ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಕಥೆಯ ಬೆನ್ನಟ್ಟಿ...

ನೂರೊಂದು ನೆನಪು
Last Updated 15 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕಥೆಯನ್ನು ಚರ್ಚಿಸಲು ವಿಷ್ಣು ಮನೆಗೆ ಹೋದೆ. ಅವನಿಗೆ ಹಿಂದಿಯಲ್ಲಿ ನಾನು ಮಾಡಿದ್ದ ‘ಆಗ್ ಕಾ ದರಿಯಾ’ ಸಿನಿಮಾ ಬಗ್ಗೆ ಕುತೂಹಲವಿತ್ತು. ಅದನ್ನು ನೋಡುವ ಬಯಕೆ ವ್ಯಕ್ತಪಡಿಸಿದ. ಅದರ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡು ಎಂದ. ಮುಂಬೈನಲ್ಲಿ ದಿಲೀಪ್ ಕುಮಾರ್ ಅವರ ಮನೆಯಲ್ಲಿಯೇ ಆ ಸಿನಿಮಾ ಪ್ರಿಂಟ್ ಇತ್ತು. ವಿಷ್ಣು ಅದನ್ನು ನೋಡಬಯಸಿರುವ ವಿಷಯ ಹೇಳಿದಾಗ ಅವರು ಖುಷಿಪಟ್ಟರು. ಆ ಪ್ರಿಂಟ್ ಸಿದ್ಧಪಡಿಸಿಟ್ಟಿದ್ದರು. ನಾವು ಮುಂಬೈಗೆ ಹೋಗಿ ಸನ್ ಅಂಡ್ ಸ್ಯಾಂಡಲ್ ಹೋಟೆಲ್‌ನಲ್ಲಿ ಉಳಿದುಕೊಂಡೆವು.

ಸಿನಿಮಾ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಿದ ವಿಷ್ಣು ತುಂಬ ಸಂತೋಷಪಟ್ಟ. ತಾನು ಆ ಸಿನಿಮಾ ಮಾಡಲೇಬೇಕು ಎಂದು ಆ ಕ್ಷಣವೇ ತೀರ್ಮಾನಿಸಿದ. ರಾತ್ರಿ 9.30ಕ್ಕೆ ಸಿನಿಮಾ ನೋಡಿದ ನಂತರ ಅವನು ತಕ್ಷಣ ದಿಲೀಪ್ ಕುಮಾರ್ ಅವರನ್ನು ಭೇಟಿ ಮಾಡಿ, ಅಭಿನಂದಿಸಬೇಕು ಎಂದ. ನನಗೆ ದಿಲೀಪ್ ಕುಮಾರ್ ಹತ್ತಿರವಾಗಿದ್ದರು. ಫೋನ್ ಮಾಡಿ, ಅವರು ಮನೆಯಲ್ಲಿ ಇದ್ದಾರೆನ್ನುವುದನ್ನು ಖಾತರಿ ಪಡಿಸಿಕೊಂಡೆ. ಅವರು ತಕ್ಷಣವೇ ನಮ್ಮನ್ನು ಬರಹೇಳಿದರು. ಅವರ ಮನೆಗೆ ಹೋದರೆ ನನಗೆ ಆದರಾತಿಥ್ಯಕ್ಕೆ ಕೊರತೆಯೇ ಇರುತ್ತಿರಲಿಲ್ಲ. ಕಾಫಿಯಿಂದ ಶುರುವಾದರೆ, ರಾತ್ರಿ ಊಟದವರೆಗೆ ಎಲ್ಲವೂ ಅವರ ಮನೆಯಲ್ಲಿಯೇ. ತಮ್ಮ ಬೆಡ್‌ರೂಮ್‌ನಲ್ಲೇ ಕೂರಿಸಿ, ನನ್ನನ್ನು ಮಾತನಾಡಿಸುವಷ್ಟು ಔದಾರ್ಯ ದಿಲೀಪ್ ಕುಮಾರ್ ಅವರದ್ದು.

ಆ ದಿನ ರಾತ್ರಿ ನಾವು ದಿಲೀಪ್ ಕುಮಾರ್ ಮನೆಗೆ ಹೋದೆವು. ವಿಷ್ಣು ಒಂದು ಹೂಗುಚ್ಛ ನೀಡಿ, ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ‘ಅದೇನು ಪರ್ಫಾರ್ಮೆನ್ಸ್ ಸರ್ ನಿಮ್ಮದು’ ಎಂದು ಹೊಗಳಿದ. ಒಳ್ಳೆಯ ಕಥೆ, ನಿರ್ದೇಶಕ, ಪ್ರತಿಭಾವಂತರ ತಾರಾಗಣ ಇದ್ದರೆ ಸಿನಿಮಾ ಚೆನ್ನಾಗಿ ಆಗುತ್ತದೆ ಎಂದು ನಮ್ರವಾಗಿ ಅವರು ಹೇಳಿದರು. ಆ ದಿನ ರಾತ್ರಿ ಅವರ ಮನೆಯಲ್ಲಿ ಮುಕ್ತ ಸಂವಾದ. ಅವರು, ವಿಷ್ಣು, ನಾನು ಚಿತ್ರರಂಗದ ಅನೇಕ ಸಂಗತಿಗಳನ್ನು ಮಾತನಾಡುತ್ತಾ ಕುಳಿತೆವು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ರಾತ್ರಿ 3 ಗಂಟೆಯವರೆಗೆ ಮಾತು ಮಾತು ಮಾತು. ಅವರ ಮನೆಯಲ್ಲಿಯೇ ನಮ್ಮ ಊಟವೂ ಆಯಿತು.

ಮರುದಿನ ಬೆಳಿಗ್ಗೆ ಬೆಂಗಳೂರಿಗೆ ಮರಳಿದೆವು. ಅವನು ಕನ್ನಡದಲ್ಲಿ ಆ ಸಿನಿಮಾ ಮಾಡೋಣ ಎಂದು ಹೇಳಿದ. ಆ ಸಿನಿಮಾ ವಿಷಯವಾಗಿ ಕೋರ್ಟ್‌ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆದ್ದರಿಂದ ಅದನ್ನು ಬಿಡುಗಡೆ ಮಾಡುವಂತಿರಲಿಲ್ಲ. ಆ ತಾಂತ್ರಿಕ ಸಮಸ್ಯೆಯನ್ನು ವಿಷ್ಣುವಿಗೆ ಹೇಳಿದೆ. ಕನ್ನಡದಲ್ಲಿ ಕೂಡ ಅದನ್ನು ನಿರ್ಮಿಸುವುದು ಆ ಪರಿಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ನನ್ನ ತಲೆಯಲ್ಲಿ ಇನ್ನೊಂದು ಕಥೆ ಇತ್ತು. ಬದುಕಿನಲ್ಲಿ ಕಲೆ, ಸಂಗೀತ, ಕಾರ್ ಡ್ರೈವಿಂಗ್ ಮುಂತಾದವನ್ನು ಕಲಿಸಲು ಒಬ್ಬ ಸಮರ್ಥ ಗುರು ಇರುತ್ತಾರೆ. ಅಂಥ ಗುರುವಿನ ಪಾತ್ರವನ್ನು ಮುಖ್ಯವಾಗಿಸಿ ಕಥೆಯೊಂದನ್ನು ಹೆಣೆದಿದ್ದೆ. ಒಬ್ಬ ಪ್ರೊಫೆಸರ್‌ನ ಆತ್ಮಕಥೆಯ ಮಾದರಿಯದ್ದು. ಕಾಲೇಜಿನಲ್ಲಿ ಪಾಠ ಹೇಳಿ ಕಳುಹಿಸುವ ಗುರುಗಳು ಆಮೇಲೆ ಸುಮ್ಮನಾಗಿಬಿಡುತ್ತಾರೆ. ಆದರೆ, ಬದುಕಿನ ಪಾಠ ಹೇಳುವ ಗುರುವನ್ನು ತೋರಿಸುವ ಪಾತ್ರ ರೂಪಿಸುವುದು ನನ್ನ ಉದ್ದೇಶ ವಾಗಿತ್ತು. ಆ ಸಿನಿಮಾದ ಎಳೆ ವಿಷ್ಣುವಿಗೆ ಇಷ್ಟವಾಯಿತು. ಬೆಂಗಳೂರಿನಿಂದ ಶುರುವಾಗಿ, ಕನ್ಯಾಕುಮಾರಿಗೆ ತಲುಪಬೇಕು. ಅಲ್ಲಿ ವಿವೇಕಾ ನಂದರ ಗೆಟ್‌ಅಪ್ ಹಾಕಿಕೊಳ್ಳಬೇಕಾಗುತ್ತದೆ.

ವಿವೇಕಾನಂದರಿಗೆ ಜ್ಞಾನೋದಯವಾದಂತೆ ಆ ಪಾತ್ರಕ್ಕೂ ಆಗುತ್ತದೆ. ಆಮೇಲೆ ಕೋಲ್ಕತ್ತದ ಶಾಂತಿ ನಿಕೇತನಕ್ಕೆ ಪಯಣ. ಅಲ್ಲಿ ರವೀಂದ್ರನಾಥರ ತತ್ವ ದರ್ಶನ. ಆಮೇಲೆ ಸುಭಾಷಚಂದ್ರರ ಮನೆಗೆ ಹೋಗಬೇಕು. ಅಲ್ಲಿಂದ ಭಗತ್‌ಸಿಂಗ್ ಮನೆಗೆ. ಭಗತ್‌ಸಿಂಗ್ ಅಂತಿಮ ಸಂಸ್ಕಾರದ ನಂತರ ಅಸ್ಥಿಯನ್ನು ಚೊಂಬಿನಲ್ಲಿ ಕಟ್ಟಿ ಅಲ್ಲಿ ಇಟ್ಟಿದ್ದಾರೆ. ಅದನ್ನು ನಾನು ನೋಡಿದ್ದೆ. ಅಲ್ಲಿಂದ ಶಿವಾಜಿಯ ಪಾತ್ರ. ಅದಾದ ಮೇಲೆ ಶ್ರೀರಂಗಪಟ್ಟಣದಲ್ಲಿ ಟಿಪ್ಪೂ ಸುಲ್ತಾನ್ ವೇಷವನ್ನೂ ಹಾಕಿಕೊಳ್ಳಬೇಕು. ಇವೆಲ್ಲವೂ ಪ್ರಮುಖ ಪಾತ್ರದ ಒಳಗೆ ಬರುವಂಥವು... ಹೀಗೆ ನಾನು ಕಥೆಯ ಭಿತ್ತಿಯ ವಿವರಣೆ ನೀಡುತ್ತಾ ಹೋದೆ. ನಾನು ಹೇಳುವುದನ್ನೆಲ್ಲಾ ಕೇಳುತ್ತಾ ಕುಳಿತಿದ್ದ ಅವನು ಧಿಗ್ಗನೆದ್ದು, ತನ್ನ ಮನೆಯಲ್ಲಿ ಇದ್ದ ಒಂದು ಕೋಲನ್ನು ತಂದು ಹೊಡೆಯುವವನಂತೆ ನಿಂತ.

ಈ ವಯಸ್ಸಿನಲ್ಲಿ, ಇಂಥ ಆರೋಗ್ಯ ಇಟ್ಟುಕೊಂಡು ಅಷ್ಟೆಲ್ಲಾ ಪ್ರಯಾಣ ಮಾಡಿ ಚಿತ್ರೀಕರಣ ಸಾಧ್ಯವೇ ಎನ್ನುವುದು ಅವನ ಪ್ರಶ್ನೆಯಾಗಿತ್ತು. ಅದೊಂದು ಕ್ಲಾಸಿಕ್ ಚಿತ್ರ ಆಗುತ್ತೆ. ಐದು ಪ್ರಮುಖ ಪಾತ್ರಗಳಲ್ಲಿ ವಿಷ್ಣು ನಟಿಸಿದರೆ ಜನಮಾನಸದಲ್ಲಿ ಉಳಿಯುತ್ತದೆ ಎಂದು ನನಗೆ ಬಲವಾಗಿ ಅನ್ನಿಸುತ್ತಿತ್ತು. ಅದನ್ನೇ ವಿಷ್ಣುವಿಗೆ ಮನದಟ್ಟು ಮಾಡಿಸಿದೆ. ಅವನು ಸ್ವಲ್ಪ ಕರಗಿದ.

ಸಿನಿಮಾಗೆ ಯಾವ ಶೀರ್ಷಿಕೆ ಇಡಬೇಕು ಎಂದು ಚರ್ಚಿಸಿದೆವು. ‘ಗುರು ವಿಷ್ಣು, ಗುರು ಬ್ರಹ್ಮ, ಗುರು ಮಹೇಶ್ವರ’-ಇದು ನಾನು ಇಟ್ಟಿದ್ದ ಶೀರ್ಷಿಕೆ. ಇದು ತುಂಬಾ ಉದ್ದವಾಯಿತು ಎಂದು ವಿಷ್ಣು ಅಭಿಪ್ರಾಯಪಟ್ಟ. ಗುರು ವಿಷ್ಣು ಎಂದು ಇಟ್ಟರೆ ತನ್ನನ್ನೇ ತಾನು ಹೊಗಳಿಕೊಂಡಂತೆ ಆಗುತ್ತದೆ. ಬ್ರಹ್ಮನಿಗೆ ಪವರ್ ಇಲ್ಲ, ಡಲ್ ಕ್ಯಾರೆಕ್ಟರ್ ಎಂಬ ವಾದ ಅವನದ್ದು. ಕೊನೆಗೆ ‘ಗುರು ಮಹೇಶ್ವರ’ ಎಂಬ ಶೀರ್ಷಿಕೆಯನ್ನು ಉಳಿಸಿ ಕೊಂಡೆವು. ಚೆನ್ನೈನಲ್ಲಿ ಆರ್. ಸೆಲ್ವರಾಜ್ ಅವರಿಗೆ ಹೇಳಿ ಕಥಾ ವಿಸ್ತರಣೆ ಮಾಡಿಸಿದೆ. ಹಿಂದಿಯ ಸಚಿನ್ ಭೌಮಿಕ್ ಅವರಿಂದ ಅದನ್ನು ಇನ್ನೂ ಸುಧಾರಿಸಿದೆ.

ವಿಷ್ಣುವಿಗೆ ರೀಡಿಂಗ್ ಕೊಡುವ ಮೊದಲು ನಾನು ಸಿದ್ಧನಾಗಬೇಕು ಎಂದುಕೊಂಡು ಕನ್ಯಾಕುಮಾರಿ, ಕೋಲ್ಕತ್ತ, ಭಗತ್ ಸಿಂಗ್ ಮನೆ, ಶಿವಾಜಿ ಇದ್ದ ಸ್ಥಳಗಳು ಎಲ್ಲದರ ಫೋಟೊಗಳನ್ನು ತೆಗೆದುಕೊಂಡು ಬಂದೆ. ಅವೆಲ್ಲವೂ ಒಳ್ಳೆಯ ಲೊಕೇಷನ್‌ಗಳು. ವಿಷ್ಣು ವಿಮಾನದಲ್ಲಿ ಓಡಾಡುವುದನ್ನು ನಿಲ್ಲಿಸಿಬಿಟ್ಟಿದ್ದ. ಅವನಿಗೆ ವಿಮಾನ ಪ್ರಯಾಣದ ಫೋಬಿಯಾ ಇತ್ತು. ರೈಲು ಪ್ರಯಾಣದ ಮೂಲಕ ಅಷ್ಟೆಲ್ಲಾ ಚಿತ್ರೀಕರಣ ಸಾಧ್ಯವೇ ಎಂಬ ಅನುಮಾನ ಅವನಿಗೆ. ದಕ್ಷಿಣ ಭಾರತದ ಲೊಕೇಷನ್‌ಗಳಿಗೆ ಒಂದು ಹಂತದಲ್ಲಿ, ಉತ್ತರದ ಭಾರತದ ಲೊಕೇಷನ್‌ಗಳಿಗೆ ಇನ್ನೊಂದು ಹಂತದಲ್ಲಿ ಹೋಗಿ ಚಿತ್ರೀಕರಣ ಮುಗಿಸಿಕೊಂಡು ಬಂದರೆ ಆಯಿತು. ಪ್ರಯಾಣ ಹೇಗಿರಬೇಕು ಎಂದೆಲ್ಲಾ ಡಿಸೈನ್ ಮಾಡೋಣ ಎಂದು ನಾನು ಹೇಳಿದೆ. ನಾನು ಕೂಡ ಅವನ ಜೊತೆ ರೈಲಿನಲ್ಲೇ ಪ್ರಯಾಣ ಮಾಡುವುದೆಂದು ನಿರ್ಧರಿಸಿದೆ. 

ಸಿನಿಮಾದ ಪಕ್ಕಾ ಕಥೆ ಸಿದ್ಧವಾಯಿತು. ಕರಡು ಸ್ಕ್ರಿಪ್ಟ್ ಕೂಡ ತಯಾರಾಯಿತು. ಸಾಮಾನ್ಯವಾಗಿ ಸಿನಿಮಾಗೆ ನಾಲ್ಕು ಸ್ಕ್ರಿಪ್ಟ್‌ಗಳು ತಯಾರಾಗುತ್ತವೆ. ಮೊದಲನೆಯದು ಪೂರ್ತಿ ಕರಡು ಸ್ವರೂಪದ್ದು. ಎರಡನೆಯದು ಅದರ ತುಸು ಸುಧಾರಿತ ರೂಪ. ಮೂರು ಹಾಗೂ ನಾಲ್ಕನೇ ಹಂತದ ಸ್ಕ್ರಿಪ್ಟ್‌ಗಳು ಚಿತ್ರೀಕರಣಕ್ಕೆ ಪಕ್ಕಾ ಸೂಚನೆಯನ್ನು ಕೊಡುವಷ್ಟು ಗಟ್ಟಿಯಾಗಿರುತ್ತವೆ. ನಾನು ಎರಡನೇ ಕರಡಿನ ಸ್ಕ್ರಿಪ್ಟ್ ಅನ್ನು ವಿಷ್ಣುವಿಗೆ ತೋರಿಸಿ, ಅದನ್ನು ತಿದ್ದಿಕೊಂಡು ಬರುವುದಾಗಿ ಹೇಳಿದೆ. ನಾವು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ರೇಡಿಯೊದಲ್ಲಿ ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಕೇಳುತ್ತಿತ್ತು. ಅದರಲ್ಲಿ ಗುರು ಎಷ್ಟು ಮುಖ್ಯ ಎನ್ನುವುದನ್ನು ಹೇಳುವ ಸಾಲೊಂದು ಇದೆ. ಅದನ್ನು ಕೇಳಿ ವಿಷ್ಣು ತುಂಬಾ ಸಂತೋಷಪಟ್ಟ. ಒಂದು ಒಳ್ಳೆಯ ಕೆಲಸಕ್ಕೆ ಹೊರಟಾಗ ಇಂಥ ಶುಭಶಕುನಗಳು ಸಿಗುತ್ತವೆ ಎಂದು ಅವನು ಪ್ರಸನ್ನವದನನಾದ. ಹಂಸಲೇಖ ಅವರನ್ನು ಬಾಯಿತುಂಬಾ ಹೊಗಳಿದ.

ಆರ್. ಸೆಲ್ವರಾಜ್ ತುಂಬಾ ದೊಡ್ಡ ಲೇಖಕ. ಭಾರತಿ ರಾಜ್, ಶಿವಾಜಿ ಗಣೇಶನ್ ಮೊದಲಾದ ದೊಡ್ಡ ನಟರ ಸಿನಿಮಾಗಳಿಗೆ ಕಥಾ ವಿಸ್ತರಣೆ ಮಾಡಿದವರು ಅವರು. ಮಣಿರತ್ನಂ ಅವರ ‘ಅಲೈ ಪಾಯುದೆ’ ಸಿನಿಮಾಗೆ ಬರೆದವರೂ ಅವರೇ. ಒಂದು ಕಥೆಯನ್ನು ಸಿನಿಮಾ ಮಾಧ್ಯಮಕ್ಕೆ ಹೊಂದುವಂತೆ ರೂಪಿಸುವುದು ದೊಡ್ಡ ಪ್ರಕ್ರಿಯೆ. ಸ್ಕ್ರಿಪ್ಟ್ ಪಕ್ಕಾ ಆದಮೇಲಷ್ಟೆ ನಾವು ಚಿತ್ರೀಕರಣದ ರೂಪುರೇಷೆ ತಯಾರಿಸಲು ಸಾಧ್ಯ. ಇದಕ್ಕೆ ನಾಲ್ಕೈದು ತಿಂಗಳ ಕಾಲಾವಕಾಶ ಬೇಕು. ಸೆಲ್ವರಾಜ್ ಅವರ ಜೊತೆ ನಾನು ಕಥೆಯನ್ನು ಗಟ್ಟಿಗೊಳಿಸಲು ಕುಳಿತಿದ್ದಾಗ ಒಮ್ಮೆ ವಿಷ್ಣು ಫೋನ್ ಮಾಡಿದ. ಎಲ್ಲಿದ್ದೀಯ ಎಂದು ಕೇಳಿದ. ನಾನು ಸೆಲ್ವರಾಜ್ ಅವರ ಜೊತೆ ಇದ್ದೇನೆಂದು ಹೇಳಿದ ಮೇಲೆ, ಬೆಂಗಳೂರಿಗೆ ಬಂದಾಗ ಭೇಟಿಯಾಗುವಂತೆ ಸೂಚಿಸಿದ.

‘ಈ ಬಂಧನ’ ಸಿನಿಮಾದ ಡಬ್ಬಿಂಗ್‌ನಲ್ಲಿ ಇದ್ದಾಗ ನಾನು ಅವನನ್ನು ಭೇಟಿ ಮಾಡಿದೆ. ಆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಭಾವುಕ ಸನ್ನಿವೇಶವೊಂದು ಇದೆ. ಮಾತೇ ಅದರ ಜೀವಾಳ. ಸುಮಾರು ಒಂದು ಸಾವಿರ ಅಡಿಗಳಷ್ಟು ಅದೊಂದೇ ದೃಶ್ಯದ ಚಿತ್ರೀಕರಣ ಆಗಿತ್ತು. ಅದು ಹೇಗೆ ಬಂದಿದೆ ಎಂದು ವಿಷ್ಣು ನನ್ನನ್ನು ಕೇಳಿದ. ಅದನ್ನು ನೋಡಿದಾಗ ನನಗೆ ವಿಷ್ಣು ಎಂಥ ಅದ್ಭುತ ನಟ ಎನಿಸಿತು. ಕಿಟ್ಟಿ ರಂಗಮಂಚ ಎನ್ನುವವರು ಆ ಸಿನಿಮಾದ ಸಹಾಯಕ ನಿರ್ದೇಶಕರಾಗಿದ್ದರು. ಅವರೀಗ ತೀರಿಹೋಗಿದ್ದಾರೆ. ಅವರು ನನ್ನನ್ನು ಬಲವಂತ ಮಾಡಿ ಕರೆದು, ಮತ್ತೆ ಆ ದೃಶ್ಯ ತೋರಿಸಿದರು. ಡಬ್ ಆದ ನಂತರದ ಆ ದೃಶ್ಯ ಒಂದೆರಡು ಕಡೆ ನನ್ನ ಕಣ್ಣಲ್ಲಿ ನೀರು ತರಿಸಿತು. ಒಬ್ಬ ನಟನಾಗಿ ವಿಷ್ಣು ಎಷ್ಟು ಮಾಗಿದ್ದ ಎನ್ನುವುದಕ್ಕೆ ಅದು ಉದಾಹರಣೆ. ಅವನ ಕನ್ನಡ ಉಚ್ಚಾರಣೆ, ಸಂಭಾಷಣೆಯ ಏರಿಳಿತ, ಭಾವಾಭಿವ್ಯಕ್ತಿ ಎಲ್ಲಕ್ಕೂ ಹ್ಯಾಟ್ಸಾಫ್. ಅಂಥ ಅದ್ಭುತ ನಟನ ಜೊತೆ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಿದ ಅವಕಾಶ ನಮ್ಮದಾಯಿತಲ್ಲ ಎಂದು ಖುಷಿಪಟ್ಟೆ.

ಡಬ್ಬಿಂಗ್ ಕೆಲಸ ಪೂರ್ಣಗೊಂಡ ನಂತರ ವಿಷ್ಣುವನ್ನು ಅಭಿನಂದಿಸಿದೆ. ನಮ್ಮ ಕಥೆ ಎಲ್ಲಿಗೆ ಬಂದಿತು ಎಂದು ಕೇಳಿದ. ಇನ್ನೂ ಫೈನ್‌ಟ್ಯೂನ್ ಆಗುತ್ತಿದೆ ಎಂದು ಹೇಳಿದಾಗ, ಅವನು ಇನ್ನೊಂದು ಸಲಹೆ ಕೊಟ್ಟ. ಸಾಯಿಬಾಬಾ ಕುರಿತು ಒಂದು ಸಿನಿಮಾ ಮಾಡಬೇಕು ಎನ್ನುವುದು ಅವನ ಬಯಕೆಯಾಗಿತ್ತು. ಅದನ್ನು ಮಾಡುವಂತೆ ನನಗೆ ಸೂಚಿಸಿದ. ಕನ್ಯಾಕುಮಾರಿ, ಶಾಂತಿ ನಿಕೇತನ, ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ನಡೆದ ಸ್ಥಳ, ಸುಭಾಷ್‌ಚಂದ್ರ ಭೋಸರ ಮನೆ, ಭಗತ್ ಸಿಂಗ್ ಮನೆ ಇವೆಲ್ಲವನ್ನೂ ತಲೆಯಲ್ಲಿ ತುಂಬಿಕೊಂಡಿದ್ದ ನನಗೆ ಸಾಯಿಬಾಬಾ ಬದುಕಿನ ಕಥಾನಕದ ಬಗ್ಗೆ ಏನೂ ಗೊತ್ತಿರಲಿಲ್ಲ. ತಕ್ಷಣಕ್ಕೆ ಆ ಕಥೆಯ ಕಡೆ ಹೊರಳುವುದು ಸಾಧ್ಯವೇ ಇರಲಿಲ್ಲ.

ರನ್ನನ ಗದಾಯುದ್ಧ ಆಧರಿಸಿ, ಭೀಮ-ದುರ್ಯೋಧನರ ಒಂದು ಸಿನಿಮಾ ಮಾಡುವ ಸಾಧ್ಯತೆ ಹಾಗೂ ಕರ್ಣನ ಪಾತ್ರವನ್ನು ನಾಯಕನನ್ನಾಗಿಸಿದ ಸಿನಿಮಾ ಚಿಂತನೆ ನನ್ನ ತಲೆಯಲ್ಲಿ ಇತ್ತಷ್ಟೆ. ಅವಕ್ಕೂ ಹೆಚ್ಚು ಕಾಲಾವಕಾಶ ಬೇಕಿತ್ತು. ಕರ್ಣನ ಕಥೆಯನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ವಿಷ್ಣು ಇನ್ನೊಂದು ಹುಳ ಬಿಟ್ಟ. ಆದರೆ, ರಾಜ್‌ಕುಮಾರ್ ಅವರು ಕೂಡ ಆ ಪಾತ್ರದಲ್ಲಿ ಅಭಿನಯಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ವಿಷ್ಣು ಹೆಸರಿನಲ್ಲಿ ಆ ಸಿನಿಮಾ ಅನೌನ್ಸ್ ಮಾಡಿದರೆ ಅಪಾರ್ಥವಾಗುತ್ತದೆ ಎಂಬ ಸೂಕ್ಷ್ನ ನನ್ನನ್ನು ಕಾಡಿತು. ಬೇರೆ ಯಾವ ಕಥೆಯೂ ಬೇಡ, ಅದನ್ನೇ ಗಟ್ಟಿ ಮಾಡೋಣ ಎಂದು ವಿಷ್ಣುವಿಗೆ ಹೇಳಿ ಮತ್ತೆ ನಾನು ಚೆನ್ನೈ ಕಡೆ ಹೊರಟೆ.

ಮುಂದಿನ ವಾರ: ಅಂದುಕೊಂಡಿದ್ದೆಲ್ಲಾ ಆಗುವುದಿಲ್ಲವಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT