ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕನ್ನಡವಷ್ಟೇ ಬರುತ್ತೆ!

ಗುರು ಪಿ.ಎಸ್.
Published 27 ಮಾರ್ಚ್ 2024, 23:10 IST
Last Updated 27 ಮಾರ್ಚ್ 2024, 23:10 IST
ಅಕ್ಷರ ಗಾತ್ರ

‘ಇದು ಆರ್‌ಸಿಬಿಯ ಹೊಸ ಅಧ್ಯಾಯ...’

‘ನೋಡು, ನೋಡು ನಮ್ ಕೊಹ್ಲಿ ಎಷ್ಟ್ ಚೆನ್ನಾಗಿ ಕನ್ನಡದಲ್ಲಿ ಮಾತಾಡ್ತಿದಾನೆ’ ಟಿ.ವಿ. ನೋಡುತ್ತಾ ಖುಷಿಯಿಂದ ಹೇಳ್ದೆ.

‘ಅದರಲ್ಲೇನ್ ವಿಶೇಷ?’ ಅಷ್ಟೇ ನಿರುತ್ಸಾಹ
ದಲ್ಲಿ ಕೇಳಿದಳು ಹೆಂಡತಿ.

‘ಕೊಹ್ಲಿ ದೆಹಲಿಯವನು ಕಣಮ್ಮ... ಆದರೂ ಬೆಂಗಳೂರು ಮತ್ತು ಕನ್ನಡ ಅಂದ್ರೆ ಎಷ್ಟ್ ಪ್ರೀತಿ ನೋಡು ಅವನಿಗೆ. ನಮ್ ಆರ್‌ಸಿಬಿ ಮಹಿಳಾ ಟೀಂ ಕ್ಯಾಪ್ಟನ್ ಸ್ಮೃತಿ ಮಂದಾನ ಕೂಡ ‘ಈ ಸಲ ಕಪ್ ನಮ್ದು’ ಅಂತ ಹೇಳಲಿಲ್ವ. ಅವಳು ಮಹಾರಾಷ್ಟ್ರದವಳು. ನಮ್ ಕನ್ನಡ ಈಗ ಬೇರೆ ರಾಜ್ಯದವರ ಬಾಯಲ್ಲೂ ಹೇಗೆ ರಾರಾಜಿಸ್ತಿದೆ ನೋಡು’.

‘ಸಾಕ್ ಸುಮ್ನಿರಿ, ಎಲೆಕ್ಷನ್ ಬಂದಾಗಲೆಲ್ಲ ನಾನೂ ನೋಡಲ್ವ. ದೆಹಲಿ ರಾಜಕಾರಣಿಗಳು ಇಲ್ಲಿಗೆ ಬಂದು ‘ಕನ್ನಡ್ ಜನತೆಗೆ ನಮಷ್ಕಾರಘಳು’ ಅನ್ನೋದನ್ನ’ ಅಷ್ಟೇ ಬೇಸರದಲ್ಲಿ ಹೇಳಿದಳು ಹೆಂಡತಿ.

‘ನೀನು ಅತೃಪ್ತ ಆತ್ಮ ಇದ್ದಂಗೆ ನೋಡು. ಕನ್ನಡ ಬಾರದವರೂ ಒಂದೆರಡು ವಾಕ್ಯ ಕಲಿತು ಹೇಳಿದರೂ ಖುಷಿಯಿಲ್ಲ ನಿಂಗೆ’.

‘ಒಂದೆರಡು ವಾಕ್ಯ ಕನ್ನಡದಲ್ಲಿ ಮಾತನಾಡಿಸೋದಲ್ಲ ರೀ, ದೆಹಲಿಯಲ್ಲಿ ನಮ್ ಕನ್ನಡ ಮೊಳಗಬೇಕು, ಅದು ಕನ್ನಡ ಪ್ರೇಮ, ಧರ್ಮ’.

‘ಮೊಳಗಿಸೋಣ ಬಿಡು’.

‘ಏನ್ ಮೊಳಗಿಸ್ತೀರಾ, ಕನ್ನಡವನ್ನ ಮುಳುಗಿಸೋಕೆ ನಿಂತಿದಾರಲ್ಲ’.

‘ಯಾಕೆ, ಏನಾಯ್ತು?’ ಅಚ್ಚರಿಯಿಂದ ಕೇಳಿದೆ.

‘ಲೋಕಸಭಾ ಎಲೆಕ್ಷನ್‌ನಲ್ಲಿ ಸ್ಪರ್ಧಿಸಿರೋರಲ್ಲಿ ಯಾರಿಗೆ ಹಿಂದಿ, ಇಂಗ್ಲಿಷ್ ಬರಲ್ವೋ ಅವರನ್ನ ಸೋಲಿಸಿ ಅಂತ ರಾಜಕೀಯದವರೇ ಹೇಳ್ತಿದಾರೆ. ಇನ್ನೇನ್ ಇವರು ದೆಹಲಿಯಲ್ಲಿ ಕನ್ನಡ ಮೊಳಗಿಸ್ತಾರೆ’ ಹೆಂಡತಿ ಕೋಪ ಕಡಿಮೆಯಾಗಿರಲಿಲ್ಲ.

‘ಎಲೆಕ್ಷನ್‌ನಲ್ಲಿ ಗೆಲ್ಲೋದಕ್ಕೆ ಏನೋ ಹೇಳಿರ್ತಾರೆ ಬಿಡಮ್ಮ’.

‘ಕನ್ನಡ ಸೋತರೆ ಕರ್ನಾಟಕವೇ ಸೋತಂಗೆ ಅಲ್ವೇನ್ರೀ, ಕರ್ನಾಟಕ ಸೋತರೆ ನಾವೇ ಸೋತಂತೆ ಅಲ್ವಾ...’ ಹೆಂಡತಿಯ ಕನ್ನಡ ಭಾಷಣ ಮುಗಿಯಲೇ ಇಲ್ಲ.

‘ಇದು ನವೆಂಬರ್ ಅಲ್ವಲ್ಲ. ನನ್ನ ಹೆಂಡ್ತಿಗೆ ಯಾಕೀಗ ಕನ್ನಡ ಪ್ರೇಮ ಇಷ್ಟು ಹೆಚ್ಚಾಗಿಬಿಟ್ಟಿದೆ’ ಎಂದು ಮನದಲ್ಲೇ ಅಂದುಕೊಂಡು ಮನೆಯಿಂದ ಹೊರಗೆ ಕಾಲಿಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT