ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲಿನ ಸೊಡರಿಗೂ ಎಣ್ಣೆ ಸಿಗಲಿ...

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಭಾರತದ ಮಟ್ಟಿಗೆ ರಾಜಕಾರಣ ಎಂಬುದೀಗ ನೆಗೆಟಿವ್ ಅರ್ಥದಲ್ಲಿ ಬಳಕೆಯಾಗುತ್ತಿರುವ ಪದ. ಸ್ವಾತಂತ್ರ್ಯಾನಂತರ ಬಂದ ರಾಜಕಾರಣಿಗಳು ನೀಡಿದ ಕೊಡುಗೆ ಅದು, ನೂರಾರು ಪಕ್ಷಗಳು ಸಾವಿರಾರು ರಾಜಕಾರಣಿಗಳ ನಡುವೆಯೂ ಈ ದೇಶದ ಸಾಮಾನ್ಯ ಪ್ರಜೆಯೊಬ್ಬ ನಿಸ್ವಾರ್ಥ, ಪ್ರಾಮಾಣಿಕ ನಾಯಕನಿಗಾಗಿ ಹಂಬಲಿಸುವ ಸ್ಥಿತಿ. ಪ್ರಜಾಪ್ರಭುತ್ವದ ರೂಢಿಯಂತೆ ಕಳೆದ ವರ್ಷವೂ ಚುನಾವಣೆ ನಡೆಯಿತು.  ಸ್ವತಃ ಬಿಜೆಪಿ ಕೂಡ ನಿರೀಕ್ಷಿಸದಷ್ಟು ಭಾರೀ ಬಹುಮತವೂ ದಕ್ಕಿತು.

ಖಂಡಿತವಾಗಿ ಇದು ಒಳ್ಳೆ ಬೆಳವಣಿಗೆ. ಕುರ್ಚಿ ಭದ್ರವಾಗಿದ್ದರೆ ಮಾತ್ರ ಅದರಲ್ಲಿ ಕೂತವನು ಮುಂದಿನದನ್ನು ಯೋಚಿಸಬಹುದು. ಮೋದಿ ಯಾವಾಗ ಭದ್ರ ಕುರ್ಚಿಯಲ್ಲಿ ಕೂತರೋ ಕೆಲವರು ವಿನಾಕಾರಣ ಆತಂಕಕ್ಕೀಡಾದರು. ಇದು “ಬ್ಲ್ಯಾಕ್‌ ಫ್ರೈಡೆ” ಎಂದು ಜಾಲತಾಣಗಳಲ್ಲಿ ಬರೆದರು. ಮತ್ತೆ ಕೆಲವರು, ಸೂರ್ಯ ನಾಕು ಸಲ ಮುಳುಗೇಳುವಷ್ಟರಲಿ ಈ ದೇಶದ ನಸೀಬು ಬೇರೆಯೇ ಆಗಿರುತ್ತದೆ ಎಂದು ಕುಣಿದರು. ‌
ನಿಜವೆಂದರೆ, ಈ ಎರಡೂ ಅತಿರೇಕಗಳೇ. ಮೋದಿಯವರು ಪ್ರಧಾನಿಯಾದ ಮೇಲೆ ಯಾವ ಮೂಲಭೂತವಾದದ ಬಗ್ಗೆಯೂ ಮಾತಾಡಲಿಲ್ಲ. ಕೇವಲ ಭಾರತದ ಬಗ್ಗೆ ಮಾತ್ರ ಮಾತಾಡಿದರು. ಅವರದ್ದು ಬಿಜೆಪಿಗಿಂತ ತುಸು ಭಿನ್ನದನಿಯೆನಿಸಿತು.

ಮೋದಿಯವರ ಆಡಳಿತಕ್ಕೀಗ ಒಂದು ವರುಷ. ಯಾವ ಸಣ್ಣ ಬದಲಾವಣೆಯಾಯಿತು ಸಾಮಾನ್ಯನ ಬದುಕಲ್ಲಿ? ತಿಂಗಳಿಗೆ ಎರಡು ಸಾವಿರಕ್ಕೆ ಕೊಳ್ಳುತ್ತಿದ್ದ ಆ ಅದೇ ಔಷಧಗಳು ದುಪ್ಪಟ್ಟು ಬೆಲೆ ಏರಿಸಿಕೊಂಡಿವೆ. ಹಳ್ಳ ಹಿಡಿಯುತ್ತಿರುವ ಕೃಷಿ, ಬಡತನ, ಅನಕ್ಷರತೆ, ಮಾರುಕಟ್ಟೆ ಸಮಸ್ಯೆ, ಸಣ್ಣ ಕೈಗಾರಿಕೆಗಳು, ಗ್ರಾಮೀಣ ಉದ್ಯೋಗ, ಈ ಯಾವುದರ ಬಗ್ಗೆಯೂ ಹೆಚ್ಚು ಗಮನ ಕೊಡಲೇ ಇಲ್ಲ. ಚುನಾವಣೆಗೆ ಮುನ್ನ ಹೇಳಿದ ಕಪ್ಪು ಹಣ ವಾಪಸು ತರುವ ಪ್ರಕ್ರಿಯೆ ಶೀಘ್ರಗತಿ ಪಡೆಯಲಿಲ್ಲ.

ಗ್ರಾಮ ಭಾರತಕ್ಕೆ ಯಾವ ಪರಿಣಾಮಕಾರೀ ಯೋಜನೆಯೂ ರೂಪುಗೊಳ್ಳಲಿಲ್ಲ. ಅಸಲಿಗೆ ಯೋಜನಾ ಆಯೋಗವೇ ಇಲ್ಲ. ಅದೀಗ ನೀತಿ ಆಯೋಗ. ಕಾರ್ಮಿಕರ ವಿಚಾರದಲ್ಲಿ ಹೊಸ ಸರ್ಕಾರ ತಂದ ಹೊಸ ಕಾನೂನಂತೂ, ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಬಲವಾದ ಪೆಟ್ಟು.

ಚೀನಾದ ಎಷ್ಟೊಂದು ಸರಕುಗಳು ಈಗಾಗಲೇ ಒಳತೂರಿಕೊಂಡಿವೆ. ಈಗ ಹೊಸ ಒಪ್ಪಂದ ಹೆದ್ದಾರಿಯನ್ನೇ ಹಾಸಿದೆ. ಚೀನಾದ ರೇಷ್ಮೆ ನಮ್ಮ ರೇಷ್ಮೆ ಕೃಷಿಕರಿಗೆ ಆದಾಯ ಕುಸಿಯುವಂತೆ ಮಾಡಿದೆ. ಹಿಂದಿನ ಸರಕಾರದಲ್ಲಿ ಕೆಲವಾದರೂ ವಸ್ತುಗಳ ಮೇಲೆ ವಿದೇಶಿ ಬಂಡವಾಳಕ್ಕೆ ನಿರ್ಬಂಧವಿತ್ತು. ಈಗ ಅದನ್ನು ಪೂರ್ಣ ತೆಗೆದುಹಾಕಲಾಗಿದೆ. ಇನ್ನು ನಮ್ಮ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಸಣ್ಣ ಪುಟ್ಟ ವಸ್ತುಗಳಿಗೂ, ನಮ್ಮ ದೇವರುಗಳ ಮುಂದಣ ಗಂಧದಕಡ್ಡಿ ಕರ್ಪೂರಕ್ಕೂ ವಿದೇಶದ ಬಂಡವಾಳ ಬರಲಡ್ಡಿಯಿಲ್ಲ.

ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಕುರಿತು ಕಾಂಗ್ರೆಸ್ ಸರಕಾರವಿದ್ದಾಗ ಸುಷ್ಮಾ ಸ್ವರಾಜ್ ಅವರು ಸದನದಲ್ಲಿ ಮಾಡಿದ ಭಾಷಣ ಅದ್ಬುತ ಮತ್ತು ದಾಖಲಾರ್ಹ. ಆದರೆ ಈಗ  ಅವರದೇ ಸರಕಾರ ಅದೇ ನೀತಿಯನ್ನು ಜಾರಿಗೆ ತರುತ್ತಿರುವಾಗ ಸುಷ್ಮಾ ಮೇಡಂ ತುಂಬು ಮೌನಿ. ಒಟ್ಟಿನಲ್ಲಿ ಈಗ ಕೇಂದ್ರ ಸರ್ಕಾರ ಅಂದರೆ ಮೋದಿ, ಮೋದಿ ಅಂದರೆ ಕೇಂದ್ರ ಸರಕಾರ ಅನ್ನುವಂತಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಗ್ಗದ ನಡೆ ಇದು.

ಒಂದು ವರ್ಷದಲ್ಲಿ ಭ್ರಷ್ಟಾಚಾರವೂ ಆಗಿಲ್ಲವೆಂಬುದರ ಜೊತೆಗೆ ಲೋಕಪಾಲ ನೇಮಕ ಯಾಕಾಗಿಲ್ಲವೆಂಬ ಪ್ರಶ್ನೆ ಉಳಿದುಬಿಡುತ್ತದೆ. ಒಮ್ಮೊಮ್ಮೆ ಭಾರತದಿಂದ ಮೋದಿಯೇ ಹೊರತೂ ಮೋದಿಯಿಂದ ಭಾರತವಲ್ಲ ಎಂಬುದನ್ನು, ಭಾರತದ ಬಗ್ಗೆ ಹೆಮ್ಮೆ ಪಡಲು ಮೋದಿಯವರ ಹೊರತಾಗಿಯೂ ಸಾವಿರ ಸಂಗತಿಗಳಿರುವುದನ್ನು ಮರೆತು ಮಾತಾಡಿಬಿಡುತ್ತಾರೆ.

ಮೋದಿಯವರು ನಿರಂತರ ಕೆಲಸ ಮಾಡುತ್ತಿದ್ದಾರೆ. ವಿದೇಶಗಳನ್ನು ಸುತ್ತುತ್ತಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಾರೆ. ಬಂಡವಾಳ ಹೂಡಿ ಎಂದು ಹಸ್ತಲಾಘವ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಶಕ್ತಿವರ್ಧನೆ ಮಾಡಲು ಇಂತಹ ಕೆಲ ಭೇಟಿಗಳು, ಒಪ್ಪಂದಗಳು ಅಗತ್ಯವಿರಬಹುದು. ಆದರೆ ಇಷ್ಟೊಂದು ವಿದೇಶೀ ಬಂಡವಾಳ ಬರುವಾಗ “ಮೇಕ್ ಇನ್ ಇಂಡಿಯಾ”ದ ಅರ್ಥವೇನು? ಮತ್ತು  ವಿದೇಶೀ ಬಂಡವಾಳಗಾರರಾದರೂ ಬಂಡವಾಳ ಹಾಕುವುದು ಎಲ್ಲಿಗೆ? ಆಯಕಟ್ಟಿನ ಜಾಗಗಳಿಗೆ ಮತ್ತು ಆಯಕಟ್ಟಿಗೆ ಕ್ಷೇತ್ರಗಳಿಗೆ, ಹಳ್ಳಿಗಳಿಗೆ ಮತ್ತು ಕೃಷಿಕ್ಷೇತ್ರಕ್ಕೆ ಬಂಡವಾಳ ಹರಿಯುತ್ತದಾ? ಹಾಗಾದರೆ ಬರಿಯ ನಗರೀಕರಣ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಬೆಳವಣಿಗೆಯಿಂದ ಒಟ್ಟಾರೆ ದೇಶದ ಅಭಿವೃಧ್ದಿ ಹೇಗಾಗುತ್ತದೆ?

ನಿಜ, ಮೋದಿಯವರಿಗೆ ಕನಸಿದೆ, ನಾವು ಹೇಗೆ ಅಭಿವೃದ್ಧಿಯನ್ನು ಕಣ್ಣರಳಿಸಿ ನೋಡಲು ವಿದೇಶಗಳಿಗೆ ಬೇಟಿ ಕೊಡುತ್ತೇವೋ ಹಾಗೇ ಭಾರತಕ್ಕೂ ಜನ ಭೇಟಿ ಕೊಡಬೇಕು. ಆದರೆ,ಹಾಗೆ ಭೇಟಿ ಕೊಡುವವರು ಸ್ಮಾರ್ಟ್ ನಗರಗಳಿಗೆ ಭೇಟಿ ನೀಡುವಂತೆ ಇಲ್ಲಿನ ಹಳ್ಳಿಗಳಿಗೂ ಭೇಟಿ ನೀಡುವಂತಾಗಬೇಕು.

ಹಳ್ಳಿಗಳೇ ಹೆಚ್ಚಾಗಿರುವ, ಕೃಷಿಯನ್ನೇ ಹೆಚ್ಚು ನಂಬಿರುವ, ಬಹುಸಂಸ್ಕೃತಿ ಉಳ್ಳ ದೇಶದಲ್ಲಿ ಎಲ್ಲವನ್ನೂ ಸಮತೋಲನಗೊಳಿಸುವ, ನಗರ –ಗ್ರಾಮೀಣ ಎರಡರ ಅಭಿವೃಧ್ದಿಯೂ ಜೊತೆಗೇ ಆಗುವಂತಹ ಯೋಜನೆಗಳಾಗಬೇಕು.ಆದರೆ ಕಳೆದ ಒಂದು ವರ್ಷದಲ್ಲಿ ಮೋದಿಯವರು ಬರಿಯ ಕಾರ್ಪೋರೇಟ್ ಜಗತ್ತಿನ ಬಗ್ಗೆ, ದೊಡ್ಡ ದೊಡ್ಡ ಉದ್ಯಮಗಳ ಬಗ್ಗೆ ಮಾತ್ರವೇ ಮಾತಾಡುತ್ತಿದ್ದಾರೆಯೇ ಹೊರತೂ ಮಾಸಲು ಬಟ್ಟೆಯ, ಮುರುಕಲು ಮನೆಗಳ ಜನರ ಬಗ್ಗೆ ಚಿಕ್ಕ ಭರವಸೆ ಮೂಡಿಸುವ ಮಾತನ್ನೂ ಆಡುತ್ತಿಲ್ಲ.

ಬೇಕೋ, ಬೇಡವೋ ಜಾಗತೀಕರಣ ನಮ್ಮನ್ನಾವರಿಸಿಯಾಗಿದೆ. ಅದರ ಪರಿಣಾಮ ನಗರೀಕರಣ ತಂತಾನೇ ಆಗಿಯೇ ಆಗುತ್ತದೆ ಮತ್ತು ಅದು ಹಳ್ಳಿಗಳ ಸ್ವರೂಪವನ್ನೂ ಬದಲಿಸುತ್ತಿದೆ. ಈ ಸ್ಥಿತ್ಯಂತರದ ಕಾಲದಲ್ಲಿ ಹಳ್ಳಿಗಳನ್ನು ಸಶಕ್ತಗೊಳಿಸಲು ಸಾಧ್ಯವಾಗುವುದು ಕೇವಲ ಸರಕಾರಕ್ಕೆ ಮಾತ್ರ. ನಮ್ಮ ಕೃಷಿಭೂಮಿಯನ್ನೂ, ಹಳ್ಳಿಯ ಜನಪದವನ್ನೂ ಕಟ್ಟಿಕೊಂಡು ವಿದೇಶಿ ಕಂಪನಿಗೇನಾಗಬೇಕಿದೆ ಹೇಳಿ? ಸರ್ಕಾರವೂ ತನ್ನ ಗಮನವನ್ನು ನಗರದ ಕಡೆಗೇ ಕೊಟ್ಟುಬಿಟ್ಟರೆ ಹಳ್ಳಿಗಳೆಲ್ಲಿ ಉಳಿಯಬೇಕು?

ಹನ್ನೆರಡು ರೂಪಾಯಿಯ ವಿಮಾ ಯೋಜನೆ ಮತ್ತು ಜನ-ಧನ  ಯೋಜನೆಗಳು ನಿಜಕ್ಕೂ ಅಭಿನಂದನಾರ್ಹ. ಬೆಂಗಳೂರಿನ ಮಹಿಳಾ
ಮೇಯರ್‌ಗೆ ಅಗತ್ಯಕ್ಕಿಂತ ಹೆಚ್ಚು ಬಾಗಿ ನಮಸ್ಕರಿಸುವ ಪ್ರಧಾನಿ ಬಗ್ಗೆ ಜನರಿಗೆ ನಿಜಕ್ಕೂ ಪ್ರೀತಿ ಇದೆ.ಒಂದು ವರ್ಷದಲ್ಲಿ ಇಡೀ ವ್ಯವಸ್ಥೆಯನ್ನೇ ಬದಲಿಸುವ ಮಂತ್ರದಂಡ ಯಾರ ಬಳಿಯೂ ಇರುವುದಿಲ್ಲ. ಹಾಗೆಂದು ಮುಂದೆ ಮ್ಯಾಜಿಕ್ ನಡೆಯಬಹುದಾದ ಲಕ್ಷಣಗಳೂ ಕಾಣುತ್ತಿಲ್ಲ. ಮೋದಿಯವರ ಬಗ್ಗೆ ಇರುವುದು ‘ಹಿಟ್ ಡೈರೆಕ್ಟರ್‌್’ನ ಸಿನಿಮಾದ ಬಗ್ಗೆ ಇರುವಂತಹ ನಿರೀಕ್ಷೆ ಮತ್ತು ಅದು ಅವರಾಗೇ ಸೃಷ್ಟಿಸಿದ್ದು ಕೂಡ.

ಮೋದಿಯವರ ಒಂದು ವರುಷದ ಆಡಳಿತದ ಬಗ್ಗೆ ಏನು ಹೇಳುತ್ತೀರಿ ಅಂತ ರೈತರೊಬ್ಬರನ್ನ ಕೇಳಿದರೆ, “ ಅವ್ರಗೇನ್ ಹೆಡ್ತಿಯಾ, ಮಕ್ಕಳಾ ಯಾರಿಗಾಗ್ ಮಾಡ್ಬೇಕು ಪಾಪ, ಅವ್ರು ನಮಗೂ ಒಳ್ಳೇದ್ ಮಾಡ್ತಾರೆ. ಈಗ ಮ್ಯಾಲಿಂದ ಸರಿಮಾಡ್ಕಂಡ್ ಬತ್ತಾ ಇದಾರಂತೆ’’ ಅಂದ್ರು. ಅವರ ಮಾತು ನಿಜವಾಗಲಿ. ನಗರಕ್ಕೆ ಬಣ್ಣದ ದೀಪದ ಜೊತೆಗೇ, ಗುಡಿಸಲೊಳಗಿನ ಸೊಡರಿಗೂ ಒಂದಿಷ್ಟು ಎಣ್ಣೆ  ಸಿಗಲಿ, ಅದು

ಆರುವ ಮುನ್ನ.

ಲೇಖಕಿ : ಪತ್ರಿಕೋದ್ಯಮ ಪದವೀಧರೆ ಮತ್ತು ಕೃಷಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT