ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ

Last Updated 12 ಆಗಸ್ಟ್ 2022, 23:00 IST
ಅಕ್ಷರ ಗಾತ್ರ

ಮುಖ್ಯಮಂತ್ರಿಗೆ ಉತ್ತರದಾಯಿಯಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಲು ಸೂಚಿಸಿದೆ. ಲೋಕಾಯುಕ್ತ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವ ಅಧಿಕಾರವನ್ನು ಪುನಃ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ನೀಡಿರುವ ಈ ಅದೇಶವು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು 1984ರಲ್ಲಿ ರೂಪಿಸಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆಯು ದೇಶಕ್ಕೆ ಮಾದರಿಯನ್ನು ಹಾಕಿಕೊಟ್ಟಿತ್ತು. ಆಡಳಿತಾಂಗದಲ್ಲಿ, ಶಾಸಕಾಂಗದಲ್ಲಿ ಇರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹಾಗೂ ಜನರ ಬವಣೆ ಹೆಚ್ಚಿಸುವ ದುರಾಡಳಿತಕ್ಕೆ ಲಗಾಮು ಹಾಕುವುದು ಲೋಕಾಯುಕ್ತ ಸ್ಥಾಪನೆಯ ಹಿಂದಿದ್ದ ಸದಾಶಯ. ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರು ಲೋಕಾಯುಕ್ತರಾಗುವವರೆಗೆ ಇಂತಹದೊಂದು ವ್ಯವಸ್ಥೆ ಇದೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ಜನರ ಸಂಕಷ್ಟ ನಿವಾರಣೆಗೆ ಸ್ಪಂದಿಸಬೇಕಾದ ಸರ್ಕಾರಿ ಸಂಸ್ಥೆಗಳಲ್ಲಿ ತುಂಬಿದ್ದ ಭ್ರಷ್ಟಾಚಾರವನ್ನು, ಭ್ರಷ್ಟರನ್ನು ವೆಂಕಟಾಚಲ ಅವರು ಬಯಲಿಗೆ ತಂದು ನಿಲ್ಲಿಸಿದ್ದರು.

ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾದ ಬಳಿಕ, ಕಾಯ್ದೆಯ ನೈಜಶಕ್ತಿಯ ದರ್ಶನವಾಯಿತು. ಅಕ್ರಮಗಳ ಬೆನ್ನುಹತ್ತಿದ ಲೋಕಾಯುಕ್ತ ತನಿಖಾ ತಂಡವು ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಭ್ರಷ್ಟರ ಪಾಲಿಗೆ ದುಃಸ್ವಪ್ನದ ರೀತಿ ಕಾಡಿತ್ತು. ಹೀಗಾಗಿ, ಅಂದು ಮುಖ್ಯಮಂತ್ರಿ ಯಾಗಿದ್ದವರು ಮತ್ತು ಸಚಿವರಾಗಿದ್ದವರು ಜೈಲಿನ ಕಂಬಿ ಎಣಿಸಬೇಕಾಯಿತು. ಸಂತೋಷ ಹೆಗ್ಡೆಯವರ ನಂತರ 2013ರಲ್ಲಿ ನ್ಯಾಯಮೂರ್ತಿ ಭಾಸ್ಕರರಾವ್‌ ಅವರುಈ ಹುದ್ದೆಗೆ ಬಂದರು. ಅವರ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಮೇಲಿನ ಗೌರವಕ್ಕೆ ದೊಡ್ಡ ರೀತಿಯಲ್ಲಿ ಧಕ್ಕೆಯಾಯಿತು.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಲೋಕಾಯುಕ್ತ ಕಚೇರಿ ಮತ್ತು ಅಧಿಕೃತ ನಿವಾಸವನ್ನೇ ಅಕ್ರಮಗಳಿಗೆ ಬಳಸಿಕೊಂಡ ಆರೋಪಕ್ಕೆ ಗುರಿಯಾದರು. ಭ್ರಷ್ಟಾಚಾರವನ್ನು ನಿಗ್ರಹಿಸಲು ಸ್ಥಾಪನೆಯಾದ ಸಂಸ್ಥೆಯೇ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗುವಂತಹ ಸನ್ನಿವೇಶವು ಆಗ ಸೃಷ್ಟಿಯಾಗಿತ್ತು.

ಆಗ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಲೋಕಾಯುಕ್ತಕ್ಕೆ ಅಂಟಿದ್ದ ಕಳಂಕವನ್ನೇ ಮುಂದಿಟ್ಟುಕೊಂಡು, ಅದಕ್ಕಿದ್ದ ಪೊಲೀಸ್ ಬಲವನ್ನು ಕಸಿದುಕೊಳ್ಳಲಾಯಿತು. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿಯನ್ನು ರಚಿಸಲಾಯಿತು. ಸದನದಲ್ಲಿ ಚರ್ಚೆಯನ್ನೂ ಮಾಡದೆ ಕೇವಲ ಒಂದು ಅಧಿಸೂಚನೆ ಮೂಲಕ ಇದನ್ನು ಸ್ಥಾಪಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಲೋಕಾಯುಕ್ತರ ವಿರುದ್ಧವೇ ಭ್ರಷ್ಟಾಚಾರದ ಆರೋಪಗಳಿದ್ದ ಹೊತ್ತಿನಲ್ಲಿ, ಎಸಿಬಿ ರಚನೆಯ ಹಿಂದಿದ್ದ ರಾಜಕೀಯ ಲೆಕ್ಕಾಚಾರವು ಹೆಚ್ಚು ಚರ್ಚೆಗೆ ಬರಲಿಲ್ಲ. ಶೋಧ– ಟ್ರ್ಯಾಪ್‌– ದಾಳಿಯ ಅಧಿಕಾರವನ್ನು ಲೋಕಾಯುಕ್ತದಿಂದ ಕಿತ್ತುಕೊಂಡು ಅದನ್ನು ಹಲ್ಲಿಲ್ಲದ ಹಾವಿನಂತಾಗಿಸಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆ. ಸರ್ಕಾರದ ಮೂಗಿನಡಿಯೇ ಕೆಲಸ ಮಾಡುವ ಎಸಿಬಿ, ಸರ್ಕಾರಕ್ಕೆ ಆಗದವರ ವಿರುದ್ಧವಷ್ಟೇ ಕತ್ತಿ ಮಸೆಯುತ್ತದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಜಮೀರ್ ಅಹಮದ್ ಖಾನ್ ಅವರನ್ನು ಬಿಟ್ಟರೆ, ಆರು ವರ್ಷಗಳಲ್ಲಿ ಶಾಸಕ–ಸಚಿವರ ಪೈಕಿ ಯಾರೊಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ನಿದರ್ಶನವೇ ಇಲ್ಲ. ಆಳುವ ಪಕ್ಷದ ತೊತ್ತಿನಂತೆ ಕೆಲಸ ಮಾಡುತ್ತಿದ್ದ ಎಸಿಬಿಯನ್ನು ರದ್ದುಪಡಿಸಬೇಕು ಎಂಬ ಕೂಗಿಗೆ ಹೈಕೋರ್ಟ್‌, ನ್ಯಾಯದ ಠಸ್ಸೆ ಒತ್ತಿದೆ. ಇದು, ಜನರ ಆಶೋತ್ತರಗಳಿಗೆ ಸಂದ ಜಯವೂ ಹೌದು.

2018ರ ವಿಧಾನಸಭೆ ಚುನಾವಣೆಯ ವೇಳೆ ವಿರೋಧ ಪಕ್ಷವಾಗಿದ್ದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ, ತಾವು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಎಸಿಬಿ ರದ್ದುಪಡಿಸಿ, ಲೋಕಾಯುಕ್ತ ಬಲಪಡಿಸುವ ವಾಗ್ದಾನ ನೀಡಿದ್ದರು. ಮೈತ್ರಿ ಸರ್ಕಾರದ ಮೂಲಕ ಜೆಡಿಎಸ್‌ ಒಂದು ವರ್ಷ, ಬಿಜೆಪಿಯು ಸ್ವತಂತ್ರವಾಗಿ ಮೂರು ವರ್ಷ ಆಳ್ವಿಕೆ ನಡೆಸಿದರೂ ಅದು ಕಾರ್ಯಗತವಾಗಲೇ ಇಲ್ಲ. ಕಾಮಗಾರಿ ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್‌, ನೇಮಕಾತಿಯಲ್ಲಿ ಭ್ರಷ್ಟಾಚಾರದಂತಹ ಆಪಾದನೆಗಳು ಬಿಜೆಪಿ ನೇತೃತ್ವದ ಸರ್ಕಾರವನ್ನು ಸುತ್ತಿಕೊಂಡಿವೆ. ಇಂತಹ ಹೊತ್ತಿನಲ್ಲಿ ಹೈಕೋರ್ಟ್‌ ಆದೇಶ ಹೊರಬಿದ್ದಿದೆ.

ಆದರೆ, ಲೋಕಾಯುಕ್ತವನ್ನು ಬಲಪಡಿಸುವುದು ರಾಜ್ಯದ ಮೂರೂ ಪ್ರಬಲ ಪಕ್ಷಗಳಿಗೆ ಅಪಥ್ಯವಾಗಿರುವ ವಿಷಯ. ಎಸಿಬಿಯನ್ನು ರದ್ದುಪಡಿಸಿದ ನ್ಯಾಯಪೀಠವು ಲೋಕಾಯುಕ್ತ ಬಲವರ್ಧನೆಗೆ ನೀಡಿರುವ ಸಲಹೆಗಳನ್ನು ಸರ್ಕಾರವು ಪರಿಗಣಿಸಬೇಕು. ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯವರ ಜತೆ ಸಮಾಲೋಚಿಸಿ, ಲೋಕಾಯುಕ್ತ ಬಲಗೊಳಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಲಿ. ಭ್ರಷ್ಟಾಚಾರ ನಿವಾರಣೆಗೆ ಸರ್ಕಾರ ಬದ್ಧ ಎಂದು ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಲೋಕಾಯುಕ್ತಕ್ಕೆ ಬಲ ಕೊಟ್ಟು ತಮ್ಮ ಹಾಗೂ ಪಕ್ಷದ ಬದ್ಧತೆಯನ್ನು ಪ್ರದರ್ಶಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT