ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನಾಲ್ಕು ವರ್ಷದ ವನವಾಸ!

ಅಕ್ಷರ ಗಾತ್ರ

ನಾನು, ವಿಷ್ಣು ಚಿತ್ರೋದ್ಯಮದ ಆಗುಹೋಗುಗಳ ಕುರಿತು ಚರ್ಚಿಸುತ್ತಾ ಇದ್ದಾಗ ‘ಹೃದಯಗೀತೆ’ ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆವು. ಅದನ್ನು ಪುಟ್ಟಣ್ಣ ಕಣಗಾಲ್ ಮಾಡಬೇಕು ಎಂದುಕೊಂಡಿದ್ದರು. ತ್ರಿವೇಣಿ ಅವರ ಕಾದಂಬರಿಯನ್ನು ಆಧರಿಸಿದ ಸಿನಿಮಾ ಅದು. ಪುಟ್ಟಣ್ಣನವರ ಸಂಬಂಧಿಕರ ಬಳಿ ಅದರ ಹಕ್ಕು ಇತ್ತು. ಅವರಿಂದ ಅನುಮತಿ ಪಡೆದುಕೊಂಡು ಬಂದೆವು. ವಿಷ್ಣುವಿನ ವಯಸ್ಸಿಗೆ ಆ ಪಾತ್ರ ಹೊಂದುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು. ನನಗೆ ಆ ಪಾತ್ರ ವಿಷ್ಣುವಿಗೆ ಹೊಂದುತ್ತದೆ ಎಂದು ಸ್ಪಷ್ಟವಾಗಿ ಗೊತ್ತಿತ್ತು.

‌ನನ್ನ, ವಿಷ್ಣುವಿನ ಬದುಕಿನಲ್ಲಿ ಇದ್ದ ಉತ್ತಮ ವಾತಾವರಣದಲ್ಲಿ ಒಂದಿಷ್ಟು ಏರುಪೇರು ಆಗುವ ಸೂಚನೆ ಅದಾಗಿತ್ತೋ ಏನೋ? ಆ ಸಿನಿಮಾ ಯೋಚನೆ ಮೂಡಿದ ಹೊತ್ತಿನಲ್ಲೇ ನಮ್ಮಿಬ್ಬರ ನಡುವೆ ವೈಮನಸ್ಸು ಮೂಡುವ ಘಟನೆಯೊಂದು ನಡೆಯಿತು. ‘ಹೃದಯಗೀತೆ’ ಸಿನಿಮಾವನ್ನು ಮಾಡಲು ನನಗೆ ಆಗಲೇ ಇಲ್ಲ.

ಒಮ್ಮೆ  ಸಂವಾದದಲ್ಲಿ ತೊಡಗಿದ್ದಾಗ, ನೀನು ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದೀಯ, ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ವಿಷ್ಣುವಿಗೆ ನಾನು ಕಿವಿಮಾತು ಹೇಳಿದೆ. ಬೇರೆ ನಿರ್ಮಾಪಕರು, ನಿರ್ದೇಶಕರು ಸಂಭಾವನೆ ಹೆಚ್ಚಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡೇ ವಿಷ್ಣುವಿಗೆ ನಾನು ಹಾಗೆ ಹೇಳಿದ್ದು. ವಿಷ್ಣುವಿನ ವಾದ ಸಹಜವಾಗಿಯೇ ನಟ-ನಟಿಯರ ದೃಷ್ಟಿಕೋನದಲ್ಲಿಯೇ ಇತ್ತು. ‘ಮಾರ್ಕೆಟ್ ಇದ್ದಾಗಷ್ಟೇ ಕೇಳಿದಷ್ಟು ಹಣ ಕೊಡುವುದು. ಇಷ್ಟು ವರ್ಷ ಕೆಲಸ ಮಾಡಿದ ಮೇಲೂ ಇನ್‌ಕ್ರಿಮೆಂಟ್ ಬೇಡವೇ?’ ಎಂದು ಅವನು ವಾದ ಮುಂದಿಟ್ಟ.

ಆ ದಿನ ಶುರುವಾದ ನಮ್ಮ ಭಿನ್ನಾಭಿಪ್ರಾಯದ ಚರ್ಚೆ ನಮ್ಮ ಸ್ನೇಹೋದ್ಯಾನದಲ್ಲಿ ಬಿರುಗಾಳಿ ಎಬ್ಬಿಸುವಷ್ಟು ತೀವ್ರವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಒಂದು ಪತ್ರಿಕೆಯಲ್ಲಿ ವಿಷ್ಣುವಿನ ಹೇಳಿಕೆ ಪ್ರಕಟವಾಗಿತ್ತು. ‘ಕನ್ನಡದ ನಿರ್ದೇಶಕರಿಂದ ಚಿತ್ರರಂಗಕ್ಕೆ ಏನೂ ಪ್ರಯೋಜನವಿಲ್ಲ’ ಎಂಬ ಧಾಟಿಯ ಅವನ ಅಭಿಪ್ರಾಯ ಓದಿ ಸಹಜವಾಗಿಯೇ ನಮ್ಮ ನಿರ್ದೇಶಕರಿಗೆ ನಖಶಿಖಾಂತ ಕೋಪ ಬಂದಿತ್ತು. ನಾನು ಆಗ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷನಾಗಿದ್ದೆ. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ವಿಷ್ಣು ನೀಡಿದ ಆ ಹೇಳಿಕೆಯನ್ನು ಖಂಡಿಸಿ, ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಆಗ್ರಹಿಸಿದರು.

ಯಾವುದಕ್ಕೂ ಒಮ್ಮೆ ವಿಷ್ಣುವಿಗೆ ಫೋನ್ ಮಾಡಿ, ಸ್ಪಷ್ಟನೆ ಕೇಳೋಣ ಎಂದು ನಾನು ಹೇಳಿದೆ. ಆಗ ವಿಷ್ಣು ಫೋನ್ ತೆಗೆಯಲಿಲ್ಲ. ‘ನಿಮ್ಮ ಸ್ನೇಹ ಇದ್ದರೆ ಮನೆಯಲ್ಲಿ ಇಟ್ಟುಕೊಳ್ಳಿ, ಸಂಘಕ್ಕೆ ತರಬೇಡಿ’ ಎಂದು ಕಾರ್ಯಕಾರಿ ಸಮಿತಿ ಸದಸ್ಯರು ಪಟ್ಟುಹಿಡಿದರು. ಕೆಲವರು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುವಂತೆ ನನ್ನನ್ನು ಆಗ್ರಹಿಸಿದರು. ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ ಮೇಲೆ ಎಲ್ಲರೂ ಸುಮ್ಮನಾದರು.

ವಿಷ್ಣು ಕೊಟ್ಟ ಹೇಳಿಕೆಗೆ ಪ್ರತಿಯಾಗಿ ಅಧ್ಯಕ್ಷರ ಸಂಘವೂ ಪತ್ರಿಕೆಗಳ ಮೂಲಕವೇ ಅವನನ್ನು ಪ್ರಶ್ನಿಸಬೇಕು ಎಂದು ಸಭೆಯಲ್ಲಿ ಅನೇಕರು ತೀರ್ಮಾನಿಸಿದರು. ಏನೇನು ಪ್ರಶ್ನೆಗಳಿರಬೇಕು ಎಂದು ಕರಡು ರೂಪಿಸಲು ಜೋ ಸೈಮನ್, ನಂಜುಂಡೇಗೌಡರು ಮತ್ತಿಬ್ಬರಿದ್ದ ತಂಡವನ್ನು ರೂಪಿಸಿದೆವು. ಅವರೆಲ್ಲಾ ಸೇರಿ ಖಾರವಾದ, ನೇರವಾದ ಪ್ರಶ್ನೆಗಳನ್ನು ಎತ್ತಿದರು.

‘‘ನಾಗರಹಾವು ಸಿನಿಮಾ ಕೊಟ್ಟದ್ದು ಕನ್ನಡ ನಿರ್ದೇಶಕರಲ್ಲವೇ? ಸಿದ್ದಲಿಂಗಯ್ಯ ಅವರು ‘ಬೂತಯ್ಯನ ಮಗ ಅಯ್ಯು’ ನಿರ್ದೇಶಿಸದೆ ಇದ್ದರೆ ನೀವು ಈ ಸ್ಥಿತಿಯಲ್ಲಿ ಇರುತ್ತಿದ್ದಿರೇ? ‘ಸಾಹಸ ಸಿಂಹ’ ಕೊಟ್ಟವರು ಜೋ ಸೈಮನ್ ಅಲ್ಲವೇ? ‘ಬಂಧನ’ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದರಲ್ಲವೇ? ನೀವು ತಮಿಳಿಗೆ ಹೋದಿರಿ. ಹಿಂದಿಗೆ ಹೋದಿರಿ. ಮಲಯಾಳ ಚಿತ್ರರಂಗಕ್ಕೂ ಕಾಲಿಟ್ಟಿರಿ. ಅಲ್ಲೆಲ್ಲೂ ಯಶಸ್ವಿಯಾಗಲಿಲ್ಲ.

ನಿಮ್ಮನ್ನು ಜನಪ್ರಿಯ ನಟನನ್ನಾಗಿ ಬೆಳೆಸಿದ್ದು ಕನ್ನಡದ ನಿರ್ದೇಶಕರೇ ಅಲ್ಲವೇ? ತಮಿಳಿನಲ್ಲಿ ಒಂದು ಸಿನಿಮಾ ಸೋತರೆ, ನಿರ್ಮಾಪಕರಿಗೆ ಕಡಿಮೆ ಸಂಭಾವನೆಯಲ್ಲಿ ಕಾಲ್‌ಶೀಟ್ ಕೊಡುವುದನ್ನೋ, ನಷ್ಟ ತುಂಬಿಕೊಡುವುದನ್ನೋ ನಟರು ಮಾಡುತ್ತಾರೆ. ನೀವು ಅಂಥದ್ದೇನನ್ನೂ ಮಾಡಿಯೇ ಇಲ್ಲವಲ್ಲ. ಇದಕ್ಕೆ ಏನೆನ್ನುವಿರಿ?’’- ಇಂಥ ಪ್ರಶ್ನೆಗಳು ಕರಡಿನಲ್ಲಿ ಇದ್ದವು.

ನನಗೆ ಬಿಸಿತುಪ್ಪ ಬಾಯಲ್ಲಿ ಹಾಕಿಕೊಂಡಂಥ ಅನುಭವ. ಒಂದು ಕಡೆ ವಿಷ್ಣುವಿನ ಸ್ನೇಹ. ಇನ್ನೊಂದು ಕಡೆ ಚಿತ್ರರಂಗದ ಹಿತಾಸಕ್ತಿ ಹಾಗೂ ನಾನಿದ್ದ ಸ್ಥಾನದ ಹೊಣೆಗಾರಿಕೆ. ಕೊನೆಗೆ ಧೈರ್ಯ ಮಾಡಿ ನಾನೇ ಪ್ರಶ್ನೆಗಳ ಪ್ರತಿಗೆ ಸಹಿ ಹಾಕಿ ಮಾಧ್ಯಮಗಳಿಗೆ ಕಳುಹಿಸಿಕೊಟ್ಟೆ. ಪತ್ರಿಕೆಗಳಿಗೆ ಆಗ ಅದು ರೋಚಕ ಸುದ್ದಿ. ಟಿ.ವಿ. ಚಾನೆಲ್‌ಗಳು ಇರದೇ ಇದ್ದ ಸಂದರ್ಭ ಅದು. ಇದ್ದಿದ್ದರೆ ಇಪ್ಪತ್ತು ಎಪಿಸೋಡುಗಟ್ಟಲೆ ಅದನ್ನೇ ತೋರಿಸುತ್ತಿದ್ದವೋ ಏನೋ? ಆ ಪ್ರಶ್ನೆಗಳು ಪ್ರಕಟಗೊಂಡಿದ್ದೇ ವಿಷ್ಣು ಅಭಿಮಾನಿಗಳು ಕ್ರುದ್ಧರಾದರು.

ಕೆಲವರಿಂದ ನನಗೆ ಜೀವ ಬೆದರಿಕೆ ಬಂತು. ನಾನು ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡೆ. ‘ಅವು ವೈಮನಸ್ಸಿನಿಂದ ಎತ್ತಿರುವ ಪ್ರಶ್ನೆಗಳಲ್ಲ. ನಿರ್ದೇಶಕರ ಸಂಘದ ಕಾರ್ಯಕಾರಿ ಸಮಿತಿಯವರ ನಿರ್ಧಾರ. ಅದಕ್ಕೆ ಅಧ್ಯಕ್ಷನಾಗಿ ನಾನು ಸಹಿ ಮಾಡಲೇಬೇಕಿತ್ತು. ಬೇಕಾದರೆ ಅಭಿಮಾನಿ ಸಂಘಗಳ ಜೊತೆ ಚರ್ಚೆಗೂ ಸಿದ್ಧ’ ಎಂದು ಇನ್ನೊಂದು ಹೇಳಿಕೆಯನ್ನು ನಾನು ಕೊಡಬೇಕಾಗಿ ಬಂತು.

ಎರಡು ಸಲ ನಾನು ವಿಷ್ಣುವಿನ ಜೊತೆ ಮಾತನಾಡಲು ಯತ್ನಿಸಿದೆನಾದರೂ ಅವನು ಫೋನ್ ಎತ್ತಲಿಲ್ಲ. ಅವನಿಗೆ ವಿಪರೀತ ಸಿಟ್ಟು ಬಂದಿತ್ತು. ಇಬ್ಬರ ಸ್ವಾಭಿಮಾನವೂ ಆಗ ಗಟ್ಟಿಯಾಯಿತೋ ಏನೋ? ಕೋಪದಲ್ಲಿ ನಾವು ಏನು ಮಾಡುತ್ತೇವೆಯೋ ನಮಗೇ ಗೊತ್ತಿರುವುದಿಲ್ಲ. ಯಾರೋ ಒಬ್ಬರು, ‘ನೀವು ವಿಷ್ಣುವಿನ ಮನೆಗೇ ಹೋಗಿ ಮಾತನಾಡಬೇಕಿತ್ತು’ ಎಂದು ನನಗೆ ಹೇಳಿದರು.

ಅಭಿಮಾನಿಗಳನ್ನು ನನ್ನ ಮನೆ ಹತ್ತಿರ ಬಿಟ್ಟು ಅವನು ಗಲಾಟೆ ಮಾಡಿಸುತ್ತಿದ್ದಾನೆ, ನಾನೇಕೆ ಅವನ ಮನೆಗೆ ಹೋಗಬೇಕು ಎಂದು ನಾನು ಕೋಪದಲ್ಲಿ ಪ್ರತಿಕ್ರಿಯಿಸಿದೆ. ಸಂದರ್ಶನವೊಂದರಲ್ಲಿ ನಾನು, ‘ನಮ್ಮ ಸ್ನೇಹ ಒಡೆದ ಕನ್ನಡಿಯಂತೆ ಆಗಿಹೋಯಿತು’ ಎಂದೆ. ಅದಕ್ಕೆ ಅವನು, ‘ಕನ್ನಡಿ ಒಡೆದ ಮೇಲೆ ಜೋಡಿಸಲು ಸಾಧ್ಯವೇ ಇಲ್ಲ’ ಎಂದು ಮಾತಿನಿಂದಲೇ ಚುಚ್ಚಿದ. ಮತ್ತೊಂದು ಇಂಗ್ಲಿಷ್ ನಿಯತಕಾಲಿಕದಲ್ಲಿ ನನ್ನ ಸಂದರ್ಶನ ಪ್ರಕಟವಾಯಿತು. ‘ಮನೆಗೆ ಹೋಗುವ ನಿರ್ಮಾಪಕರಿಗೆ ಅವನು ಒಂದು ಲೋಟ ಕಾಫಿ ಕೂಡ ಕೊಡುವುದಿಲ್ಲವಂತೆ’ ಎಂದು ನಾನು ಹೇಳಿದ್ದೆ.

ಅದನ್ನೇ ಆ ಪತ್ರಿಕೆ ದೊಡ್ಡದಾಗಿ ಪ್ರಕಟಿಸಿತು. ಹೀಗೆ ನಾನೊಂದು ತೀರ, ಅವನೊಂದು ತೀರ ಎಂಬಂತೆ ಆದೆವು. ನಮ್ಮ ನಡುವೆ ಮಾತಿಲ್ಲ, ಕಥೆ ಇಲ್ಲ. ಸಮಾರಂಭಗಳಲ್ಲಿ ಸಿಗುತ್ತಿದ್ದೆವಾದರೂ ಅಲ್ಲಿಯೂ ಮಾತನಾಡುತ್ತಿರಲಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಗಳಲ್ಲಿ ಅಕ್ಕಪಕ್ಕ ಕೂತರೂ ಪರಸ್ಪರ ಮಾತಿಲ್ಲ. ವಿಷ್ಣುವನ್ನು ಬಿಟ್ಟೇ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ ನಾನು ‘ಹೂವು ಹಣ್ಣು’ ಸಿನಿಮಾ ಕೈಗೆತ್ತಿಕೊಂಡೆ.

‘ಯಜಮಾನ’ ಸಿನಿಮಾ ನೂರು ದಿನ ಓಡಿದ ಸಮಾರಂಭಕ್ಕೆ ನನ್ನನ್ನೂ ಕರೆದು, ಮುಂದಿನ ಸಾಲಿನಲ್ಲಿ ಕೂರಿಸಿದ್ದರು. ಆಗ ನಟಿ ಪ್ರೇಮಾ ಬಂದು, ನನ್ನನ್ನು ಮಾತನಾಡಿಸಿದರು. ಅದನ್ನು ನೋಡುತ್ತಿದ್ದ ವಿಷ್ಣುವಿನ ಮುಖದಲ್ಲಿ ನಮ್ಮ ಹಳೆಯ ಸ್ನೇಹದ ಯಾವ ಪಸೆಯೂ ಕಾಣಲಿಲ್ಲ. ತುಂಬಾ ಬೇಜಾರಾಯಿತು. ವಿಷ್ಣುವಿನ ಸಮ್ಮುಖದಲ್ಲಿಯೇ ಅವನ ಅಭಿಮಾನಿಗಳು ನನ್ನನ್ನು ಬಾಯಿಗೆ ಬಂದಹಾಗೆ ಬೈಯ್ದಿದ್ದರು ಎನ್ನುವುದು ನನ್ನ ಕಿವಿಮೇಲೆ ಬಿದ್ದಿತ್ತು. ಚಿತ್ರರಂಗದ ಕೆಲವರಿಗೆ ನಮ್ಮ ಮುನಿಸು ಸಂತೋಷದ ಸಂಗತಿಯಾಗಿಬಿಟ್ಟಿತು.

ನಮ್ಮಿಬ್ಬರ ಸ್ನೇಹಿತರು ಕೂಡ ನಮ್ಮನ್ನು ಒಂದುಗೂಡಿಸಲು ಯತ್ನಿಸಲಿಲ್ಲ. ದ್ವಾರಕೀಶ್ ಹಾಗೂ ವಿಷ್ಣು ನಡುವೆ ವೈಮನಸ್ಸು ಉಂಟಾದಾಗಲೆಲ್ಲಾ ನಾನು ಸಾಕಷ್ಟು ಪ್ರಯತ್ನಿಸಿ, ಅವರ ನಂಟು ಬೆಸೆದಿದ್ದೆ. ನನ್ನ ವಿಷಯದಲ್ಲಿ ದ್ವಾರಕೀಶ್ ಕೂಡ ಸಹಾಯ ಮಾಡಲು ಆಗಲಿಲ್ಲ. ರಾಕ್‌ಲೈನ್ ವೆಂಕಟೇಶ್ ಮಾತ್ರ ಒಮ್ಮೆ ಮನೆಗೆ ಬಂದು, ‘ಏನ್ ಸಾರ್ ಮಕ್ಕಳ ತರಹ ಹಟ ಮಾಡ್ತೀರಾ. ಬನ್ನಿ, ಮಾತಾಡಿ ಸರಿಪಡಿಸೋಣ’ ಎಂದು ನನ್ನನ್ನು ಆಹ್ವಾನಿಸಿದರು.

ಆಗ ವಿಷ್ಣು ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ. ಅಲ್ಲಿಗೇ ಹೋಗಿ ನಮ್ಮ ಮುನಿಸನ್ನು ಇಲ್ಲವಾಗಿಸಬೇಕು ಎನ್ನುವುದು ರಾಕ್‌ಲೈನ್ ಉದ್ದೇಶ. ನಾನಾಗಿಯೇ ಅಲ್ಲಿಗೆ ಹೇಗೆ ಹೋಗುವುದು ಎಂದು ನನಗೆ ಮುಜುಗರ. ನನ್ನ ತಾಯಿ ಕೂಡ, ‘ನೀನೇ ಹೋಗು. ಮಗುವಿನಂತೆ ಹಟ ಮಾಡಬೇಡ’ ಎಂದು ಕಿವಿಮಾತು ಹೇಳಿದರು. ನಿರ್ದೇಶಕರ ಸಂಘದ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದ್ದೆನಷ್ಟೆ. ಅದನ್ನು ವಿಷ್ಣು ಕರೆದು ಕೇಳಬಹುದಿತ್ತು ಅಲ್ಲವೇ ಎಂದು ನಾನು ರಾಕ್‌ಲೈನ್ ಅವರಿಗೆ ಪ್ರಶ್ನೆ ಹಾಕಿದೆ.

ಅಷ್ಟರಲ್ಲಿ ವಿಷ್ಣು ಚಿತ್ರೀಕರಣ ಮಂಗಳೂರಿಗೆ ಶಿಫ್ಟ್ ಆಗಿದೆ ಎಂಬ ಸುದ್ದಿ ಬಂತು. ಅಲ್ಲಿಗೇ ಹೋಗಿ ಮಾತನಾಡೋಣ ಎಂದು ಅವರು ಕರೆದರಾದರೂ ನನಗೆ ಹೋಗುವ ಮನಸ್ಸು ಇರಲಿಲ್ಲ. ಕೊನೆಗೂ ರಾಕ್‌ಲೈನ್ ಮಧ್ಯಸ್ಥಿಕೆಯಲ್ಲಿ ನಾವು ಮಾತನಾಡುವ ಗಳಿಗೆ ಕೂಡಿಬರಲೇ ಇಲ್ಲ. ನಾನು ಕೆಲವು ಸಿನಿಮಾಗಳಿಗೆ ಚಿತ್ರಕಥೆ ಮಾಡಿಸಿದಾಗ, ನಾಯಕನ ಪಾತ್ರಕ್ಕೆ ವಿಷ್ಣುವೇ ಸೂಕ್ತ ಎಂದು ಎನಿಸುತ್ತಿತ್ತು. ಮುಂಬೈನಲ್ಲಿ ಸಚಿನ್ ಭೌಮಿಕ್ ಎಂಬ ಪಳಗಿದ ಸಿನಿಮಾ ಕಥೆಗಾರರಿದ್ದರು. ‘ಆರಾಧನಾ’ದಂತಹ ಸಿನಿಮಾಗೆ ಕಥೆ ಮಾಡಿಕೊಟ್ಟವರು ಅವರು. ಅವರಿಂದ ಕಥೆ ಮಾಡಿಸಿದಾಗ, ಅದೂ ವಿಷ್ಣುವಿಗೆ ಹೊಂದುತ್ತದೆ ಎನಿಸಿತು. ಆ ಸಿನಿಮಾ ಮಾಡಲು ಆಗಲೇ ಇಲ್ಲ.

ವಿಷ್ಣು ಇಲ್ಲದೆ ಸಿನಿಮಾ ಮಾಡುವುದು ಅನಿವಾರ್ಯ ಎಂದು ನಾನು ತೀರ್ಮಾನಿಸಿದೆ. ಕೆಲವರು ಅದು ನನ್ನಿಂದ ಸಾಧ್ಯವೇ ಇಲ್ಲ ಎಂದು ಸವಾಲೆಸೆದಿದ್ದರು. ‘ಹೂವು ಹಣ್ಣು’ ಆದಮೇಲೆ ‘ಮುಂಗಾರಿನ ಮಿಂಚು’ ಸಿನಿಮಾ ಮಾಡಿದೆ. ಅದಕ್ಕೆ ಪ್ರಶಸ್ತಿಗಳು ಸಂದವು. ಶಿವರಾಜ್‌ಕುಮಾರ್, ರಮೇಶ್ ಇಬ್ಬರನ್ನೂ ಹಾಕಿಕೊಂಡು ‘ಭೂಮಿತಾಯಿಯ ಚೊಚ್ಚಿಲ ಮಗ’ ಸಿನಿಮಾ ತೆಗೆದೆ. ಅದೂ ಯಶಸ್ವಿಯಾಯಿತು. ಆ ಸಿನಿಮಾ ಮಾಡುವಾಗ ರಮೇಶ್ ಹಾಗೂ ವಿಷ್ಣು ಪದೇಪದೇ ಮಾತನಾಡುತ್ತಿದ್ದರು.

ನಮ್ಮ ಸಿನಿಮಾದ ಕೆಲವು ಸನ್ನಿವೇಶಗಳ ಕುರಿತು ವಿಷ್ಣು ಬಳಿ ರಮೇಶ್ ಹೇಳಿದ್ದರಂತೆ. ಆಗ ವಿಷ್ಣು, ‘ಅವನು ಬಿಡಿ ಕಳ್ಳ... ಚೆನ್ನಾಗಿ ಮಾಡ್ತಾನೆ’ ಎಂದು ಪ್ರೀತಿಯಿಂದ ಹೇಳಿದ್ದನಂತೆ. ಸ್ನೇಹದ ಪಸೆ ಅವನ ಎದೆಯಲ್ಲಿ ಆಗಲೂ ಇತ್ತು ಎನ್ನುವುದಕ್ಕೆ ಇದು ಉದಾಹರಣೆ. ‘ಕುರಿಗಳು...’, ‘ಕೋತಿಗಳು...’ ಸರಣಿಯ ಮೂರು ಸಿನಿಮಾಗಳನ್ನು ಮಾಡಿದೆವು. ಅವೂ ನೂರು ದಿನ ಓಡಿದವು. ನನ್ನ ತಂಗಿ ವಿಜಯಲಕ್ಷ್ಮಿ ಸಿಂಗ್‌, ‘ವಿಷ್ಣುವನ್ನೇ ಶತದಿನೋತ್ಸವದ ಸಮಾರಂಭಕ್ಕೆ ಕರೆಯೋಣ’ ಎಂದಳು. ಅವಳು ಪ್ರಯತ್ನಿಸಿದಳಾದರೂ ವಿಷ್ಣು ಆಗ ಬೇರೆ ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದ.

ನನ್ನ ಮಗ ಆದಿತ್ಯನನ್ನು ನಾಯಕನನ್ನಾಗಿ ಪರಿಚಯಿಸುವ ಸಂದರ್ಭ ಬಂತು. ಅವನ ಮೊದಲ ಸಿನಿಮಾ ನನ್ನದೇ ನಿರ್ದೇಶನದ ‘ಲವ್’. ವಿಂಡ್ಸರ್ ಮ್ಯಾನರ್‌ ಹೋಟೆಲ್‌ನಲ್ಲಿ ಅದ್ದೂರಿ ಮುಹೂರ್ತ ಆಯೋಜಿಸಿದೆವು. ರಾಜ್‌ಕುಮಾರ್, ಅಂಬರೀಷ್‌ ಮೊದಲಾದ ಚಿತ್ರರಂಗದ ಪ್ರಮುಖರನ್ನು ಕರೆದಿದ್ದೆ. ವಿಷ್ಣುವನ್ನು ಕರೆಯಬೇಕೋ ಬೇಡವೋ ಎಂಬ ಪ್ರಶ್ನೆ ಬಂತು. ನಮ್ಮಿಬ್ಬರ ಸ್ನೇಹದಲ್ಲಿ ದೊಡ್ಡ ಕಪ್ಪುಛಾಯೆ ಕವಿದಿತ್ತು. ಖುದ್ದು ನಾನೇ ಹೋಗದೆ ಮಗನನ್ನು ಕಳುಹಿಸಿದೆ.

ಅವನು ನನ್ನ ಮಗನನ್ನು ಪ್ರೀತಿಯಿಂದ ಮಾತನಾಡಿಸಿ ಕಳುಹಿಸಿಕೊಟ್ಟಿದ್ದ. ಆದರೆ, ಸಮಾರಂಭಕ್ಕೆ ಬರಲಿಲ್ಲ. ವಿಷ್ಣುವಿನ ತಾಯಿ ಮೃತಪಟ್ಟಾಗಲೂ ನನಗೆ ಹೋಗಲು ಆಗಿರಲಿಲ್ಲ. ಆ ಘಟನೆಯ ಬಗ್ಗೆ ನಾನು ಹಿಂದೆಯೇ ವಿವರವಾಗಿ ಬರೆದಿದ್ದೇನೆ. ಆಮೇಲೆ ‘ತಾಯಿ ಎಂದರೇನು?’ ಎಂಬ ವಿಷಯ ಇಟ್ಟುಕೊಂಡು ಅವನಿಗೆ ಒಂದು ಸುದೀರ್ಘ ಕಾಗದ ಬರೆದಿದ್ದೆ. ಅದಕ್ಕೂ ಅವನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ಮತ್ತೊಂದು ಅದ್ಭುತವಾದ ಕಥೆ ಸಿಕ್ಕಿತು. ಅದನ್ನು ಅವನೇ ಮಾಡಿದರೆ ಚೆನ್ನ ಎಂದುಕೊಂಡೆ. ಅದಕ್ಕೆ ನಿರ್ಮಾಪಕರೂ ಸಿಕ್ಕಿದ್ದರು. ಅವರೇ ಅವನ ಕಾಲ್‌ಷೀಟ್‌ ಪಡೆಯುವುದಾಗಿ ಹೇಳಿದರು. ಆಗಲೂ ಅವನ ಮನಸ್ಸು ಕರಗಲಿಲ್ಲ. ಅಮಿತಾಭ್‌ ಬಚ್ಚನ್‌ಗೂ ಅದೇ ಕಥೆ ಹೇಳಿದ್ದೆ. ಆ ಕಥೆಯನ್ನು ಮೆಚ್ಚಿಕೊಂಡು, ಸ್ಕ್ರಿಪ್ಟ್‌ ಮೇಲೆ ಅವರು ಸಹಿ ಹಾಕಿದರು. ಎರಡು ಮೂರು ಸಲ ಅಮಿತಾಭ್‌ ಆ ಸಿನಿಮಾ ಮಾಡಲು ಒಲವು ತೋರಿಸಿದರೂ, ಅವರಿಗೆ ಅಪಘಾತ ಆದದ್ದರಿಂದ ಸಿನಿಮಾ ಮಾಡುವ ಸಂದರ್ಭ ಒದಗಿಬರಲಿಲ್ಲ.

ಕೆಲವು ಸ್ಕ್ರಿಪ್ಟ್‌ಗಳು ಅದ್ಭುತವಾಗಿ ಆಗುತ್ತವೆ. ಆದರೆ, ಸಿನಿಮಾ ಮಾಡಲು ಸಾಧ್ಯವಾಗುವುದೇ ಇಲ್ಲ. ಈಗಲೂ ಸಿನಿಮಾ ಆಗದ ಆ ಸ್ಕ್ರಿಪ್ಟ್‌ ನನ್ನ ಬಳಿ ಇದೆ. ಜೀವದ ಗೆಳೆಯರಂತೆ ಇದ್ದ ನಾನು, ವಿಷ್ಣು ಹದಿಮೂರು–ಹದಿನಾಲ್ಕು  ವರ್ಷ ಮಾತೇ ಆಡಲಿಲ್ಲ. ಶ್ರೀರಾಮನ ವನವಾಸದ ಬದುಕಿನಂತೆ ಆಯಿತು ನಮ್ಮ ಸ್ಥಿತಿ. ಅಷ್ಟು ದೀರ್ಘಾವಧಿ ನಾವು ಮುನಿಸಿಕೊಳ್ಳದೇ ಇದ್ದಿದ್ದರೆ ಕನಿಷ್ಠ ಇನ್ನು ಹತ್ತು ಒಳ್ಳೆಯ ಸಿನಿಮಾಗಳನ್ನಾದರೂ ಮಾಡಿರುತ್ತಿದ್ದೆವು.

ಮುಂದಿನ ವಾರ: ಮತ್ತೆ ನಾವು ಮಾತನಾಡಿದೆವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT