ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧರ ಪುಟ್ಟ ನಾಡಲ್ಲಿ ಹಿಂಸೆಯ ದಳ್ಳುರಿ

`ಅವರು ತಿನ್ನುವುದು ಈ ಮಣ್ಣಿನ ಅನ್ನ. ಕುಡಿಯುವುದು ಈ ನೆಲದ ನೀರು. ಉಸಿರಾಡುತ್ತಿರುವುದೂ ಇಲ್ಲಿಯ ಗಾಳಿಯನ್ನು. ಈ ಮಣ್ಣಿಗೆ ಋಣಿಯಾಗಿರಬೇಕಾದವರು ದ್ರೋಹ ಬಗೆಯುತ್ತಿದ್ದಾರೆ' ಎಂಬ ಕ್ರಾಂತಿಕಾರಿ ಗೀತೆ ಅಲೆ, ಅಲೆಯಾಗಿ ತೇಲಿ ಬರುತ್ತಿತ್ತು. `ನಮ್ಮ ಮೂಳೆಗಳನ್ನು ಕಿತ್ತು ಬೇಲಿ ತಯಾರಿಸಲು ನಾವು ಸಿದ್ಧ...' ಎಂಬ ಗರ್ಜನೆ ಜೊತೆಗೆ ಮಾರ್ದನಿಸುತ್ತಿತ್ತು. 

ಮ್ಯಾನ್ಮಾರ್‌ನ ತೌಂಗ್ಗಿಯಿ ಎಂಬ ಪಟ್ಟಣವೊಂದರಲ್ಲಿ ಆಯೋಜಿಸಲಾಗಿದ್ದ `969' ಮೂರಂಕಿಗಳ ಸಾಂಕೇತಿಕ ಹೆಸರಿನ ಅಡಿ ನಡೆದ ಬೌದ್ಧ ಧರ್ಮೀಯರ ಆಂದೋಲನದಲ್ಲಿ ಕಂಡುಬಂದ ದೃಶ್ಯವಿದು. ಬಹುಸಂಖ್ಯಾತ ಬೌದ್ಧರು ಈ ಮೂರಂಕಿಗಳ ಸ್ಟಿಕರ್, ಭಿತ್ತಿಪತ್ರ ಹೊತ್ತ ಕಾರು, ಬೈಕ್ ಕಿವಿಗಡಚಿಕ್ಕುವಂತೆ ಶಬ್ದ ಮಾಡುತ್ತ ಓಡಾಡುತ್ತಿದ್ದರೆ ಅಲ್ಪಸಂಖ್ಯಾತರು ಭಯದಿಂದ ಗೂಡು ಸೇರಿದ್ದರು. ಪುಟ್ಟ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಇತ್ತೀಚಿನ ದಿನಗಳಲ್ಲಿ  ಈ ದೃಶ್ಯಗಳು ಸಾಮಾನ್ಯವಾಗಿ ಹೋಗಿವೆ. ಬುದ್ಧ, ಅವನ ತತ್ವ, ಸಿದ್ಧಾಂತ, ಸಂದೇಶ ಮತ್ತು ಬೌದ್ಧ ಧರ್ಮವನ್ನು ಸಂಕೇತಿಸುವ `969' ಮೂರಂಕಿಗಳ ಅಡಿ ದೇಶವ್ಯಾಪಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಈ ಸಂಘರ್ಷಗಳು ಆತಂಕ ಸೃಷ್ಟಿಸಿವೆ.

ವಿಶ್ವಕ್ಕೆ ಶಾಂತಿ, ಸಹಬಾಳ್ವೆ, ಪ್ರೀತಿ, ಕರುಣೆಯ ಸಂದೇಶ ಸಾರಿದ ಶಾಂತಿದೂತ ಬುದ್ಧನ ಅನುಯಾಯಿಗಳು ನಡೆಸುತ್ತಿರುವ ಈ ಹೊಸ ಬಗೆಯ ಹೋರಾಟದಲ್ಲಿ ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ ಅಲ್ಲಿ ಪ್ರಸ್ತಾಪವಾಗುವ `ಅವರು' ಎಂಬ ಶಬ್ದಕ್ಕೆ ನಿರ್ದಿಷ್ಟವಾದ ಗೂಡಾರ್ಥವಿದೆ. ಇಲ್ಲಿ `ಅವರು' ಎಂದರೆ ಅಲ್ಪಸಂಖ್ಯಾತರು!

ದೇಶದ ಒಟ್ಟು ಐದೂವರೆ ಕೊಟಿ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟಿದ್ದರೂ ಬೌದ್ಧ ಧರ್ಮೀಯರಿಗೆ ಅತಂತ್ರ ಮನೋಭಾವ ಕಾಡುತ್ತಿದೆ. ತಾಯ್ನಾಡಿನಲ್ಲಿ ತಾವೇ ಪರಕೀಯರಾಗುತ್ತಿದ್ದೇವೆ ಎಂಬ ಭಾವನೆ ಬಲವಾಗುತ್ತಿದೆ. ತಮ್ಮ ಧರ್ಮದ ಅಸ್ತಿತ್ವ ಮತ್ತು ತಮ್ಮ ಅಸ್ಮಿತೆಗೆ ಧಕ್ಕೆ ಬಂದೊದಗಿದೆ ಎಂಬ ಭಾವನೆ ಅವರನ್ನು ಕಾಡುತಿದೆ. `ಇದಕ್ಕೆಲ್ಲ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಕಾರಣ. ಕ್ರಮೇಣ ಮೂಲನಿವಾಸಿಗಳನ್ನು ಆಪೋಶನ ತೆಗೆದುಕೊಳ್ಳಬಹುದು' ಎನ್ನುವುದು ಅವರ ಆತಂಕ. ಅದರ ಫಲವಾಗಿಯೇ ಸಹಬಾಳ್ವೆಗೆ ಹೆಸರಾಗಿದ್ದ ಮ್ಯಾನ್ಮಾರ್ ಕೋಮುದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ.

ಅಲ್ಪಸಂಖ್ಯಾತರ ವಿರುದ್ಧ ಯುದ್ಧ ಸಾರಿದ ನಂತರ ಸದಾ ಶಾಂತಿ ಪ್ರಿಯರಾದ ಬೌದ್ಧ ಧರ್ಮೀಯರು ಸೌಮ್ಯವಾದಿ ಮತ್ತು ತೀವ್ರವಾದಿಗಳು ಎಂಬ ಬಣಗಳಲ್ಲಿ ಹಂಚಿ ಹೋಗಿದ್ದಾರೆ. ತೀವ್ರವಾದಿಗಳ ನೇತೃತ್ವ ವಹಿಸಿಕೊಂಡಿರುವ ಬೌದ್ಧ ಭಿಕ್ಕು ಅಶಿನ್ ವಿರಾಥು ಅವರ ದ್ವೇಷಪೂರಿತ, ಕೋಮು ಭಾವನೆ ಕೆರಳಿಸುವ ವೀರಾವೇಶದ ಭಾಷಣಗಳ ಫಲವಾಗಿ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿದೆ.
ಭಿಕ್ಕುಗಳ ಕೈಯಲ್ಲಿ ಜಪದ ಮಣಿಗಳ ಬದಲಾಗಿ ಆಯುಧಗಳು ಝಳಪಿಸುತ್ತಿವೆ. 200ಕ್ಕೂ ಹೆಚ್ಚು ಅಲ್ಪಸಂಖ್ಯಾತರು ಮೂಲಭೂತವಾದದ ಅತಿರೇಕಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷದ ಕೋಮುದಂಗೆಯಲ್ಲಿ 1.50 ಲಕ್ಷ ಅಲ್ಪಸಂಖ್ಯಾತರು ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 

ಈ ದಂಗೆಗಳಲ್ಲಿ ಅಶಿನ್ ವಿರಾಥು ಅವರ ನೇರ ಪಾತ್ರವಿಲ್ಲದಿದ್ದರೂ ಅವರು ಬಿತ್ತಿದ ವಿಷ ಬೀಜ ಇದಕ್ಕೆಲ್ಲ ಕಾರಣ ಎನ್ನುವ ಆರೋಪವಿದೆ. ಮೂಲಭೂತವಾದ ಎಷ್ಟರ ಮಟ್ಟಿಗೆ ಅತಿರೇಕ ತಲುಪಿದೆ ಎಂದರೆ ಮುಸ್ಲಿಮರು ಸಿದ್ಧಪಡಿಸುವ ವಸ್ತುಗಳನ್ನು ಖರೀದಿಸದಂತೆ ಒತ್ತಡ ಹೇರಲಾಗುತ್ತಿದೆ. ಅವರ ಅಂಗಡಿಗಳಿಗೆ ತೆರಳದಂತೆ ಅಘೋಷಿತ ನಿಷೇಧ ಹೇರಲಾಗಿದೆ. ಧರ್ಮ ಬೋಧನೆ ಹೆಸರಿನಲ್ಲಿ ವಿರಾಥು ಅವರು ಮಾಡುವ ಉಗ್ರ ಭಾಷಣದ ಸಿ.ಡಿ., ಡಿ.ವಿ.ಡಿ.ಯ ಅಸಂಖ್ಯಾತ ಪ್ರತಿಗಳು ಮಾರಾಟವಾಗಿವೆ. ಉಗ್ರವಾದದ ಕಡೆಗೆ ವಾಲಿರುವ ಬೌದ್ಧ ಮಂದಿರಗಳು ಸಮುದಾಯ ಕೇಂದ್ರ ಮತ್ತು 60 ಸಾವಿರ ಮಕ್ಕಳಿಗೆ ಭಾನುವಾರದ ರಜಾ ಶಾಲೆಗಳನ್ನು ಆರಂಭಿಸಿವೆ.  ಅಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಹೆಸರಿನಲ್ಲಿ ಮಕ್ಕಳನ್ನು ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ ಎನ್ನಲಾಗಿದೆ.

ಬೌದ್ಧರ ಹಿಡಿತ
ಮ್ಯಾನ್ಮಾರ್‌ನ ಪ್ರತಿ ಹತ್ತು ಜನರ ಪೈಕಿ ಒಂಬತ್ತು ಜನರು ಬೌದ್ಧರು. ಉದ್ಯಮ, ರಾಜಕಾರಣ, ಸೇನೆ, ಸರ್ಕಾರ, ಪೊಲೀಸ್, ಆಡಳಿತ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಅವರ ಹಿಡಿತವಿದೆ. ಅಲ್ಪಸಂಖ್ಯಾತರ ಪೈಕಿ ಶೇ 4ರಿಂದ 8ರಷ್ಟು ಮುಸ್ಲಿಮರನ್ನು ಹೊರತುಪಡಿಸಿದರೆ ಕ್ರೈಸ್ತರು ಮತ್ತು ಹಿಂದೂಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೂ, ಬೌದ್ಧ ಧರ್ಮ ಅಪಾಯದಲ್ಲಿದೆ ಎನ್ನುವ ಭ್ರಮೆ ಧರ್ಮಗುರು ವಿರಾಥು ಅವರನ್ನು ಆವರಿಸಿದೆ. ತಮ್ಮನ್ನು ಅತ್ಯುಗ್ರ ರಾಷ್ಟ್ರವಾದಿ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ  ಜಮೀನು ಖರೀದಿಯಲ್ಲಿ ತೊಡಗಿರುವುದು ಮೂಲನಿವಾಸಿಗಳಾದ ತಮಗೆ ಮತ್ತು ತಮ್ಮ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ಭಾವಿಸಿದ್ದಾರೆ. 

ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಭಾರತ ಮತ್ತು ಬಾಂಗ್ಲಾದಿಂದ ಅನೇಕ ಜನರನ್ನು ವಿವಿಧ ಉದ್ಯೋಗಗಳಿಗಾಗಿ ಅಂದಿನ ವಸಾಹತು ಆಗಿದ್ದ ಬರ್ಮಾಕ್ಕೆ ಕರೆದೊಯ್ದಿದ್ದರು. ಅವರಲ್ಲಿ ಬಹುತೇಕರು ಮುಸ್ಲಿಮರು. ಬ್ರಿಟಿಷ್ ಸೇನೆಯಲ್ಲಿದ್ದ ಅನೇಕರು ಬರ್ಮಾದಲ್ಲಿಯೇ ನೆಲೆ ಕಂಡುಕೊಂಡರು. ಹೀಗಾಗಿ ಅಲ್ಪಸಂಖ್ಯಾತರು ಹೊರಗಿನವರು ಎಂಬ ಭಾವನೆ ಇಲ್ಲಿ ಬಲವಾಗಿ ಬೇರೂರಿದೆ. ಅದಕ್ಕೆ ವಿರಾಥು ಅವರಂತಹವರು ನೀರೆರೆದು ಪೋಷಿಸುತ್ತಿದ್ದಾರೆ. ಇದು ನೆರೆಯ ಇತರ ಬೌದ್ಧ ರಾಷ್ಟ್ರಗಳಿಗೂ ನಿಧಾನವಾಗಿ ಹರಡುತ್ತಿದೆ. 

ಬಹುಸಂಖ್ಯಾತರಲ್ಲಿ ಒಡಕು
ಬಾಂಗ್ಲಾದಿಂದ ವಲಸೆ ಬಂದಿರುವ ಹತ್ತು ಲಕ್ಷಕ್ಕೂ ಹೆಚ್ಚಿನ ರೋಹಿಂಗ್ಯಾ ಪಂಗಡದ ಮುಸ್ಲಿಮರು ಮತ್ತು ಬೌದ್ಧರ ನಡುವೆ ಕಳೆದ ಮಾರ್ಚ್‌ನಲ್ಲಿ ಆರಂಭವಾದ ಸಂಘರ್ಷ ಕೋಮುಗಲಭೆ ಸ್ವರೂಪ ಪಡೆಯಲು ನಾಂದಿ ಹಾಡಿತು. ಹಿಂಸಾಚಾರ ಮೇರೆ ಮೀರಿತು.
ಶಾಂತಿದೂತನ ನಾಡಿನಲ್ಲಿ ಧರ್ಮದ ಹೆಸರಿನಲ್ಲಿ ನಡೆದ ಹಿಂಸಾಚಾರದಲ್ಲಿ ಹೆಣಗಳು ಉರುಳಿದವು. ವಿರಾಥು ಹೋರಾಟಕ್ಕೆ ಧುಮುಕಿದ ನಂತರ ಚಿತ್ರಣವೇ ಬದಲಾಯಿತು. ಹಾಗಂತ ಎಲ್ಲ ಬೌದ್ಧರೂ ಈ ಹೋರಾಟವನ್ನು ಬೆಂಬಲಿಸುತ್ತಾರೆ ಎಂದಲ್ಲ. ತೀವ್ರಗಾಮಿಗಳ ಈ ವಾದವನ್ನು ವಿರೋಧಿಸುವವರ ಸಂಖ್ಯೆಯೂ ಸಾಕಷ್ಟು ಸಂಖ್ಯೆಯಲ್ಲಿ ದೊಡ್ಡದಿದೆ. ಹೀಗಾಗಿ ದೇಶದ ಬಹುಸಂಖ್ಯಾತ ಸಮುದಾಯದಲ್ಲಿ ದೊಡ್ಡ ಕಂದಕ ಉಂಟಾಗಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಮತೀಯ ಸಂಘರ್ಷ ಅನೇಕ ಜೀವಗಳನ್ನು ಬಲಿ ಪಡೆದಿದೆ. ಈ ಘಟನೆಯ ನಂತರ ತೀವ್ರವಾಗಿ ನೊಂದ ಬೌದ್ಧರ ಪರಮೋಚ್ಚ ಧರ್ಮಗುರು ದಲೈ ಲಾಮಾ `ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ನರಹತ್ಯೆಗಳನ್ನು ಊಹಿಸಿಕೊಳ್ಳಲೂ ಅಸಾಧ್ಯ' ಎಂದು ಮೂಲಭೂತವಾದಿಗಳ ಕೃತ್ಯಕ್ಕೆ ಅಸಮಾಧಾನ ಸೂಚಿಸಿದ್ದರು. `ನಿಷ್ಕಲ್ಮಶ ಮಾನವ ಪ್ರೀತಿಯ ದ್ಯೋತಕವಾಗಿರುವ ಮಂದಸ್ಮಿತ ಬುದ್ಧನ ಮೊಗವನ್ನು ನೋಡಿ. ಅವನು ನಿಮಗೆ ಮಾರ್ಗದರ್ಶನ ಮಾಡುತ್ತಾನೆ' ಎಂದು ಬುದ್ಧಿ ಮಾತು ಹೇಳುವ ಮೂಲಕ ಸೌಹಾರ್ದ, ಸಾಮರಸ್ಯದ ಬದುಕು ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದ್ದರು.

ಚುನಾವಣೆ ಮೇಲೆ ಭಿಕ್ಕು ಕಣ್ಣು
ಸೌಮ್ಯವಾದಿಗಳ ಗುಂಪಿನಲ್ಲಿ ಗುರುತಿಸಿಕೊಂಡಿರುವ ಯಾಂಗನ್ ಬೌದ್ಧ ಶಾಲೆಯ ಮುಖ್ಯಸ್ಥ ಆಶಿನ್ ಸಂದಾ, ಬೌದ್ಧ ಭಿಕ್ಕುಗಳೂ ಕೂಡಾ ಎರಡು ಬಣಗಳಲ್ಲಿ ಹಂಚಿ ಹೋಗಿದ್ದಾರೆ ಎಂದು ಒಪ್ಪಿಕೊಳ್ಳುತ್ತಾರೆ. ಜತೆಗೆ ಅಲ್ಪಸಂಖ್ಯಾತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಅಂಶವನ್ನು ಅವರು ತಳ್ಳಿ ಹಾಕುವುದಿಲ್ಲ.

ರಾಷ್ಟ್ರೀಯತೆ ಹೆಸರಿನಲ್ಲಿ ವಿರಾಥು  ಅವರು ಆರಂಭಿಸಿರುವ ಈ ಆಂದೋಲನ 2015ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಈ ಉದ್ದೇಶದಿಂದಲೇ ಅವರು ಈ ಹೋರಾಟ ಹುಟ್ಟು ಹಾಕಿದ್ದಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ.

ಈ ಬೆಳವಣಿಗೆಯಿಂದ ಬಹು ಧರ್ಮಗಳ ನಾಡಾದ ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತರು ಭಯದಲ್ಲಿ ದಿನಗಳನ್ನು ನೂಕುವಂತಾಗಿದೆ. ಮುಸ್ಲಿಂ ವರ್ತಕರು ಆತಂಕದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಹೊರ ಬಿಡಲು ಅಂಜುತ್ತಿದ್ದಾರೆ. ಸರ್ಕಾರ ಕೂಡಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ವಿಷಯದಲ್ಲಿ ಸ್ಪಷ್ಟ ಧೊರಣೆ ತಾಳಿಲ್ಲ. ಇನ್ನೆರಡು ವರ್ಷಗಳಲ್ಲಿ ಎದುರಾಗುವ ಚುನಾವಣೆ ಮತ್ತು ಬಹುಸಂಖ್ಯಾತರನ್ನು ಎದುರು ಹಾಕಿಕೊಂಡರೆ ಉಂಟಾಗಬಹುದಾದ ಪರಿಸ್ಥಿತಿ ಅದಕ್ಕೆ ಚೆನ್ನಾಗಿ ಗೊತ್ತಿದೆ. ಒಟ್ಟಾರೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಘರ್ಷ ಪುಟ್ಟ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಅಪಾಯದ ಅಂಚಿಗೆ ನೂಕಿದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT