ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಭ್ರಮೆಯ ಕೂಪ: ಕೊಳವೆ ಬಾವಿಗಳು

Last Updated 12 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳಿಂದ ನಾನು ಭಯಾನಕ­ವಾದ ಒಂದು ದೃಶ್ಯವನ್ನು ಪತ್ರಿಕೆಗಳಲ್ಲಿ ಕಾಣು­ತ್ತಿದ್ದೇನೆ. ಕಾಣಲಾಗದ, ಕಾಣಬಾರದ, ದೃಶ್ಯವದು. ದೃಶ್ಯ ನೋಡಬೇಕಾದ ನೋವಿ­ನಿಂದಾಗಿ ಪತ್ರಿಕೆ ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದೇನೆ. ಆದರೂ ಬಿಡದೆ ಕಾಡುತ್ತಿದೆ. ಕೊಳವೆ ಬಾವಿಗಳ ಕೊರಕಲಿಗೆ ಬಿದ್ದು ಪ್ರಾಣಕಳೆದುಕೊಳ್ಳುತ್ತಿರುವ ಹಸುಗೂಸುಗಳ ದೃಶ್ಯ!

ಅಂಬೆಗಾಲಿಕ್ಕುತ್ತಲೋ, ಚೆಂಡಾಟ­ವಾಡುತ್ತಲೋ, ಅಥವಾ ಮೊಂಡಾಟ ಮಾಡುತ್ತಲೋ, ಒಟ್ಟಾರೆಯಾಗಿ ನಗುನಗುತ್ತ ನಡೆದು, ನರಕಕೂಪದಲ್ಲಿ ಬೀಳುತ್ತಿರುವ ಹಸು­­ಗೂಸು­ಗಳ ಚಿತ್ರ ಭಯಾನಕವಾದದ್ದು. ಉಸಿರು­ಗಟ್ಟಿಸಿಕೊಂಡು, ನಿಧಾನಗತಿಯಲ್ಲಿ, ಸಾಯುವ ಕಂದಮ್ಮಗಳನ್ನು ಹೇಗೆ ತಾನೆ ಚಿತ್ರಿಸಿಕೊಳ್ಳಲಿ ಹೇಳಿ? ಅವು ನರಕಕ್ಕೆ ಬೀಳುವಂತಹ ಪಾಪವನ್ನು ಖಂಡಿತ ಮಾಡಿರಲಿಲ್ಲ. ಅಥವಾ, ದೇವರು ನಿರ್ಮಿಸಿದ ಪಾಪಕೂಪಗಳೂ ಅಲ್ಲ ಇವು, ನಾವೇ, ಅಭಿವೃದ್ಧಿಯ ನಮ್ಮ ಭ್ರಮೆಯಲ್ಲಿ, ಕೊರೆದ ಕೊಳವೆ ಬಾವಿಗಳು. ಕೂಪದಲ್ಲಿ ಬೀಳಬೇಕಿದ್ದ­ವರು ನಾವು, ದೊಡ್ಡವರು.

ಕೊಳವೆಬಾವಿಗಳು, ನಿಜಕ್ಕೂ ನರಕಕ್ಕೆ ಸಲ್ಲ­ಬೇಕಾದ ಸಂಕೇತಗಳೇ ಸರಿ. ಕಂದಮ್ಮಗಳನ್ನು ನಾನು ಹುತಾತ್ಮರು ಎಂದು ಕರೆಯ­ಬಯಸು­ತ್ತೇನೆ. ದೊಡ್ಡವರ ಮೌಢ್ಯವನ್ನು ನಿವಾರಿಸ­ಲೆಂದೇ ಜೀವ ತೆರುತ್ತಿರುವ  ಹುತಾತ್ಮರು! ನಿಜಕ್ಕೂ ನಮಗೆ ನಮ್ಮ ತಪ್ಪಿನ ಅರಿವಾಗುತ್ತಿ­ದೆಯೇ, ಅಥವಾ ಬರಿದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದೇವೆಯೇ? ಕೊಳವೆ ಬಾವಿಗಳ ಬಗ್ಗೆ ರಾಜ್ಯ ಸರ್ಕಾರವು ಹೊರಡಿಸಿರುವ ಅರೆಬರೆ ಸುಗ್ರೀವಾಜ್ಞೆಯನ್ನು ಗಮನಿಸಿದರೆ, ಅಥವಾ ಈ ಬಗ್ಗೆ ನಡೆದಿರುವ ಸಾರ್ವಜನಿಕ ಚರ್ಚೆಯನ್ನು ಗಮನಿಸಿದರೆ, ನನಗೀ ಅನುಮಾನ ಖಂಡಿತವಾಗಿ ಬರುತ್ತಿದೆ.

ಸರ್ಕಾರಕ್ಕೆ ಕೊಳವೆ ಕೊರೆಯುವುದನ್ನು ನಿಯಂತ್ರಿಸುವ ಮನಸ್ಸಿಲ್ಲ. ನಿಯಂತ್ರಿಸಿ ಎಂದು ಗಟ್ಟಿಯಾಗಿ ಹೇಳುವ ಮನಸ್ಸೂ ಹೆಚ್ಚಿನ ಸಾರ್ವ­ಜನಿಕರಿಗೂ ಇದ್ದಂತಿಲ್ಲ. ಎಲ್ಲರೂ ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಹತ್ತಿದ್ದಾರೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಎಷ್ಟು ಬೇಕಾ­ದರೂ ಬಾವಿಗಳನ್ನು ಕೊರೆಯಬಹು­ದಾಗಿದೆ. ಹೇಳುವವರಿಲ್ಲ, ಕೇಳುವವರಿಲ್ಲ. ಇಷ್ಟಕ್ಕೂ, ಕೊಳವೆಬಾವಿಗಳೆಂಬ ನರಕಕೂಪಕ್ಕೆ ಬಿದ್ದು ಪ್ರಾಣ ತೆರುತ್ತಿರುವುದು ಹಸುಗೂಸುಗಳು ಮಾತ್ರವೇ ಅಲ್ಲ. ರಾಜ್ಯದ ರೈತರು ಬೀಳುತ್ತಿರುವ ಬಾವಿಗಳಿವು. ಕೊಳವೆಬಾವಿಗಳ ಕಾರಣ­ದಿಂದಾಗಿ ಕೆರೆಕುಂಟೆಗಳು ಬತ್ತತೊಡಗಿವೆ.

ಬೆಳೆದು ನಳನಳಿ­ಸು­ತ್ತಿದ್ದ ತೆಂಗು, ಕಂಗು, ಬಾಳೆ ಮರಗಳು ಹೆಡೆ­ಮುರಿದು ಬೀಳತೊಡಗಿವೆ. ಭೂಮಿ ಬಿರುಕು­ಬಿಡ­ತೊಡಗಿದೆ. ಬಡವರ ಜಮೀನು ಮತ್ತಷ್ಟು ಬಡ­ವಾಗಿ ಹೋಗಿದೆ. ಅಂತರ್ಜಲವು ಅಪಾಯಕಾರಿ ಮಟ್ಟದಲ್ಲಿ ಕುಸಿಯತೊಡಗಿದೆ. ಭೂಮಿ ಮರು­ಭೂಮಿಯಾದಷ್ಟೂ ಮರೀಚಿಕೆಯ ಆಕರ್ಷಣೆ ಹೆಚ್ಚುತ್ತಿದೆ! ಕೊಳವೆಕೊರಕರ ಲಾಭ ಹೆಚ್ಚುತ್ತಿದೆ.

ಭೂಮಿ ಕೊರೆಯುವವರ ಸ್ಪರ್ಧೆ ನಡೆಯು­ತ್ತಿದೆ. ಮೊದಲು ನೂರಡಿ ಆಳಕ್ಕಿದ್ದ ಸ್ಪರ್ಧೆಯ ಮಿತಿ, ಇನ್ನೂರು, ನಾನ್ನೂರು, ಸಾವಿರ ಅಡಿಗಳಿ­ಗಿಳಿದಿದೆ. ರಾಕ್ಷಸಾಕಾರದ ಜೆಸಿಬಿ ಯಂತ್ರಗಳು, ಯಂತ್ರ ತಯಾರಿಸುವ ಬಹುರಾಷ್ಟ್ರೀಯ ಕಂಪೆನಿ­ಗಳು; ಬ್ಯಾಂಕುಗಳು, ದಲ್ಲಾಳಿಗಳು, ವಿಜ್ಞಾನದ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುತ್ತಿರುವ ಕೃಷಿ ವಿದ್ಯಾಲಯಗಳು, ಸರ್ಕಾರಗಳು, ಸರ್ಕಾರಿ ಅಧಿ­ಕಾರಿಗಳು, ಒಟ್ಟಾಗಿ ಸೇರಿ ನೀರಿನ ದಂಧೆ ನಡೆಸುತ್ತಿದ್ದಾರೆ. ಶ್ರೀಮಂತರ ಈ ದಂಧೆಗೆ ರೈತರು ಹಾಗೂ ಹಸುಳೆಗಳು ಬಲಿಯಾಗುತ್ತಿವೆ.

ಕೊಳವೆ ಬಾವಿ ಕೊರೆಸುತ್ತಿರುವವರು, ಶ್ರೀಮಂತರು ಇಲ್ಲವೇ ಶ್ರೀಮಂತಿಕೆಯ ಮರೀಚಿಕೆಯ ಹಿಂದೆ ಬಿದ್ದಿರುವ ಮೂಢರೈತರು. ಅಮೆರಿಕೆಗೆ ಹೂವು ಮಾರುವುದು, ದೆಹಲಿಗೆ ಹಣ್ಣು ಮಾರುವುದು, ಬಾಟಲಿಗಳಲ್ಲಿಟ್ಟು ನೀರು ಮಾರುವುದು, ಕೃಷಿಯೇ? ಯಾವುದೇ ಗ್ರಾಮದ ಯಾವುದೇ ಉದಾಹರಣೆ ತೆಗೆದುಕೊಳ್ಳಿ. ಅಲ್ಲಿ ಜನರಿರುತ್ತಾರೆ, ಜಾನುವಾರುಗಳಿರುತ್ತದೆ, ಜಮೀನುಗಳಿರುತ್ತವೆ; ಗೋಮಾಳಗಳು ಸಾಮಾ­ಜಿಕ ಅರಣ್ಯಗಳು ಇರುತ್ತವೆ. ಈ ಎಲ್ಲದರ ಸಲು­ವಾಗಿ, ಎಲ್ಲರ ಸಲುವಾಗಿ, ಅಂತರ್ಜಲ ಇರು­ತ್ತದೆ. ಸಾರ್ವಜನಿಕ ಬಾವಿಗಳು ಕೆರೆಕಟ್ಟೆಗಳು ಹಳ್ಳನದಿಗಳು ಇರುತ್ತವೆ. ಸರ್ಕಾರಗಳಿರುವುದು ಅಂತರ್ಜಲವನ್ನು ರಕ್ಷಿಸಲೆಂದು, ನೀರನ್ನು ಸಾರ್ವಜನಿಕವಾಗಿ ವಿತರಿಸಲೆಂದು.

ಬ್ರಿಟಿಷರ ಆಡಳಿತವೂ ಸಹ ನೀರಿನ ಸಮಾನ­ಹಂಚಿಕೆಯ ಸಭ್ಯತೆಯನ್ನು ಪಾಲಿಸಿಕೊಂಡು ಬಂದಿತ್ತು, ಪಾಳೆಯಗಾರರು ಪಾಲಿಸಿಕೊಂಡು ಬಂದಿ­ದ್ದರು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಇಂದಿನ ಸರ್ಕಾರಗಳು ಮಾತ್ರ, ಸಾರ್ವಜನಿಕ ಹಿತವನ್ನು ಗಾಳಿಗೆ ತೂರಿ, ಲಾಭಬಡುಕರಿಗೆ ಮಣೆಹಾಕುತ್ತಿದೆ, ಬಡ ರೈತ­ರನ್ನು ಸಾಲಗಾರರನ್ನಾಗಿಸುತ್ತಿದೆ, ಹಸುಗೂಸು­ಗಳನ್ನು ನರಕಕೂಪಕ್ಕೆ ತಳ್ಳುತ್ತಿದೆ.
ಅಂತರ್ಜಲವೆಂಬುದು ಶ್ರೀಮಂತರ ಆಸ್ತಿ­ಯಲ್ಲ.

ಮಾರಾಟದ ವಸ್ತು ಖಂಡಿತಾ ಅಲ್ಲ. ಜಮೀನು ಅವರಾಸ್ತಿಯಾದರೇನಂತೆ, ಜಮೀನಿನಡಿ ನಿಸರ್ಗ ಸಂಗ್ರಹಿಸಿಟ್ಟಿರುವ ನೀರು ಅವರಾಸ್ತಿ ಹೇಗಾದೀತು? ತೆರೆದ ಬಾವಿಗೂ ಕೊಳವೆ ಬಾವಿಗೂ ನಡುವೆ ವ್ಯತ್ಯಾಸವಿದೆ. ಕೊಳವೆ­ ಬಾವಿಗಳನ್ನು ಕೊರೆಯಬಾರದು. ಒಂದೊಮ್ಮೆ ಕೊರೆಯುವುದೇ ಆದರೆ, ಸಾರ್ವ­ಜನಿಕ ಉಪಯೋಗಕ್ಕಾಗಿ ಮಾತ್ರವೇ ಕೊರೆಯ­ಬೇಕು. ಹೇಗೆ ನಾವು, ಹಲವು ಹೋರಾಟ­ಗಳ ನಂತರ, ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೆ ತಂದೆವೋ ಹಾಗೆಯೇ (ಈಗ ಆ ಕಾನೂನು ಹಲವು ತಿದ್ದುಪಡಿಗಳ ನಂತರ ಸವಕಲು ನಾಣ್ಯವಾಗಿ ಹೋಗಿದೆ ಎಂಬುದು ಮತ್ತೊಂದು ದುರಂತ, ಇರಲಿ) ಖಾಸಗಿ ಕೊಳವೆ­ಕೊರಕರು ನೀರುಗಳ್ಳರು ಎಂದು ಕಾನೂನಿನ ಮೂಲಕ ಘೋಷಿಸಬೇಕು.

ತೆರೆದ ಬಾವಿಗಳು, ಕೆರೆಕುಂಟೆಗಳು, ನದಿಹಳ್ಳಗಳು ಸಹಜವಾಗಿ ಹರಿ­ಯಲು ಅನುವು ಮಾಡಿಕೊಡಬೇಕು. ಇಷ್ಟಕ್ಕೂ, ನೆಲಮೂಲ, ಜಲಮೂಲ, ಸಸ್ಯಮೂಲ, ಇವು­ಗಳು ಮನುಷ್ಯನ ಬಳಕೆಗೆ ಮಾತ್ರವೇ ಲಭ್ಯವಿರುವ ಸಂಪತ್ತಲ್ಲ. ನಿಸರ್ಗವೆಂಬುದು ಎಲ್ಲ ಜೀವಿಗಳನ್ನೂ ಸಲಹುವ ಜೀವಸೆಲೆ. ಹಳೆಯಕಾಲದ ನೀರಗಂಟಿಗಳು ಪಾಲಿಸುತ್ತಿದ್ದ ಸಭ್ಯ ಹಂಚಿಕೆಯ ಶಿಸ್ತನ್ನು ನೆನಪುಮಾಡಿಕೊಳ್ಳಿ.  ನೀರಗಂಟಿಗಳ ಮೂಲಕ ಗ್ರಾಮದ ಹಿರಿಯರು, ಆ ವರ್ಷದ ಬೆಳೆ ಯಾವುದಿರಬೇಕು, ಎಷ್ಟಿರ­ಬೇಕು, ನೀರಿನ ಪ್ರಮಾಣ ಹಾಲಿ ಎಷ್ಟಿದೆ, ಹಂಚಿ­ಕೆ ಪ್ರಮಾಣ ಎಷ್ಟಿರಬೇಕು ಎಂದೆಲ್ಲ ನಿರ್ಧರಿ­ಸು­ತ್ತಿದ್ದರು ತಾನೆ?

ಆಧುನಿಕ ವಿಜ್ಞಾನಿಗಳ ಪ್ರಕಾರ ಗ್ರಾಮದ ಹಿರಿಯರು ಹಾಗೂ ನೀರಗಂಟಿಗಳು ಮೂಢರು!, ಸಭ್ಯಹಂಚಿಕೆ ಎಂಬುದು ಮೌಢ್ಯ! ಲಾಭ­ಬಡುಕತನವೇ ವೈಜ್ಞಾನಿಕ ಮನೋಭಾವ! ನಮ್ಮೀ ವೈಜ್ಞಾನಿಕ ಮನೋಭಾವಕ್ಕೆ ನಾವು ತೆರುತ್ತಿರುವ ಬೆಲೆಯೇ, ಆತ್ಮಹತ್ಯೆ ಮಾಡಿ­ಕೊಳ್ಳುತ್ತಿರುವ ರೈತರು ಹಾಗೂ ಕೊಳವೆ­ಬಾವಿಗಳಿಗೆ ಬೀಳುತ್ತಿರುವ ಹಸುಳೆಗಳು!
ಸರ್ಕಾರದ ಸುಗ್ರೀವಾಜ್ಞೆ ಹಾಸ್ಯಾಸ್ಪದ­ವಾಗಿದೆ: ಒಂದೊಮ್ಮೆ ನೀವು ಕೊರೆದ ಕೊಳವೆ­ಯಲ್ಲಿ ನೀರು ಬಾರದೆಹೋದರೆ, ತೂತು ಮುಚ್ಚುವ ಕೃಪೆತೋರಿ ಎಂದಿದೆ ಸರಕಾರ! ಕೊಳವೆ ಬಾವಿ ಕೊರೆಯಬೇಡಿ ಎಂದಿಲ್ಲ.

ಕೊಳವೆ­ಕೊರಕರು ತೂತು ಮುಚ್ಚದೆ ತೆರಳಿದರೆ ನೀವೇನು ಮಾಡುತ್ತೀರಿ? ರಾಜ್ಯದ ನೆಲದ ಮೇಲೆಲ್ಲ ಪೊಲೀಸು ಪೇದೆಗಳನ್ನು ಹರಿದಾಡಿಸಿ, ಲೆನ್ಸ್ ಹಿಡಿಸಿ, ಹುಡುಕಿಸುತ್ತೀರೇನು, ತೂತು ಎಲ್ಲಿದೆ ತೂತು ಎಲ್ಲಿದೆ ಎಂದು? ಅಥವಾ ಷೆರ್ಲಾಕ್ ಹೋಮ್ಸ್‌ನನ್ನು ಕರೆಸಿ ಪತ್ತೆಕಾರ್ಯ ನಡೆಸು­ತ್ತೀರೋ, ತೂತು ತೆರೆದವರು ಯಾರೆಂದು? ಅಭಿವೃದ್ಧಿಯ ಭ್ರಮೆ ಹರಿದಿಲ್ಲ ನಮಗೆ. ಅದು ಹರಿಯಲಿಕ್ಕೆ, ಇನ್ನೂ ಅದೆಷ್ಟು ರೈತರು ಸಾಲ­ಗಾರ­ರಾಗಬೇಕೋ, ಅದೆಷ್ಟು ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಬೇಕೋ, ಅದೆಷ್ಟು ಹಸುಳೆಗಳು ನರಕಕೂಪಕ್ಕೆ ಬೀಳಬೇಕೋ, ಶಿವನೇ ಬಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT