ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತ್ತ ಪುರೋಹಿತಶಾಹಿ ಅತ್ತ ಅಮೆರಿಕಶಾಹಿ!

Last Updated 10 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಈವರೆಗೆ ಒಂದು ಪರಂಪರೆ ನಡೆದು ಬಂದಿತ್ತು. ದೇಶದ ಪ್ರಧಾನಿ ಯಾರೇ ಆಗಿ­ರಲಿ, ಯಾವ ಪಕ್ಷದವರೇ ಆಗಿರಲಿ ಭಾರತ­ದಲ್ಲಿ ನೇಯ್ಗೆಯಾದ ಹಾಗೂ ಕೈಗಳಿಂ­ದಲೇ ನೇಯ್ಗೆ­­ಯಾದ ವಸ್ತ್ರವನ್ನು ತೊಡುತ್ತಿದ್ದರು. ಅವರು ಹೀಗೆ ಮಾಡಲಿಕ್ಕೆ ಹಲವು ಕಾರಣ­ಗಳಿದ್ದವು.
ಹತ್ತಿ ಕೈಮಗ್ಗವು ದೇಶದ ಹೆಮ್ಮೆಯ ಉದ್ದಿಮೆ­ಯಾಗಿದೆ ಹಾಗೂ ಪ್ರಾಚೀನ ಭಾರತಕ್ಕೆ ಸಿರಿ­ಸಂಪತ್ತನ್ನು ತಂದುಕೊಟ್ಟಿದ್ದ ಉದ್ದಿಮೆಯಾಗಿದೆ.

ಕೃಷಿಯ ನಂತರದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಬಲ್ಲ ಹಾಗೂ ಆ ಮೂಲಕ ಗ್ರಾಮೀಣ ಬಡತನವನ್ನು ನೀಗಬಲ್ಲ ಉದ್ದಿಮೆ­ಯಾಗಿದೆ. ಅದರಲ್ಲೂ ನೂಲುವುದು ಹಾಗೂ ನೇಯ್ಗೆ ಮಾಡುವುದು ಮಹಿಳೆಯರಿಗೆ, ಮುದುಕ-–ಮುದುಕಿಯರಿಗೆ ಪೂರಕ ಉದ್ಯೋಗ ಒದ­ಗಿಸ­ಬಲ್ಲ ಗೃಹ ಕೈಗಾರಿಕೆಯಾಗಿದೆ. ನಾಲ್ಕನೆ­ಯದಾದ ಮತ್ತೊಂದು ಮಹತ್ವದ ಕಾರಣವಿದೆ: ನಮ್ಮ­ನ್ನಾಳಿದ ಬ್ರಿಟಿಷರು ನಮ್ಮನ್ನು ಪರತಂತ್ರ­ಗೊ­ಳಿಸಿದ್ದು ಹತ್ತಿ ಕೈಮಗ್ಗ ಉದ್ದಿಮೆಯನ್ನು ಕೊಲ್ಲುವ ಮೂಲಕ. ಹತ್ತಿ ಕೈಮಗ್ಗವನ್ನು ಬಲ­ವಂತ­ದಿಂದ ನಾಶಪಡಿಸಿ ತಮ್ಮ ದೇಶದ ಮ್ಯಾಂಚೆಸ್ಟರ್ ಮಿಲ್ಲು­ಗಳ ಬಟ್ಟೆಯನ್ನು ಅವರು ತಂದು ಮಾರಿದ್ದರು.

ನಾವು ವಿದೇಶಿ ಆಳ್ವಿಕೆಯ ವಿರುದ್ಧ ಬಂಡೆದ್ದಾಗ ವಿದೇಶಿ ವಸ್ತ್ರವನ್ನು ಸುಟ್ಟಿದ್ದೆವು, ಖಾದಿ ಕೈಮಗ್ಗದ ವಸ್ತ್ರ ತೊಟ್ಟಿದ್ದೆವು. ಈಗ ಪ್ರಧಾನಿ ದೇಸಿ ವಸ್ತ್ರ ತೊಡುವ ಪರಂಪರೆಯನ್ನೇ ಮುರಿದಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿ­ಯಾದ ಸಂದರ್ಭದಲ್ಲಿ ನರೇಂದ್ರ ಮೋದಿಯ­ವರು ವಿದೇಶದಲ್ಲಿ ತಯಾರಾದ ಹಾಗೂ ವಿಪರೀತ ದುಬಾರಿಯಾದ ಬಟ್ಟೆ ತೊಟ್ಟಿದ್ದರಂತೆ. ಮಾತ್ರ­ವಲ್ಲ, ದಿರಿಸಿನ ತುಂಬಾ ತಮ್ಮದೇ ಹೆಸರನ್ನು ನೇಯಿಸಿಕೊಂಡಿ­ದ್ದರಂತೆ! ಯಾವುದೇ ಹುಚ್ಚು ನವಾಬನೂ ಇಂತಹ ಅತಿರೇಕ ನಡೆಸಿರಲಿಕ್ಕಿಲ್ಲ. ಹೆಚ್ಚೆಂದರೆ ಅವನು ದೇವರ ಹೆಸರನ್ನು ಅಂಗಿಯ ತುಂಬಾ ನೇಯಿಸಿಕೊಂಡು ಮೆರೆದಾಡಿರಬಹುದು.

‘ಭಾರತೀಯ ಸಭ್ಯತೆಯನ್ನು ಎತ್ತಿ ಹಿಡಿಯು­ತ್ತೇನೆ’ ಎಂದು ಹೇಳಿ ಅಧಿಕಾರಕ್ಕೆ ಬಂದವರು ಈಗಿನ ಪ್ರಧಾನಿ. ಒಬ್ಬ ಹಿಂದೂ ಧರ್ಮೀಯ  ಅಥವಾ ಯಾವುದೇ ಧರ್ಮೀಯ ಪವಿತ್ರ ಸಂದರ್ಭ­ಗಳಲ್ಲಿ ಮಡಿಯನ್ನುಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ದೇಶದ ಪ್ರಧಾನಿ ದೇಶದ ಬಟ್ಟೆ ತೊಡುವುದು. ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಖಾದಿ ಬಟ್ಟೆ ತೊಡುತ್ತಿದ್ದರು.

ಏಕೆ ಗೊತ್ತೆ? ಶ್ರೀರಾಮಚಂದ್ರ ಸಹ ರಾಜ್ಯ ಆಳುವಷ್ಟು ದಿನ ನಾರುಡುಗೆಯನ್ನೇ ತೊಡುತ್ತಿದ್ದ. ಅವನಿಗೆ ಥಳುಕು ಬಟ್ಟೆ ತೊಡಿಸಿ ನಿಲ್ಲಿಸಿದ್ದು ಇತ್ತೀಚಿನ ಸೀರಿಯಲ್ಲುಗಳಲ್ಲಿ ಅಷ್ಟೆ. ಗಾಂಧೀಜಿ ಖಾದಿ ಮಾತ್ರವಲ್ಲ, ಕನಿಷ್ಠ ಬಟ್ಟೆ ತೊಡುತ್ತಿದ್ದರು. ಇಂಗ್ಲೆಂಡಿನಲ್ಲಿ ಒಮ್ಮೆ ಅಲ್ಲಿನ ಚಕ್ರವರ್ತಿಯನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾಮೂಲಿಯಂತೆ ಕನಿಷ್ಠ ಬಟ್ಟೆ ತೊಟ್ಟು ನಿಂತಿದ್ದರು. ಆಗ ಪತ್ರಕರ್ತನೊಬ್ಬ ಇದನ್ನು ಪ್ರಶ್ನೆ ಮಾಡಿದನಂತೆ. ಗಾಂಧೀಜಿ ನಗಾಡಿ, ‘ಇರಲಿ ಬಿಡಿ. ನನಗೆ ಹಾಗೂ ತಮಗೆ ಇಬ್ಬರಿಗೂ ಆಗಿ ಮಿಗು­ವಷ್ಟು ಬಟ್ಟೆಯನ್ನು ಚಕ್ರವರ್ತಿಯೊಬ್ಬರೇ ತೊಟ್ಟಿ­ದ್ದಾರಲ್ಲ’ ಎಂದಿದ್ದರಂತೆ.

ಗಾಂಧೀಜಿ ಕನಿಷ್ಠ ಬಟ್ಟೆ ತೊಟ್ಟಿದ್ದರಿಂದ ಕನಿಷ್ಠ­ರೇನಾಗಲಿಲ್ಲ. ನರೇಂದ್ರ ಮೋದಿಯವರ ನಡೆ–ನುಡಿಯಲ್ಲಿ ನನಗೆ ಭಾರತೀಯತೆ ಕಂಡು­ಬರು­ತ್ತಿಲ್ಲ, ಒಬ್ಬ ಯಂತ್ರ ನಾಗರಿಕ ಕಾಣತೊಡಗಿದ್ದಾನೆ. ಭಾರತವು ಶ್ರಮಜೀವಿಗಳ ದೇಶ. ಶ್ರಮ­ಜೀವಿಗಳು ಕಟ್ಟಿದ ಭವ್ಯ ಪರಂಪರೆ ಈ ದೇಶಕ್ಕಿದೆ. ವಚನ ಚಳವಳಿ, ದಾಸ ಚಳವಳಿ, ಸಂತ ಚಳವಳಿ, ಸೂಫಿ ಚಳವಳಿ... ಇತ್ಯಾದಿ ಜನಪರ ಚಳವಳಿಗಳು ಕಟ್ಟಿದ ಸರಳ ಬದುಕಿನ ಪರಂಪರೆ ನಮ್ಮದು. ಈ ಚಳವಳಿಗಳೇ ನನ್ನ ಕನ್ನಡವನ್ನು, ಮೋದಿಯವರ ಗುಜರಾತಿ ಭಾಷೆಯನ್ನು ಪೋಷಿಸಿದ್ದು.

ಅಮೆರಿಕದಿಂದ ಅಧ್ಯಕ್ಷರು ಬಂದರೆ ನಾವು ಅಮೆರಿಕನ್ನರಾಗಬೇಕಿಲ್ಲ. ಅಮೆರಿಕ ನಮ್ಮ ಪರಂಪರೆಯಲ್ಲ. ಮೋದಿಯವರ ಹಿಂದುತ್ವವು ನನಗೆ ಪ್ರಶ್ನಾರ್ಹವಾಗಿ ಕಾಣತೊಡಗಿದೆ. ಇತ್ತ ಪುರೋಹಿತಶಾಹಿ ಅತ್ತ ಅಮೆರಿಕಶಾಹಿ ಎಂಬ ಎರಡು ಅಪಾಯಗಳನ್ನು ಒಟ್ಟಿಗೆ ಬೆರೆಸಿ ಮಾಡಿದ ಕಲಬೆರಕೆ ಹಿಂದುತ್ವವದು. ಅವರ ಎನ್ಆರ್ಐ ಹಿಂಬಾಲಕರು ಹಾಗೂ ದೇಸಿ ಬಂಡವಾಳ­ಶಾಹಿಗಳಿಗೆ ಈ ಹಿಂದುತ್ವ ಎನ್ನುವುದು ಪ್ರಿಯವಸ್ತು ಆಗಿದ್ದೀತು. ಆದರೆ ಇದು ವಿವೇಕಾನಂದರು ಕಂಡ ಹಿಂದುತ್ವವಂತೂ ಖಂಡಿತಾ ಅಲ್ಲ.

ಭಾರತೀಯ ಸಭ್ಯತೆ ಉಳಿದು ಬಂದಿರುವುದು ಪುರೋಹಿತಶಾಹಿಗಳಿಂದಲೂ ಅಲ್ಲ ಅಥವಾ ಅನಿವಾಸಿ ಭಾರತೀಯರಿಂದಲೂ ಅಲ್ಲ. ಅದು ಉಳಿದು ಬಂದಿರುವುದು ಶ್ರಮಜೀವಿಗಳಿಂದ ಎಂಬ ಸಂಗತಿ­ಯನ್ನು ಪ್ರಧಾನಿ ಮರೆಯಬಾರದು. ಒಬಾಮ ಕೊಡುವುದಕ್ಕಿಂತ ನೂರು ಪಟ್ಟು ಮಿಗಿಲಾದ ಸಂಪತ್ತನ್ನು ನಮ್ಮ ರೈತರು ಹಾಗೂ ಕುಶಲಕರ್ಮಿಗಳು ಈ ದೇಶಕ್ಕೆ ಕೊಟ್ಟಾರು.

ಕಾಂಗ್ರೆಸ್ ಪಕ್ಷವು ಖಾದಿಯನ್ನು ಕೇವಲ ಸಂಕೇತವಾಗಿ ಮಾಡಿತು ಎಂದು ಮುನಿದ ಜನರು ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ­ದರು. ನೀವು ಸಂಕೇತಗಳಾಚೆಗೆ ನಡೆಯುತ್ತೀರಿ ಎಂದು ಜನತೆ ಬಯಸುತ್ತಿದೆ. ಸಂಕೇತಗಳನ್ನೇ ಕಿತ್ತೆಸೆದು ನಡೆಯುತ್ತೀರಿ ಎಂದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT