ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಇಟಲಿ ಕಾನೂನು ಸಮರ

ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತರುವ ಹಂತ ತಲುಪಿದೆ ಮೀನುಗಾರರ ಹತ್ಯೆ ಪ್ರಕರಣ
Last Updated 17 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಇಟಲಿಯು ಕಳೆದ ಜುಲೈ 21ರಂದು ಭಾರತದ ವಿರುದ್ಧ ‘ಸಾಗರ ಕಾನೂನಿನ ಅಂತರರಾಷ್ಟ್ರೀಯ ನ್ಯಾಯ ಮಂಡಳಿ’ಯಲ್ಲಿ (International Tribunal for the Law of the Sea/ITLOS- ಇಟ್ಲಾಸ್) ದಾವೆ ಹೂಡಿದ್ದು, ಇಬ್ಬರು ಮುಗ್ಧ ಭಾರತೀಯ ಮೀನುಗಾರರ ಹತ್ಯೆ ಪ್ರಕರಣವನ್ನು ಅಂತರರಾಷ್ಟ್ರೀಯ ವೇದಿಕೆಗೆ ತರುವಲ್ಲಿ  ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ವಿವರವಾಗಿ ವಿಶ್ಲೇಷಿಸಬೇಕಾದ ಅಗತ್ಯವಿದೆ.

2012ರ ಫೆಬ್ರುವರಿ 15ರಂದು ಸೇಂಟ್ ಆಂಟೊನಿ ಎಂಬ ಮೀನುಗಾರಿಕಾ ಹಡಗಿನಲ್ಲಿ ಅರಬ್ಬಿ ಸಾಗರದಲ್ಲಿ ಮೀನು ಹಿಡಿಯುತ್ತಿದ್ದ ಜಲಸ್ಟೀನ್‌ (45) ಹಾಗೂ ಅಜೇಶ್ ಬಿಂಕಿ (25) ಎಂಬ ಕೇರಳದ ಮೀನುಗಾರರನ್ನು ಇಟಲಿಯ ಎಂ.ವಿ.ಎನ್ರಿಕಾ ಲೆಕ್ಸಿ ಎಂಬ ತೈಲ ನೌಕೆಯಲ್ಲಿದ್ದ ಆ ದೇಶದ ನಾವಿಕರಾದ ಮಸ್ಸಿಮಿಲಾನೊ ಲಟ್ಟೊರೆ ಹಾಗೂ ಸಾಲ್ವಟೋರ್ ಗಿರೋನ್  ತಮ್ಮ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ (ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ) ಹತ್ಯೆ ಮಾಡಿದ್ದರು.

ಕೇರಳದ ಪೊಲೀಸರು ಇಟಲಿಯ ಈ ಇಬ್ಬರು ನಾವಿಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು. ಈ ಮಧ್ಯೆ ನಾವಿಕರು ಕೇರಳ ಹೈಕೋರ್ಟ್‌ನ ಮೊರೆ ಹೋಗಿ ಜಾಮೀನು ಪಡೆದು, ಹತ್ಯೆಯ ಗುರುತರ ಆರೋಪವಿದ್ದಾಗ್ಯೂ ಇಂದಿಗೂ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಇಷ್ಟಕ್ಕೇ ನಿಲ್ಲದೆ ಭಾರತೀಯ ಪೊಲೀಸರ ತನಿಖೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲನ್ನು ಏರಿರುವ ಈ ನಾವಿಕರು, ತನಿಖೆಯ ದಿಕ್ಕುತಪ್ಪಿಸಲು ಸಕಲ ಪ್ರಯತ್ನವನ್ನೂ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಆಯೋಗದ (SIT) ಸುಪರ್ದಿಗೆ ವಹಿಸಿದ್ದೇ ಅಲ್ಲದೆ, ಪ್ರಕರಣದ ವಿಚಾರವಾಗಿ 2013ರಲ್ಲೇ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಆದೇಶ ನೀಡಿದೆ. ಆ ವರ್ಷದ ಏಪ್ರಿಲ್‌ 15ರಂದು, ಗೃಹ ಇಲಾಖೆ ವಿಶೇಷ ನ್ಯಾಯಾಲಯ ಸ್ಥಾಪನೆಯ ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ ಒಂದಲ್ಲ ಒಂದು ಕಾರಣವನ್ನು ಮುಂದಿಟ್ಟುಕೊಂಡು, ಈ ವಿಶೇಷ ನ್ಯಾಯಾಲಯದಲ್ಲಿ ತನಿಖೆ ನಡೆಯದಂತೆ ಇಟಲಿ ಅಡ್ಡಗಾಲು ಹಾಕುತ್ತಲೇ ಬಂದಿದೆ. ಈಗ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ‘ಆಮೆಗತಿಯ ತನಿಖೆ’ ಎಂದು ಬಣ್ಣಿಸಿ, ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ.

ಈ ಪ್ರಕರಣ ಕೇವಲ ಎರಡು ಜೀವಗಳ ಹತ್ಯೆಗೆ ಸೀಮಿತವಾಗಿರದೆ, ಎರಡು ದೇಶಗಳ ನಡುವಿನ ವಿವಾದವಾಗಿ ಮಾರ್ಪಟ್ಟಿದ್ದು, ಇಟಲಿ ತನ್ನ ಆಪಾದಿತ ನಾವಿಕರ ಬೆಂಗಾವಲಾಗಿ ನಿಂತಿದೆ. ಇದು ಭಾರತ ಮತ್ತು ಇಟಲಿಯ ನಡುವಿನ ಸಂಬಂಧಕ್ಕೇ ಕೊಡಲಿ ಇಡುವ ಹಂತಕ್ಕೆ ಹೋಗಿ ತಲುಪಿದೆ.

ಭಾರತೀಯ ನ್ಯಾಯಾಲಯಗಳು ಮಾನವೀಯತೆ, ಅನುಕಂಪ ಹಾಗೂ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರವಾಗಿ ಪರಿಗಣಿಸಿ ತೋರಿಸಿದ ರಿಯಾಯಿತಿಯನ್ನು ಇಟಲಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದೆ. ತಮ್ಮವರನ್ನು ಕಳೆದುಕೊಂಡ ಭಾರತೀಯ ಮೀನುಗಾರರ ಕುಟುಂಬದವರನ್ನು ಕಿಂಚಿತ್ತೂ ಪರಿಗಣಿಸದೆ, ಕೇವಲ ತನ್ನ ನಾಗರಿಕರೆಂಬ ಕಾರಣಕ್ಕೆ ಅದು ಆಪಾದಿತರ ಪರವಾಗಿ ನಿಂತಿದೆ.

ಈ ನಾವಿಕರ ವಿರುದ್ಧ ಕೊಲೆಯಂತಹ ಬಲವಾದ ಆರೋಪವಿದ್ದಾಗ್ಯೂ, ಅವರ  ಮನವಿಗೆ ಸ್ಪಂದಿಸಿದ ಕೇರಳ ಹೈಕೋರ್ಟ್‌, 2012ರಲ್ಲಿ ಕ್ರಿಸ್ಮಸ್ ಆಚರಣೆಗೆಂದು ತವರು ದೇಶಕ್ಕೆ ಹೋಗಲು ಸಮ್ಮತಿಸಿತು.

ಎರಡನೇ ಬಾರಿ 2013ರಲ್ಲಿ, ಇಟಲಿಯಲ್ಲಿನ ಚುನಾವಣೆಯಲ್ಲಿ ಮತ ಚಲಾಯಿಸಲೆಂದು, ನಾವಿಕರ ಮನವಿಯ ಮೇರೆಗೆ ಸುಪ್ರೀಂಕೋರ್ಟ್‌ ನಾಲ್ಕು ವಾರ ಇಟಲಿಗೆ ಹೋಗಲು ಆಪಾದಿತರಿಗೆ ಅನುಮತಿ ನೀಡಿತು. ಈ ಸಂಬಂಧ ಇಟಲಿಯ ರಾಯಭಾರಿ, ಸುಪ್ರೀಂಕೋರ್ಟ್‌ ಮುಂದೆ ಮುಚ್ಚಳಿಕೆಯನ್ನು ಬರೆದು ಕೊಟ್ಟು, ನಾವಿಕರ ವಾಪಸಾತಿಯನ್ನು ಖಚಿತಗೊಳಿಸಿದ್ದರು. ಆದರೆ ನಾಲ್ಕು ವಾರಗಳ ಗಡುವು ಮುಗಿಯುವ ಮುನ್ನವೇ, ತನ್ನ ರಾಯಭಾರಿಯ ಮುಚ್ಚಳಿಕೆಯನ್ನು ತಾನೇ ಉಲ್ಲಂಘಿಸಿದ ಇಟಲಿ, ತನ್ನ ನಾವಿಕರು ವಾಪಸಾಗಲಾರರೆಂದು ತಿಳಿಸಿ, ಪ್ರಕರಣಕ್ಕೆ ಮಹತ್ವಪೂರ್ಣ ತಿರುವನ್ನು ನೀಡಿತು.

ಇಟಲಿಯ ಈ ಜವಾಬ್ದಾರಿರಹಿತ ನಡವಳಿಕೆಯಿಂದ ಬೇಸತ್ತ ಸುಪ್ರೀಂಕೋರ್ಟ್‌,  ಇಟಲಿಯ ರಾಯಭಾರಿಯು ಭಾರತವನ್ನು ಬಿಟ್ಟು ಹೋಗಕೂಡದೆಂಬ ಖಡಕ್       ನಿರ್ದೇಶನವನ್ನು ನೀಡಿ, ತನ್ನ ಅಧಿಕಾರದ ಮಹತ್ವವನ್ನು ಆ ದೇಶಕ್ಕೆ ಮನವರಿಕೆ ಮಾಡಿಕೊಟ್ಟಿತು (ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಬೇರೆ ದೇಶದ ರಾಯಭಾರಿಗಳು ಭಾರತದ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿರುತ್ತಾರೆ.  ಅಂದರೆ, ಭಾರತದ ನ್ಯಾಯಾಲಯಗಳು ವಿದೇಶಿ ರಾಯಭಾರಿಗಳ ಮೇಲೆ ಯಾವ ಸಂದರ್ಭದಲ್ಲಿಯೂ ತಮ್ಮ ಅಧಿಕಾರವನ್ನು ಚಲಾಯಿಸುವಂತಿಲ್ಲ).  ಸುಪ್ರೀಂಕೋರ್ಟ್‌ನ ಈ ಆದೇಶ ಕಾನೂನು ಪಂಡಿತರೇ ಬೆರಗಾಗುವಂತೆ ಮಾಡಿತು. ಅದರ ಈ ಬಿಗಿ ನಿಲುವಿಗೆ ಕೊನೆಗೂ ಬಾಗಿದ ಇಟಲಿ, ತನ್ನ ನಾವಿಕರನ್ನು ಪುನಃ ಭಾರತಕ್ಕೆ ಮರಳಿಸಿ ಮುಂದಾಗಬಹುದಾಗಿದ್ದ ರಾಜತಾಂತ್ರಿಕ ಬಿಕ್ಕಟ್ಟನ್ನು ತಡೆಯಿತು.

ನಾವಿಕ ಲಟ್ಟೊರೆ, ತನ್ನ ಆರೋಗ್ಯದ ನೆಪವೊಡ್ಡಿ 2014ರಲ್ಲಿ ಮತ್ತೊಮ್ಮೆ ಇಟಲಿಗೆ ಹೋಗಲು ಅನುಮತಿ ಕೇಳಿದಾಗಲೂ ಸುಪ್ರೀಂಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಕಾಲಕಾಲಕ್ಕೆ ಅರ್ಜಿ ಸಲ್ಲಿಸಿ, ಮುಂದುವರಿಸಿಕೊಂಡು ಬರಲಾಗುತ್ತಿದೆ. ಸದ್ಯಕ್ಕೆ ಮತ್ತೊಬ್ಬ ಆರೋಪಿ ಗಿರೋನ್ ಮಾತ್ರ ಭಾರತದಲ್ಲಿದ್ದಾನೆ.

ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದ ಈ ಪ್ರಕರಣವನ್ನು ರಾಜತಾಂತ್ರಿಕವಾಗಿ ಬಗೆಹರಿಸಲು ವಿದೇಶಾಂಗ ಇಲಾಖೆಯು ಅವ್ಯಾಹತವಾಗಿ ಶ್ರಮಿಸುತ್ತಲೇ ಬಂದಿದೆ. ಇಟಲಿಯು ಅಂತರರಾಷ್ಟ್ರೀಯ ವೇದಿಕೆಗಳಾದ ವಿಶ್ವಸಂಸ್ಥೆ, ಯುರೋಪಿಯನ್ ಪಾರ್ಲಿಮೆಂಟ್‌ಗೂ ಈ ಪ್ರಕರಣವನ್ನು ಕೊಂಡೊಯ್ದಿದ್ದು, ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನು ಅಂಗೀಕರಿಸುವಂತೆ ಮಾಡಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ.

‘ಇಟ್ಲಾಸ್’ ಎಂಬುದು ದೇಶ-ದೇಶಗಳ ನಡುವೆ ಕಡಲಿಗೆ ಸಂಬಂಧಿಸಿದಂತೆ ಉದ್ಭವಿಸುವ ವಿವಾದಗಳನ್ನು ಬಗೆಹರಿಸಲು ಸ್ಥಾಪಿತವಾದ ಅಂತರರಾಷ್ಟ್ರೀಯ ನ್ಯಾಯ ಪರಿಹಾರ ವ್ಯವಸ್ಥೆ. ಈ ನ್ಯಾಯಮಂಡಳಿಯು ಭಾರತವೂ ಸೇರಿದಂತೆ 167 ದೇಶಗಳು ಸಹಿ ಹಾಕಿರುವ ‘ವಿಶ್ವಸಂಸ್ಥೆಯ ಕಡಲಿನ ಕಾನೂನುಗಳ ಸಂಧಿ, 1982’ರ ಅನ್ವಯ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ಸ್ಥಾಪನೆಯಾಗಿದೆ. 1994ರ ನವೆಂಬರ್‌ 16ರಂದು ಅಸ್ತಿತ್ವಕ್ಕೆ ಬಂದು, 1996ರ ಅಕ್ಟೋಬರ್ 1ರಿಂದ ವಿವಾದಗಳನ್ನು ತೀರ್ಮಾನಿಸುತ್ತಾ ಬಂದಿದೆ.

ಈ ನ್ಯಾಯ ಮಂಡಳಿಯು 21 ಮಂದಿ ಮೇಧಾವಿ ನ್ಯಾಯಾಧೀಶರಿಂದ ಕೂಡಿದ್ದು, ಪ್ರತಿ ನ್ಯಾಯಾಧೀಶರು 9 ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿನ ನ್ಯಾಯಾಧೀಶರು ಪ್ರಪಂಚದ ವಿವಿಧ ದೇಶಗಳಿಂದ ನಾಮ ನಿರ್ದೇಶಿತರಾಗಿರುತ್ತಾರೆ. ಏಷ್ಯಾ, ಆಫ್ರಿಕಾ ತಲಾ ಐವರು, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಸೇರಿ ನಾಲ್ವರು, ಪಶ್ಚಿಮ ಯುರೋಪ್ ಮತ್ತಿತರ ರಾಷ್ಟ್ರಗಳಿಂದ ನಾಲ್ವರು, ಪೂರ್ವ ಯುರೋಪ್‌ನಿಂದ ಮೂವರು  ನ್ಯಾಯಾಧೀಶರು– ಈ ಪ್ರಕಾರ, ವಿಶ್ವದ ವಿವಿಧ ಭೌಗೋಳಿಕ ವಿಭಾಗಗಳನ್ನು ಈ ಮಂಡಳಿಯು ಪ್ರತಿನಿಧಿಸುತ್ತದೆ.

ಒಂದು ವೇಳೆ ತಗಾದೆಗೆ ಸಂಬಂಧಿಸಿದ ದೇಶದ ನ್ಯಾಯಾಧೀಶರು ಇಟ್ಲಾಸ್‌ನಲ್ಲಿ ಇಲ್ಲದೇ ಹೋದರೆ, ಆ ದೇಶ ತಾತ್ಕಾಲಿಕ ನ್ಯಾಯಾಧೀಶರನ್ನು ನೇಮಿಸಿಕೊಳ್ಳಲು ಅವಕಾಶವಿದೆ.  21 ನ್ಯಾಯಾಧೀಶರ ಪೈಕಿ, ಭಾರತದಿಂದ ನಾಮ ನಿರ್ದೇಶಿತರಾಗಿರುವ, ಆಂಧ್ರ ಪ್ರದೇಶದವರಾದ ಪಿ.ಚಂದ್ರಶೇಖರ ರಾವ್  ಕೂಡಾ ಒಬ್ಬರು. ಈವರೆಗೆ ಪ್ರಾಧಿಕಾರವು 24 ಪ್ರಕರಣಗಳನ್ನು ಸ್ವೀಕರಿಸಿದ್ದು, ವಿಶ್ವಸಂಸ್ಥೆಯ ಜಲಸಂಧಿ, ಅಂತರರಾಷ್ಟ್ರೀಯ ಜಲಸಂಧಿಗೆ ವಿರುದ್ಧವಾಗಿಲ್ಲದ ಇನ್ನಿತರ ಅಂತರರಾಷ್ಟ್ರೀಯ ಕಾನೂನುಗಳನ್ನು ಅನ್ವಯಿಸಿ, ಪ್ರಕರಣಗಳನ್ನು ತೀರ್ಮಾನಿಸುತ್ತದೆ.

ಸದರಿ ಪ್ರಕರಣದಲ್ಲಿ ಇಟಲಿಯು ಭಾರತದಲ್ಲಿ ಉಳಿದಿರುವ ನಾವಿಕನನ್ನು ಇಟಲಿಗೆ ಸ್ಥಳಾಂತರಿಸುವಂತೆ, ಇಟಲಿಯಲ್ಲಿರುವ ನಾವಿಕನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಹಾಗೂ ಭಾರತದಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆಯನ್ನು ಮುಂದುವರಿಸದಂತೆ ಕೋರಿ ಅರ್ಜಿ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ಇದೇ ತಿಂಗಳ 10– 11ರಂದು ನಡೆಯಿತು. ಇಟಲಿಯ ದೂರನ್ನು ಸಮಗ್ರವಾಗಿ ತಳ್ಳಿಹಾಕುವುದಕ್ಕೆ ಪೂರಕವಾಗಿ ಭಾರತ ಸಮರ್ಥ ವಾದವನ್ನು ಮಂಡಿಸಿದೆ.

ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹನ್ ನೇತೃತ್ವದ ಕಾನೂನು ಪರಿಣತರ ತಂಡ ಭಾರತದ ಪರವಾಗಿ ವಾದಿಸಿ, ವಸ್ತುಸ್ಥಿತಿಯನ್ನು ನ್ಯಾಯಮಂಡಳಿಯ ಮುಂದೆ ಮಂಡಿಸಿದೆ. ಪ್ರಕರಣದ ಅಂತಿಮ ತೀರ್ಮಾನಕ್ಕೆ ಹಲವು ವರ್ಷಗಳೇ ಬೇಕಾಗಬಹುದಾದರೂ ಸದ್ಯಕ್ಕೆ ಇಟಲಿಯ ತಾತ್ಕಾಲಿಕ ಪರಿಹಾರದ ಕೋರಿಕೆಗೆ ಸಂಬಂಧಿಸಿದಂತೆ ಇದೇ ತಿಂಗಳ 24ಕ್ಕೆ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ. ನ್ಯಾಯಮಂಡಳಿಯು ಇಟಲಿ ಕೇಳಿದ ತಾತ್ಕಾಲಿಕ ಪರಿಹಾರವನ್ನು ಮನ್ನಿಸುವುದೇ ಇಲ್ಲವೇ ಎಂಬುದನ್ನು  ಕಾದು ನೋಡಬೇಕಾಗಿದೆ.

ಮುಂಬರುವ ದಿನಗಳಲ್ಲಿ, ನ್ಯಾಯಮಂಡಳಿಯು ಭಾರತದ ಪರವಾಗಿ ತೀರ್ಪು ಕೊಟ್ಟಲ್ಲಿ ಹತ್ಯಾ ಪ್ರಕರಣವು ವಿಶೇಷ ನ್ಯಾಯಾಲಯದಲ್ಲಿ ಮುಂದುವರಿಯಲಿದೆ. ಈ ಮೂಲಕ, ಮೃತ ಮೀನುಗಾರರ ಆತ್ಮಕ್ಕೆ ಶಾಂತಿ ಹಾಗೂ ನೊಂದಿರುವ ಅವರ ಪರಿವಾರಕ್ಕೆ ನೆಮ್ಮದಿ ಸಿಗಲಿದೆ.  ವಿಶ್ವ ಮಟ್ಟದಲ್ಲಿ ಭಾರತೀಯ ಅಪರಾಧಿಕ ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯೂ  ಹೆಚ್ಚಲಿದೆ. ನ್ಯಾಯಮಂಡಳಿಯು ಭಾರತದ ನ್ಯಾಯಯುತ, ಮಾನವೀಯ ಹೆಜ್ಜೆಗಳನ್ನು  ಪುರಸ್ಕರಿಸಲಿದೆ ಎಂದು ಆಶಿಸೋಣವೇ?

ಲೇಖಕ ವಿದೇಶಾಂಗ ಇಲಾಖೆ ಕಾನೂನು ಅಧಿಕಾರಿ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT