ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ರಕ್ಷಣೆಯ ಅಪಸವ್ಯಗಳು

ಸಂಗತ
Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮುಖದ ಮೇಲೆ ಮೀನನ್ನು ಹೋಲುವ ಗುರುತನ್ನು ಹೊಂದಿದ್ದ ಆ ಹುಲಿಗೆ ಜನರು ಕೊಟ್ಟ ಹೆಸರು ‘ಮಚಲಿ’. ರಣತಂಬೋರ್ ರಕ್ಷಿತ ಅರಣ್ಯ ಪ್ರದೇಶದ ರಾಣಿ ಈ ಮಚಲಿ. ಶಕ್ತಿಶಾಲಿಯಾದ ಈ ಹುಲಿ, ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುವುದಕ್ಕೆ ಗಣನೀಯ ಕೊಡುಗೆ ನೀಡಿತ್ತು. ಪ್ರಪಂಚದಲ್ಲೇ ಅತಿ ಹೆಚ್ಚು ಫೋಟೊ ತೆಗೆಸಿಕೊಂಡ, ವಿಡಿಯೊ ಮಾಡಿಸಿಕೊಂಡ ಖ್ಯಾತಿ ಈ ಮಚಲಿಯದ್ದು.

ವನ್ಯಜೀವಿ ಛಾಯಾಗ್ರಹಣದಲ್ಲಿ ಹುಲಿಗಳಿಗೆ ಹೆಚ್ಚಿನ ಬೆಲೆಯಿದೆ. ಇಂತಹ ಖ್ಯಾತ ಹುಲಿಯೊಂದು ವಯಸ್ಸಾದ ಕಾರಣ ಇತ್ತೀಚೆಗೆ ಸಹಜ ಸಾವನ್ನಪ್ಪಿದೆ. ಅದು ಸಾಯುವ ದೃಶ್ಯಗಳೂ ಚಿತ್ರಿತವಾಗಿವೆ. ಸತ್ತ ನಂತರ ಅರಣ್ಯ ಇಲಾಖೆಯವರು ಮತ್ತು ಮಚಲಿಯ ಫೋಟೊ  ತೆಗೆಯುತ್ತಿದ್ದವರೆಲ್ಲರೂ ಕಣ್ಣೀರಾಗಿದ್ದಾರೆ.

ಮಚಲಿಯ ಶವವನ್ನು ಚಟ್ಟದ ಮೇಲಿಟ್ಟು ವಿಧಿವಿಧಾನಗಳನ್ನು ಪಾಲಿಸಿ, ಹೂವಿನ ಹಾರದಿಂದ ಅಲಂಕರಿಸಿ ಕಟ್ಟಿಗೆಯ ತುಂಡುಗಳ ಮೇಲಿಟ್ಟು ಬೆಂಕಿ ಕೊಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ. ಮಚಲಿಗೆ ಕಳೆದ ಎರಡು ವರ್ಷಗಳಿಂದ ವಯೋಸಹಜ ಕಾರಣಗಳಿಂದಾಗಿ ಬೇಟೆಯಾಡಲು ಆಗುತ್ತಿರಲಿಲ್ಲ.

ಜೊತೆಗೆ ಇತರ ಬಲಿಷ್ಠ ಹುಲಿಗಳು ತಮ್ಮ ಸಾಮ್ರಾಜ್ಯದೊಳಗೆ ಬೇಟೆಯಾಡಲು ಅದಕ್ಕೆ ಆಸ್ಪದ ನೀಡುತ್ತಿರಲಿಲ್ಲ. ಅರಣ್ಯ ಇಲಾಖೆಯವರಿಗೆ ಈ ಹುಲಿಯ ಮೇಲೊಂದು ಪ್ರೀತಿ ಇತ್ತಲ್ಲ, ಆ ಕಾರಣದಿಂದಾಗಿ ಮಚಲಿಯನ್ನು ಹುಡುಕಿಕೊಂಡು ಹೋಗಿ ನಿಯಮಿತವಾಗಿ ಆಹಾರ ನೀಡಿ ಬರುತ್ತಿದ್ದರು. ಇದರಿಂದಾಗಿ ಮಚಲಿಯ ಆಯಸ್ಸು ಕೊಂಚ ದೀರ್ಘವಾಯಿತು.

ರಾಮನಗರ ಜಿಲ್ಲೆಯ ಸಾವನದುರ್ಗ ಅರಣ್ಯ ಪ್ರದೇಶದ ಬಳಿಯಿರುವ ಮಂಚಿನಬೆಲೆ ಜಲಾಶಯದ ಹತ್ತಿರ ಕಾಡಾನೆಯೊಂದು ಗಾಯಗೊಂಡಿದೆ. ಸಿದ್ಧಎಂದು ಕರೆಯಲಾಗುವ ಈ ಕಾಡಾನೆಯ ಮುಂದಿನ ಕಾಲು ಮುರಿದಿದೆ. ಕಾಲು ಮುರಿದಿದ್ದಕ್ಕೆ ಆನೆ ಜಾರಿ ಬಿದ್ದಿರುವುದೇ ಕಾರಣ ಎಂದು ಅಂದಾಜಿಸಲಾಗಿದೆ.

ಇದರಿಂದಾಗಿ ಆನೆಗೆ ಸರಾಗವಾಗಿ ಓಡಾಡುವುದು ಸಾಧ್ಯವಾಗುತ್ತಿಲ್ಲ. ದಿನವೊಂದಕ್ಕೆ ಕ್ವಿಂಟಲ್‌ಗಟ್ಟಲೆ ಆಹಾರ ತಿನ್ನುವ ಆನೆಯೊಂದು ಮುರಿದ ಕಾಲಿನ ದೆಸೆಯಿಂದಾಗಿ ಉಪವಾಸ ಬಿದ್ದರೆ ಅದು ಸಾವಿನ ಸಮೀಪ ತಲುಪುವುದಕ್ಕೆ ಹೆಚ್ಚಿನ ಸಮಯ ಬೇಕಾಗಿಲ್ಲ.

ಕಾಲು ಮುರಿದುಕೊಂಡಿರುವ ಈ ಕಾಡಾನೆಗೆ ಅರಿವಳಿಕೆ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ ಅರಣ್ಯ ಇಲಾಖೆಯವರು. ಆ ಪ್ರದೇಶದಿಂದ ಅದನ್ನು ಹೊರಸಾಗಿಸುವುದು ಕಷ್ಟವಾಗಿರುವ ಕಾರಣದಿಂದ ಅಲ್ಲಿಯೇ ಆಹಾರವನ್ನು ನೀಡುತ್ತ ಅದರ ಪ್ರಾಣ ರಕ್ಷಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.

ಮೇಲಿನ ಎರಡೂ ಪ್ರಸಂಗಗಳು ಮೇಲ್ನೋಟಕ್ಕೆ ಪ್ರಾಣಿಗಳೆಡೆಗೆ ಮನುಷ್ಯನಿಗಿರುವ ಪ್ರೀತಿಯ ಸಂಕೇತದಂತೆ, ಅವುಗಳ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಗುಣದಂತೆ ಕಾಣುತ್ತವೆ. ಆದರಿದು ನಿಜಕ್ಕೂ ಮಾನವೀಯ ಗುಣವೋ ಅಥವಾ ಪ್ರಕೃತಿಯ ಎಲ್ಲಾ ನೀತಿ ನಿಯಮಗಳನ್ನು ಮುರಿಯಬಯಸುವ ಮನುಷ್ಯನ ಅವಗುಣದ ಮುಂದುವರಿಕೆಯೋ?

ಗಮನಿಸಬೇಕಾದ ಅಂಶವೆಂದರೆ, ಮಚಲಿಯಾಗಲಿ ಸಿದ್ಧನಾಗಲಿ ಮನುಷ್ಯ ನಿರ್ಮಿಸಿದ ಮೃಗಾಲಯಗಳಲ್ಲಿನ ಬಂಧಿತ ಪ್ರಾಣಿಗಳಲ್ಲ. ಮೃಗಾಲಯದ ಹುಲಿಗಳಿಗೆ, ಮನುಷ್ಯನ ಅಂಕುಶದಲ್ಲಿರುವ ಆನೆಗಳಿಗೆ ಚಿಕಿತ್ಸೆ ಕೊಡುವುದು, ಆಹಾರ ನೀಡುವುದು, ಅಂತ್ಯಸಂಸ್ಕಾರ ಮಾಡುವುದು ಅನಿವಾರ್ಯ. ಆದರೆ ಕಾಡಿನಲ್ಲಿರುವ ಪ್ರಾಣಿಗಳಿಗೆ ಚಿಕಿತ್ಸೆ, ಆಹಾರ ಕೊಡುವುದು, ಅಂತ್ಯಸಂಸ್ಕಾರ ಮಾಡುವುದು ಎಷ್ಟರಮಟ್ಟಿಗೆ ಅರಣ್ಯ ರಕ್ಷಣೆ?

ಕಾಡಿನಲ್ಲಿರುವುದು ಕೇವಲ ಹುಲಿ,  ಆನೆಗಳಲ್ಲವಲ್ಲ. ಪ್ರಾಣಿಯೊಂದು ಸತ್ತರೆ ಅದನ್ನು ಭಕ್ಷಿಸಲೆಂದೇ ಹಲವಾರು ಪ್ರಾಣಿ ಪಕ್ಷಿಗಳಿವೆ. ಪ್ರಮುಖವಾಗಿ ಭಾರತದಲ್ಲಿ ಅವಸಾನದ ಅಂಚನ್ನು ತಲುಪಿಬಿಟ್ಟಿರುವ ರಣಹದ್ದುಗಳು, ಜಾಡಮಾಲಿ ಹದ್ದುಗಳು ಇಂತಹ ಸತ್ತ ಪ್ರಾಣಿಗಳ ಆಹಾರವನ್ನೇ ಅವಲಂಬಿಸಿರುತ್ತವೆ.

ಸತ್ತ ಹುಲಿಯ ಅಂತ್ಯಸಂಸ್ಕಾರ ಮಾಡುವುದು ಎಂದರೆ ಆ ರಣಹದ್ದುಗಳ ಆಹಾರವನ್ನು ಕಿತ್ತುಕೊಂಡಂತೆ. ಅರಣ್ಯ ರಕ್ಷಕರಿಗೇ ಇದರ ಅರಿವಿಲ್ಲದಿರುವುದು ಅಚ್ಚರಿಯ ಸಂಗತಿ.

ಇನ್ನು ರಾಮನಗರ ಜಿಲ್ಲಾ ಕೇಂದ್ರದ ಸಮೀಪದಲ್ಲೇ ಇರುವ ರಾಮದೇವರ ಬೆಟ್ಟದಲ್ಲಿ ದೇಶದಲ್ಲೇ ಅಪರೂಪದ ಪ್ರಪ್ರಥಮ ರಣಹದ್ದು ಅಭಯಾರಣ್ಯವಿದೆ. ಇಲ್ಲಿ ಅಪರೂಪದ ರಣಹದ್ದುಗಳಿವೆ, ಕೆಲವು ಜಾಡಮಾಲಿ ಹದ್ದುಗಳಿವೆ.

ಈ ಜಾಡಮಾಲಿ ಹದ್ದುಗಳನ್ನು ಸಾವನದುರ್ಗ, ಮಾಗಡಿಯ ಬೆಟ್ಟ ಪ್ರದೇಶಗಳು, ಮೈಸೂರಿನ ಹೊರವಲಯದಲ್ಲಿ ಕಸಾಯಿಖಾನೆಯ ಕಸ ಬಿಸಾಕುವ ಜಾಗದಲ್ಲಿ ಕಾಣಬಹುದಾದರೂ ರಣಹದ್ದುಗಳು ಮಾತ್ರ ಇಲ್ಲಷ್ಟೇ ಇವೆ.

ಇವುಗಳ ಸಂಖ್ಯೆ ಕಡಿಮೆಯಾಗಲು ಸಾಕುಪ್ರಾಣಿಗಳಿಗೆ ನೀಡುವ ಡೈಕ್ಲೊಫಿನಾಕ್ ಎಂಬ ಔಷಧ ಎಷ್ಟು ಕಾರಣವೋ, ಸತ್ತ ಸಾಕು ಪ್ರಾಣಿಗಳನ್ನು ಬಿಸಾಡದೆ ಹೂತು ಹಾಕಿ ಅಂತ್ಯಸಂಸ್ಕಾರ ಮಾಡುವುದೂ ಕಾರಣ. ಇವುಗಳ ಜೊತೆಗೆ ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶವೂ ಇವುಗಳ ಸಂಖ್ಯೆ ಕ್ಷೀಣಿಸಲು ಕಾರಣ.

ಸಿದ್ಧನೆಂಬ ಕಾಡಾನೆಯು ಗಾಯಗೊಂಡು ಸಾಯುವ ಹಂತ ತಲುಪಿ ಸತ್ತು ಹೋದರೆ ಲಾಭವಿರುವುದು ಈ ರಣಹದ್ದುಗಳಿಗೇ ಅಲ್ಲವೆ? ಗಾಯಗೊಂಡ ಆನೆಯೊಂದಕ್ಕೆ ಚಿಕಿತ್ಸೆ ನೀಡುವ ಮೂಲಕ ರಣಹದ್ದುಗಳ ಆಹಾರವನ್ನು ಕಸಿದುಕೊಳ್ಳುವುದು ಯಾವ ರೀತಿಯ ಅರಣ್ಯ ರಕ್ಷಣೆ?

ನಮ್ಮ ಅರಣ್ಯ ರಕ್ಷಣೆಯ ಬಹುತೇಕ ನೀತಿ ನಿಯಮಗಳು ದೊಡ್ಡ ಪ್ರಾಣಿಗಳಾದ ಹುಲಿ, ಆನೆಗೆ ಸೀಮಿತವಾಗಿಬಿಟ್ಟಿರುವುದೇ ದುರಂತ. ಹೆಸರಿಗೆ ರಣಹದ್ದುಗಳ ಅಭಯಾರಣ್ಯವೆಂದು ಘೋಷಿಸಿರುವುದು ಹೌದಾದರೂ, ಆ ರಣಹದ್ದುಗಳಿಗೆ ಆಹಾರ ಎಲ್ಲಿ, ಹೇಗೆ ಸಿಗುತ್ತದೆ ಎನ್ನುವ ಅರಿವಿಲ್ಲದೆ, ಅರಿವಿದ್ದರೂ ಕುರುಡಾಗಿ ಕಾಡಿನ ಪ್ರಾಣಿಗಳ ಮೇಲೆ ‘ಮಾನವೀಯತೆ’ ತೋರಿಸಲು ಮುಂದಾಗುವುದು ಸರಿಯಲ್ಲ.

ಈ ‘ಮಾನವೀಯತೆ’ಯು ಒಂದು ಪ್ರಾಣಿಯ ಆಯಸ್ಸನ್ನು ಹೆಚ್ಚಿಸುತ್ತದೆಯಾದರೂ, ಆ ಸತ್ತ ಪ್ರಾಣಿಯ ಮೇಲೆ ಅವಲಂಬಿತವಾಗುವ ಅನೇಕ ಪ್ರಾಣಿ ಪಕ್ಷಿಗಳ ಆಯಸ್ಸನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಮರೆಯಬಾರದು.

ಮನುಷ್ಯನ ಹಸ್ತಕ್ಷೇಪ ಹೆಚ್ಚಾದಷ್ಟೂ ಮೇಲ್ನೋಟಕ್ಕೆ ನಮ್ಮ ಕಣ್ಣಿಗೆ ರಕ್ಷಣೆ ಎಂದು ಕಾಣಿಸುವ ಸಂಗತಿಗಳು ಅರಣ್ಯದ ದೃಷ್ಟಿಯಿಂದ ಪ್ರಕೃತಿಯ ಸಮತೋಲನ ತಪ್ಪಿಸುವ ಕಾರ್ಯಗಳಾಗಿರುತ್ತವೆ. ಇದು ಕೊನೆಯ ಪಕ್ಷ ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ನಮ್ಮ ಅರಣ್ಯ ಇಲಾಖೆಯವರಿಗಾದರೂ ನೆನಪಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT