ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯೋ? ವನ್ಯಜೀವಿ ಸಂರಕ್ಷಣೆಯೋ?

ಕಾಡುಪ್ರಾಣಿಗಳ ಉಳಿವಿಗಾಗಿ 35 ಕಿ.ಮೀ. ಹೆಚ್ಚು ದೂರ ಕ್ರಮಿಸಲು ಇಷ್ಟೆಲ್ಲ ರಾದ್ಧಾಂತ ಬೇಡ
Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರಸ್ತೆಗಳು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಜನರಿಗೆ ಸವಲತ್ತುಗಳನ್ನು ತಲುಪಿಸುವ ಬಹುಮುಖ್ಯ ವಾಹಿನಿಯಾಗಿವೆ. ಆರ್ಥಿಕ ಅಭಿವೃದ್ಧಿಯ ಪಥದಲ್ಲಿರುವ ಭಾರತ, ಇಂಡೊನೇಷ್ಯಾ, ಬ್ರೆಜಿಲ್‌ನಂತಹ ದೇಶಗಳಲ್ಲಿ ಇವು ಮುಖ್ಯ ಪಾತ್ರ ವಹಿಸುತ್ತವೆ. ಆದರೆ ಈ ದೇಶಗಳು ವನ್ಯಜೀವಿ ಮತ್ತು ಜೀವಿ ವೈವಿಧ್ಯದ ದೃಷ್ಟಿಯಿಂದ ಕೂಡ ಬಹು ಸಂಪನ್ನವಾಗಿವೆ. ಈ ಪರಿಸ್ಥಿತಿಯು ಆಫ್ರಿಕಾ ಖಂಡದ ಕಾಂಗೊ, ಗೆಬಾನ್, ನಮೀಬಿಯ ಮತ್ತಿತರ ಹಲವಾರು ದೇಶಗಳಿಗೂ ಅನ್ವಯಿಸುತ್ತದೆ.

ಏಷ್ಯಾ ಖಂಡದಲ್ಲಿ ಹೆಚ್ಚು ನೈಸರ್ಗಿಕ ಕಾಡಿರುವ ಕಾಂಬೋಡಿಯ, ಬಾರ್ನಿಯೋ ದೇಶಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪ್ರಪಂಚದಾದ್ಯಂತ 2050ರ ವರೆಗೆ ಸುಮಾರು 2.5 ಕೋಟಿ ಕಿಲೊ ಮೀಟರ್‌ನಷ್ಟು ರಸ್ತೆಗಳು ಹೊಸದಾಗಿ ಅಭಿವೃದ್ಧಿಯಾಗಲಿವೆ. ಇವುಗಳಲ್ಲಿ ಹತ್ತರಲ್ಲಿ ಒಂಬತ್ತರಷ್ಟು ರಸ್ತೆಗಳು ಜೀವವೈವಿಧ್ಯದಿಂದ ಶ್ರೀಮಂತವಾಗಿರುವ, ಸ್ಥಳೀಯವಾಗಿ ಮಾತ್ರ ಸಿಗುವ ಪ್ರಾಣಿ, ಸಸ್ಯ ಪ್ರಭೇದಗಳು ಹೆಚ್ಚಾಗಿರುವ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೇ ಆಗುತ್ತವೆ. ಇಲ್ಲಿಯೇ ಸಂದಿಗ್ಧ ಪ್ರಾರಂಭವಾಗುವುದು.

ಆರ್ಥಿಕ ಅಭಿವೃದ್ಧಿಗೆ ಹೆದ್ದಾರಿಗಳಂತಹ ಸೌಲಭ್ಯವು ಸಮಾಜ ಹಾಗೂ ಉದ್ಯಮದ ಮೂಲಭೂತ ವ್ಯವಸ್ಥೆಯಾಗುತ್ತದೆ. ಭಾರತ ಸುಮಾರು 47 ಲಕ್ಷ ಕಿಲೊ ಮೀಟರ್‌ಗಳಷ್ಟು ಉದ್ದದ ರಸ್ತೆ ಜಾಲವನ್ನು ಹೊಂದಿದೆ. ಪ್ರಪಂಚದಲ್ಲಿ ಈ ಪ್ರಮಾಣದ ರಸ್ತೆ ಜಾಲ  ಹೊಂದಿದ ದೇಶಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಇದರೊಡನೆ 2020ರಷ್ಟರಲ್ಲಿ ದೇಶದಲ್ಲಿರುವ ವಾಹನಗಳ ಸಂಖ್ಯೆ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಿ 45 ಕೋಟಿಗೆ ಏರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮೀಕ್ಷೆ ತಿಳಿಸಿದೆ.

ಕರ್ನಾಟಕದಲ್ಲಿ 75 ಸಾವಿರ ಕಿಲೊ ಮೀಟರ್‌ಗೂ ಹೆಚ್ಚಿನ ರಸ್ತೆ ಸಂಪರ್ಕ ಜಾಲ ಇದೆ.  ಇದರಲ್ಲಿ ಕೆಲವು ರಸ್ತೆಗಳು ಪ್ರಾಕೃತಿಕವಾಗಿ ಗುರುತರವಾಗಿರುವ ಪ್ರದೇಶಗಳು ಮತ್ತು ವನ್ಯಜೀವಿಗಳ ಮುಖ್ಯ ಆವಾಸಸ್ಥಾನಗಳಲ್ಲಿ ಸಾಗುತ್ತವೆ. ಬಹುಶಃ ಈ ರಸ್ತೆಗಳೆಲ್ಲವನ್ನೂ ಹಿಂದೆ ಎತ್ತಿನ ಗಾಡಿಯಂತಹ ಸಂಚಾರ ಮಾಧ್ಯಮಗಳಿಗಾಗಿ ನಿರ್ಮಿಸಲಾಗಿತ್ತು. ಸಮಾಜ ಬದಲಾದ ಹಾಗೆ ಈ ರಸ್ತೆಗಳೂ ಅಭಿವೃದ್ಧಿಯಾಗಿವೆ ಮತ್ತು ಅವುಗಳಲ್ಲಿ ವಾಹನಗಳ ದಟ್ಟಣೆ ಮತ್ತು ವೇಗ ಬದಲಾಗಿದೆ.

ಮುಂದಿನ ದಿನಗಳಲ್ಲಿ ಇದು ಶರವೇಗದಲ್ಲಿ ಹೆಚ್ಚಲಿದೆ. ಹಾಗಾಗಿ ಪ್ರಾಕೃತಿಕವಾಗಿ ಬಹು ಮುಖ್ಯವಾಗಿರುವ ಪ್ರದೇಶಗಳಲ್ಲಿ ಸಾಗುವ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ವನ್ಯಜೀವಿ ಮತ್ತು ನಿಸರ್ಗ ಸಂರಕ್ಷಣಾ ದೃಷ್ಟಿಯಿಂದ ಈಗಲೇ ಸಮರ್ಥವಾದ ಉತ್ತರಗಳನ್ನು ಕಂಡುಕೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುವ ಎರಡು ಹೆದ್ದಾರಿಗಳಲ್ಲಿ ರಾಜ್ಯದ ಹೈಕೋರ್ಟ್‌ ಆದೇಶದಂತೆ, ರಾತ್ರಿ ವೇಳೆ (ರಾತ್ರಿ 9ರಿಂದ  ಬೆಳಿಗ್ಗೆ 6ರವರೆಗೆ) ತುರ್ತು ವಾಹನಗಳನ್ನು (ಆಂಬುಲೆನ್‌್ಸ, ಅಗ್ನಿಶಾಮಕ ಇತರ ತುರ್ತು ಪರಿಸ್ಥಿತಿಯ ವಾಹನಗಳು) ಹೊರತುಪಡಿಸಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಅದರೊಡನೆ, ರಾತ್ರಿ ವೇಳೆ ಸಂಚಾರಕ್ಕೆ ಅಡ್ಡಿಯಾಗದಂತೆ ಕೇರಳದ ಉತ್ತರ ಭಾಗಕ್ಕೆ ಪರ್ಯಾಯ ರಸ್ತೆಯನ್ನು (ಹುಣಸೂರು- ಗೋಣಿಕೊಪ್ಪ- ಕುಟ್ಟ) ರಾಜ್ಯ ಸರ್ಕಾರ ಸುಮಾರು ₹50 ಕೋಟಿಗೂ ಹೆಚ್ಚು ವ್ಯಯಿಸಿ ಅಭಿವೃದ್ಧಿಪಡಿಸಿದೆ. ಹಾಗೆಯೇ, ಉತ್ತರ ಕೇರಳಕ್ಕೆ ಸಂಪರ್ಕ ಅಭಿವೃದ್ಧಿಪಡಿಸಲು ಮಡಿಕೇರಿ- ಕುಟ್ಟ, ಕೊಣನೂರು- ಮಾಕುಟ್ಟ ರಸ್ತೆಗಳನ್ನು ₹ 23 ಕೋಟಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ ಉತ್ತಮಗೊಳಿಸಲಾಗಿದೆ. ವನ್ಯಜೀವಿ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿರುವ ರಾಜ್ಯ  ಸರ್ಕಾರದ ನಡೆ ಪ್ರಶಂಸನೀಯ.

ಬುಧವಾರ ನಡೆದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಚರ್ಚೆಯಲ್ಲಿ ರಾಜ್ಯದ ನಿಲುವನ್ನು ಬದಲಾಯಿಸದ ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವರ ದಿಟ್ಟವಾದ ಸಮರ್ಥನೆ ಶ್ಲಾಘನೀಯ. ಈಗಾಗಲೇ ಈ ನಿಲುವು ಸುಪ್ರೀಂಕೋರ್ಟ್‌ ಸೇರಿದಂತೆ ಹಲವು ಭಾಗಗಳಿಂದ ಪ್ರಶಂಸೆಗೆ ಒಳಗಾಗಿದೆ. 2012ರಲ್ಲಿ  ಮಧ್ಯಪ್ರದೇಶದ ರಸ್ತೆಯ ವಿಚಾರವೊಂದರಲ್ಲಿ ಸುಪ್ರೀಂಕೋರ್ಟ್‌ ಬಂಡೀಪುರ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧವನ್ನು ಮೆಚ್ಚಿ, ಇತರ ರಾಷ್ಟ್ರೀಯ ಉದ್ಯಾನಗಳಲ್ಲೂ ಏಕೆ ಇದನ್ನು ಅಳವಡಿಸಬಾರದು ಎಂದು ಕೇಳಿತ್ತು.

ಆದರೆ ನಿಷೇಧದ ಈ ನಿಲುವಿನಿಂದ ಕೆಲವರಿಗೆ ಅಥವಾ ಕೆಲವು ಭಾಗದ ಜನರಿಗೆ ನಿಸ್ಸಂಶಯವಾಗಿಯೂ ತೊಂದರೆಯಾಗಬಹುದು. ಉದಾಹರಣೆಗೆ, ತಮಿಳುನಾಡಿನ ಊಟಿ ಕಡೆಗೆ ಹೋಗುವ ಪ್ರವಾಸಿಗರು ಹಾಗೂ ಪ್ರವಾಸೋದ್ಯಮದಲ್ಲಿ ತೊಡಗಿರುವವರಿಗೆ ಸ್ವಲ್ಪಮಟ್ಟಿಗೆ ತೊಂದರೆಯಾಗುತ್ತದೆ. ಆದರೆ ಪ್ರವಾಸಿಗರು ಕೇವಲ ಊಟಿಗೆ ಮಾತ್ರ ಹೋಗುವುದಿಲ್ಲ, ಹಾದಿ ಮಧ್ಯದ ಬಂಡೀಪುರವನ್ನು ಕೂಡ ತಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸುತ್ತಾರೆ.

ಬಂಡೀಪುರದ ಸಂರಕ್ಷಣೆಯಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಆದಾಯವಾಗುತ್ತದೆ. ತಕ್ಷಣದಲ್ಲಿ ಇಂತಹ ನಿಲುವುಗಳು ಜನರಿಗೆ ತ್ರಾಸದಾಯಕ ಎನಿಸಿದರೂ ದೂರ ದೃಷ್ಟಿಯಿಂದ ಬಹುಮುಖ್ಯ. ನಮ್ಮ ದ್ವಂದ್ವ ನಿಲುವನ್ನು ಪ್ರಶ್ನಿಸುವ ಒಂದು ಚಿಕ್ಕ ಗುಂಪು ಸಹ ಸಮಾಜದಲ್ಲಿ ಇರಬಹುದು ಎಂಬುದನ್ನು ಮರೆಯಬಾರದು. 1972ರಲ್ಲಿ ಹುಲಿ ಯೋಜನೆಯನ್ನು ಅಳವಡಿಸಲು ಆಯ್ದುಕೊಂಡ ದೇಶದ ಒಂಬತ್ತು ವನ್ಯಜೀವಿಧಾಮಗಳಲ್ಲಿ ಬಂಡೀಪುರವೂ ಒಂದು.

ಆ ನಂತರ ಈ ಪ್ರದೇಶವನ್ನು ಹುಲಿ ಸಂರಕ್ಷಣೆಗೆ ಪೂರಕವಾಗುವಂತೆ, ಇಲ್ಲಿದ್ದ ಹಲವಾರು ಕುಟುಂಬಗಳನ್ನು ಸ್ಥಳಾಂತರಿಸಲಾಯಿತು.  ಅವರಲ್ಲಿ ಕೆಲವರಿಗೆ ಈಚೆಗಷ್ಟೇ (2007ರಲ್ಲಿ) ಸೂಕ್ತ ಪುನರ್ವಸತಿ ಮತ್ತು ಸೌಲಭ್ಯಗಳನ್ನು ನಾಗರಹೊಳೆ ಕಾಡಿನ ಹತ್ತಿರದ ಸೊಳ್ಳೆಪುರದಲ್ಲಿ ಒದಗಿಸಲಾಗಿದೆ. ಈ ತರಹದ ಕುಟುಂಬಗಳು, ‘ನಮ್ಮನ್ನು ಕಾಡಿನಿಂದ ಹೊರ ಹಾಕುತ್ತೀರ. ಆದರೆ ಅದೇ ಪ್ರವಾಸೋದ್ಯಮ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಯಾವ ನ್ಯಾಯ’ ಎಂದು ಕೇಳಬಹುದು.

ಹೌದು, ಕಾಡಿನಲ್ಲಿ ಜನ ನೆಲೆಸಿದ್ದರೆ ಯಾವ ರೀತಿಯ ತೊಂದರೆಯಾಗುತ್ತದೋ ಹೆದ್ದಾರಿ ನಿರ್ಮಿಸಿ, ವಾಹನಗಳಿಗೆ ಅವಕಾಶ ನೀಡುವುದು  ಅಷ್ಟೇ ಅಥವಾ ಬಹುಶಃ ಅದಕ್ಕಿಂತಲೂ ಹೆಚ್ಚು ತೊಂದರೆಯನ್ನು ಉಂಟು ಮಾಡುತ್ತದೆ. ಹಾಗೆಯೇ, ನನ್ನಂಥ ನಗರವಾಸಿಗಳೇ ಹೆಚ್ಚಾಗಿ ಉಪಯೋಗಿಸುವ ಈ ಹೆದ್ದಾರಿಗಳನ್ನು ರಾತ್ರಿ ವೇಳೆ ಮುಚ್ಚಿದ ಕಾರಣ, ಸುಮಾರು 35 ಕಿಲೊ ಮೀಟರ್ ಹಾದಿಯನ್ನು ಹೆಚ್ಚಾಗಿ ಕ್ರಮಿಸಿದರೆ ನಮ್ಮ ಮೇಲೆ ಆಗುವ ಆರ್ಥಿಕ ಪರಿಣಾಮ ಬಹು ಚಿಕ್ಕದು.

ಪ್ರತಿದಿನ ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥ ಇನ್ನಿತರ ವಸ್ತುಗಳ ಬೆಲೆ ಹೆಚ್ಚಾದಾಗ ನಾವು ಅದನ್ನು ಭರಿಸಲು ಒಪ್ಪಿಕೊಳ್ಳುತ್ತೇವೆ. ವನ್ಯಜೀವಿ ಸಂರಕ್ಷಣೆಗಾಗಿ 35 ಕಿಲೊ ಮೀಟರ್ ಹೆಚ್ಚು ಕ್ರಮಿಸಲು ಯಾಕೆ ಕೆಲ ಜನ ಇಷ್ಟೆಲ್ಲ ರಾದ್ಧಾಂತ ಮಾಡುತ್ತಾರೋ ತಿಳಿಯುವುದಿಲ್ಲ. ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಐದು ಬಾರಿ ಕರ್ನಾಟಕಕ್ಕೆ ಇದೇ ವಿಷಯವನ್ನು ಚರ್ಚಿಸಲು ಕರೆದುಕೊಂಡು ಬರಬೇಕಾದರೆ, ರಾತ್ರಿ ನಿಷೇಧದಿಂದ ಪರಿಣಾಮವಾಗಿದೆಯೆಂದು ವಾದಿಸುವ ಕೆಲವರು ಎಷ್ಟು ಪ್ರಬಲರಾಗಿರಬೇಕು? ಇವರಂತೂ ಕೂಲಿ ಕಾರ್ಮಿಕರಾಗಿರಲು ಸಾಧ್ಯವೇ ಇಲ್ಲ.

ಹಾಗೆಯೇ, ವನ್ಯಜೀವಿ ಸಂರಕ್ಷಣೆಯಿಂದ ಪ್ರವಾಸೋದ್ಯಮದಂತಹ ಪ್ರಯೋಜನಗಳನ್ನು ಪಡೆಯುವುದು ಬಹು ಹೆಚ್ಚಾಗಿ ನಗರವಾಸಿಗಳು. ಆದರೆ ಸಂರಕ್ಷಣೆಯಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾದಾಗ ಬೆಳೆ ಹಾನಿ, ಪ್ರಾಣಹಾನಿ ಹಾಗೂ ಇನ್ನಿತರ ಪರೋಕ್ಷ ಪರಿಣಾಮಗಳಾಗುವುದು ಮತ್ತು ಅದರ ವೆಚ್ಚವನ್ನು ಭರಿಸುವುದು ಕಾಡಿನ ಸುತ್ತಮುತ್ತಲಿರುವ ರೈತರು. ಹಾಗಾಗಿ ವನ್ಯಜೀವಿ, ಕಾಡಿನ ಸಂರಕ್ಷಣೆಯ ಬೆಲೆಯನ್ನು ನಗರವಾಸಿಗಳು, ಉದ್ಯಮಿಗಳು, ವ್ಯಾಪಾರಿಗಳು ಸ್ವಲ್ಪ ಮಟ್ಟಿಗಾದರೂ ಭರಿಸುವುದು ನ್ಯಾಯಯುತ.

ವಾಹನಗಳ ರಾತ್ರಿ ನಿಷೇಧದಲ್ಲಿ ವ್ಯಾಪಾರಿಗಳಿಗೆ ಅನುಕೂಲವಾಗುವ ಹಾಗೆ ಸಮರ್ಥನೀಯ ಅಂಶಗಳಿವೆ. ಕೇರಳದೊಡನೆ ತರಕಾರಿ ಮತ್ತು ಹಣ್ಣಿನ ವ್ಯಾಪಾರಕ್ಕೆ ಅನನುಕೂಲವಾಗದಂತೆ ರಸ್ತೆಯನ್ನು ರಾತ್ರಿ 9 ಗಂಟೆಗೆ ಮುಚ್ಚಲಾಗಿದೆ. ತರಕಾರಿ ಮತ್ತು ಹಣ್ಣಿನ ವ್ಯಾಪಾರದ ಬಹುಮುಖ್ಯ ಸ್ಥಳಗಳಾದ ಮೈಸೂರು ಮತ್ತು ಗುಂಡ್ಲುಪೇಟೆಯಿಂದ ಹೊರಡುವ ವಾಹನಗಳು ಬಂಡೀಪುರ ಅರಣ್ಯ ವ್ಯಾಪ್ತಿಯನ್ನು ಸಂಜೆ ಎಂಟರ ಮುಂಚೆಯೇ ದಾಟುತ್ತವೆ.

ಹಾಗೆಯೇ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಾಜ್ಯ ಸಾರಿಗೆ ಸಂಸ್ಥೆಯ 16 ಬಸ್‌ಗಳ ಸಂಚಾರಕ್ಕೆ ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸಹಾಯವಾಗುವಂತೆ ಅವಕಾಶ ಮಾಡಿಕೊಡಲಾಗಿದೆ. ಆದರೆ ವಿಹಾರಕ್ಕಾಗಿ ಹೋಗುವ ಪ್ರವಾಸಿಗರು, ಸಾಮಾನು ಸರಂಜಾಮುಗಳನ್ನು ಅಗತ್ಯವಾಗಿ ರಾತ್ರಿ ವೇಳೆಯೇ ಸಾಗಿಸುವ ಅನಿವಾರ್ಯ ಇರುವವರು  ತಮ್ಮ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಿಸಿಕೊಳ್ಳಬೇಕಾಗಿದೆ.

ಈಗಾಗಲೇ ಜನಸಂಖ್ಯೆಯ ವಿಷಯದಲ್ಲಿ ನಾವು ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಜನಸಂಖ್ಯೆ ಹೆಚ್ಚಳ ಮತ್ತು ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡ ಹಾಗೆ ವಾಹನಗಳ ದಟ್ಟಣೆಯೂ ಹೆಚ್ಚುತ್ತಿದೆ. ದೇಶದ ವಾಹನಗಳ ದಟ್ಟಣೆಯು ವಾರ್ಷಿಕವಾಗಿ ಶೇಕಡ 12ರಷ್ಟು ಏರುತ್ತಿದೆ. ಹೀಗೆ ಏರುತ್ತಿರುವ ವಾಹನಗಳ ಸಂಖ್ಯೆಯನ್ನು ನಮ್ಮ ಕಾಡುಗಳು ಮತ್ತು ವನ್ಯಜೀವಿಗಳು ತಾಳಿಕೊಳ್ಳಲಾರವು. ದಟ್ಟಣೆಯೊಡನೆ ಮುಂದುವರಿಯುತ್ತಿರುವ ತಾಂತ್ರಿಕತೆಯಿಂದ ಈಗಿನ ವಾಹನಗಳ ಚಲನೆಯ ವೇಗ ಹೆಚ್ಚಿದೆ.

ಈ ತಾಂತ್ರಿಕತೆ ಮತ್ತು ದಟ್ಟಣೆ ನಮ್ಮ ವನ್ಯಜೀವಿಗಳಿಗೆ ಪ್ರಾಣಾಂತಿಕವಾಗಿದೆ. ಅದರಲ್ಲೂ ಶರವೇಗದಲ್ಲಿ ಚಲಿಸುವ ವಾಹನಗಳಿಂದ ತಪ್ಪಿಸಿಕೊಳ್ಳುವಷ್ಟು ಚಾಕಚಕ್ಯತೆ, ರಸ್ತೆ ದಾಟಲು ಪ್ರಯತ್ನಿಸುವ ಎಳೆಯ ಪ್ರಾಣಿಗಳಿಗೆ ಇರುವುದಿಲ್ಲ. ನಮ್ಮ ಎಳೆಯ ಮಕ್ಕಳನ್ನು ರಸ್ತೆ ದಾಟಿಸಲು ನಾವೇ ಎಷ್ಟು ಹರಸಾಹಸ ಮಾಡುತ್ತೇವೆಂಬುದು ಗೊತ್ತಿರುವ ವಿಷಯ. ಹೀಗಿದ್ದಾಗ ಪ್ರಕಾಶಮಾನವಾದ ಬೆಳಕಿರುವ, ಶರವೇಗದಲ್ಲಿ ಓಡುವ ವಾಹನಗಳಿಂದ ಕೂಡಿದ ರಸ್ತೆಗಳನ್ನು ದಾಟಲು ಪ್ರಯತ್ನಿಸುವ ಈ ಮೂಕಪ್ರಾಣಿಗಳ ಸ್ಥಿತಿಯನ್ನು ನಾವು ಊಹಿಸಿಕೊಳ್ಳಬೇಕು.

‘ಸಮಾಜದಲ್ಲಿ ಒಳ್ಳೆಯ ಕೆಲಸವೊಂದು ಆಗಬೇಕಾದಾಗ ಎಲ್ಲರಿಗೂ ಸಮಾಧಾನವಾದ ಉತ್ತರಗಳನ್ನು ಹುಡುಕುವುದು ಸರ್ಕಾರಕ್ಕೆ ಕಷ್ಟ. ಕಾಡು ಉಳಿಸುವುದು ಯಾರಿಗೂ ಬೇಕಾಗಿಲ್ಲ. ಆದರೂ ಸಮಾಜದ ಹಿತದೃಷ್ಟಿಯಿಂದ ಮತ್ತು ಮುಂದಾಲೋಚನೆಯಿಂದ ನಾವು ಕೆಲವು ಸಂರಕ್ಷಣಾ ನಿಲುವುಗಳನ್ನು ಬೆಂಬಲಿಸುತ್ತೇವೆ’ ಎಂದು ಹಿರಿಯ ರಾಜಕಾರಣಿಯೊಬ್ಬರು ಬಂಡೀಪುರದ ಹೆದ್ದಾರಿಯ ವಿಚಾರದಲ್ಲಿ ನನಗೆ ಹೇಳಿದ ನೇರ ಮಾತು ಈ ಸಂದರ್ಭಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ.

ಹೌದು, ಎಲ್ಲರಿಗೂ ಒಪ್ಪಿಗೆಯಾಗುವ ವನ್ಯಜೀವಿ ಸಂರಕ್ಷಣಾ ನೀತಿಗಳನ್ನು ತರುವುದು ಬಹು ಕಷ್ಟ.  ಆದರೂ ಬಂಡೀಪುರದಂತಹ ಉತ್ತಮ ನೈಸರ್ಗಿಕ ಪ್ರದೇಶಗಳಿಂದ ಅಭಿವೃದ್ಧಿಯನ್ನು ದೂರವಿಡುವುದು ಬಹು ಮುಖ್ಯ. ಇಂತಹ ಸ್ಥಳಗಳಿಂದ ರಾತ್ರಿ 9 ಗಂಟೆಗಳ ಕಾಲ (ತುರ್ತು ವಾಹನಗಳನ್ನು ಬಿಟ್ಟು) ಇರುವ ನಿರ್ಬಂಧದಿಂದ, ದೇಶದ ಅಥವಾ ಸ್ಥಳೀಯವಾಗಿ ಆರ್ಥಿಕತೆಯ ಮೇಲೆ ಹೆಚ್ಚೇನೂ ಪರಿಣಾಮವಾಗುವುದಿಲ್ಲ. ಕೆಲ ಸಾಮಾಜಿಕ ಕಾರ್ಯಗಳಿಗೆ ಇಂತಹ ನಿಲುವು ಅತ್ಯಗತ್ಯ.

ಹಿಂದೆ ವಿಧಾನಸೌಧಕ್ಕೆ ಹೊಂದಿಕೊಂಡ ರಸ್ತೆಯಲ್ಲಿ (ಈಗಿನ ವಿಕಾಸಸೌಧ ಮತ್ತು ವಿಧಾನಸೌಧದ ಮಧ್ಯೆ) ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿತ್ತು. ಆದರೆ ಸುರಕ್ಷತೆ ದೃಷ್ಟಿಯಿಂದ  ಸಾರ್ವಜನಿಕ ವಾಹನ ಸಂಚಾರವನ್ನು ಈಗ ನಿಷೇಧಿಸಲಾಗಿದೆ. ಹಾಗೆಯೇ, ತಾಜ್‌ಮಹಲ್ ಅಥವಾ ಹಂಪಿಯ ದೇವಸ್ಥಾನಗಳಲ್ಲಿ ನಾವು ಕೆಲವು ನಿರ್ಬಂಧಗಳನ್ನು ಅವುಗಳ ಸಂರಕ್ಷಣಾ ದೃಷ್ಟಿಯಿಂದ ಅಳವಡಿಸಿದ್ದೇವೆ.

ಇವು ರಾಷ್ಟ್ರದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಚಿಹ್ನೆಗಳು. ಅವುಗಳನ್ನು ಕೆಲ ಖಾಸಗಿ ಉದ್ಯಮಿಗಳ ಹಿತದೃಷ್ಟಿಯಿಂದ ಹಿಂತೆಗೆಯಲಾಗುವುದಿಲ್ಲ. ಹಾಗೆಯೇ, ಬಂಡೀಪುರದಂತಹ ಪ್ರದೇಶಗಳು ನಮ್ಮ ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತನ್ನು ಎತ್ತಿ ತೋರುವ ರಾಷ್ಟ್ರೀಯ ಸ್ವತ್ತುಗಳು. ಇದನ್ನು ಸಂರಕ್ಷಿಸಲು ಬದ್ಧತೆ ತೋರುವುದು ಅಗತ್ಯ.  ರಾಜ್ಯ ಸರ್ಕಾರದ ಈಗಿನ ನಿಲುವನ್ನು ಬದಲಾವಣೆ ಇಲ್ಲದೇ ಮುಂದುವರಿಸುವುದು ಸೂಕ್ತ.
(ಲೇಖಕ ವನ್ಯಜೀವಿ ವಿಜ್ಞಾನಿ)
editpage feedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT