ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ತರದ ಅಕ್ಷರಜ್ಞಾನ ಅಪಾಯಕಾರಿ

ನೈತಿಕತೆಯಿಲ್ಲದ ಶಿಕ್ಷಣ ಏನೆಲ್ಲ ಅನಾಹುತ ಉಂಟು ಮಾಡಬಲ್ಲದು...
Last Updated 10 ಜನವರಿ 2016, 19:45 IST
ಅಕ್ಷರ ಗಾತ್ರ

ನಮ್ಮ ದೇಶದ ಶಿಕ್ಷಣ ಏನನ್ನು ಕರುಣಿಸುತ್ತಿದೆ ಎಂದು ನೋಡಿದರೆ ಆತಂಕವಾಗುತ್ತದೆ. ಏಕೆಂದರೆ ಶಿಕ್ಷಣದ ಫಲವಾಗಿ ಒಂದು ಕಡೆ ಭ್ರಷ್ಟಾಚಾರ ಭುಗಿಲೇಳುತ್ತಿದ್ದರೆ, ಮತ್ತೊಂದು ಕಡೆ ಅದು ಅಕ್ಷರಸ್ಥರನ್ನು ಅನಾಥರನ್ನಾಗಿಸುತ್ತಿದೆ.

ಎರಡು ಪ್ರಮುಖ ಅಂಶಗಳು 2015ರಲ್ಲಿ ಕಾಣಿಸಿಕೊಂಡು ನಮ್ಮ ಆತಂಕವನ್ನು ಹೆಚ್ಚಿಸಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಸರ್ಕಾರ ಅರ್ಜಿ ಕರೆದದ್ದು 368 ಅಟೆಂಡರ್‌ ಹುದ್ದೆಗೆ. ಕನಿಷ್ಠ ವಿದ್ಯಾರ್ಹತೆ 5ನೇ ತರಗತಿ. ಬಂದ ಅರ್ಜಿಗಳು 15 ಲಕ್ಷಕ್ಕೂ ಅಧಿಕ. ಇದರಲ್ಲಿ ಎರಡು ಲಕ್ಷ ಮಂದಿ ಸ್ನಾತಕೋತ್ತರ ಪದವೀಧರರು.

250ಕ್ಕೂ ಅಧಿಕ ಮಂದಿ ಪಿಎಚ್‌.ಡಿ. ಪಡೆದವರು. ಎಂಜಿನಿಯರಿಂಗ್‌ ಪದವೀಧರರೂ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇದು ಒಂದು ಕಡೆಯಾದರೆ ಇತ್ತೀಚೆಗೆ ಭಾರತ ಸರ್ಕಾರ ಜನಗಣತಿ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಅನೇಕ ಕುತೂಹಲಕಾರಿ ಅಂಶಗಳಿವೆ. ತಾಂತ್ರಿಕ ಪದವೀಧರರು 410 ಜನ ಸೇರಿದಂತೆ ಅದಕ್ಕೂ ಹೆಚ್ಚಿನ ಶಿಕ್ಷಣ ಪಡೆದ ಸುಮಾರು 2,600 ಮಂದಿ ಭಿಕ್ಷುಕರಾಗಿದ್ದಾರೆ. ಅದರಲ್ಲಿ ಪದವೀಧರರೂ ಒಳಗೊಂಡಂತೆ 137ಕ್ಕೂ ಹೆಚ್ಚು ಮಹಿಳೆಯರೂ ಸೇರಿದ್ದಾರೆ ಎಂದು ವರದಿ ಹೇಳುತ್ತದೆ.

ಇದು ಏನನ್ನು ಬಿಂಬಿಸುತ್ತದೆ? ನೈತಿಕತೆಯಿಂದ ಹೊರಳಿದ ಶಿಕ್ಷಣ ಏನೆಲ್ಲವನ್ನೂ ಉಂಟುಮಾಡಬಲ್ಲದು ಎಂಬುದಕ್ಕೆ ಪ್ರಸ್ತುತ ವಿದ್ಯಾಮಾನಗಳು ಸಾಕ್ಷಿಯಾಗಿವೆ. 90ರ ದಶಕದಲ್ಲಿ ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ  ಬೀದಿ ನಾಟಕ ಆಡಿಸಿದ ವೇಳೆ ಒಬ್ಬ ಅನಕ್ಷರಸ್ಥ ಕೇಳಿದ ಪ್ರಶ್ನೆ ದೇಶದ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಪ್ರಶ್ನೆ ಸರಳವಾದುದಾದರೂ ಗಹನವಾದುದು. ಗುರುತರವಾದುದು. ಆ ಪ್ರಶ್ನೆ ಎಂದರೆ ‘ಸ್ವಾಮಿ, ಅಕ್ಷರ ಕಲೀರಿ ಅಂತಿದ್ದೀರಿ, ಒಳ್ಳೇದು.

ನಿಮ್ಮ ಎದೆ ಮುಟ್ಕಂಡೇಳಿ, ಈಗ ಅಕ್ಷರ ಕಲ್ತಾರಿಂದ ಹೆಚ್ಚು ಅನಾಹುತ ಆಗ್ತಿದೆಯೋ, ಕಲೀದೆ ಇರೋರಿಂದ್ಲೋ?’ ನಿಜ. ದೇಶದಲ್ಲಿ ಭ್ರಷ್ಟಾಚಾರ ಭುಗಿಲೆದ್ದಿದ್ದರೆ ಅದು ಅಕ್ಷರ ಕಲಿತವರಿಂದಲೇ ಎನ್ನುವುದು ನಿರ್ವಿವಾದ. ಇದು ಏಕೆ? ಇದು ಅನಕ್ಷರಸ್ಥ ಎನ್ನುವ ಸಾಮಾನ್ಯನ ತಲೆಯನ್ನೂ ಕೊರೆಯುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ (8–12–1974) ಮಾಡಿದ ಸಂದರ್ಭದಲ್ಲಿ ಕುವೆಂಪು, ‘ನನ್ನ ಉಪದೇಶ ಭಾಷಣದಿಂದ ಮಹತ್ಸಾಧನೆಯಾಗಿಬಿಡುತ್ತದೆ ಎಂಬ ನಂಬಿಕೆ ಏನೂ ನನಗಿಲ್ಲ.

ಏಕೆಂದರೆ ಹಿಂದೆಯೂ ನಮ್ಮ ರಾಷ್ಟ್ರದ ನೂರಾರು ವಿಶ್ವವಿದ್ಯಾಲಯಗಳಲ್ಲಿ ಇಂತಹ ಘಟಿಕೋತ್ಸವ ಭಾಷಣಗಳು ಸಾವಿರಾರು ನಡೆದಿವೆ. ಆ ಭಾಷಣಗಳನ್ನು ಕೇಳಿ ‘ಸತ್ಯಂವದ–ಧರ್ಮಂಚರ’ ಮೊದಲಾದ ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ, ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ  ನಿಮ್ಮಂತಹ ಲಕ್ಷಾಂತರ ಸ್ನಾತಕರೆ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ ರಂಗದಲ್ಲಿ, ಅಧಿಕಾರಿ ರಂಗದಲ್ಲಿ,  ಶಿಕ್ಷಣ ರಂಗದಲ್ಲಿ ನಿರ್ಲಜ್ಜೆಯಿಂದ ಪಾಪಮಯ ಭ್ರಷ್ಟಾಚಾರಗಳಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿರುವುದನ್ನು ನೆನದರೆ ಬದುಕು  ಬೆಬ್ಬಳಿಸಿ ಹದುಗುವಂತಾಗುತ್ತದೆ’ ಎಂದು ಹೇಳುವ ಪರಿಸ್ಥಿತಿಯನ್ನು ಶಿಕ್ಷಣ ವ್ಯವಸ್ಥೆ ಒಳಗೊಂಡಿದೆ ಎಂದರೆ ಏನರ್ಥ?

ದಿನಗಳೆದಂತೆ ಅವರ ಹೃದಯದ ಕತ್ತಲೆ ಕರಗುವ ಬದಲು ಮತ್ತಷ್ಟು ದಟ್ಟವಾಗಿ ಕವಿಯುತ್ತಲೆ ಸಾಗುತ್ತಿರುವುದರ ಬಿಡುಗಡೆ ಎಂದಿಗೆ? ರಾಷ್ಟ್ರ ಅಷ್ಟಿಷ್ಟು ಪ್ರಗತಿ ಸಾಧಿಸಿದೆ ನಿಜ. ಆದರೆ ಅದು ಬದುಕಿಗೆ ಪೂರಕವಾಗಿದೆಯೋ ಅಥವಾ ಮಾರಕವಾಗಿ ಪರಿಣಮಿಸುತ್ತಿದೆಯೋ? ದಿನಕಳೆದಂತೆ ಎಲ್ಲರ ಮನದಲ್ಲಿ ದುಗುಡ ಮನೆ ಮಾಡಿದೆ. ವಿಗತಿಯೇ ಪ್ರಗತಿ ಎಂಬ ಭ್ರಮೆಯಲ್ಲಿ ಬಹುಶಃ ಎಲ್ಲರೂ ಸಿಲುಕಿದ್ದೇವೆ.

‘ಮನುಷ್ಯ ನಿರ್ಮಾಣ’ವೇ ಇಡೀ ನನ್ನ ಜೀವಿತೋದ್ದೇಶ ಎನ್ನುತ್ತಿದ್ದ ವಿವೇಕಾನಂದರು ಎಂತಹ ಶಿಕ್ಷಣ ಬೇಕು ಎನ್ನುವುದನ್ನು ಕುರಿತು ‘ಯಾವ ವಿದ್ಯೆಯಿಂದ ನಾವು ಗುಣವಂತರಾಗಬಲ್ಲೆವೋ, ಬುದ್ಧಿಶಕ್ತಿ ವೃದ್ಧಿಸಬಲ್ಲುದೋ, ಧೀಶಕ್ತಿ ವಿಸ್ತಾರಗೊಳ್ಳಬಲ್ಲುದೋ ಹಾಗೂ ಸ್ವಾವಲಂಬಿಯಾಗಿ ಬದುಕಬಲ್ಲೆವೋ ಅಂತಹ ವಿದ್ಯೆ ನಮಗೆ ಬೇಕು’ ಎಂದಿದ್ದರು. ಅವರ ಈ ಮಾತಿಗೂ ಉತ್ತರ ಪ್ರದೇಶದ ಅಟೆಂಡರ್‌ ಹುದ್ದೆಯನ್ನು ಪಿಎಚ್‌.ಡಿ. ಪಡೆದವರು ಆಶಿಸುವ ಹಾಗೂ ಭಿಕ್ಷುಕರಾಗಿ ಬೀದಿಗೆ ಬಿದ್ದಿರುವ ಪದವೀಧರರಿಗೂ ಭೂಮಿ ಆಕಾಶಗಳ ಅಂತರವಿದೆ.

ಭಾರತದ ಶ್ರೇಷ್ಠ ಚಿಂತಕ,  ಪತ್ರಕರ್ತ ಡಾಮ್‌ ಮೊರೆಸ್‌ ಭಾರತೀಯರ ಮನಸ್ಥಿನ ದೀನಹೀನ ಸ್ಥಿತಿಯನ್ನು ರೂಪಕವಾಗಿ ಚಿತ್ರಿಸಿದ್ದಾರೆ. ಅವರು ಹೇಳುತ್ತಾರೆ ‘ಸಂಪದ್ಭರಿತ ರಾಷ್ಟ್ರ, ಸುಂದರವಾದ ಕಟ್ಟಡ, ಸುವ್ಯವಸ್ಥಿತವಾಗಿ ಸಜ್ಜುಗೊಂಡಿರುವ ಕೊಠಡಿ, ಅದ್ಭುತವಾದ ಟೇಬಲ್‌ ಕುರ್ಚಿ, ಹವಾನಿಯಂತ್ರಣ, ಕುರ್ಚಿಯಲ್ಲಿ ಸುಂದರವಾದ ಸದೃಢ ವ್ಯಕ್ತಿಯೂ ಕುಳಿತಿದ್ದಾನೆ. ನೋಡಲು ಮುಖವೂ ಮೋಹಕವಾಗಿದೆ. ಹೌದು, ಎಲ್ಲವೂ ಇದೆ, ಆದರೆ ತಲೆಯಲ್ಲಿ ಬುದ್ಧಿಯೊಂದನ್ನು ಬಿಟ್ಟು’. ನಿಜ. ನಮ್ಮ ಬುದ್ಧಿಮತ್ತೆಗೆ ಏನಾಗಿದೆ? ಶತ ಶತಮಾನಗಳ ಗುಲಾಮಗಿರಿಯಲ್ಲಿ ಬೆಳೆದು ಬಂದ ಬುದ್ಧಿಗೆ ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಎನ್ನುವುದೇ ಅಪ್ಯಾಯಮಾನವಾಗಿ ಸ್ವಾತಂತ್ರ್ಯ ಎಂದರೆ ಜವಾಬ್ದಾರಿ ಎಂದರಿಯಲು ಇನ್ನೆಷ್ಟು ದಶಕಗಳು ಬೇಕು? ಸ್ವಾಭಿಮಾನದ ಗರಿಗೆದರಲು ಇನ್ನೆಷ್ಟು ತಲೆಮಾರುಗಳು ಕಾಯಬೇಕು?

ಪದವೀಧರರಾಗಿಯೂ, ಪಿಎಚ್‌.ಡಿ. ಪಡೆದವರಾಗಿಯೂ ಅಟೆಂಡರ್‌ ಹುದ್ದೆಗೆ ಅರ್ಜಿ ಹಾಕಲು ಇರುವಂಥ ಮನಸ್ಥಿತಿ ಯಾವುದು.  ಹೃದಯವನ್ನು ಅರಳಿಸಿ ಬಲಿಷ್ಠಗೊಳಿಸುವ ಮಾತೃ ಭಾಷಾ ಶಿಕ್ಷಣದಿಂದ ವಂಚಿತರಾಗಿರುವುದೆ? ಕೇವಲ ಮಾಹಿತಿಯನ್ನು ಮನಸ್ಸಿಗೆ ತುಂಬುತ್ತಾ ಹೃದಯವನ್ನು ಕಡೆಗಣಿಸಿರುವುದರ ಪರಿಣಾಮವೆ? ಭಿಕ್ಷೆ ಬೇಡುವ ಸ್ಥಿತಿಗೆ ಅದು ಕಾರಣವಾಗಿದೆಯೆ? ಮಾತೃ ಭಾಷೆಯ ಶಿಕ್ಷಣವನ್ನು ಕುರಿತು ಮಹಾತ್ಮ ಗಾಂಧಿ ಅವರು ‘ಕೊರತೆಗಳೇನೇ ಇರಲಿ, ನನ್ನ ತಾಯಿಯ ಎದೆಗೆ ಅಂಟಿಕೊಳ್ಳುವಂತೆಯೇ ನನ್ನ ತಾಯ್ನುಡಿಗೂ ನಾನು ಅಂಟಿಕೊಳ್ಳಬೇಕು. ಅ

ದು ಮಾತ್ರವೇ ನನಗೆ ಪ್ರಾಣದಾಯಕ ಹಾಲನ್ನು ಊಡಬಲ್ಲದು’ ಎಂದು ಸತ್ಯವನ್ನು ಹೇಳಿದರೆ, ರವೀಂದ್ರನಾಥ ಟ್ಯಾಗೋರ್‌ ‘ಭಾರತವನ್ನು ಬಿಟ್ಟರೆ ಜಗತ್ತಿನ ಮತ್ತ್ಯಾವ ರಾಷ್ಟ್ರದಲ್ಲೂ ಶಿಕ್ಷಣ ಭಾಷೆ ವಿದ್ಯಾರ್ಥಿಯ ಭಾಷೆಗಿಂತ ಭಿನ್ನವಾಗಿರುವಂಥ ಈ ಸ್ಥಿತಿ ಕಂಡುಬರುವುದಿಲ್ಲ’ ಎಂದು ಭಾರತದ ವಸ್ತುಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಗಾಂಧೀಜಿ ಪ್ರಣೀತ ಗ್ರಾಮ ಸ್ವರಾಜ್ಯ ಹಾಗೂ ಗುಡಿ ಕೈಗಾರಿಕೆಗಳನ್ನು ಕಡೆಗಣಿಸಿದ ಭಾರತ ಬದುಕಿಯೂ ಸತ್ತಂತಿದೆ. ಬಹಿರಂಗದಲ್ಲಿ ತೋರಿಕೆಯ ಶ್ರೀಮಂತಿಕೆ ಮೆರೆಯುತ್ತಿದ್ದರೆ,  ಅಂತರಂಗದಲ್ಲಿ ಕಡು ಪಾಪಿಗಳಾಗಿ ನರಳುತ್ತಿದ್ದೇವೆ.

ಒಂದು ಕಡೆ ‘ಮೇಕ್‌ ಇನ್‌ ಇಂಡಿಯಾ’ ಎಂದು ವಿದೇಶಿ ಬಂಡವಾಳಶಾಹಿಗಳನ್ನು ಕೆಂಪು ಹಾಸು ಹಾಸಿ ಕರೆಯುತ್ತಾ ನಮ್ಮ ಗುಡಿ ಕೈಗಾರಿಕೆಗಳ ಗೋಣು ಮುರಿಯುತ್ತಿದ್ದರೆ,  ಮತ್ತೊಂದು ಕಡೆ ‘ಸ್ಮಾರ್ಟ್‌ ಸಿಟಿ’ ಎನ್ನುವ ಮರೀಚಿಕೆಯ ಹುಂಬತನದ ನಡುವೆ ಆತ್ಮವನ್ನು ಕಳೆದುಕೊಂಡು ಅನಾಥವಾಗುತ್ತಿರುವ ಗ್ರಾಮ ಹಾಗೂ ಗ್ರಾಮೀಣ ಸಂಸ್ಕೃತಿಗಳು! ಆತ್ಮವಂಚನೆ ಆತ್ಮಹತ್ಯೆಗಿಂತ ಕ್ರೂರ ಎಂಬ ಅರಿವು ತಂದುಕೊಡುವ ಶಿಕ್ಷಣ ಎಂದಿಗೆ ನಮ್ಮ ಮಣ್ಣಿನಲ್ಲಿ ಕಣ್ಣು ತೆರೆದೀತು? ಅರಿವು ತರದ ಅಕ್ಷರಜ್ಞಾನ ಮನುಕುಲಕ್ಕಷ್ಟೇ ಅಲ್ಲ ಇಡೀ ಜೀವ ಸಂಕುಲಕ್ಕೆ ಅತ್ಯಂತ ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT