ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮಕ್ಕಳ ಬದುಕ ಮನ್ನಿಸು ಪ್ರಭುವೇ

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ದಿನ ಸುಡುವ ಬಿಸಿಲಲ್ಲಿ ಅಳುತ್ತಾ ನಮ್ಮ ಮುಂದೆ ನಿಂತವಳು ಒಬ್ಬ ಮಹಿಳೆ! ಆಕೆ ಬಡವಿ ಹಾಗೂ ವಿಧವೆ. ವಯಸ್ಸು ನಲವತ್ನಾಲ್ಕು. ಇಬ್ಬರು ಮಕ್ಕಳ ವಯಸ್ಸು ಹದಿನೈದು ಮತ್ತು ಹದಿಮೂರು, ಹಾಸನ ತ್ಲ್ಲಾಲೂಕಿನ ಹೆಣ್ಣು ಮಗಳಾಕೆ. ಹಿರಿಯವಳಿಗೆ ಹದಿನೈದು ವರ್ಷವಾದರೂ ಮೈಯಲ್ಲಿ ಒಂದಿಷ್ಟು ಖಂಡವಿಲ್ಲ, ರಕ್ತವಿಲ್ಲ, ಕಾಲಿಗೆ ಬಡಿದಿರುವ ಪೋಲಿಯೋ, ಕಿಡ್ನಿ ದುರ್ಬಲವಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇನ್ನು ಎರಡನೆಯವನಿಗೆ ರಕ್ತದ ಕ್ಯಾನ್ಸರ್. ಈ ಎರಡು ಮಕ್ಕಳ ಯೋಗಕ್ಷೇಮದಲ್ಲಿ ಬಸವಳಿದ ಈ ತಾಯಿಗೆ ಉದ್ಯೋಗವಿಲ್ಲ. ಉದ್ಯೋಗ ಕೊಟ್ಟರೆ ಒಪ್ಪಓರಣದಿಂದ ಉದ್ಯೋಗ ಮಾಡಲಾಗದ ನಿರಕ್ಷರಕುಕ್ಷಿ. ಆದರೆ ಆ ತಾಯಿಗೆ ಮಕ್ಕಳ ಮೇಲೆ ಅನನ್ಯ ಮಮತೆ, ಆರೈಕೆ ಮಾಡಿ ಬದುಕು ಕಟ್ಟಿಕೊಡಬೇಕೆಂಬ ತುಡಿತ! ಲಕ್ಷಾಂತರ ರೂಪಾಯಿ ಆರೋಗ್ಯದ ಖರ್ಚಿಗೆ ಬೇಕು. ಮುಖ್ಯಮಂತ್ರಿ ನಿಧಿ ಇತ್ಯಾದಿಗಳು ಸಣ್ಣ ಖರ್ಚನ್ನು ಭರಿಸಬಹುದಾದರೂ, ಅದರಾಚೆ ಅವಳಿಗೆ, ಅವಳ ಮಕ್ಕಳಿಗೆ ಏನೇನಿಲ್ಲ.  ಆಕೆಗೆ ಯಾವ ರೀತಿಯ ಸಾಂತ್ವನ ಹೇಳುವುದು?

ಹಾಗೆ ಮತ್ತೊಂದು... ಅವಳ ಹೆಸರು ವಾರಿಜಾ! ಮೂಗಿ, ಕಿವುಡಿ ಹಾಗೂ ಮಾನಸಿಕ ಅಸ್ವಸ್ಥೆ. ಎಲ್ಲಾ ರೋಗಗಳಿಗೂ ಈಕೆಯೇ ಆಶ್ರಯ ತಾಣವಾಗಿದ್ದಾಳೆ. ಯಾರೋ ಡ್ಯಾನ್ಸ್ ಬಾರಿನಲ್ಲಿ ಪಳಗಿಸಿದ್ದಾರೆ. ಆಕೆಗೆ ಹದಿನೈದು ವರ್ಷ! ನಿನ್ನ ಹೆಸರು ಏನು? ಎಂದು ಮೂಕ ಭಾಷೆಯಲ್ಲಿ ಕೇಳಿದರೆ, ನೃತ್ಯ ಮಾಡುತ್ತಾ `ಚೆನ್ನಾಗಿತ್ತಾ? ನನಗೆ ದುಡ್ಡು ಕೊಡಿ' ಎಂದು ಹಸ್ತಲಾಘವ ಮಾಡುತ್ತಾಳೆ, ಹಸಿದಾಗ ಹೊಟ್ಟೆ ತೋರುತ್ತಾಳೆ. ಈ ಮಗುವನ್ನು ಹಸಿದ ಕಾಮುಕರು ಇನ್ನಿಲ್ಲದಂತೆ ಬದುಕಿನಲ್ಲಿ  ಸೀಳಿದ್ದಾರೆ. ಈ ಜನರು, ಪ್ರತಿಭಟಿಸಲಾಗದ ಕಿವುಡಿ, ಮೂಕಿ ಮಗುವನ್ನು ಅನುಭವಿಸಿದ್ದೇವೆ ಎಂದು ಸಂಭ್ರಮಿಸಬಹುದು, ಆದರೆ ಅವರುಗಳಿಗೆ ಗೊತ್ತಿಲ್ಲ ತಮ್ಮ ಮನಸ್ಸು, ಹೃದಯ ಮೂಕವಾಗಿ ಸತ್ತುಹೋಗಿದೆ ಎಂದು! ಹೇಗೋ ಮಾಡಿ ಅವಳ ತಾಯಿಯನ್ನು ಪತ್ತೆಹಚ್ಚಿದರೆ, ಆಕೆಯೂ ಮೂಗಿ, ಬೀದಿ ಪಾಲಾಗಿರುವ ನತದೃಷ್ಟೆ. ಯಾವುದೇ ದಾಖಲೆಯಲ್ಲಿ ತನ್ನ ಇರುವಿಕೆಯನ್ನು ರುಜುವಾತುಪಡಿಸಲಾಗದಂತಹ ಭಾರತೀಯಳು, ಗಾಂಧಿ ಕಾಲೋನಿಯಲ್ಲಿದ್ದಾಳೆ!

ಹಾಗೆಯೇ ಮತ್ತೊಬ್ಬಳು....ವಯಸ್ಸು ಐವತ್ತಾರು, ಕಾಡಮ್ಮ.  ಆಕೆಯ ಮಗ ಅಪಘಾತದಲ್ಲಿ ಇಬ್ಬರು ಮೊಮ್ಮಕ್ಕಳನ್ನು ಕೈಯಲ್ಲಿ ಇಟ್ಟು ತೀರಿಕೊಂಡಿದ್ದಾನೆ. ಈ ಮಕ್ಕಳಿಗೆ ತಾಯಿಯಿಲ್ಲ. ಅಜ್ಜಿಯ ಮಡಿಲಲ್ಲಿ ಮೊಮ್ಮಕ್ಕಳು ಬೆಳೆಯುತ್ತಿದ್ದಾರೆ. ಅಜ್ಜಿ ಹೇಳಿದಳು : `ನಾನು ಆರೋಗ್ಯವಂತಳಲ್ಲ. ಬಿ.ಪಿ, ಸಕ್ಕರೆ ಕಾಯಿಲೆ, ವಾಸಿಸಲು ಸಣ್ಣ ಬಾಡಿಗೆ ಮನೆ, ಪಿಂಚಣಿಯಲ್ಲಿ ಮೊಮ್ಮಕ್ಕಳ ಜೀವನ ನಡೆಯುವುದು ಕಷ್ಟ.  ಹಾಗಾಗಿ ಕುಪ್ಪಸದಲ್ಲಿ ಕರವಸ್ತ್ರ ತೂರಿಸಿ, ಮಿಂಚುವ ಕಲಾಪತ್ತಿನ ಸೀರೆ ಉಟ್ಟು, ಮೈಸೂರು ಮಲ್ಲಿಗೆ ಮುಡಿದು, ಕುಡಿದ ಕೂಲಿ ಕಾರ್ಮಿಕರಿಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ. ಮಕ್ಕಳ ಫೀಜ್, ಅನ್ನ, ಬಾಡಿಗೆ ನಡೆಯುತ್ತದೆ, ನನ್ನ ಮೊಮ್ಮಕ್ಕಳಿಗೆ  ಈಗ ಆರು ವರ್ಷ, ಎಂಟು ವರ್ಷ. ನನಗೆ ಮೊಮ್ಮಕ್ಕಳನ್ನು ಬಿಟ್ಟಿರಲು ಸಾಧ್ಯವಿಲ್ಲ. ನಮ್ಮ ಮೂವರಿಗೂ ದಾರಿ ತೋರಿ' ಎನ್ನುತ್ತಿದ್ದಳು. ಮೊಮ್ಮಕ್ಕಳು ಅಜ್ಜಿ ಕೊಡಿಸಿದ್ದ ಚಿಪ್ಸ್ ಪ್ಯಾಕೆಟ್ ಒಡೆದು ತಿನ್ನುತ್ತಿದ್ದರು. ಆರೈಕೆಯ ಅಪ್ಪುಗೆಯಲ್ಲಿ ಬೆಳೆಯಬೇಕಾಗಿದ್ದ ಮಕ್ಕಳು, ತಾಯಿಯ ಮಡಿಲಲ್ಲಿ ಮಲಗಿ ಜಗಳವಾಡಿ, ಮುದ್ದಿಸಿಕೊಂಡು, ಮುತ್ತುಕೊಡಬೇಕಾಗಿದ್ದ ಮಕ್ಕಳು; ಹಸಿವು, ಅಸಹಾಯಕತೆ, ಅತಂತ್ರತೆಯಲ್ಲಿ ನರಳುವಂತದ್ದು ಒಂದೆಡೆಯಾದರೆ, ಜೀವನದ ಅಸ್ತಮಾನಲ್ಲಿದ್ದ ವಯೋವೃದ್ಧೆ ಆರೈಕೆ, ರಕ್ಷಣೆಗಳಿಂದ ದೂರವಾಗಿ, ಮೊಮ್ಮಕ್ಕಳ ಸಲುಹುವ ಅನಿವಾರ್ಯತೆಯಿಂದ ಪುಡಿಗಾಸಿಗಾಗಿ ಏರುಜವ್ವನೆಯಂತೆ ನಟಿಸಿ, ಒದಿಸಿಕೊಂಡು ಪ್ರತೀಕ್ಷಣ ಅವಮಾನದ ಕೂಪದಲ್ಲಿ ಬೇಯುತ್ತಾ, ತನ್ನ ನಂಬಿದ ಬಾಲೆಯರಿಗಾಗಿ ಸಾವನ್ನೂ ಬಯಸದ ನೋವಿನ ಸ್ಥಿತಿಯಲ್ಲಿರುವುದು ಈ ಕಲ್ಯಾಣ ರಾಷ್ಟ್ರದ ವಚನಭ್ರಷ್ಟತೆಗೊಂದು ಉದಾಹರಣೆಯಾಗಿದೆ. ಈ ಎಲ್ಲಾ ಅಸಹನೀಯ ಘಟನೆಗಳಲ್ಲಿ  ಪುರುಷ ಸಮುದಾಯ ಸಂಸ್ಕಾರರಹಿತ ಪಶುವಿನಂತೆ ಕಾಣಿಸಿಕೊಳ್ಳುತ್ತಿರುವುದು ನಾವೆಲ್ಲರೂ ಯೋಚಿಸಬೇಕಾದ ವಿಚಾರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಧಃಪತನಗೊಂಡ ಪುರುಷವ್ಯಕ್ತಿತ್ವದ ನೈಜ ಮೌಲ್ಯಗಳ ಪುನರ್ವಿಕಾಸಕ್ಕಾಗಿ ಆಂದೋಲನವನ್ನೇರ್ಪಡಿಸಲು ಇದು ಸಕಾಲ.

ತಾಯಿಯ ಪ್ರೀತಿ, ತಂದೆಯ ಎಚ್ಚರಿಕೆ, ತಾತಂದಿರ ಸಲುಗೆ ನೀಡುವುದು ಕಷ್ಟಸಾಧ್ಯ, ಆದರೆ  ಗುಣಮಟ್ಟದ ಮಾನವೀಯ ಕರ್ತವ್ಯ ಮಾಡಬೇಕಾದಂತಹ ಮಕ್ಕಳ ಕಲ್ಯಾಣ ಸಮಿತಿಗಳು, ಬಾಲನ್ಯಾಯ ಮಂಡಳಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮಕ್ಕಳ್ನು ರಕ್ಷಿಸಬಹುದು. ಆದರೆ ರಕ್ಷಿಸಿದ ನಂತರ  ಕರ್ತವ್ಯ ಮುಗಿಯಕೂಡದು.  ಬದುಕಿನಲ್ಲಿ ಮಾಗಿಹೋಗಿರುವ ಮಕ್ಕಳ ತಾಯಂದಿರ ಬದುಕನ್ನು, ಭಾವನೆಗಳನ್ನು, ಒಳಅಂತಃಕರಣವನ್ನು ಸದೃಢಗೊಳಿಸಬೇಕು. ಬರೀ ಕರ್ತವ್ಯಕ್ಕಾಗಿ ಅಧಿಕಾರ ಉಪಯೋಗಿಸದೇ, ಅದರಾಚೆ ಪ್ರೀತಿಯ ದಾರಿಯನ್ನು ಸೃಷ್ಟಿಸಿದಾಗ ಮಾತ್ರ ಅದು ಎಲ್ಲಾ ನೊಂದ ತಾಯಂದಿರ ಸಂಭ್ರಮದ ದಿನವಾಗಬಹುದು. ತನ್ಮಯತೆಯಿಂದ ಎಲ್ಲವನ್ನು ಕಳೆದು, ತಮ್ಮನ್ನು ಮಾರಿಕೊಂಡು, ಮಕ್ಕಳಿಗಾಗಿ ಬದುಕು ರೂಪಿಸುತ್ತಿರುವ ಸಾವಿರಾರು ಅಸಹಾಯಕ ತಾಯಂದಿರಿಗೆ  `ತಾಯಂದಿರ ದಿನ'  ಕಳೆದು ಹೋದ ಅವರ ಅಸ್ತಿತ್ವ, ಘನತೆ ಹಾಗೂ ಭದ್ರತೆಯನ್ನು ತಂದಿಟ್ಟು ಅವರು ಈ ಸಮಾಜವನ್ನು ಹರಸುವಂತಾಗಬೇಕು.
ಈ ಆಶಯಗಳು, ಹಕ್ಕೊತ್ತಾಯಗಳು ನಮ್ಮನ್ನು ಸಲಹಬೇಕಾದ ಸರ್ಕಾರದ ಎದೆಗೆ ಬೀಳಲಿ. ತಾಯಿಯ ವಾತ್ಸಲ್ಯ, ತಂದೆಯ ಎಚ್ಚರದ ನಡೆ ನಮ್ಮನ್ನಾಳುವವರಿಗೆ ಇದ್ದಲ್ಲಿ ಇಲಿ ಹೆಗ್ಗಣಗಳಂತಹ ದಲ್ಲಾಳಿಗಳ ಪಾಲಾಗುತ್ತಿರುವ ಮಕ್ಕಳ ಪೌಷ್ಟಿಕ ಆಹಾರ ಮರಳಿ ಮಕ್ಕಳಿಗೆ ದೊರಕಿಸುವಂತಾಗಬಹುದು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಾಮಾಜಿಕ ಭದ್ರತೆ ಹಾಗೂ ಆಹಾರ ಭದ್ರತೆಯನ್ನು ಅಸಹಾಯಕರಿಗೆ ಒದಗಿಸುವಂತಾಗಬೇಕು. ಈ ರಾಜಕೀಯ ಇಚ್ಛಾಶಕ್ತಿ ಹಾಗೂ ಮಷ್ಟಿಪ್ರಜ್ಞೆಯೊಡನೆ ನಮ್ಮಿಂದ ಆಯ್ಕೆಗೊಂಡ ಜನಸೇವಕರ ಪ್ರಾಮಾಣಿಕ ಕರ್ತವ್ಯಕ್ಕಾಗಿ ಕಾಯುತ್ತಿರುವ ಸಾವಿರಾರು ಮಕ್ಕಳ, ಮಹಿಳೆಯರ ಪರವಾಗಿ.
- ಸ್ಟ್ಯಾನ್ಲಿ ಪರಶು, ಮೈಸೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT