲ್ಲಿ ‘ವರ್ಕ್‌ಶಾಪ್ ಆಫ್ ದಿ ವರ್ಲ್ಡ್’ ಆಗಿ ತಲೆಯೆತ್ತುವುದರಲ್ಲಿ ಇನ್ನು ಸಂದೇಹವೇ ಇಲ್ಲ; ಭಾರಿ ಸಂಖ್ಯೆಯಲ್ಲಿ ತಯಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬಂಥ ಭರವಸೆ ಆಗ ಮೂಡಿತ್ತು. ಆದರೆ ಆದದ್ದೇನು? ಕೆಲವು ಅಪವಾದಗಳನ್ನು ಹೊರತುಪಡಿಸಿ ಕಳೆದ 25 ವರ್ಷಗಳಲ್ಲಿ ಜಿಡಿಪಿಯಲ್ಲಿನ ತಯಾರಿಕಾ ವಲಯದ ಕೊಡುಗೆ ಸತತವಾಗಿ ಕ್ಷೀಣಿಸಿದೆ. ಜಿಡಿಪಿಗೆ ತಯಾರಿಕಾ ವಲಯದ ಕೊಡುಗೆ, ಆಗ್ನೇಯ ಏಷ್ಯಾ ಖಂಡದ ರಾಷ್ಟ್ರಗಳಾದ ಚೀನಾ ಶೇ 47, ಇಂಡೊನೇಷ್ಯಾ ಶೇ 47, ದಕ್ಷಿಣ ಕೊರಿಯಾ ಶೇ 39, ಮಲೇಷ್ಯಾ ಮತ್ತು ಥಾಯ್ಲೆಂಡ್‌ಗಳಿಂದ ಶೇ 45 ರಷ್ಟಿದ್ದರೆ, ಭಾರತದ್ದು ಕೇವಲ ಶೇ 20ರಷ್ಟು! ಜಾಗತೀಕರಣದ ಮೂಲ ಘೋಷಿತ ಉದ್ದೇಶ- ತಯಾರಿಕಾ ಕ್ಷೇತ್ರದ ಬೆಳವಣಿಗೆ ವಿಫಲವಾಗಿದ್ದಕ್ಕೆ ಪ್ರಸಕ್ತ ಕೇಂದ್ರ ಸರ್ಕಾರ ‘ಮೇಕ್ ಇನ್ ಇಂಡಿಯಾ’ ಜಾರಿಗೊಳಿಸಿತು. ಅಷ್ಟಾದರೂ ಪರಿಸ್ಥಿತಿ ಬದಲಾಗಿಲ್ಲ.

ಸೇವಾ ಕ್ಷೇತ್ರದಲ್ಲಿ (ಐ.ಟಿ., ಬಿ.ಟಿ. ಮುಂತಾದವು) ಒಂದಷ್ಟು ಉದ್ಯೋಗ ಸೃಷ್ಟಿಯಾಗಿದ್ದು ನಿಜ. ಆದರೆ ದೇಶವೊಂದು ಕೇವಲ ಸೇವಾ ಕ್ಷೇತ್ರವನ್ನು ನೆಚ್ಚಿಕೊಂಡು ಬಹಳ ಕಾಲ ಬೆಳವಣಿಗೆಯನ್ನು ಕಾಣಬಹುದೇ? ಅಷ್ಟಕ್ಕೂ ಐ.ಟಿ., ಬಿ.ಟಿ. ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿರುವುದು ಬೆರಳೆಣಿಕೆಯಷ್ಟು ಮಹಾನಗರಗಳಲ್ಲಿ ಅಷ್ಟೇ. ಇದರಿಂದ ಪ್ರಯೋಜನ ಪಡೆದ ಕೆಲ ನಗರವಾಸಿಗಳು, ದೇಶವೆಲ್ಲಾ ಹೀಗೆಯೇ ಸುಭಿಕ್ಷವಾಗಿದೆ ಎಂಬ ಭ್ರಮೆಯಲ್ಲಿರುವುದು ದುರಂತ.

2004ರಿಂದ 10ರವರೆಗೆ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆಯನ್ನು ಕಂಡಿತ್ತು. ಅದು ಶೇ 10ರ ಮಟ್ಟವನ್ನು ಮುಟ್ಟುವುದರಲ್ಲಿತ್ತು. ಈ ವೇಳೆಯ ಆರ್ಥಿಕತೆಯನ್ನು ಅಧ್ಯಯನ ಮಾಡಿರುವ ತಜ್ಞರು ಕೆಲವು ಆಸಕ್ತಿದಾಯಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ: ಭಾರಿ ಬಂಡವಾಳದ ಉದ್ಯಮಗಳ ಲಾಭ ದರ ಏರಿಕೆಯಾಗಿದ್ದು, ಶ್ರಮದ ಉತ್ಪಾದಕತೆ ವರ್ಷಕ್ಕೆ ಶೇ 6.1ರಷ್ಟು ವೃದ್ಧಿಯಾಗಿದೆ; ಆದರೆ ಅದೇ ವೇಳೆ ರಿಯಲ್ ವೇಜಸ್ (ಹಣದುಬ್ಬರದ ಅಂಶವನ್ನು ಗಣನೆಗೆ ಸೇರಿಸಿ ಲೆಕ್ಕ ಹಾಕಿದ ವೇತನ) ಕೇವಲ ಶೇ 1.4 ರಷ್ಟು ಹೆಚ್ಚಾಗಿದೆ. ಕಾರ್ಪೊರೇಟ್ ಕಂಪನಿಗಳು ಗರಿಷ್ಠ ಲಾಭ ತಮ್ಮದಾಗಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಎರಡು ವಿದ್ಯಮಾನಗಳು ಜರುಗಿವೆ; ಉದ್ಯೋಗ ಕಡಿತ ಹಾಗೂ ಬಂಡವಾಳ ಹೂಡಿಕೆ ಪ್ರಮಾಣಕ್ಕೆ ತಕ್ಕಷ್ಟು ಉದ್ಯೋಗ ಸೃಷ್ಟಿ ಆಗದಿರುವುದು. ಅಸೋಚಾಮ್ ವರದಿಯ ಪ್ರಕಾರ, ಈ ವೇಳೆಯಲ್ಲಿ ಜಿಡಿಪಿ ಶೇ 8ರಷ್ಟು ವೃದ್ಧಿಯಾಗುತ್ತಿದ್ದರೂ, 50 ಲಕ್ಷ ಉದ್ಯೋಗಗಳು ಕಡಿತವಾಗಿದ್ದವು! ಶೇ 67ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿದ್ದ ಸೇವಾ ಕ್ಷೇತ್ರವು ಕೇವಲ ಶೇ 27ರಷ್ಟು ಕೆಲಸಗಾರರನ್ನು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿತ್ತು. ಇದರರ್ಥ ಬಂಡವಾಳ ಹೂಡಿಕೆಗೆ ಸರಿಸಮಾನವಾಗಿ ಉದ್ಯೋಗ ಸೃಷ್ಟಿಯಾಗಲಿಲ್ಲ ಎಂದು. ಅದೇ ಕಾಲಘಟ್ಟಕ್ಕೆ ಸಂಬಂಧಪಟ್ಟ ಕ್ರಿಸಲ್ ಎಂಬ ಸಂಸ್ಥೆಯ ವರದಿ ಇದನ್ನೇ ದೃಢೀಕರಿಸುತ್ತದೆ. 2005ಕ್ಕೂ ಮುನ್ನ ಸುಮಾರು 1 ಕೋಟಿ ವೆಚ್ಚದ ಸರಕು ತಯಾರಿಸಲು ಅಗತ್ಯವಿದ್ದ ಶ್ರಮಿಕರ ಸಂಖ್ಯೆ 171. 2010ರ ವೇಳೆಗೆ ಇದು 105ಕ್ಕೆ ಇಳಿದಿತ್ತು! ಉತ್ಪಾದಕ ಶಕ್ತಿ (productive force) ಸತತವಾಗಿ ಬೆಳವಣಿಗೆಯಾಗುತ್ತಿದ್ದು, ಲಾಭ ದ್ವಿಗುಣಗೊಂಡರೂ ಅದು ಉದ್ಯೋಗಾವಕಾಶಗಳಾಗಿ ಮಾರ್ಪಾಟಾಗಿಲ್ಲ ಎಂಬುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಈ ವಿಶಿಷ್ಟ ವಿದ್ಯಮಾನವನ್ನು ಆರ್ಥಿಕ ತಜ್ಞರು ‘ಜಾಬ್‌ಲೆಸ್ ಗ್ರೋತ್’ ಎಂದು ಬಣ್ಣಿಸಿದ್ದಾರೆ.

ಈ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯನ್ನು ಹೇರಿದ್ದು, ಉದ್ಯೋಗ ಮಾರುಕಟ್ಟೆಯ ಮೇಲೆ ಅತೀವವಾದ ಒತ್ತಡವನ್ನು ಹೇರಿತು ಎಂದು ತಜ್ಞರು ಹೇಳಿರುವುದು ವಾಸ್ತವವೇ. ದೇಶದಲ್ಲಿ ವರ್ಷಕ್ಕೆ ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿ ಉದ್ಯೋಗ ಅರಸುವವರ ಸಾಲಿಗೆ ಸೇರುತ್ತಾರೆ. ಖಾಸಗಿ ಸಂಘಟಿತ ವಲಯದಲ್ಲಿ ಒಟ್ಟು ಕೆಲಸ ಮಾಡುತ್ತಿರುವವರ ಸಂಖ್ಯೆಯೇ ಕೇವಲ 1.2 ಕೋಟಿ! ಅಂದರೆ, ಅಸಂಘಟಿತ ವಲಯದಲ್ಲಿ ಭಾರತದ ಶೇ 90ರಷ್ಟು ಕಾರ್ಮಿಕರು ಜೀವನ ನಿರ್ವಹಿಸುತ್ತಿದ್ದಾರೆ. ಈವರೆವಿಗೂ ಅಸಂಘಟಿತ ವಲಯದ ಒಟ್ಟು ಉತ್ಪಾದನೆ ನೋಟು ಅಮಾನ್ಯೀಕರಣದ ಮುಂಚಿನ ಮಟ್ಟಕ್ಕೆ ಇನ್ನೂ ತಲುಪಲಿಲ್ಲ ಎಂದು ಪ್ರಸಕ್ತ ವರದಿ ದಾಖಲಿಸಿರುವುದು ಶೇ 90ರಷ್ಟು ಕಾರ್ಮಿಕರ ಸಂಕಷ್ಟವನ್ನು ತೋರಿಸುತ್ತದೆ.

ನೋಟು ಅಮಾನ್ಯೀಕರಣ ಸೃಷ್ಟಿಸಿದ ಬಿಕ್ಕಟ್ಟಿನಿಂದ ಹೊರಬರುವ ಮುಂಚೆಯೇ ಜಿಎಸ್‌ಟಿಯ ಹೊಡೆತ ಅಸಂಘಟಿತ ವಲಯದ ಬೆನ್ನು ಮೂಳೆಯನ್ನು ಮುರಿದಿತ್ತು. ಈ ವಲಯದ ಕೆಲವು ಕೇಂದ್ರಗಳಾದ ಸೂರತ್, ಲೂಧಿಯಾನ, ತಿರುಪುರ್, ಭಿವಾಂಡಿ, ಜಲಂಧರ್ ಮುಂತಾದ ಸ್ಥಳಗಳು ಜಿಎಸ್‌ಟಿಯಿಂದ ಭಾರಿ ಹೊಡೆತ ಅನುಭವಿಸಿವೆ ಎಂದು ವರದಿಗಳು ಹೇಳುತ್ತವೆ. ಈ ಎರಡು ನೀತಿಗಳಿಂದ ಆರ್ಥಿಕತೆಯ ಮೇಲಾಗುವ ಮೂರು ರೀತಿಯ ಪರಿಣಾಮವನ್ನು ತಜ್ಞರು ಗುರುತಿಸಿರುತ್ತಾರೆ; ತೆರಿಗೆ ಸಂಗ್ರಹಣೆ, ಉದ್ಯೋಗ ಮಾರುಕಟ್ಟೆ ಮತ್ತು ಜಿಡಿಪಿ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿ, 2016ರಿಂದ ಈಚೆಗೆ ಅದಕ್ಕೆ ಸಂಬಧಿಸಿದ ಎನ್‌ಪಿಎಯ ಮೊತ್ತ ಏರುತ್ತಲಿದೆ ಎಂದು ಬ್ಯಾಂಕ್‌ಗಳು ತಿಳಿಸಿವೆ. ಬ್ಯಾಂಕ್‌ಗಳ ತೀವ್ರವಾದ ಬಿಕ್ಕಟ್ಟಿಗೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯೇ ಇಂಬು ನೀಡಿವೆ. ಕೇಂದ್ರ ಸರ್ಕಾರ, ಬ್ಯಾಂಕ್‌ಗಳಿಗೆ ಹಣದ ಕೊರತೆ ನೀಗಿಸಲು ಆರ್‌ಬಿಐ ಗವರ್ನರ್‌ಗೆ ತಾಕೀತು ಮಾಡಿದ್ದು, ಗವರ್ನರ್ ರಾಜೀನಾಮೆ ನೀಡಿರುವ ಬೆಳವಣಿಗೆಯನ್ನು ನೋಡಿದ್ದೇವಷ್ಟೆ.

ನಿರುದ್ಯೋಗ ಸಮಸ್ಯೆಯ ಕಾರಣವನ್ನು ಗ್ರಹಿಸಲು ಮುಖ್ಯವಾಹಿನಿಯ ಆರ್ಥಿಕ ನೀತಿಗಳಿಂದ ಸಾಧ್ಯವಿಲ್ಲ ಎಂಬುದು ಪ್ರಪಂಚದೆಲ್ಲೆಡೆ ಗೋಚರವಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ಗರಿಷ್ಠ ಲಾಭ ಮಾಡುವ ಪರಿಸ್ಥಿತಿ ನಿರ್ಮಿಸಿದರೆ ಸಾಕು, ಅದರಿಂದ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ ಎಂಬ ಕ್ಲಾಸಿಕಲ್ ಎಕನಾಮಿಕ್ಸ್‌ನ ‘ಟ್ರಿಕಲ್ ಡೌನ್’ ಸಿದ್ಧಾಂತ ಈಗ ಹಳಸಲಾಗಿದೆ. ಶೇ 1ರಷ್ಟು ಮಂದಿ ಪ್ರಪಂಚದ ಶೇ 60ಕ್ಕೂ ಹೆಚ್ಚು ಆಸ್ತಿಯ ಒಡೆಯರು ಎಂಬಂಥ ಕ್ರೆಡಿಟ್ ಸೂಸೆ ಸಂಸ್ಥೆಯ ವರದಿ ಗಮನಿಸಿದರೆ ನಿರುದ್ಯೋಗ ಸಮಸ್ಯೆಯ ಪರಿಹಾರದ ಕುರಿತು ಒಳನೋಟ ದೊರಕಬಹುದು. ಭಾರತದಲ್ಲೂ ತೀವ್ರತರವಾದ ಅಸಮಾನತೆ ಏರಿಕೆಯಾಗುತ್ತಿರುವುದನ್ನು ಎಷ್ಟೋ ವರದಿಗಳು ರುಜುವಾತುಪಡಿಸಿವೆ. ಈ ಅಸಮಾನತೆ ಕೆಲವೇ ಕೆಲವು ಮಂದಿಯ ಖರೀದಿಸುವ ಶಕ್ತಿಯನ್ನು ವೃದ್ಧಿಸಿ, ಬಹು ಸಂಖ್ಯೆಯ ಜನರ ಖರೀದಿಸುವ ಶಕ್ತಿಯನ್ನು ಕುಂದಿಸುತ್ತದೆ. ಕ್ಷೀಣಿಸುತ್ತಿರುವ ಖರೀದಿಸುವ ಶಕ್ತಿ, ಮಾರುಕಟ್ಟೆ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ ಎಂಬುದು ಕೆಲ ಪರ್ಯಾಯ ಪಂಥದ ಆರ್ಥಿಕ ತಜ್ಞರ ಅಭಿಪ್ರಾಯ. ಒಟ್ಟಿನಲ್ಲಿ ನಿರುದ್ಯೋಗ ಸಮಸ್ಯೆಗೂ ಅಸಮಾನತೆಗೂ ಇರುವ ಸಂಬಂಧವನ್ನು ಸರ್ಕಾರ ಗುರುತಿಸಿದರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT