ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಎಚ್ಚರಕ್ಕೆ ಬೇಕಿದೆ ಸಂಕಲ್ಪ

ಜನವರಿ 30ರಂದು ಆದದ್ದು ಗಾಂಧೀಜಿ ಕೊಲೆ ಮಾತ್ರವೇ?
Last Updated 24 ಜನವರಿ 2016, 19:30 IST
ಅಕ್ಷರ ಗಾತ್ರ

1948ರ ಜನವರಿ 30ರಂದು ಮಹಾತ್ಮ ಗಾಂಧಿ ಶರೀರ ನರಹಂತಕನ ಗುಂಡಿಗೆ ಬಲಿಯಾಯ್ತು. ಆದರೆ ಅಹಿಂಸಾ ತತ್ವದ ಮೂಲಕ ಜಗತ್ತಿಗೆ ಶಾಂತಿ ಸೌಹಾರ್ದವನ್ನು ಸಾರಿದ ದಿವ್ಯಚೇತನದ ಉಸಿರು ಮಾತ್ರ ಎಲ್ಲರ ಮನದಲ್ಲಿ ಇಂದಿಗೂ ಹಸಿರಾಗಿಯೇ ಉಳಿದಿದೆ.

ಏಕೆಂದರೆ ಭೂಮಿಯ ಮೇಲೆ ಮನುಕುಲ ಕರುಣೆಗೆ ಬದಲು ಕ್ರೌರ್ಯದಿಂದ ಕುದಿಗೊಳ್ಳುತ್ತಿದೆ. ಅದಕ್ಕೆ ಪರಿಹಾರ ಗಾಂಧಿ ಮಾರ್ಗದಲ್ಲಿದೆ. 1893ರ ಮೇ ತಿಂಗಳು ಮಹತ್ವದ್ದು. ಅಂದು ಭಾರತದ ಎರಡು ಚೇತನಗಳು ಹೊರಜಗತ್ತಿಗೆ ಪಯಣಿಸಿದವು. ಪೂರ್ವಾಭಿಮುಖವಾಗಿ ಪಶ್ಚಿಮದ ಅಮೆರಿಕಕ್ಕೆ ವಿವೇಕಾನಂದರು ಪಯಣಿಸಿದರೆ, ದಕ್ಷಿಣಾಭಿಮುಖವಾಗಿ ಆಫ್ರಿಕಾಕ್ಕೆ ಗಾಂಧಿ ಪಯಣಿಸಿದರು.

ರಾಮಕೃಷ್ಣ  ಪರಮಹಂಸರಿಂದ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದ ವಿವೇಕಾನಂದರು ವಿಶ್ವ ವೇದಿಕೆಯಲ್ಲಿ ‘ವೇದಾಂತ’ವೇ ಮುಂದಿನ ವಿಶ್ವಧರ್ಮ ಎಂದು ಘೋಷಿಸಿದರೆ, ದಕ್ಷಿಣ ಆಫ್ರಿಕಾದಲ್ಲಿ ವರ್ಣ ತಾರತಮ್ಯದ ವಿರುದ್ಧ ಹೋರಾಡಿ ರಾಜಕೀಯ ಸಂತನಾಗುವ, ತನ್ಮೂಲಕ ಮಹಾತ್ಮನಾಗುವ ಸನ್ನಿವೇಶ ಗಾಂಧೀಜಿಗೆ ಒದಗಿ ಬಂತು. ವಿವೇಕಾನಂದರ ಅಂತ್ಯ ಸಹಜ ರೀತಿಯಲ್ಲಾದರೆ ಗಾಂಧೀಜಿ ಅಂತ್ಯ ಕೊಲೆಯಲ್ಲಿ ಪರ್ಯವಸಾನವಾಯ್ತು. ಸ್ವದೇಶೀಯನಾದ ಗೋಡ್ಸೆ ಜನವರಿ 30ರಂದು ಕೊಂದದ್ದು ಗಾಂಧಿ ಅವರನ್ನಲ್ಲ, ಮನುಕುಲದ ಆದರ್ಶವನ್ನು.

ಸರಳತೆಯಲ್ಲಿಯೇ ಸತ್ಯದ ಸೌಂದರ್ಯವನ್ನು ಕಂಡುಕೊಂಡ ಗಾಂಧಿ ಅರೆಬೆತ್ತಲಾಗಿ ವಿಶ್ವದುದ್ದಗಲ ಎದೆ ತೆರೆದು ತಿರುಗಿದ ಮಾನವ ಪ್ರೇಮಿ. ‘ಭಾರತದ ಅರೆಬೆತ್ತಲೆ ಫಕೀರ’ ಎಂದು ಚರ್ಚಿಲ್‌ ಕರೆದರು. ಬ್ರಿಟಿಷ್‌ ಸಾಮ್ರಾಜ್ಯ ಮೈತುಂಬ ಸೂಟು ಬೂಟು ಹಾಕಿಕೊಂಡು ಪ್ರಬಲ ಶಸ್ತ್ರಗಳ ಶಕ್ತಿ ಹೊಂದಿದ್ದರೂ, ಆ ಅರೆಬೆತ್ತಲ ಫಕೀರನಿಗೆ ತಲೆ ಬಾಗಿ ವಂದಿಸುವ ಎತ್ತರಕ್ಕೆ ಬೆಳೆದ ಗಾಂಧಿ ಅವರ ಆತ್ಮಶಕ್ತಿ ಅಣುಶಕ್ತಿಗಿಂತ ಪ್ರಬಲವಾದುದು.

ಗ್ಯಾಲಕ್ಸಿಯಲ್ಲಿ ಕುಳಿತು ದುರ್ಬೀನು ಹಾಕಿ ನೋಡಿದರೂ ಕಣ್ಣಿಗೆ ಕಾಣಿಸದ ಭೂಮಿಯನ್ನು ಕುರಿತು ಗಾಂಧೀಜಿ ಹೇಳಿದ್ದು ‘ಭೂಮಿ ನಮ್ಮ ಅಗತ್ಯವನ್ನು ಪೂರೈಸುತ್ತದೆ, ಆಸೆಯನ್ನಲ್ಲ’ ಎಂದು. ಏಕೆಂದರೆ ಆಸೆಗೆ ಆಕಾಶವೇ ಅಂತ್ಯ. ಬುದ್ಧ ಹೇಳಿದ್ದೂ ಅದನ್ನೇ. ಅಗತ್ಯಕ್ಕೂ ಆಸೆಗೂ ಭೂಮಿ, ಆಕಾಶಗಳ ಅಂತರವಿದೆ.

ಇಂದು ಮನುಷ್ಯರೆನಿಸಿಕೊಂಡ ನಾವು ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಬಗೆಯುತ್ತಿದ್ದೇವೆ. ಅದರಿಂದಾಗಿ ಭೌತಿಕವಾಗಿ ಬಹು ಎತ್ತರಕ್ಕೆ ಬೆಳೆಯುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಸಿಲುಕಿಕೊಂಡು ವಾಸ್ತವದಲ್ಲಿ ನೈತಿಕವಾಗಿ ಕುಗ್ಗಿ ಕುಸಿದು ಹೋಗುತ್ತಿದ್ದೇವೆ. ಎಲ್ಲವೂ ಇದೆ ಆದರೆ ಏನೂ ಇಲ್ಲ ಎನ್ನುವ ಶೂನ್ಯ ಸ್ಥಿತಿಯಲ್ಲಿ ಪ್ರಪಂಚದಮನುಕುಲ ನರಳುತ್ತಿದೆ. ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದು ನರಳುವುದನ್ನಲ್ಲ ಅರಳುವ ಹೃದಯದ ನೆಮ್ಮದಿಯನ್ನು.

ವಿಜ್ಞಾನ ಮುಂದುವರಿದಂತೆ ಅಜ್ಞಾನ ವಿಜೃಂಭಿಸುತ್ತಿದೆ. ಆತಂಕ ಇಡೀ ಭೂ ಮಂಡಲವನ್ನು ಆವರಿಸಿಕೊಳ್ಳುತ್ತಿದೆ. ಜೀವಿಗಳು ಜೀವಂತವಾಗಿಯೇ ಜೀವ ಕಳೆದುಕೊಂಡು ಜೀವನ್ಮೃತರಾಗುವ ಪರಿಸ್ಥಿತಿ ಪ್ರಾಪ್ತವಾಗುತ್ತಿದೆ. ನಿಜ, ತಂತ್ರಜ್ಞಾನವನ್ನು ಬಳಸಿ ಭೂಮಿಯನ್ನು ಬಗೆದೆವು, ಅನ್ಯಗ್ರಹಗಳತ್ತ ನೆಗೆದೆವು. ಏತಕ್ಕಾಗಿ? ಸಾಹಸದ ಪ್ರದರ್ಶನಕ್ಕಾಗಿಯೇ? ಪ್ರಕೃತಿಯ ಅನ್ವೇಷಣೆಗೆ ಕೊನೆ ಎಂಬುದಿಲ್ಲ.

ಕಂಡುಕೊಂಡರೆ ಮೂಗಿನ ತುದಿಯಲ್ಲಿಯೇ ಕಾಣುವ ಸತ್ಯ ವಿಶ್ವ ಪರ್ಯಟನೆ ಮಾಡಿದರೂ ಗೋಚರಿಸುವುದಿಲ್ಲ ಎನ್ನುವ ವಾಸ್ತವ ಸತ್ಯ ನಮ್ಮ ಒಳಗಣ್ಣು ತೆರೆಸಬೇಕು. ಗಾಂಧಿ ಅದನ್ನು ಬುದ್ಧನಂತೆ ತಮ್ಮ ಒಳಗೇ ಕಂಡುಕೊಂಡ ಸಂತ. ಹಾಗಾಗಿ ಅವರದು ಸರಳ, ಸುಂದರ ಬದುಕಿನ ಮಾರ್ಗ. ಆನಂದವನ್ನು ಅಪ್ಪಿಕೊಳ್ಳಬೇಕು ಎನ್ನುವವರ ಆಪ್ಯಾಯಮಾನವಾದ ಮಾರ್ಗ. ಅದು ಭೂಮಿಯ ಮೇಲೆ ಸಾಕಾರಗೊಳ್ಳುವ ಬದಲು ವಿಕಾರಗೊಳ್ಳುತ್ತಿರುವುದು ಮನುಕುಲದ ದುರಂತ.

ಈ ಅಜ್ಞಾನದ ನಡೆಗೆ ತಡೆಹಾಕುವ ಏಳು ಸಾಮಾಜಿಕ ಪಾಪಗಳನ್ನು  ತೊಡೆಯಬೇಕೆಂದು ಗಾಂಧಿ ಕರೆ ಇತ್ತರು. ಅವು ತತ್ವರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ. ಇವುಗಳನ್ನು ತೊರೆಯುವ ಬದಲು ಪೊರೆವ ಕ್ರಿಯೆಯಲ್ಲಿ ನಿರತರಾಗಿದ್ದೇವೆ.

ಗಾಂಧಿ ಧಾರ್ಮಿಕ ಸಹಿಷ್ಣುವಾಗಿದ್ದರು. ಆದ ಕಾರಣವೇ ದೇಶ ವಿಭಜನೆಯ ವಿರುದ್ಧ ಹೋರಾಡಿದರು. ಫಲಕಾರಿಯಾಗದ ಕಾರಣ ವಿಭಜನೆಗೊಂಡ ಎರಡೂ ದೇಶಗಳು  ಅಹಿಂಸೆಗೆ ಬದಲಾಗಿ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ  ತೊಡಗಿವೆ. ಪ್ರೀತಿಗೆ ಬದಲು ದ್ವೇಷದ ದಳ್ಳುರಿ ಚಿಮ್ಮುತ್ತಿದೆ. ಗಾಂಧಿ ಅವರ ಚರಕದ ಮಹತ್ವವನ್ನು ಮೂಲೆಗುಂಪು ಮಾಡಿದ ಕಾರಣ ಗುಡಿ ಕೈಗಾರಿಕೆಗಳಲ್ಲಿ ಕ್ರಿಯಾಶೀಲವಾಗಬೇಕಿದ್ದ ಕೈಗಳು ನಿಷ್ಕ್ರಿಯವಾಗಿ ನಿರುದ್ಯೋಗಕ್ಕೆ ಸಿಲುಕಿ ನಲುಗುವ ಸ್ಥಿತಿ ಪ್ರಾಪ್ತಿಯಾಗಿದೆ.

ಭಾರತವನ್ನು ಬರಡಾಗಿಸಿದ ಒಂದು ಈಸ್ಟ್ ಇಂಡಿಯಾ ಕಂಪೆನಿಗೆ ಪ್ರತಿಯಾಗಿ ‘ಮೇಕ್‌ ಇನ್‌ ಇಂಡಿಯಾ’ ಎಂದು ಕರೆದು ಎಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡಿ, ಕೊಳ್ಳೆ ಹೊಡೆಯಲು ಬಹುರಾಷ್ಟ್ರೀಯ ಕಂಪೆನಿಗಳನ್ನು ಕೆಂಪು ಹಾಸು ಹಾಕಿ ಕರೆಯುವ ಹೀನ ದೀನ ಸ್ಥಿತಿಯನ್ನು ತಂದುಕೊಂಡಿದ್ದೇವೆ. ಗಾಂಧಿ ಅವರ ಗ್ರಾಮ ಸ್ವರಾಜ್ಯದ ಹೊಂಗನಸನ್ನು ಹುಸಿಯಾಗಿಸಿ ಹಳ್ಳಿಗಳ ಆತ್ಮವನ್ನು ಕೊಂದಿದ್ದೇವೆ. ನಗರಗಳನ್ನು ಕೊಬ್ಬಿಸಿ ನರಕಸದೃಶವಾಗಿಸಿದ್ದೇವೆ. ಇದರ ಪರಿಣಾಮವಾಗಿ ಭಾರತೀಯರ ಬದುಕಿನಲ್ಲಿ ಶಾಂತಿಗೆ ಬದಲು ಅಶಾಂತಿ ಹಾಸು ಹೊಕ್ಕಾಗಿದೆ.

ವ್ಯಕ್ತಿಯಾದ ಗಾಂಧಿ ಮನುಕುಲದ ಮುಕ್ತಿಗಾಗಿ ಒಂದು ಅಪೂರ್ವ ಶಕ್ತಿಯಾಗಿ ಹೊರಹೊಮ್ಮಿದ್ದನ್ನು ಅರಿಯಲಾಗದೆ ಕುರುಡರಾಗಿದ್ದೇವೆ. ನಾಥೂರಾಂ ಗೋಡ್ಸೆ ಮೂರು ಗುಂಡಿಕ್ಕಿ ಗಾಂಧಿ ಅವರ ಭೌತಿಕ ಶರೀರಕ್ಕೆ ಅಂತ್ಯ ಹಾಡಿದರೆ ಭ್ರಷ್ಟಾಚಾರ, ಅಸಹಿಷ್ಣುತೆ, ಅತ್ಯಾಚಾರ, ಅಸಹನೆ, ಅಸ್ಪೃಶ್ಯತೆ, ನಿರಭಿಮಾನ ಇತ್ಯಾದಿಗಳಲ್ಲಿ ನಿರತರಾಗಿ ಗಾಂಧಿ ಅವರ ಆದರ್ಶಗಳಿಗೆ ದಿನದಿನವೂ ಗುಂಡು ಹೊಡೆಯುತ್ತಿದ್ದೇವೆ. ತನ್ಮೂಲಕ ಭಾರತದ ಹಿರಿಮೆ ಗರಿಮೆಗಳನ್ನು ಹಾಗೂ ಜಗತ್ತಿಗೆ ಗಾಂಧೀಜಿ ಸಾರಿದ ಎಲ್ಲ ಮೌಲ್ಯಗಳನ್ನು ಮಣ್ಣುಗೂಡಿಸುತ್ತಿದ್ದೇವೆ.

‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮೆದುಳು, ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ ಎಂದ ವಿವೇಕಾನಂದರ ಆದರ್ಶಕ್ಕಾಗಿ ತುಡಿದು ಗುಂಡಿಗೆ ಬಲಿಯಾದ ಮಹಾತ್ಮ ಗಾಂಧಿ ಅವರ ಈ 68ನೇ ಪುಣ್ಯಸ್ಮರಣೆಯ ದಿನದಂದು ಧ್ಯಾನಸ್ಥರಾಗಿ ಒಳ ಎಚ್ಚರಕ್ಕೆ ಸಂಕಲ್ಪಿಸಲು ಸಾಧ್ಯವೇ? ಹೌದು ಎಂದಾದರೆ ಭವ್ಯ ಭಾರತದ ಶಕ್ತಿ ತನ್ನ ಹಾಗೂ ಜಗತ್ತಿನ ಅನಿಷ್ಟಗಳ ಮುಕ್ತಿಗೆ ನಾಂದಿ ಹಾಡಿದಂತಾಗುತ್ತದೆ; ಸದ್ಯದ ದೈತ್ಯ ನರ್ತನದಿಂದ ದೂರವಾಗಿ ದೈವತ್ವದ ಸನ್ನಿಧಿಗೆ ಸಾಗಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT