ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಪ್ರತಿಭಟನೆಯ ತೆರೆಮರೆಯಲ್ಲಿ

Last Updated 13 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಈಗ ಸುಮಾರು ನಾಲ್ಕು ತಿಂಗಳುಗಳಿಂದ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆ­ಯು­­ತ್ತಲೇ ಇದೆ. ಅದು ನಿಲ್ಲುವ ಯಾವ ಲಕ್ಷಣ­ಗಳೂ ಕಾಣಿಸುತ್ತಿಲ್ಲ. ದೇಶದಲ್ಲಿ ಈಗಷ್ಟೇ ಚುನಾ­ವ­ಣೆಯೂ ನಡೆದಿದೆ. ಆದರೆ ಪ್ರತಿಭಟನಾ­ಕಾ­ರರು ಚುನಾವಣೆ ನಡೆಯಲು ಬಿಡದಿದ್ದ ಬೂತ್‌­ಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಜನ ಮತ ಚಲಾ­­ಯಿಸಲು ಆಗಲಿಲ್ಲ ಎಂದು ಅಂದಾಜು ಮಾಡ­­ಲಾಗಿದೆ. ಈ ಕ್ಷೇತ್ರಗಳಲ್ಲೆಲ್ಲಾ ಮರು­­ಚುನಾ­­ವಣೆ ನಡೆಯಬೇಕಾಗಿದೆ. ಅದು ನಡೆ­ಯುವ ತನಕ ಈಗಾಗಲೇ ಚುನಾವಣೆ ನಡೆ­ದಿ­ರುವ ಕ್ಷೇತ್ರಗಳ ಫಲಿತಾಂಶವೂ ಹೊರ­ಬರುವ ಹಾಗಿಲ್ಲ.

ಅಷ್ಟೇ ಅಲ್ಲ, ಮರು ಚುನಾ­ವಣೆ­ಗ­ಳೆಲ್ಲಾ ಮುಗಿಯುವ ತನಕ ಪ್ರಧಾನಿ ಯಿಂಗ್ಲಕ್ ಶಿನ­ವಾತ್ರ ಉಸ್ತುವಾರಿ ಪ್ರಧಾನಿಯಾಗಿ ಮಾತ್ರ ಮುಂದು­­ವರಿಯಲು ಸಾಧ್ಯ. ಇದೇ ಜನ­ವರಿ 21ರಿಂದ ಎರಡು ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಅದನ್ನು ಉಲ್ಲಂ­ಘನೆ ಮಾಡಿದುದರಿಂದ ವಿರೋಧ ಪಕ್ಷದ ನಾಯ­­­­ಕರೂ ಸೇರಿದಂತೆ, ಪ್ರತಿಭಟನೆಯ ನಾಯ­ಕತ್ವ ವಹಿಸಿದ people’s Democratic Reform Committeeಯ ಅಧ್ಯಕ್ಷರಾದ ಸುತೆಪ್ ಥಾಂಗ್ಸುಬಾನ್ ಅವರನ್ನೂ  ಬಂಧಿಸ­ಲಾಗಿದೆ.

ರಾಜಕೀಯ ಪಕ್ಷಗಳಿಂದ ಆಗುವ ಅಧಿಕಾರದ ದುರುಪಯೋಗ ತಡೆಯಲು ಚುನಾವಣೆಯ ಮೂಲಕ ಆಗಾಗ ಆಡಳಿತದ ಬದಲಾವಣೆ ಅಗತ್ಯ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಸಾಮಾ­ನ್ಯ­ವಾಗಿ ಕೇಳಿಬರುವ ಮಾತು. ಆದರೆ ಪ್ರಜಾ­ಪ್ರಭುತ್ವ­ವಾದಿಗಳನ್ನೂ ಒಳಗೊಂಡ ಥಾಯ್ ಪ್ರತಿ­ಭಟನಾ­ಕಾರರು ಈಗ ಚುನಾವಣೆ ಬೇಡ ಅನ್ನುತ್ತಿ­ದ್ದಾರೆ. ಇಡೀ ವ್ಯವಸ್ಥೆಯೇ ಬದಲಾ­ಗ­ಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ– ನಮ್ಮ ಅರ­ವಿಂದ ಕೇಜ್ರಿವಾಲ್ ತರಹ. ಚುನಾಯಿತ ಸರ್ಕಾ­ರದ ಬದಲು ಅಧಿಕಾರವನ್ನು ಒಂದು ಪೀಪಲ್ಸ್ ಕೌನ್ಸಿಲ್‌ಗೆ  ಹಸ್ತಾಂತರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಥಾಯ್ ರಾಜಕಾರಣದಲ್ಲಿ ದಿನೇ ದಿನೇ ಬದಲಾ­ಗುತ್ತಿ­ರುವ ವಿದ್ಯಮಾನಗಳನ್ನು ಅರ್ಥೈಸು­ವುದು ಸ್ವಲ್ಪ ಕಷ್ಟ. ಅಲ್ಲಿಯ ರಾಜಕೀಯದಲ್ಲಿ ಆಗಾಗ ಹಸ್ತಕ್ಷೇಪ ಮಾಡುತ್ತಲೇ ಬಂದ ಕೆಲವು ಪಟ್ಟ­ಭದ್ರ ಹಿತಾಸಕ್ತಿಗಳು ರಾಜಕೀಯದ ಮಂಚೂ­ಣಿಗೆ ಬರುವುದೇ ಇಲ್ಲ. ಈ ತೆರೆಮರೆಯ ಶಕ್ತಿಗಳನ್ನು ಅಲ್ಲಿಯ ರಾಜಮನೆತನದವ­ರೆಂದೋ ಅಥವಾ ಥಾಯ್ ಸೇನೆ ಎಂದೋ ಅಂದುಕೊಂಡರೆ ತಪ್ಪಾಗಲಾರದು. ಸಂವಿಧಾನಾ­ತ್ಮಕ ರಾಜಾಧಿಕಾರ ಇದ್ದರೂ ಚಕ್ರಾಧಿಪತ್ಯ ವ್ಯವ­ಸ್ಥೆಯ ಕೆಲವು ಪಳೆಯುಳಿಕೆಗಳನ್ನು ಸಂವಿಧಾ­ನಾ­ತ್ಮಕ­ವಾಗಿಯೇ ಇನ್ನೂ ಉಳಿಸಿಕೊಂಡು ಬಂದಿರು­ವು­ದರಿಂದ ಆಡಳಿತ ಯಂತ್ರದ ಹಲವು ಸ್ತರ­ಗಳಲ್ಲಿ ಇದರ ಪ್ರಭಾವ ಕಾಣಬಹುದು.

ಥಾಯ್ ಸಂವಿಧಾನದ ಪ್ರಕಾರ ಸೇನೆ ಮಹಾ­ರಾಜರ ಅಧೀನದಲ್ಲಿದ್ದು, ರಾಜಕಾರಣ ಯಾವಾಗ ರಾಜವಂಶದ  ಹಿತಾಸಕ್ತಿಗಳ ವಿರುದ್ಧ ತಿರುಗು­ತ್ತದೆಯೋ ಆಗೆಲ್ಲ ಮಿಲಿಟರಿ ಪ್ರತ್ಯಕ್ಷವಾಗಿ ಅಧಿಕಾರ­ದಲ್ಲಿರುವ ಸರ್ಕಾರ ಪದಚ್ಯುತಗೊಳ್ಳು­ವಂತೆ ನೋಡಿಕೊಳ್ಳುತ್ತಿತ್ತು. ಆಮೇಲೆ ಸ್ವಲ್ಪ ಕಾಲ ಮಿಲಿಟರಿ ಆಡಳಿತ. ಮತ್ತೆ ಚುನಾವಣೆ.  ಹೀಗೇ ನಡೆದು, ಹೊಸದಾಗಿ ಬಂದ ನಾಯಕರು ಮತ್ತು ತೆರೆಮರೆಯ ಶಕ್ತಿಗಳ ಹೊಂದಾಣಿಕೆ­ಯಿಂದ ಎಂಬತ್ತರ ದಶಕಗಳವರೆಗೆ ಥಾಯ್ ರಾಜ­ಕಾರಣ ಪ್ರಜಾಪ್ರಭುತ್ವ ಎನ್ನಿಸಿಕೊಂಡು ಬಂದಿತ್ತು.

ಕೆಲವೊಮ್ಮೆ ಈ ವ್ಯವಸ್ಥೆಯಲ್ಲೂ ಸ್ವಲ್ಪ ಬದ­ಲಾವಣೆಗಳು ಇರುತ್ತಿದ್ದವು.  ಮಿಲಿಟರಿ ದೇಶದ ರಾಜಕಾರಣದಲ್ಲಿ ವಿಪರೀತ ಮೂಗು ತೂರಿಸಿ ಪ್ರಬಲವಾಗುತ್ತಿದ್ದಂತೆ, ರಾಜಕೀಯ­ದಲ್ಲಿ­ರುವ ಪ್ರಗತಿಪರರನ್ನು ಬಳಸಿಕೊಂಡು ಸೇನೆ­ಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಷ್ಟು ಶಕ್ತಿ­ಶಾಲಿಯಾಗಿದ್ದರು ಥಾಯ್ ರಾಜ ಭೂಮಿ­ಬ್ಹೋಲ್ ಅದುಲ್ಯದೇಜ್. ಇಂತಹ ಪ್ರಯೋಗ­ಗಳನ್ನು ಕೆಲವು ಸಲ ಅವರು ಮಾಡಿದ್ದುಂಟು. ಅದಕ್ಕೆ ಪ್ರಜಾಪ್ರಭುತ್ವವಾದಿ ಶಕ್ತಿಗಳ ಬೆಂಬಲವೂ ಇತ್ತು.

ಆದರೆ ಈಗ ತಿಂಗಳುಗಟ್ಟಲೆ ಧರಣಿ, ಮುಷ್ಕರ ನಡೆದಿದ್ದರೂ, ಸೇನೆ ಸುಮ್ಮನೆ ಕೈಕಟ್ಟಿಕೊಂಡು, ‘ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ’ ಎಂಬಂತೆ ತಟಸ್ಥವಾಗಿದೆ. ಇದಕ್ಕೆ ಕಾರಣ ಈ ತೆರೆಮರೆಯ ಹಿತಾಸಕ್ತಿಗಳಲ್ಲಿಯೇ ಒಗ್ಗಟ್ಟು ಇಲ್ಲದಿರುವುದು. ದೇಶದ ರಾಜಕೀಯದಲ್ಲಿ ಮೂಡಿ­ರುವ ಹೊಸ ಬೆಳವಣಿಗೆಗಳಿಗೆ ಸ್ಪಂದಿಸು­ವುದು ಹೇಗೆ ಎಂಬ ಗೊಂದಲ ಮತ್ತು ಸ್ಪಂದಿಸಿ­ದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಆತಂಕವೂ ಇದಕ್ಕೆ ಕಾರಣ­ವಿರಬಹುದೇನೋ.

ಥಾಯ್ ರಾಜಕಾರಣದಲ್ಲಿ ಇಂತಹ ಅಭ­ದ್ರತೆ ಕಾಡಲು ಮೂರು ಬೆಳವಣಿಗೆಗಳು ಕಾರ­ಣ­ವಾ­ಗಿವೆ. ಮೊದಲನೆಯದಾಗಿ   ಅಧಿಕಾರದ ಕೇಂದ್ರಬಿಂದುವಾಗಿದ್ದ  86 ವರ್ಷದ ಮಹಾ­ರಾಜ­ರಿಗೆ ಆರೋಗ್ಯ ಚೆನ್ನಾಗಿಲ್ಲದೆ ಅವರ ನಂತರ ಯಾರು ಎನ್ನುವ ಪ್ರಶ್ನೆ ಎದುರಾಗಿರುವುದು. ಎರಡನೆ­ಯದು, ಯುವ ಪೀಳಿಗೆಗೆ ಮತ್ತು ದೇಶದ ಬುದ್ಧಿಜೀವಿಗಳಿಗೆ, ರಾಜಕಾರಣದಲ್ಲಿ  ಮಹಾ­ರಾಜರ ಪ್ರಭಾವ ಅತಿಯಾಗಿ ಪ್ರಜಾ­ಪ್ರಭುತ್ವದ ಬೆಳವಣಿಗೆಗೆ ಮುಳುವಾಗಿದೆ ಅಂತ ಅನ್ನಿಸುತ್ತಿ­ರುವುದು. ಮೂರನೆಯದು, ಥಾಯ್ ರಾಜಕಾರಣದಲ್ಲಿ ಹೊಸ ಶಕ್ತಿಕೇಂದ್ರಗಳು ಹುಟ್ಟಿ­ಕೊಂಡಿದ್ದು, ಅವು ತಮಗೆ ಬೇಕಾದ ಹಾಗೆ ವ್ಯವ­ಸ್ಥೆ­­ಯನ್ನು ಬಳಸಿಕೊಳ್ಳಲು ಸಾಧ್ಯವಾಗಿರುವುದು.

ಥಾಯ್ ರಾಜಮನೆತನದ ಆಸ್ತಿ ಮತ್ತು ಹಣಕಾಸಿನ ಉಸ್ತುವಾರಿಯನ್ನು ನೋಡಿಕೊ­ಳ್ಳುವ ‘ಕ್ರೌನ್ ಪ್ರಾಪರ್ಟಿ ಬ್ಯೂರೊ’, ಗ್ರಾಮೀಣಾ­ಭಿವೃದ್ಧಿ ಯೋಜನೆಗಳಲ್ಲಿ, ನೀರಾ­ವರಿ, ಕೃಷಿ  ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಾ ಬಂದಿದ್ದು ರಾಜ ಭೂಮಿಬ್ಹೋಲ್ ಈ ಮೂಲಕ ಸಮಾಜದಲ್ಲಿ ತನ್ನ ಪ್ರಭಾವ ಉಳಿಸಿ­­ಕೊಳ್ಳಲು ಸಾಧ್ಯವಾಗಿದೆ. ಗ್ರಾಮೀಣ ಭಾಗ­ದಲ್ಲಿ ಮೂಲ ಸೌಕರ್ಯಗಳನ್ನು ಒದಗಿ­ಸುವ ಕೆಲಸಗಳಿಗೆ ಪ್ರೋತ್ಸಾಹ ಕೊಟ್ಟಿರುವು­ದ­ರಿಂದ ಗ್ರಾಮೀಣ ಜನತೆಯ ಪ್ರೀತ್ಯಾದರಗಳನ್ನು ಉಳಿಸಿಕೊಳ್ಳುವುದರಲ್ಲಿ ರಾಜರು ಯಶಸ್ವಿಯಾ­ಗಿ­ದ್ದಾರೆ. ಆದರೆ ರಾಜಮನೆತನದ ಎಲ್ಲ ಸದ­ಸ್ಯರೂ ಆ ಗೌರವಗಳನ್ನು ಉಳಿಸಿಕೊಂಡಿಲ್ಲ.

ರಾಣಿ ಸಿರಿಕಿತ್ ಮತ್ತು ಯುವರಾಜ ವಜಿರಲಂಗ­ಕೋರ್ನ್ ಅವರನ್ನು ಕಂಡರೆ ಥಾಯ್ ಜನರಿಗೆ ಅಷ್ಟಕ್ಕಷ್ಟೇ. ಯುವರಾಜರ ಸಾಂಸಾರಿಕ ಜೀವ­ನದ ಬಗ್ಗೆ, ದುಶ್ಚಟಗಳ ಬಗ್ಗೆ ಗುಸುಗುಸು ಇದ್ದು ಅವು ಯಾವುದೂ ಸಾರ್ವಜನಿಕ ಮಟ್ಟ­ದಲ್ಲಿ ಚರ್ಚೆಗೆ ಬರುವಂತಿಲ್ಲ. ಯುವರಾಜರು ಆಸ್ಟ್ರೇಲಿಯಾ, ಅಮೆರಿಕದ ಸೇನೆಗಳಲ್ಲಿ ತರಬೇತಿ ಹೊಂದಿ­­ದವರು.

1970ರ ದಶಕದಲ್ಲಿ ಸೇನೆ­ಯನ್ನು ಬಳಸಿಕೊಂಡು ಅಮೆರಿಕನ್ ಗೂಢಚಾರ ಇಲಾ­ಖೆಯ ನೆರವಿನೊಡನೆ ಥಾಯ್ ಎಡ­ಪಂಥೀಯ­­ರನ್ನು ನಿರ್ನಾಮ ಮಾಡಲು ಕಾರಣ­ರಾಗಿ­­ದ್ದ­ರಂತೆ. ‘ಲೆಸ್ ಮೆಜೆಸ್ತೆ’ ಕಾನೂನು ಇರು­ವು­­ದರಿಂದ ಇದ್ಯಾವುದನ್ನೂ ಚರ್ಚೆ ಮಾಡಲು ಜನರು ಹೆದರುತ್ತಾರೆ. ರಾಜರ ಬಗ್ಗೆ ಮತ್ತು ರಾಜಮನೆತನದ ಬಗ್ಗೆ ಯಾರಾದರೂ ಚಕಾರ ಎತ್ತಿದರೆ ಈ ಕಾನೂನಿನ ಅನ್ವಯ  ಐದ­ರಿಂದ ಹದಿನೈದು ವರ್ಷದವರೆಗೆ ಸೆರೆಮನೆ ವಾಸ ಖಂಡಿತ. ಅಷ್ಟೇ ಅಲ್ಲ, ವಿದೇಶದ ವರದಿಗಾರರು  ಇಂತಹ ಸುದ್ದಿಗಳನ್ನು ಬರೆದರೆ ಅವರನ್ನು ದೇಶದಿಂದ ಗಡಿಪಾರು ಮಾಡಿ ಅಂತಹ ಸುದ್ದಿಗಳಿರುವ ಪತ್ರಿಕೆಗಳನ್ನು ದೇಶದೊಳಗೆ ನುಸುಳಲೂ ಬಿಡುವುದಿಲ್ಲ.

ಪರಿಸ್ಥಿತಿ ಇಷ್ಟು ಹದಗೆಡಲು ಕಾರಣ ತಕ್ಸಿನ್ ಶಿನವಾತ್ರ ಎಂಬ ಉದ್ಯಮಿ ಪ್ರಧಾನಿಯಾಗಿ ಬಂದ ಮೇಲಿನ ಥಾಯ್ ರಾಜಕಾರಣ. ಇವರು 1998 ರಲ್ಲಿ ‘ಥಾಯ್ ರಕ್ ಥಾಯ್’ ಎಂಬ ಪಕ್ಷ­ವನ್ನು ಹುಟ್ಟುಹಾಕಿ ಆ ಮೂಲಕ ಚುನಾ­ವಣೆಗೆ ನಿಂತು ಗೆದ್ದು 2001 ರಲ್ಲಿ ಪ್ರಧಾನಿ­ಯಾ­ದರು. ಪೊಲೀಸ್ ಇಲಾಖೆಯಲ್ಲಿ  ದೊಡ್ಡ ಹುದ್ದೆಯ­ಲ್ಲಿದ್ದು ಅದರ ಒಳಹೊರಗು ಬಲ್ಲ­ವರು. ಶಿನವಾತ್ರ ಮನೆತನದವರು ಉದ್ಯಮಿ­ಗಳೆಂದು ಗುರುತಿಸಿಕೊಂಡಿದ್ದರೂ ದೇಶದ ಆತಿ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮಲು, ರಾಜಕಾರಣದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿ­ಕೊಳ್ಳಲು ಅಧಿಕಾರವನ್ನು ಬಳಸಿಕೊಂಡು, ಸರ್ಕಾರಿ ಕಾಂಟ್ರಾಕ್ಟ್‌ಗಳನ್ನು ಪಡೆಯು­ವುದ­ರಲ್ಲಿ ಯಶಸ್ವಿಯಾಗಿರುವುದೇ ಕಾರಣ.

ಮೊಬೈಲ್ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಥಾಯ್ಲೆಂಡ್‌ನಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್‌­ನಲ್ಲೂ ಉದ್ಯಮಗಳನ್ನು ಹೊಂದಿ­ದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡ ಕೂಡಾ ಇವರ ಒಡೆತನದಲ್ಲಿದೆ. ಪ್ರಧಾನಿ­ಯಾದ ಮೇಲೆ ಭ್ರಷ್ಟಾಚಾರ ಮತ್ತು ಥಾಯ್ ರಾಜರಿಗೆ ಅವಮಾನವಾಗುವಂತೆ ನಡೆದು­ಕೊಂಡರು ಎನ್ನುವುದು ಅವರ ಮೇಲೆ ಇರುವ ಆರೋಪ. ಮಾದಕ ವಸ್ತುಗಳ ವ್ಯಾಪಾರಸ್ಥರನ್ನು ನಿಯಂತ್ರಿ­ಸಲು ಹೋಗಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ ಕೊಂದಿದ್ದು, ಅದರಲ್ಲಿ ಸುಮಾರು ಜನ ಮಾದಕ ದ್ರವ್ಯಗಳ ವ್ಯಾಪಾ­ರ­ಸ್ಥರೇ ಅಲ್ಲ ಎಂದು ಸಾಬೀತಾಯಿತು. ಥಾಯ್– ಮಲೇಷ್ಯಾ ಗಡಿ ಪ್ರದೇಶಗಳಲ್ಲಿ ಮುಸ್ಲಿಮ­ರನ್ನು ಉಗ್ರವಾದಿಗಳು ಎಂದು ಕರೆದು ನೂರಾರು ಜನರನ್ನು ಹಿಂಸಿಸಿದರೆಂಬ  ಆಪಾದನೆಯೂ ತಕ್ಸಿನ್ ಮೇಲಿದೆ.

ಮಹಾರಾಜರ ಜನಪ್ರಿಯತೆಗೆ ಕಾರಣವಾದ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಇವರೂ ಮಾಡಿ ಗ್ರಾಮೀಣ ಪ್ರದೇಶದವರಿಗೆ ಪ್ರಿಯರಾ­ದರು. ಉದಾಹರಣೆಗೆ ಒಂದು ಗ್ರಾಮ ಒಂದು ಉತ್ಪನ್ನ (OTOP-– One Tambon One Product) ಎಂಬ ಯೋಜನೆಯಡಿ ಒಂದೊಂದು ಗ್ರಾಮದಲ್ಲೂ ಯಾವ ವಿಶೇಷ­ವಾದ ಉತ್ಪನ್ನಗಳಿವೆ ಎಂದು ಕಂಡುಕೊಂಡು ಅವಕ್ಕೆ ಉತ್ತೇಜನ ನೀಡಿ, ಅದರಲ್ಲೂ ಹೆಂಗಸರು ತೊಡಗಿಸಿಕೊಳ್ಳುವುದಕ್ಕೆ ಸಹಾಯಧನ ಕೊಟ್ಟಿದ್ದಾರೆ. ಇದರಿಂದ ಪ್ರಯೋಜನ ಪಡೆದ­ವರೂ ಸಾವಿ­ರಾರು ಮಂದಿ. ಚುನಾಯಿತ ಸರ್ಕಾರ ಇಂತಹ ಕೆಲಸಗಳನ್ನು ಮಾಡು­ವುದು ಸರಿ. ಆದರೆ ಹಣವಂತ ಉದ್ಯಮಿ­ಗಳು ರಾಜಕಾರಣ­ದಲ್ಲಿ ತೊಡಗಿಸಿಕೊಂಡರೆ ವ್ಯವಸ್ಥೆಯನ್ನು ಹೇಗೆ ಬುಡ­ಮೇಲು ಮಾಡಿ ಯಾರಿಗೆ ಬೇಕೋ ಅವರಿಗೆ ಮಾತ್ರ ನೆರವು ಒದಗಿಸಿ ತಮಗೆ ವೋಟು ಹಾಕದ­ವರಿಗೆ ಯಾವ ಸೌಕರ್ಯವೂ ಒದಗಿಸ­ದೆಯೇ ರಾಜಕಾರಣ ಮಾಡಬಹುದು. ವ್ಯವಸ್ಥೆ­ಯನ್ನು ಒಳಗೊಳಗೇ ತಮಗೆ ಬೇಕಾದ ಹಾಗೆ ಬಳಸಿಕೊಂಡು ರಾಜಕಾರಣ ಮಾಡಿ ಪದೇ ಪದೇ ಚುನಾವಣೆಗಳಲ್ಲಿ ಗೆಲ್ಲಲೂಬಹುದು.

ಅಧಿಕಾರದ ದುರುಪಯೋಗ, ವೈರಿಗಳ ಮೇಲೆ ಸೇಡಿನ ರಾಜಕಾರಣ ಮಾಡಿ ಪ್ರಗತಿಪರ, ನಗರವಾಸಿ ಬುದ್ಧಿಜೀವಿಗಳ, ಪ್ರಜಾಪ್ರಭುತ್ವ­ವಾದಿಗಳ ವಿರೋಧ ಕಟ್ಟಿಕೊಂಡರು. ಈ ಕಾರಣ­ದಿಂದಲೇ ಅವರನ್ನು 2006ರಲ್ಲಿ ಥಾಯ್ಲೆಂಡ್‌ನ ಸಂವಿಧಾನ, ನ್ಯಾಯಾಲಯದ ತೀರ್ಪಿನ ಪ್ರಕಾರ ಪದಚ್ಯುತಗೊಳಿಸಲಾಯಿತು. 2006 ರಿಂದ 2008ರ ಒಳಗೆ ಸಂವಿಧಾನದಲ್ಲಿ ಸುಧಾ­ರಣೆ­ಗಳನ್ನು ತಂದರೂ ವಿರುದ್ಧ ದಿಕ್ಕುಗಳಲ್ಲಿ ಹೋಗು­­ತ್ತಿ­ರುವ ಥಾಯ್ ರಾಜಕಾರಣದಲ್ಲಿ ಒಮ್ಮತ ಮೂಡುತ್ತಿಲ್ಲ. ಉದಾಹರಣೆಗೆ 2008 ರಲ್ಲಿಯೇ ಮೂರು ಪ್ರಧಾನಿಗಳು ಬಂದು ಹೋಗಿ­ದ್ದಾಯಿತು. 2010ರಲ್ಲಿ ಮೂರು ತಿಂಗಳ ಮಟ್ಟಿಗೆ ಒಂದು ಸರ್ಕಾರ ಬಂದು ಹೋಯಿತು.

2011ರಲ್ಲಿ ನಡೆದ ಚುನಾವಣೆಯಲ್ಲಿ  ತಕ್ಸಿನ್ ಶಿನವಾತ್ರರ ತಂಗಿ 46 ವರ್ಷದ ಉದ್ಯಮಿ ಯಿಂಗ್ಲಕ್ ಶಿನವಾತ್ರ ಚುನಾಯಿತ­ರಾಗಿ ಪ್ರಧಾನಿ­ಯಾ­ದರು. ಆದರೆ ಇದೀಗ ರಾಜಕೀಯ ವಿರೋಧಿ­­ಗಳು ತಕ್ಸಿನ್ ಶಿನವಾತ್ರ  ತಂಗಿಯ ಮೂಲಕ  ರಾಜಕಾರಣದಲ್ಲಿ ಮೂಗು ತೂರಿಸು­ತ್ತಿ­ದ್ದಾರೆ. ಆದ್ದರಿಂದ  ದೇಶಭ್ರಷ್ಟರಾಗಿ ಇಂಗ್ಲೆಂಡ್ ನಲ್ಲಿ ಸ್ವಇಚ್ಛೆಯಿಂದ ನೆಲೆ ನಿಂತಿರುವ ತಕ್ಸಿನ್‌ಗೆ ಯಾವ ಕಾರಣಕ್ಕೂ ಕ್ಷಮೆ ಇರಬಾರದು ಮತ್ತು ಅವ­ರನ್ನು ದೇಶಕ್ಕೆ ಮರಳಿ ಬಾರದಂತೆ ತಡೆಯ­ಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ

ಯಿಂಗ್ಲಕ್ ಶಿನವಾತ್ರ ಸರ್ಕಾರ ಬಂದ ಮೇಲೆ ರೈತರನ್ನು ಮೆಚ್ಚಿಸಲು ಹೋಗಿ ಅಕ್ಕಿಗೆ ಇದ್ದ ಬೆಂಬಲ ಬೆಲೆಯನ್ನು ದುಪ್ಪಟ್ಟು ಮಾಡಿದ ಕಾರಣ, ನೆರೆ ದೇಶಗಳಿಂದ ಕಳಪೆ ಅಕ್ಕಿ ಕಳ್ಳ­ಸಾಗಣೆ ಮೂಲಕ ದೇಶಕ್ಕೆ ಬರುತ್ತಿದೆ. ಅಲ್ಲದೆ  ಚೀನಾ ಒಪ್ಪಂದ ಮಾಡಿಕೊಂಡ ಹಾಗೆ ಅಕ್ಕಿ­ಯನ್ನು ಕೊಂಡುಕೊಳ್ಳದಿರುವುದರಿಂದ ಗೋದಾ­ಮಿ­ನಲ್ಲಿ ಲಕ್ಷಾಂತರ ಟನ್ನು ಅಕ್ಕಿ ಕೊಳೆಯುತ್ತಾ ಇದೆ.

ಹೊಸ ಫಸಲನ್ನು ರೈತರಿಂದ ಕೊಂಡು­ಕೊಳ್ಳ­­ಲಾಗದೆ, ಹಳೆಯದನ್ನು ಮಾರಲಾಗದೆ, ರೈತ­ರಿಂದ ಕೊಂಡುಕೊಂಡ ಫಸಲಿಗೆ  ಹಣ ಪಾವತಿ ಮಾಡದೆ ಈಗ ರೈತರೂ ಸರ್ಕಾರದ ಎದುರು ತಿರುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಕೋಟಿ­ಗಟ್ಟಲೆ ಹಣ ಈ ಅಕ್ಕಿ ಸಬ್ಸಿಡಿಗೆ ಖರ್ಚಾಗಿದ್ದು ಅದಕ್ಕೆ ನಗರವಾಸಿಗಳಿಂದ ವಿರೋಧ ವ್ಯಕ್ತವಾ­ಗಿದೆ. ಪ್ರತಿಭಟನಾಕಾರರು ಬಹುತೇಕ ನಗರವಾಸಿ­ಗಳೇ ಆದ್ದರಿಂದ ಗ್ರಾಮೀಣ ಜನತೆಗೆ, ಬಡಬಗ್ಗ­ರಿಗೆ,  ಕೃಷಿ ಕ್ಷೇತ್ರಕ್ಕೆ ಸಹಾಯಧನ ಇತ್ಯಾದಿ ಕೊಟ್ಟರೆ ನಗರವಾಸಿಗಳು ಸಹಿಸಲಾರರೇ ಎಂಬ  ಪ್ರಶ್ನೆಯೂ ಎದುರಾಗುತ್ತದೆ.

ಥಾಯ್ ರಾಜಕಾರಣದ ಕೆಲವೊಂದು ಸಮ­ಸ್ಯೆ­ಗಳು ನಮ್ಮಲ್ಲೂ ಕಾಣತೊಡಗಿವೆ. ನಮ್ಮ ರಾಜ­­ಕಾರಣ­ದಲ್ಲೂ ಹಣವಂತ ಉದ್ಯಮಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಇದೆ. ಅಲ್ಲದೇ  ಯಾವ ವಿಷಯದಲ್ಲೂ ಒಮ್ಮತ ಮೂಡದೆ ಸಂಸ­­ತ್ತಿನಲ್ಲಿ ಕಲಾಪಗಳು ನಡೆಯದಂತೆ ಅಡ್ಡಿ­ಯುಂಟು ಮಾಡುವುದನ್ನು ದಿನಾ ನೋಡು­ತ್ತೇವೆ. ಸೇನೆಯಲ್ಲಿರುವವರು ಏಕೆ ರಾಜಕಾರಣ­ದಲ್ಲಿ ತೊಡಗಬಾರದು ಎಂದು ಹೇಳುವ ನಿವೃತ್ತ ಸೇನಾ­ಧಿಕಾರಿಗಳ ಸಂಖ್ಯೆಯೂ ಜಾಸ್ತಿ ಆಗುತ್ತಿದೆ.

ರಾಜಕಾರಣದಲ್ಲಿದ್ದು, ಚುನಾವಣೆಗೆ ನಿಂತು ಗೆದ್ದರೂ ವ್ಯವಸ್ಥೆಯ ಬದಲಾವಣೆ ಬೇಕು ಅನ್ನುತ್ತಾ ಧರಣಿ ಕೂರುತ್ತಾರೆ ಅರವಿಂದ ಕೇಜ್ರಿ­ವಾಲರು. ವ್ಯವಸ್ಥೆಯ ಕೊಳೆ ತೊಳೆಯಲು ಬದ­ಲಾ­­ವಣೆ ಬೇಕು. ಆದರೆ ರಾಜಕೀಯ ಪಕ್ಷ­ಗಳ ನಡುವೆ ಯಾವ ವಿಷಯದಲ್ಲಿಯೂ ಒಮ್ಮತ ಮೂಡದಿದ್ದರೆ ಏನಾಗಬಹುದು ಎಂಬು­ದನ್ನು ಥಾಯ್ ರಾಜಕಾರಣ ಸಾಗುತ್ತಿರುವ ದಾರಿ ನೋಡಿ ನಾವು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT