ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್: ಅಧಿಕಾರ ಹಂಚಿಕೆಯ ಕಗ್ಗಂಟು

ಅಕ್ಷರ ಗಾತ್ರ

ಒಗಟಿನಂತಹ ಹೇಳಿಕೆಗಳ ಸಾಲುಗಳ ನಡುವಿನಲ್ಲೇ ದೇಶದ ಭವಿಷ್ಯದ ದಿಕ್ಕನ್ನು ಅರ್ಥೈಸುವ ಪ್ರಯತ್ನ ನಡೆಸಬೇಕಾಗಿದೆ

ಅದು ಮ್ಯಾನ್ಮಾರ್‌ನ ಯಾಂಗಾನ್‌ ನಗರ. ಆ ಮಹಿಳೆ ದೇಶದ ಮಾಜಿ ರಾಜಕೀಯ ಕೈದಿ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಅವರ ಪಕ್ಷ ವಿಜಯ ಗಳಿಸಿದೆ. ಜತೆಗೆ ಇರುವ ವ್ಯಕ್ತಿ ಮಿಲಿಟರಿಯ ಮುಖ್ಯ ಕಮಾಂಡರ್‌. ಪಕ್ಕದಲ್ಲಿದ್ದ ಮಹಿಳೆಯನ್ನು ಈ ಕಮಾಂಡರ್‌ ಅವರ ಅಧೀನದ ಸೇನೆಯೇ ಸುಮಾರು ಎರಡು ದಶಕಗಳ ಕಾಲ ಜೈಲಿಗೆ ಅಟ್ಟಿತ್ತು.

ಮ್ಯಾನ್ಮಾರ್‌ನ ಇಬ್ಬರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಇವರು. ಕಳೆದ ಬುಧವಾರ ಇವರಿಬ್ಬರ ನಡುವೆ ನಡೆದ  ಮಾತುಕತೆಯನ್ನು ಪರಿವರ್ತನೆಯ ಕಾಲಘಟ್ಟದ ನಿರ್ಣಾಯಕ ಹೆಜ್ಜೆ ಎನ್ನಬಹುದು. ಮಿಲಿಟರಿ ಬೆಂಬಲಿತ ಸರ್ಕಾರದಿಂದ ಪ್ರಜಾಪ್ರಭುತ್ವ ಮಾದರಿ ಸರ್ಕಾರದ ಕಡೆ ಹೊರಳುವ ಬದಲಾವಣೆಯ ಪರ್ವಕಾಲ. ಒಂದು ಕಾಲಕ್ಕೆ ಪ್ರಜಾಪ್ರಭುತ್ವ ಪರ ಕಾರ್ಯಕರ್ತರನ್ನು ದಮನಿಸಿದ್ದ ಮಿಲಿಟರಿ ಇದೀಗ ಅವರೊಂದಿಗೆಯೇ ಅಧಿಕಾರ ಹಂಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಮಾತುಕತೆಗೆ ಕುಳಿತ ಈ ಇಬ್ಬರು ನಾಯಕರು ಬೇರಾರೂ ಅಲ್ಲ, ಒಬ್ಬರು ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಚಳವಳಿಯ ನಾಯಕಿ ಆಂಗ್‌ ಸಾನ್‌ ಸೂ ಕಿ ಮತ್ತು ಇನ್ನೊಬ್ಬರು ಸೇನಾ ಮಹಾದಂಡನಾಯಕ ಮಿನ್‌ ಆಂಗ್‌ ಹಲಿಂಗ್. ಇಬ್ಬರೂ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾದ ಪ್ರಸಂಗ ಇದಾಗಿತ್ತು. ಅಧಿಕಾರ ಹಂಚಿಕೆ ಎಂಬುದು ಬಹಳ ಜಟಿಲವಾದ ಪ್ರಕ್ರಿಯೆ.  ಮೊದಲ ಭೇಟಿಯಲ್ಲೇ ಅದರ ಲಕ್ಷಣಗಳು ಗೋಚರಿಸಿದವು.

ಅವರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು. ಆದರೆ ಬಳಿಕ ಹೆಚ್ಚಿಗೆ ಏನನ್ನೂ ಹೇಳಲಿಲ್ಲ. ‘ಜನರ ಬಯಕೆಯಂತೆ ಅವರಿಬ್ಬರೂ ಶಾಂತಿ, ದೇಶದ ಕಾನೂನು, ಸಾಮರಸ್ಯ ಮತ್ತು ದೇಶದ ಅಭಿವೃದ್ಧಿ ವಿಚಾರದಲ್ಲಿ ಶಾಂತಿಯುತವಾಗಿ ಸಹಕರಿಸಲು ಒಪ್ಪಿಕೊಂಡಿದ್ದಾರೆ’ ಎಂದು ನಂತರ ಮಹಾದಂಡನಾಯಕರ ಕಚೇರಿಯಿಂದ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಲಾಯಿತು. ಹೀಗಿದ್ದರೂ, ಮಾತುಕತೆಯ ಚೌಕಟ್ಟು ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅಂತಹ ವಿಚಾರಗಳನ್ನು ಕೆಂಪು ಗೆರೆಯಲ್ಲಿ ಬರೆದಂತಹ ವಿಚಾರಗಳೆಂದು ಪರಿಗಣಿಸಲಾಗಿದ್ದು, ಮಿಲಿಟರಿ ಈ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಇದ್ದಂತಿದೆ.

ಸೂ ಕಿ ಅವರ ‘ನ್ಯಾಷನಲ್‌ ಲೀಗ್‌ ಫಾರ್ ಡೆಮಾಕ್ರಸಿ’ ಪಕ್ಷ ಕಳೆದ ತಿಂಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದರೂ, ಕಳೆದ 5 ದಶಕಗಳಿಂದ ದೇಶದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಡಳಿತ ನಡೆಸಿದ ಮಿಲಿಟರಿ ಈಗಲೂ ದೊಡ್ಡ ಮಟ್ಟಿನ ಅಧಿಕಾರವನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ. ನ್ಯಾಷನಲ್‌ ಲೀಗ್‌ ಸಂಸತ್‌ನಲ್ಲಿ ಬಹುಮತ ಹೊಂದಿದ್ದು, ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಹಕ್ಕನ್ನೂ ಪಡೆದುಕೊಂಡಿದೆ. ಆದರೆ ಸಂಸತ್ತಿನ ಶೇ 25ರಷ್ಟು ಸೀಟುಗಳನ್ನು  ಮತ್ತು ಪ್ರಮುಖ ಖಾತೆಗಳನ್ನು ಸೇನೆಯೇ ತನ್ನಲ್ಲಿ ಇಟ್ಟುಕೊಳ್ಳಲಿದೆ.

ದೇಶದಲ್ಲಿ ನಾಗರಿಕ ಸರ್ಕಾರ ಸ್ಥಾಪನೆಯ ಚಿಂತನೆಗೆ ಸೇನೆ ಒಪ್ಪಿಕೊಂಡಿದೆ ಮತ್ತು ಅಧಿಕಾರವನ್ನು ಬಿಟ್ಟುಕೊಡಲು ಬಯಸಿದೆ. ಆದರೆ ಅದು ಹಂತಹಂತವಾಗಿ ಮತ್ತು ಕೆಲವೊಂದು ಷರತ್ತುಗಳಿಗೆ ಒಳಪಟ್ಟು ನಡೆಯುವ ಪ್ರಕ್ರಿಯೆ ಆಗಿರುತ್ತದೆ ಎಂದು ನಿವೃತ್ತ ಹಿರಿಯ ಜನರಲ್‌ ಒಬ್ಬರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ‘ಅವರು ಅಧಿಕಾರದಿಂದ ನಿರ್ಗಮಿಸುವ ಕಾರ್ಯತಂತ್ರದಲ್ಲಿದ್ದಾರೆ. ದಿನ ಕಳೆದಂತೆ ಅವರು ರಾಜಕೀಯದಿಂದ ದೂರ ಸರಿಯಲಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಈ ಅಧಿಕಾರಿ ಹೇಳಿದ್ದಾರೆ.

ಇದೊಂದು ನಿಜಕ್ಕೂ ಮಿಲಿಟರಿಯ ಬಹುದೊಡ್ಡ ರಿಯಾಯಿತಿ ಎಂದೇ ಹೇಳಬೇಕು. 1990ರ ಚುನಾವಣೆಯಲ್ಲಿ ಸೂ ಕಿ ಅವರ ಪಕ್ಷ ಬಹುಮತ ಗಳಿಸಿದ್ದರೂ, ಮಿಲಿಟರಿ ಆ ಫಲಿತಾಂಶವನ್ನು ರದ್ದುಪಡಿಸಿತ್ತು. ‘ದೇಶವನ್ನು ರಕ್ಷಿಸುವ ಹಿತಾಸಕ್ತಿ’ ಮಿಲಿಟರಿಗೆ ಇತ್ತು ಎಂದು ಹೇಳಿರುವ ಜನರಲ್‌, ಮುಂಬರುವ ಸರ್ಕಾರ ತೀವ್ರ ಸುಧಾರಣೆ ತರುವುದು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿಗೆ ಹಲವಾರು ಉದ್ಯಮ ವ್ಯವಹಾರದ ಹಿತಾಸಕ್ತಿಯೂ ಇದೆ. ಅದರಲ್ಲಿ ರತ್ನದ ಗಣಿಗಳು, ಮದ್ಯದ ವಹಿವಾಟು, ಬಸ್‌ಗಳು, ತಂಬಾಕು, ಬ್ಯಾಂಕ್‌ಗಳು ಮುಖ್ಯವಾದವುಗಳು. ಇವುಗಳಲ್ಲಿ ಕೆಲವನ್ನು ಸಾಮೂಹಿಕವಾಗಿ ನೋಡಿಕೊಳ್ಳಲಾಗುತ್ತಿದ್ದರೆ, ಇನ್ನು ಕೆಲವನ್ನು ನಿವೃತ್ತ ಸೇನಾ ಅಧಿಕಾರಿಗಳ ಮಾಲೀಕತ್ವದಲ್ಲಿ ಮುನ್ನಡೆಸಲಾಗುತ್ತಿದೆ.

ಮಾಜಿ ಸೇನಾ ಅಧಿಕಾರಿ ಮತ್ತು ಸರ್ಕಾರದ ಸಲಹೆಗಾರ ನೇ ಝಿನ್‌ ಲಾತ್‌ ಅವರು, ‘ರಾಜಕೀಯದಿಂದ ಸೇನೆಯನ್ನು ಹಿಂಪಡೆಯುವ ಬಗ್ಗೆ ಪ್ರಜಾಪ್ರಭುತ್ವ ಆಂದೋಲನಕಾರರು ಮತ್ತು ಮಿಲಿಟರಿಗೆ ಒಂದು ದೃಷ್ಟಿಕೋನ ಇದೆ. ಆದರೆ ಅದು ಎಷ್ಟು ವೇಗವಾಗಿ ನಡೆಯಲಿದೆ ಎಂಬುದೇ ಪ್ರಶ್ನೆ’ ಎಂದು ಹೇಳುತ್ತಾರೆ. ‘ವೃತ್ತಿಪರ ಸೇನೆಯಾಗುವುದೇ ಅದರ ಗುರಿ. ಆದರೆ ಇದು ಅಷ್ಟು ಸುಲಭ ಅಲ್ಲ, ಅಭ್ಯಾಸ ಎಂಬುದು ಆಳವಾಗಿ ಬೇರೂರಿರುವಂತಹದ್ದು’ ಎಂದು ನೇ ಝಿನ್  ಅಭಿಪ್ರಾಯಪಡುತ್ತಾರೆ. ‘ನಮಗೆ ಸ್ಥಿರತೆ ಬೇಕು. ಅಮೆರಿಕದಲ್ಲಿ ಈಗ ಏನಾಗಿದೆಯೋ ಅದನ್ನು ಸಾಧಿಸಲು 200 ವರ್ಷಗಳು ಬೇಕಾಯಿತು. ಇದು ನಮ್ಮ ಸ್ಥಿತ್ಯಂತರದ ಆರಂಭಿಕ ಹಂತವಷ್ಟೇ’ ಎಂಬುದು ಅವರ ಅಭಿಪ್ರಾಯ.

ಸಂಸತ್ತಿನಲ್ಲಿ ಶೇ 25ರಷ್ಟು ಸ್ಥಾನಗಳನ್ನು ಸೇನೆಗೆ ಮೀಸಲಿಡುವುದು ಮಾತುಕತೆಗೆ ಒಳಪಡದ ಕೆಂಪು ಗೆರೆ ಹಾಕಿ ಇಟ್ಟಂತಹ ವಿಷಯ. ಹಾಲಿ ಸಂವಿಧಾನವನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಸೇನೆಯ ವ್ಯವಹಾರ ಹಿತಾಸಕ್ತಿಗಳೂ ಹಾಗೆಯೇ ಇರಬೇಕು, ಬುಡಕಟ್ಟು ಬಂಡುಕೋರರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಸೇನಾ ಅಧಿಕಾರಿಗಳು ಹೇಳುತ್ತಿದ್ದಾರೆ. ದೇಶದಲ್ಲಿ ಆಂತರಿಕವಾಗಿ ಶಾಂತಿ ನೆಲೆಸಿದೆ ಎಂದು ಮನವರಿಕೆಯಾಗುವ ತನಕ ಬಹುಪಾಲು ರಾಜಕೀಯ ಅಧಿಕಾರವನ್ನು ಸೇನೆಯು ತನ್ನ ಬಳಿಯಲ್ಲೇ ಇರಿಸಿಕೊಳ್ಳಲಿದೆ ಎಂದು ಮಿನ್‌ ಆಂಗ್‌ ಹಲಿಂಗ್‌ ಹೇಳಿದ್ದಾರೆ. ಈಚಿನ ದಿನಗಳಲ್ಲಿ ಉತ್ತರ ಮ್ಯಾನ್ಮಾರ್‌ನಲ್ಲಿ ಬುಡಕಟ್ಟು ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವೆ ಕಾಳಗ ಹೆಚ್ಚಿದೆ. ಇದು ದಶಕಗಳಿಂದೀಚೆಗೆ ನಡೆಯುತ್ತಿರುವ ನಾಗರಿಕ ಸಮರದ ಒಂದು ಭಾಗ.

ಸೂ ಕಿ ಅವರ ಪಕ್ಷದ ಪ್ರಣಾಳಿಕೆ ‘ಮ್ಯಾನ್ಮಾರ್‌ ಒಂದು ಒಕ್ಕೂಟ ವ್ಯವಸ್ಥೆಯ ಗಣರಾಜ್ಯ’ ಎಂದು ಹೇಳುತ್ತದೆ. ಅವರ ತಂದೆ ಆಂಗ್‌ ಸಾನ್‌ ಅವರು ದೇಶವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸಿದ ಹೀರೊ. 1947ರಲ್ಲಿ ಬ್ರಿಟನ್‌ ಜತೆಗೆ ಆದ ಒಪ್ಪಂದದಂತೆ ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯದವರಿಗೆ ಅವರ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ‘ಪೂರ್ಣಪ್ರಮಾಣದ’ ಸ್ವಾಯತ್ತತೆ ನೀಡಬೇಕಾಗಿತ್ತು. ಆದರೆ ಈ ಒಪ್ಪಂದವನ್ನು ಸೇನೆ ಮೊಟಕುಗೊಳಿಸಿದೆ ಎಂದು ಬುಡಕಟ್ಟು ಗುಂಪುಗಳು ಹೇಳುತ್ತಲೇ ಬಂದಿವೆ. ಸೂ ಕಿ ಅವರ ಪಕ್ಷ ಹೇಳುತ್ತಿರುವ ಒಕ್ಕೂಟ ವ್ಯವಸ್ಥೆ ಈಗ ಅಸ್ಪಷ್ಟವಾಗಿದೆ. ಅತ್ಯಧಿಕ ಸಂಪನ್ಮೂಲ ಹೊಂದಿರುವ ದೇಶದ ಗಡಿ ಭಾಗಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದಕ್ಕೆ ಸೇನೆಗೆ ಮನಸ್ಸಿಲ್ಲ.

ಇನ್ನೊಂದು ಪ್ರಮುಖ ವಿಚಾರವೆಂದರೆ ಮುಂದಿನ ಸರ್ಕಾರದಲ್ಲಿ ಸೂ ಕಿ ಅವರ ಸ್ಥಾನಮಾನ. ಸೂ ಕಿ ಅವರ ಗಂಡ ಮಾತ್ರವಲ್ಲ, ಇಬ್ಬರು ಮಕ್ಕಳೂ ವಿದೇಶಿ ಪೌರತ್ವ ಹೊಂದಿರುವುದರಿಂದ ಸಂವಿಧಾನದ ಪ್ರಕಾರ ಅವರು ಅಧ್ಯಕ್ಷರಾಗುವಂತಿಲ್ಲ.  ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಇಚ್ಛಾನುಸಾರ ನಡೆಯುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ  ಎಂದು ಅವರು ಹೇಳಿದ್ದರು. ಅಂದರೆ ಅಧ್ಯಕ್ಷ ಸ್ಥಾನಕ್ಕಿಂತ ಉನ್ನತ ಮಟ್ಟದ ಸ್ಥಾನಮಾನ ಹೊಂದುವುದು ಅವರ ಬಯಕೆ. ಜತೆಗೆ ಅವರು ಸಂವಿಧಾನಕ್ಕೇ ತಿದ್ದುಪಡಿ ತರುವ ನಿಟ್ಟಿನಲ್ಲಿ ಒತ್ತಡ ಹಾಕುವುದು ನಿಶ್ಚಿತ. ಇದಕ್ಕೆ ಸೇನೆ ತಡೆ ಒಡ್ಡುವ ಸಾಧ್ಯತೆ ಇದ್ದೇ ಇದೆ.

ಮುಂದಿನ ಮಾರ್ಚ್‌ನಲ್ಲಿ ದೇಶದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಅವರ ಅಧಿಕಾರ ಅವಧಿ 5 ವರ್ಷ. ಆ ಹೊತ್ತಿಗಾಗಲೇ ಸಂವಿಧಾನದಲ್ಲಿರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೂ ಕಿ ಅವರು ಸೇನೆಯ ಮನವೊಲಿಸುವ ವಿಶ್ವಾಸ ಇದೆ ಎಂದು ಪಕ್ಷದ ಹಿರಿಯ ನಾಯಕ ವಿನ್‌ ಹಟಿನ್‌ ಈಚೆಗೆ ಹೇಳಿಕೆ ನೀಡಿದ್ದಾರೆ. ಇನ್ನೊಂದು ತಕ್ಷಣದ ಆತಂಕದ ವಿಚಾರ ಎಂದರೆ, ಹಲವಾರು ಮಾಜಿ ಸೇನಾ ಅಧಿಕಾರಿಗಳು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿರುವುದು. ಈ ಹಾಲಿ ಸಚಿವರು ಸೂ ಕಿ ಅವರ ಪಕ್ಷದೊಂದಿಗೆ ಕೆಲಸ ಮಾಡಲು ಹೇಗೆ ಮನಸ್ಸು ಮಾಡಬಲ್ಲರು ಎಂಬುದನ್ನು ವಿಶ್ಲೇಷಕರು ಸೂಕ್ಷ್ಮವಾಗಿ ನೋಡುತ್ತಿದ್ದಾರೆ.

‘ಈಗಿನ ಎಲ್ಲ ಸಚಿವರು ನಿರ್ಗಮಿಸಿ ಇತರರಿಗೆ ಶುಭವಾಗಲಿ ಎಂದು ಹಾರೈಸುವಂತಹ ಸನ್ನಿವೇಶವನ್ನು ಬಯಸಲಾಗದು’ ಎಂದು ಇದೀಗ ಸ್ವತಂತ್ರ ರಾಜಕೀಯ ಸಲಹೆಗಾರರಾಗಿರುವ ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ರಿಚರ್ಡ್‌ ಹಾರ್ಸೇ ಹೇಳುತ್ತಾರೆ. ನಿರ್ಗಮಿತ ಅಧ್ಯಕ್ಷ ಥೆಯಿನ್‌ ಸೆಯಿನ್‌ ಅವರನ್ನೂ ಸೂ ಕಿ ಕಳೆದ ಬುಧವಾರ ಭೇಟಿ ಮಾಡಿದ್ದರು. ಅಧ್ಯಕ್ಷರ ಅರಮನೆಯಲ್ಲಿ ನಡೆದ ಈ ಭೇಟಿಯ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಬೃಹತ್‌ ಆಸನಗಳಲ್ಲಿ ಸ್ವಲ್ಪ ಅಂತರ ಇಟ್ಟುಕೊಂಡೇ ಕುಳಿತುಕೊಂಡಿದ್ದ ಈ ಇಬ್ಬರು ನಾಯಕರು ನಸುನಗುತ್ತಲೇ ಮಾತುಕತೆ ನಡೆಸಿದ್ದು ಮತ್ತು ಕೊನೆಯಲ್ಲಿ ಪರಸ್ಪರ ಬಾಗಿ ನಮಸ್ಕರಿಸಿ ಬೀಳ್ಕೊಟ್ಟದ್ದು ಕಾಣಿಸಿದೆ. ಅಧ್ಯಕ್ಷರ ಕಚೇರಿ ಬಿಡುಗಡೆಗೊಳಿಸಿದ ಈ ವಿಡಿಯೊದಲ್ಲಿನ ಧ್ವನಿಯನ್ನು ಮಾತ್ರ ತೆಗೆದು ಹಾಕಲಾಗಿದೆ.

‘ಶಾಂತಿಯುತ ಮತ್ತು ಸಾಂಗವಾಗಿ ಅಧಿಕಾರ ಹಸ್ತಾಂತರ ನಡೆಸುವ ಬಗ್ಗೆ ಅವರಿಬ್ಬರೂ ಮಾತುಕತೆ ನಡೆಸಿದರು. ಇಂತಹ ಅಧಿಕಾರ ಹಸ್ತಾಂತರ ವಿಚಾರದಲ್ಲಿ ನಾವು ಅಷ್ಟಾಗಿ ಪಳಗಿದವರು ಅಲ್ಲ’ ಎಂದು ನಿರ್ಗಮಿತ ಸರ್ಕಾರದ ವಕ್ತಾರ ಯೆ ಹಟಟ್‌ ಹೇಳಿದ್ದರು. ಆಂಗ್‌ ಸಾನ್‌ ಸೂ ಕಿ ಮತ್ತು ಮಿನ್‌ ಆಂಗ್‌ ಹಲಿಂಗ್‌ ನಡುವಣ ಮಾತುಕತೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮ್ಯಾನ್ಮಾರ್‌ನ ವಿಶೇಷವೆಂದರೆ ಇಲ್ಲಿ ಕೆಲವೊಮ್ಮೆ ವ್ಯಕ್ತಿಗಳು ಅವರು ಪ್ರತಿನಿಧಿಸುವ ಸಂಸ್ಥೆಗಳಿಗಿಂತ ಬಹಳ ಪ್ರಾಮುಖ್ಯವನ್ನು ಪಡೆದುಬಿಟ್ಟಿರುತ್ತಾರೆ. ಇವರ ಭೇಟಿಯನ್ನು ಈ ಹಿನ್ನೆಲೆಯಲ್ಲೇ ನೋಡಿ ಅರ್ಥೈಸುವ ಪ್ರಯತ್ನ ನಡೆಯಬೇಕಾಗಿದೆ.

‘ಮ್ಯಾನ್ಮಾರ್‌ನಲ್ಲಿ ಹೆಚ್ಚಿನ ವಿಷಯಗಳು ವೈಯಕ್ತಿಕ ಸಂಬಂಧಗಳ ಮೇಲೆಯೇ ಅವಲಂಬಿಸಿರುತ್ತವೆ’ ಎಂದು ಹೇಳುವ ಇತಿಹಾಸ ತಜ್ಞ ಮತ್ತು ಹಾಲಿ ಸರ್ಕಾರದ ಸಲಹೆಗಾರ ತಾಂಟ್ ಮೈಯಿಂಟ್‌–ಯು, ‘ಇದುವರೆಗೆ ಅವರು ಖಾಸಗಿ ಭೇಟಿ ಮಾಡಿದ್ದೇ ಇಲ್ಲ. ವೈಯಕ್ತಿಕ ಮಾತ್ರವಲ್ಲ ಕಾರ್ಯನಿರ್ವಹಣಾ ಸಂಬಂಧವನ್ನು ಬೆಳೆಸುವುದು ಬಹಳ ಮುಖ್ಯವಾಗುತ್ತದೆ’ ಎನ್ನುತ್ತಾರೆ. ಮಹಾದಂಡನಾಯಕ ತಮ್ಮ ಕಚೇರಿಯಿಂದ ನಿರ್ಗಮಿಸುತ್ತಿದ್ದಂತೆಯೇ ಪತ್ರಕರ್ತರತ್ತ ತಿರುಗಿ, ‘ನಾವು ಉತ್ತಮ ರೀತಿಯಲ್ಲಿ ಚರ್ಚೆ ನಡೆಸಿದ್ದೇವೆ ಮತ್ತು ಪ್ರತಿಯೊಂದೂ ಸಮರ್ಪಕವಾಗಿದೆ’ ಎಂದು ಹೇಳಿದ್ದರು. ಒಗಟಿನಂತಹ ಇಂತಹ ಹೇಳಿಕೆಗಳ ಸಾಲುಗಳ ನಡುವಿನಲ್ಲೇ ಮ್ಯಾನ್ಮಾರ್‌ನ ಭವಿಷ್ಯದ ದಿಕ್ಕನ್ನು ಅರ್ಥೈಸುವ ಪ್ರಯತ್ನ ನಡೆಸಬೇಕಾಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT