ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟ ಕುರುಬರಿಗೆ ಮರೀಚಿಕೆಯಾದ ಸಮಾನತೆ

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದಲಿತ ವರ್ಗಗಳಿಗೆ ಮತ್ತು ಬುಡಕಟ್ಟು ಜನಾಂಗಗಳಿಗೆ ಸಮಾನತೆ ಕಲ್ಪಿಸಲೆಂದೇ ಇರುವ ಪರಿಶಿಷ್ಟ ಪಂಗಡ ಪಟ್ಟಿಯಿಂದ ಬೆಟ್ಟ ಕುರುಬ ಜನಾಂಗದ ಹೆಸರು ಮಾಯ­ವಾಗಿದೆ. ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸ­ಲಾತಿ ಮತ್ತು ಇತರ ಸವಲತ್ತುಗಳನ್ನು ಪಡೆದು­ಕೊಳ್ಳಲು ಹೊಸ “ಬುಡಕಟ್ಟು”ಗಳು ಹುಟ್ಟಿ­ಕೊಂಡಿವೆ. ನ್ಯಾಯವಾಗಿ ಸಿಗಬೇಕಾದ ಸವಲತ್ತು­ಗಳನ್ನು ಪಡೆದು ಕೊಳ್ಳುವುದರಲ್ಲಿ ಬೆಟ್ಟ ಕುರು­ಬರ ತರಹದ ಅಸಲಿ ಬುಡಕಟ್ಟುಗಳು ವಿಫಲ­ವಾಗಿವೆ.

ಇತ್ತೀಚೆಗೆ ಕೇರಳ ಸರ್ಕಾರ ಅಲ್ಲಿಯ ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಸುಮಾರು  ಎಂಟು ಹೆಸರುಗಳನ್ನು ತೆಗೆದುಹಾಕಿದೆ ಎಂಬುದನ್ನು ಗಮನಿಸಬೇಕು. ಇಂತಹ ಕೆಲಸ ಮಾಡಲು ನಿಜ­ವಾಗಿಯೂ ಸರ್ಕಾರಕ್ಕೆ ಬಲವಾದ ಬೆನ್ನೆಲುಬು ಬೇಕು. ಕೇರಳದ ಈ ನಿರ್ಧಾರ ಕೇರಳ ಇನ್ ಸ್ಟಿಟ್ಯೂಟ್ ಆಫ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ಆನ್ ಶೆಡ್ಯೂಲ್ಡ್  ಕಾಸ್ಟ್ಸ್ ಅಂಡ್ ಟ್ರೈಬ್ಸ್ (KIRTADS)ನ ಡಾ.ಪಿ.­ಆರ್.­ಜಿ ಮಾಥುರ್ ಎಂಬ ಹೆಸರಾಂತ ಮಾನವ ಶಾಸ್ತ್ರಜ್ಞರು ಕೈಗೊಂಡ ಅಧ್ಯಯನದ ಫಲ.

ಪರಿಶಿಷ್ಟರ ಉದ್ದುದ್ದ ಪಟ್ಟಿ ಇಟ್ಟುಕೊಂಡು,  ಬುಡಕಟ್ಟು ಜನರಿಗೆ ಸೇರಬೇಕಾದ ಸವಲತ್ತು­ಗಳನ್ನು ‘ನಕಲಿ’ ಬುಡಕಟ್ಟುಗಳಿಗೆ ತಮಿಳು ನಾಡು, ಆಂಧ್ರ ಮತ್ತು ಕರ್ನಾಟಕ ಕೊಡುತ್ತಾ ಬಂದಿವೆ. ಈ ನಕಲಿ ಬುಡಕಟ್ಟುಗಳನ್ನು ಪೋಷಿಸಿ­ಕೊಂಡು ರಾಜಕಾರಣಿಗಳು ಮೀಸಲಾತಿ ಕ್ಷೇತ್ರ­ಗಳಿಂದ ಚುನಾಯಿತರಾಗಿಯೂ ಬಂದಿದ್ದಾರೆ. ನಕಲಿ ಸರ್ಟಿಫಿಕೇಟ್ ಇಟ್ಟುಕೊಂಡು ಮೆಡಿಕಲ್, ಎಂಜಿನಿಯರಿಂಗ್ ಮತ್ತಿತರ ಉನ್ನತ ವಿದ್ಯಾ­ಭ್ಯಾಸಕ್ಕೆ ಸೀಟು ಪಡೆಯುವ ಮತ್ತು ಕೆಲಸ ಗಳಿಸುವ ಹುನ್ನಾರವೂ ಇದರ ಹಿಂದಿದೆ.

ಅಳಿವಿನಂಚಿನಲ್ಲಿರುವ ಭಾರತದ ಬುಡಕಟ್ಟು ಭಾಷೆಗಳ ಬಗ್ಗೆ ವಿಚಾರ ಸಂಕಿರಣವನ್ನು ಮೈಸೂ­ರಿನ ಮಾನವಶಾಸ್ತ್ರ ಅಧ್ಯಯನ ಸಂಸ್ಥೆ (Anthropological Survey of India - ASI ) ಮತ್ತು ಭಾರತೀಯ ಭಾಷಾ ಸಂಸ್ಥಾನ ( Central Institute of Indian Languages – CIIL ) ಇತ್ತೀಚೆಗೆ ಮೈಸೂರಿ­ನಲ್ಲಿ ಹಮ್ಮಿಕೊಂಡಿತ್ತು. ಬುಡಕಟ್ಟು ಜನರು ಯಾರು ಎಂದು ತೀರ್ಮಾನಿಸಲು ಮತ್ತು ಅವರ ಒಳಿತಿಗೆ ಕಾರ್ಯಕ್ರಮಗಳನ್ನು ರೂಪಿಸ­ಬೇಕಾದರೆ ಸರ್ಕಾರಕ್ಕೆ ಭಾಷಾತಜ್ಞರ ಮತ್ತು ಮಾನವ­ಶಾಸ್ತ್ರಜ್ಞರ ನೆರವು ಬೇಕೇ ಬೇಕಾಗುತ್ತದೆ.

ಆದ್ದರಿಂದ ಎರಡೂ ಸಂಸ್ಥೆಗಳು ಒಟ್ಟಾಗಿ ಈ ವಿಚಾರ ಸಂಕಿರಣವನ್ನು ಆಯೋಜಿಸಿದ್ದು ವಿಶೇಷ­ವಾಗಿತ್ತು.  ಕರ್ನಾಟಕದ  ಪರಿಶಿಷ್ಟ ವರ್ಗಗಳ ಪಟ್ಟಿಯಲ್ಲಿ 50 ಬುಡಕಟ್ಟುಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ನಿಜವಾಗಿಯೂ ಬರೇ ಹನ್ನೊಂದು ಬುಡಕಟ್ಟುಗಳು ಮಾತ್ರ ನಿಜವಾದ ಬುಡಕಟ್ಟುಗಳು ಎಂಬಂತಹ ಮಾಹಿತಿ­ಯನ್ನು ಈ ವಿಚಾರಸಂಕಿರಣದಲ್ಲಿ  ಆಂಥ್ರಪಾಲಜಿಕಲ್  ಸರ್ವೇ ಆಫ್ ಇಂಡಿಯಾ ದ ಮಾಜಿ  ಉಪ ನಿರ್ದೇಶಕ ಡಾ. ಸುರೇಶ್ ಪಾಟೀಲರು ನೀಡಿದರು. ಈ ಅಭಿಪ್ರಾಯ ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಅನ್ನುವುದನ್ನು ಸರ್ಕಾರವೇ ಪರಿಶೀಲಿಸಬೇಕಾಗಿದೆ.

ಮೊದಲನೆಯದಾಗಿ ಸರ್ಕಾರ ಮಾಡ­ಬೇಕಾದ ಕೆಲಸ ಅಂದರೆ ಮಾನವ ಶಾಸ್ತ್ರಜ್ಞರ, ಭಾಷಾ ತಜ್ಞರ ನೆರವು ಪಡೆದು ಬೆಟ್ಟ ಕುರುಬರು ನಿಜ­ವಾಗಿಯೂ ‘ಬುಡಕಟ್ಟು’ ಪಂಗಡದವರು ಎಂಬು­ದನ್ನು ಗುರುತಿಸುವುದು. ಬೆಟ್ಟ ಕುರುಬರ ಬಗ್ಗೆ ಗೊಂದಲಕ್ಕೆ ಎಡೆಮಾಡಿಕೊಡುವಂತಹ ಸಲಹೆಗಳನ್ನು ಸರ್ಕಾರಕ್ಕೆ ಕೆಲವರು ಶಿಫಾರಸು  ಮಾಡಿರಬಹುದಾದ್ದರಿಂದ ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡ ಪಟ್ಟಿಯಿಂದ ಕೈಬಿಟ್ಟಿರ­ಬಹುದು ಎನ್ನುವ ಗುಮಾನಿ ಇದೆ.

ಎಎಸ್ಐ ನ ಉಪನಿರ್ದೇಶಕರಾದ ಡಾ. ಸಿ. ಆರ್.ಸತ್ಯನಾರಾಯಣನ್ ಅವರ ಪ್ರಕಾರ, ಬುಡ­ಕಟ್ಟಿಗೆ ಸೇರಿದ ಬೆಟ್ಟ ಕುರುಬರನ್ನು ಹಿಂದು­ಳಿದ ವರ್ಗವಾದ ಪಶುಪಾಲನಾ ವೃತ್ತಿ ಮತ್ತು ಕೃಷಿ ಮಾಡುತ್ತಿರುವ  ಕುರುಬರೊಂದಿಗೆ ಸಮೀ­ಕರಿಸಿ ನೋಡಿರುವುದೇ ಗೊಂದಲಕ್ಕೆ ಕಾರಣವಿರ­ಬಹುದು. ಕುರುಬರು ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಜನಾಂಗ. ಕಾಡು ಕುರುಬರು ಎಂಬ ಬುಡಕಟ್ಟು ಇಲ್ಲ. ಆದರೆ ಕಾಡಿನೊಳಗೆ ವಾಸಮಾಡುವ ಕುರು­ಬರು ಇದ್ದಾರೆ. ಅವರನ್ನು ಈ ಎರಡು ಬುಡ­ಕಟ್ಟು ಗುಂಪುಗಳಿಗೆ ಸೇರಿದವರೆಂದು ಹೇಳ­ಬಹುದು. 1 ಜೇನು ಕುರುಬ 2 ಬೆಟ್ಟ ಕುರುಬ. ಜೇನು ಕುರುಬ ಮತ್ತು ಬೆಟ್ಟ ಕುರುಬರು ಕೊಡಗು, ಮೈಸೂರು ಮತ್ತು ಚಾಮರಾಜ­ನಗರ ಜಿಲ್ಲೆಗಳಲ್ಲಿ ಇದ್ದಾರೆ. ಈ ಜನಾಂಗದ­ವರು ನಮ್ಮ ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡುಗಳಲ್ಲಿಯೂ ಇದ್ದಾರೆ.

ಕಾಡು ವಾಸಿಗಳಾಗಿದ್ದರಿಂದ ಅವರು ಯಾವ ರಾಜ್ಯದ ಗಡಿಯೊಂದಿಗೆ ಯಾವತ್ತೂ ಗುರುತಿಸಿ­ಕೊಂಡವರಲ್ಲ. ಆದ್ದರಿಂದ ಕೆಲವೊಮ್ಮೆ ಅವರದೇ ಜನಾಂಗ ಇರುವ ನೆರೆ ರಾಜ್ಯಗಳಿಗೆ ಕಾಡಿನ ಮೂಲಕವೇ ಹೋಗಿ ಬಂದು ಮಾಡುತ್ತಿದ್ದು ಅವರೊಡನೆ ಮದುವೆ, ಸಂಬಂಧ­ಗಳೂ ನಡೆಯುತ್ತಿದ್ದು ಒಂದೇ ಪಂಗ­ಡಕ್ಕೆ ಸೇರಿದವರೂ ಆಗಿರುತ್ತಾರೆ. ಅವರು ಆಡುವ ಭಾಷೆಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಇರಬಹುದು ಅಷ್ಟೇ.

ಹೀಗಾಗಿ ನಮ್ಮ ಬೆಟ್ಟ ಕುರುಬರನ್ನು ಕೇರಳ­ದಲ್ಲಿ ‘ಊರಾಳಿ ಕುರುಂಬನ್’ ಎಂದು ಕರೆ­ಯು­ತ್ತಾರೆ. ಅದೇ ತಮಿಳುನಾಡಿನ ನೀಲಗಿರಿ­ಯಲ್ಲಿ ಇವರನ್ನು ‘ಬೆಟ್ಟ ಕುರುಮನ್’ ಎಂದು ಕರೆಯು­ತ್ತಾ­ರಂತೆ. ನಮ್ಮ ನೆರೆ ರಾಜ್ಯಗಳಲ್ಲಿ ಬೆಟ್ಟ ಕುರು­ಬರು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇದ್ದಾರೆ. ಆದರೆ ಕರ್ನಾಟಕದ ಪಟ್ಟಿಯಲ್ಲಿ ಇವರು ಇಲ್ಲ. ಹಾಗಾದರೆ ಕಾಡು ಕುರುಬರು ಎಂದು ಕರೆದುಕೊಂಡು ಸವಲತ್ತುಗಳನ್ನು ಬೇರೆಯವರು ಪಡೆದುಕೊಳ್ಳುತ್ತಿದ್ದಾರೆಯೇ? ಹಾಗೆಯೇ ಜೇನು ಕುರುಬರು ಕರ್ನಾಟಕದ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಯಲ್ಲಿದ್ದಾರೆ. ಇವರನ್ನು ಕಾಟುನಾಯಕ ಎಂದು ಕೇರಳ ಮತ್ತು ತಮಿಳುನಾಡಿನಲ್ಲಿ ಕರೆಯುತ್ತಾರಂತೆ.  ಹಾಗಾದರೆ ಕರ್ನಾಟಕದ ಪರಿಶಿಷ್ಟರ ಪಟ್ಟಿಯಲ್ಲಿರುವ ಕಾಟುನಾಯಕರು ಯಾರು?

ಕರ್ನಾಟಕದ ಹಲವು ಪ್ರದೇಶಗಳು 1956ರ ಕರ್ನಾಟಕ ಏಕೀಕರಣಕ್ಕೆ  ಮುಂಚೆ ಬೇರೆ ರಾಜ್ಯ­ಗಳ, ಬ್ರಿಟಿಷ್ ಕಾಲದ ಪ್ರೆಸಿಡೆನ್ಸಿಗಳ ಭಾಗಗಳಾ­ಗಿದ್ದ­ರಿಂದ ಆ ಹಳೆಯ ಪರಿಶಿಷ್ಟ ಬುಡಕಟ್ಟು­ಗಳ ಪಟ್ಟಿಯಲ್ಲಿ ಬದಲಾವಣೆ ತರದೇ ಇರುವುದ­ರಿಂದ ಆಗಿರುವ ಸಮಸ್ಯೆಗಳೂ ಉದ್ದದ  ಪಟ್ಟಿಗೆ ಕಾರಣ. ಕೆಲವೊಮ್ಮೆ ಬುಡಕಟ್ಟು ಸವಲತ್ತು­ಗಳನ್ನು ಪಡೆಯುವವರು ತಮ್ಮ ವಾಸ ಸ್ಥಳದ ಬದಲು ಬೇರೆ ಇನ್ಯಾವುದೋ  ಊರಿನಲ್ಲಿ ಪಡೆದುಕೊಳ್ಳುತ್ತಾರೆ. ಇವುಗಳೆಲ್ಲಾ ನಕಲಿ ಬುಡ­ಕಟ್ಟುಗಳು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಕಾಡು ವಾಸಿಗಳು ಇಂದು ಊರಿನಲ್ಲಿ ವಾಸ­ಮಾಡುತ್ತಾ, ಉದ್ಯೋಗ ಅರಸುತ್ತಾ ಯಾವುದೋ ಜಿಲ್ಲೆಗಳಿಗೆ ವಲಸೆ ಹೋಗಿರಲೂ ಬಹುದು. ಆದ್ದರಿಂದ ಸರ್ಕಾರದ ಕೆಲಸ ಬಹು ಜಾಗರೂಕತೆಯಿಂದ ಅಸಲಿ ಬುಡಕಟ್ಟುಗಳಿಗೆ ತೊಂದರೆಯಾಗದ ರೀತಿಯಲ್ಲಿ ಮಾಡಬೇಕಾದ ಕೆಲಸ.

ಪರಿಶಿಷ್ಟರ ಪಟ್ಟಿಯಿಂದ ಜನರ ಹೆಸರು­ಗ­ಳನ್ನೂ ತೆಗೆದು ಹಾಕುವುದು ಸುಲಭದ ಕೆಲಸ­ವಲ್ಲ. ಕೇರಳ ಸರ್ಕಾರದ ಹೊಸ  ಪಟ್ಟಿಯನ್ನು ವಿರೋಧಿಸಿದ ಕೆಲವೊಂದು ಪಂಗಡಗಳು ಕೋರ್ಟು ಮೆಟ್ಟಲೇರಿದರೂ ಇದ್ಯಾವುದಕ್ಕೂ ಬೆದರದ ಕೇರಳ ಸರ್ಕಾರ ನಕಲಿ ಬುಡಕಟ್ಟುಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿದೆ.

ಬುಡಕಟ್ಟುಗಳ ಭಾಷೆ, ಸಂಸ್ಕೃತಿಗಳ ಮೇಲೆ ಈಗಾಗಲೇ ಹಲವಾರು ದಾಳಿಗಳು ನಡೆದಿದ್ದು , ಅವುಗಳನ್ನು ಸಹಿಸಿಕೊಳ್ಳುವ ಶಕ್ತಿ ಬುಡಕಟ್ಟು­ಗಳಿಗೆ ಇಲ್ಲ. ಇದರಲ್ಲಿ ಮುಖ್ಯವಾದದ್ದು ಕಾಡಿ­ನಿಂದ ಊರಿಗೆ ಸ್ಥಳಾಂತರಗೊಂಡ ಕುಟುಂಬಗಳು ಕಾಡಿನ ಹೊರಗಿನ ಜೀವನಕ್ಕೆ ಹೊಂದಿಕೊಳ್ಳ­ಲಾಗದೆ ಇವೆ. ಪಡಿತರ ಸೌಲಭ್ಯ ಬುಡಕಟ್ಟುಗಳ ಆಹಾರ ಪದ್ಧತಿಯ ಮೇಲೂ ಸಾಕಷ್ಟು ಪರಿ­ಣಾಮ ಬೀರಿದೆ. ಜೊತೆಗೆ ಕಾಡಿನಲ್ಲಿ ಆಹಾರ ಸಂಗ್ರಹಣೆಗೆ ಅಗತ್ಯವಾಗಿದ್ದ ಕಾಡಿನ ಜ್ಞಾನ, ಕಾಡಿನ ಗಿಡ ಮರ, ಔಷಧೀಯ ಸಸ್ಯಗಳ ಜ್ಞಾನ, ಕೀಟ ಮತ್ತು ಪ್ರಾಣಿ ಪ್ರಪಂಚದ ಜ್ಞಾನ ಅವರಿಗಿ­ದ್ದರೂ ಅದು ಅವರಿಗೆ ಸಹಾಯಕ್ಕೆ ಬರುತ್ತಿಲ್ಲ. ಇವರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಕೀಳರಿಮೆ ಇದ್ದು ಅದನ್ನು ಹೋಗಲಾಡಿಸಲು ಕೆಲವೊಂದು ಕ್ರಮ­ಗಳನ್ನು ಜಾರಿಗೆ ತರುವಲ್ಲಿ ಸರ್ಕಾರದ ಸಹಾಯ ಬೇಕಾಗುತ್ತದೆ.

ಬುಡಕಟ್ಟಿನ ಜನರು ಸಮಾಜದ ಮುಖ್ಯ ವಾಹಿನಿಗೆ ಬರುವುದಕ್ಕಾಗಿ ಅವರಿಗೆ ಮಾತ್ರ ಹೊರ ಸಮಾಜದ ಬಗ್ಗೆ ಶಿಕ್ಷಣ ಕೊಟ್ಟರೆ ಸಾಲು­ವುದಿಲ್ಲ. ಸಣ್ಣ ವಯಸ್ಸಿನಿಂದಲೇ ಬೇರೆ ಮಕ್ಕ­ಳಿಗೂ ಬುಡಕಟ್ಟುಗಳ ಬಗ್ಗೆ ತಿಳಿವಳಿಕೆ ಅವಶ್ಯ. ಅಷ್ಟಕ್ಕೂ ಬುಡಕಟ್ಟುಗಳ ಕೀಳರಿಮೆಗೆ ಮುಖ್ಯ ಕಾರಣ ಅವರನ್ನು ಕೀಳು ಎಂದು ಭಾವಿಸುವ ಸಮಾಜ. ಆದ್ದರಿಂದ ಬುಡಕಟ್ಟುಗಳನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನುವ ಜ್ಞಾನವೂ  ನಮಗೆ ಅವಶ್ಯ.

ಭಾರತದಲ್ಲಿ ಒಟ್ಟಾರೆ ಮುನ್ನೂರಕ್ಕೂ ಜಾಸ್ತಿ ಆಕಾಶವಾಣಿ ಕೇಂದ್ರಗಳು ಇದ್ದು ಅವು ಕಾರ್ಗಿಲ್ ನಿಂದ ಹಿಡಿದು ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲೂ ಇವೆ. ಅವುಗಳ ಕಾರ್ಯಕ್ರಮ­ಗಳಲ್ಲಿ ಶೇ ಇಪ್ಪತ್ತರಷ್ಟು ಕಾರ್ಯಕ್ರಮಗಳು ಬುಡಕಟ್ಟುಗಳ ಬಗ್ಗೆ ಇರಬೇಕು ಎಂಬ ಕಾನೂನು ಇದೆಯಂತೆ. ಈಗಾಗಲೇ ಕೊಡಗು ಮತ್ತು ಊಟಿ ಆಕಾಶವಾಣಿಗಳ ನಿರ್ದೇಶಕರಾದ ಇಂದಿರಾ ಗಜರಾಜು ಮತ್ತು ಮಾಧವಿ ರವೀಂದ್ರನ್ ಬುಡಕಟ್ಟುಗಳ ಸಂಸ್ಕೃತಿಯನ್ನು ಪರಿ­ಚಯ ಮಾಡಿಕೊಡುವಲ್ಲಿ ಸಾಕಷ್ಟು ಯಶಸ್ವಿ­ಯಾಗಿದ್ದಾರೆ.

ಒಟ್ಟಾರೆ ಹೇಳುವುದಾದರೆ ಬುಡಕಟ್ಟು ಭಾಷೆಗಳ, ಸಂಸ್ಕೃತಿಯ ಉದ್ಧಾರಕ್ಕೆ ಕೇಂದ್ರ ಸರ್ಕಾರ ಏನು ಕಾರ್ಯಕ್ರಮಗಳು ಕೈಗೊಂಡರೂ ಅದು ರಾಜ್ಯ ಸರ್ಕಾರದ ಸಹಕಾರ ಇಲ್ಲದೆ ಯಶಸ್ಸು ಕಾಣದು. ಹೀಗಾಗಿ, ರಾಜ್ಯ ಸರ್ಕಾರದ ಬುಡಕಟ್ಟಿನ ವ್ಯವಹಾರಕ್ಕೆ ಸಂಬಂಧಪಟ್ಟ ಸಂಸ್ಥೆ­ಗಳು ಕೇಂದ್ರ ಸರ್ಕಾರ ಮಾಡುವ ಕೆಲಸಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಂಡರೆ ಇಂದು ಬೆಟ್ಟ ಕುರುಬರಿಗೆ ಆಗಿರುವ ಅನ್ಯಾಯ ಬೇರೆ ಸಮುದಾಯಕ್ಕೆ ಆಗುವುದಿಲ್ಲ ಎಂದು ಹೇಳ­ಲಾ­ಗು­ವುದಿಲ್ಲ. ಪರಿಶಿಷ್ಟರ ಪಟ್ಟಿಯಿಂದ ನಕಲಿ ಬುಡಕಟ್ಟುಗಳ ಹೆಸರು ತೆಗೆದು ಹಾಕು­ವುದು ಮಾತ್ರವಲ್ಲದೆ ನಿಜವಾದ ಬುಡಕಟ್ಟು ಪಂಗಡಗಳನ್ನು ಪತ್ತೆ ಮಾಡಿ ಅವುಗಳನ್ನು ಪಟ್ಟಿ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಅವಕಾಶ  ಸರ್ಕಾರಕ್ಕಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT