ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು| ಸ್ನೇಹದ ಸಿರಿಗನ್ನಡಿ

Published 5 ಮಾರ್ಚ್ 2024, 21:57 IST
Last Updated 5 ಮಾರ್ಚ್ 2024, 21:57 IST
ಅಕ್ಷರ ಗಾತ್ರ

ಹೊಟ್ಟೆಕಿಚ್ಚಿನವನಿಗೆ ಎಂದೂ ಸುಖದ ನಿದ್ರೆ ಇರುವುದಿಲ್ಲ. ಬೇರೆಯವ ಸಂತಸ ಕಂಡು ಕರುಬುವ ಇವನಿಗೆ ನೆಮ್ಮದಿ ಎಂಬುದು ಮೊದಲೇ ಇಲ್ಲ. ಅವನಂತೆ ನಾನೂ ಯಶಸ್ವಿಯಾಗಬೇಕು ಎಂಬ ಹಟ, ಛಲಗಳಿಲ್ಲ. ದುರಹಂಕಾರಿ ಆದವನಿಗೆ ಒಳ್ಳೆಯ ಸ್ನೇಹಿತರೂ ಇರುವುದಿಲ್ಲ. ಇರುವ ಗೆಳೆಯರ ಮನಸ್ಸನ್ನು ತನ್ನ ಒರಟು ಮಾತುಗಳಿಂದ ಮುರಿದು ಅವರನ್ನು ದೂರ ತಳ್ಳುತ್ತಾನೆ. ಒಳ್ಳೆಯ ಮಿತ್ರರು ದಿಢೀರ್‌ ಎಂದು ರೂಪುಗೊಳ್ಳುವುದಿಲ್ಲ. ನಮ್ಮ ಪ್ರೀತಿ, ಅನುಕಂಪ, ಸಹಾಯ, ಮತ್ತು ಉತ್ತಮ ನಡತೆಗಳಿಂದ ಅವರು ಬದುಕಲ್ಲಿ ಸಿಗುತ್ತಾರೆ. ಹತ್ತು ಉತ್ತಮ ದೋಸ್ತಿಗಳು ಸಾವಿರ ಆನೆಗಳ ಬಲವಿದ್ದಂತೆ.

ನಮ್ಮ ಅತ್ಯುತ್ತಮ ದರ್ಪಣ ಎಂದರೆ ಹಳೆಯ  ಸ್ನೇಹಿತ.  ಆತ ಮನವರಿತು ನುಡಿಯುವ ಮಿತ್ರ. ಒಳ್ಳೆಯ ಗೆಣೆಗಾರರ ನಡುವೆ ಒಂದು ಸಣ್ಣ ಮಾತು, ಚಿಟಿಕೆ ಗಾತ್ರದ ತಪ್ಪು ತಿಳಿವಳಿಕೆ, ಒಡಕನ್ನು ತಂದು ಹಾಕುತ್ತದೆ. ಬಿಟ್ಟಿರಲಾರೆವು ಎಂಬ ಗೆಳೆಯರು ಕೊಚ್ಚಿ ಹಾಕುವಷ್ಟು ಉಗ್ರ ಕೋಪಕ್ಕೂ ಬಂದು ನಿಲ್ಲುತ್ತಾರೆ. ನಡುವೆ ಇದ್ದು ಸರಿ ಮಾಡುವ ಹಿತಮಿತ್ರರಿದ್ದರೆ ಅಲ್ಲಲ್ಲಿಗೆ ಅದು ಸರಿ ಹೋಗಬಹುದು. ದಿನ, ತಿಂಗಳು, ಹಾಗೆ ಉರುಳಿದರೆ ವಿಷದ ಮೂಟೆಯ ಭಾರಹೆಚ್ಚಾಗುತ್ತಲೇ ಹೋಗುವುದು. ಮುಗುಳ್ನಕ್ಕು ‘ಕ್ಷಮಿಸು ಗೆಳೆಯ’ ಎಂದರೆ ಸರಿ ಹೋಗಬಹುದಾದ ಸಣ್ಣ ಕ್ಷಣವಿದು.

ಆದರೆ ಮುನಿಸಿಕೊಂಡ ಮಿತ್ರನಿಗೆ ಅಹಮ್ಮಿಕೆ ಹೆಗಲೇರುತ್ತದೆ. ನಾನು ಸೋಲಲೇ ಬಾರದೆಂಬ ಒಣ ಪ್ರತಿಷ್ಠೆ ನುಗ್ಗಿ ಬರುತ್ತದೆ. ಅದೇಸಮಯಕ್ಕೆ ಬೆಂಕಿಯನ್ನು ನಂದಿಸುವ ಬದಲು ಪೆಟ್ರೋಲ್‌ ಸುರಿಯುವ ಪುಡಿ ಗೆಳೆಯರು ಸಿಕ್ಕೇ ಸಿಗುತ್ತಾರೆ. ಅಮೂಲ್ಯ ಗೆಳೆತನದ ಗಡಿರೇಖೆ ಹಿಗ್ಗಿಸಲು ಇವರು ಸಾಕು. ನರಿಯನ್ನೇ ಮೋಸ ಮಾಡುವ ಛಾತಿ ಇರುವ ಇಂತಹ ಅನಾಹುತಕಾರಿ ಗೆಣೆಕಾರರು ಬಯಸದೆಯೂ ದಕ್ಕುತ್ತಾರೆ.

ನಿಜವಾದ ಸ್ನೇಹಿತ ಖಾಸಗಿ ಮಾತಿಗೆ ಕಿವಿ. ಅಗತ್ಯಬಿದ್ದಾಗ ಸೂಕ್ತ ಸಲಹೆಯ ಮಾರ್ಗದರ್ಶಿ. ನಾವು ಹೇಳದೆ ಮನದಲ್ಲೇ ಉಳಿಸಿಕೊಂಡಮಾತುಗಳನ್ನೂ ಕೇಳಿಸಿಕೊಳ್ಳುವ ಸಹನಶೀಲ. ನಮ್ಮನ್ನು ಒಪ್ಪಿಸುವ ರೀತಿ ಈತನಿಗೆ ಚೆನ್ನಾಗಿ ತಿಳಿದಿದೆ. ನಮ್ಮ ಮನಸ್ಸೂ ಕೂಡ ಅಷ್ಟೆ. ಇವನ ಒಂದು ಅಭಿಪ್ರಾಯಕ್ಕಾಗಿ ಕಾತರಿಸುತ್ತದೆ. ಏಕೆಂದರೆ ಅದೊಂದು ನಂಬಿಕೆ. ಒಳ್ಳೆಯ ಸ್ನೇಹಿತ ಎಂದೂ ಬೇಗ ಕಳೆದುಹೋಗುವುದಿಲ್ಲ. ಬದುಕಲ್ಲಿ ಸಣ್ಣ ಸಲಹೆಯನ್ನೂ ನೀಡದವನು, ಕಿರು ಸಹಾಯವನ್ನೂ ಮಾಡದವನು ಖಂಡಿತಾ ಗೆಳೆಯನಾಗಲಾರ.

ಹೆಚ್ಚು ಪರಿಚಯದ ಮುಖಗಳಿದ್ದರೂ ಕೆಲವರು ಮಾತ್ರ ಉತ್ತಮ ಸ್ನೇಹಿತರಾಗುತ್ತಾರೆ. ಇಂತವರನ್ನು ಮತ್ತೆ ಮತ್ತೆ ಸಂಪಾದಿಸಲು ಸಾಧ್ಯವಿಲ್ಲ. ನಮಗೆ ಸಂತಸ ಮತ್ತು ದುಃಖವಾದಾಗ ನಾವು ಯಾರಲ್ಲಿ ಮೊದಲು ಹಂಚಿಕೊಳ್ಳಬೇಕೆಂದು ಕಾತರಿಸುತ್ತೇವೆಯೋ ಅವರೇ ನಮ್ಮ ನಿಜವಾದ ಹೃದಯಗಳು. ಸಮೃದ್ಧಿಯ ಸಮಯದಲ್ಲಿ ಹಲವು ಸ್ನೇಹಿತರು ಖಂಡಿತಾ  ಇರುತ್ತಾರೆ. ಆದರೆ ಸಂಕಷ್ಟದ ಸಮಯದಲ್ಲಿ ಉಳಿಯಬಲ್ಲವನು ಮಾತ್ರ ಸಾಂತ್ವನ ಹೇಳಬಲ್ಲ ಮಿತ್ರನಾಗಿರುತ್ತಾನೆ.

ಮರದ ಗುರುತು ಹಣ್ಣಿನಿಂದ ತಿಳಿಯುತ್ತದೆಯೇ ಹೊರತು ಅದರ ಎಲೆಗಳಿಂದಲ್ಲ. ಮೇಲುನೋಟದಲ್ಲಿ ಕಾಣುವ ಮನುಷ್ಯನೂ ಹೀಗೆ. ಒಂದು ಮಾಮೂಲಿ ಎಲೆಯಂತೆ. ಅವನೊಳಗಿನ ಒಳಿತೆಂಬ ಹಣ್ಣ ರುಚಿ ಅನುಭವಿಸಿದ ಮೇಲೆಯೇ ಅವನೆಂತಹ ಬೆಲೆಬಾಳುವ ಮರವೆಂಬುದು ತಿಳಿಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT