ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ, ತಾರತಮ್ಯಗಳಿಂದ ನಲುಗುತ್ತಿವೆ ಈ ಜೀವಗಳು

Last Updated 25 ಜೂನ್ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಕಾರಣಗಳಿಗಾಗಿ ಹಾಗೂ ವೈಜ್ಞಾನಿಕ ಪ್ರಗತಿ ಮತ್ತು ತಂತ್ರಜ್ಞಾನದಲ್ಲಿನ ಅಭಿವೃದ್ಧಿಯಿಂದ ಭಾರತ ಬೆಳಗುತ್ತಿದೆ. ಆದರೆ ಸಮಗ್ರ ಅಭಿವೃದ್ಧಿ, ಕಲ್ಯಾಣ ರಾಷ್ಟ್ರದ ಮಾನವೀಯ ಅಂಶಗಳನ್ನು ಬಿಂಬಿಸುವಲ್ಲಿ ಎಡವಿದೆ. ಸಮಾನತೆಯನ್ನು ಎತ್ತಿಹಿಡಿಯಬೇಕಿದ್ದ ಕಾನೂನಿನಲ್ಲಿ ಅಸಮತೋಲನದ ಅಂಶಗಳು ಎದ್ದು ಕಾಣುತ್ತಿವೆ. ಪರಿತ್ಯಕ್ತ ಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ಸ್ಪಂದನಾರಹಿತ ಧೋರಣೆಯು ಕಾನೂನು ಎಲ್ಲರಿಗೂ ಸಮಾನ ಎಂಬ ಅಂಶವನ್ನು ವಿರೋಧಾಭಾಸ ನೆಲೆಯಲ್ಲಿ ನೋಡಬೇಕಾದಂತಹ ಸ್ಥಿತಿ ಸೃಷ್ಟಿಸಿದೆ.

ಸಂವಿಧಾನದ 46ನೇ ವಿಧಿಯಲ್ಲಿ ಸ್ಪಷ್ಟಪಡಿಸಿದಂತೆ ರಾಷ್ಟ್ರವು ವಿಶೇಷ ರಿಯಾಯಿತಿ, ಅನುಕಂಪ, ಅನುಭೂತಿ ತೋರುವ, ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಕೈಗೊಳ್ಳುವುದರಿಂದ ದುರ್ಬಲರನ್ನು ಸಂರಕ್ಷಿಸಿಕೊಳ್ಳಬಹುದು ಎಂಬ ಅಂಶ ಸಂವಿಧಾನದ ಪುಸ್ತಕದಲ್ಲಿ ಮಾತ್ರ ಉಳಿದಿದೆ. ಈ ಮಾತು ಲೈಂಗಿಕ ಶೋಷಿತರು, ಮಂಗಳಮುಖಿಯರು, ಮಾನವ ಸಾಗಾಣಿಕೆಗೆ ಒಳಪಟ್ಟವರು, ದೇವದಾಸಿಯರು ಮತ್ತು ಅವರ ಮಕ್ಕಳ ಜೀವನದ ನೆಲೆಯಲ್ಲಿ ಸತ್ಯವಾಗಿದೆ.

ಬುದ್ಧಿವಂತರ ಹಿಂಡನ್ನೇ ಸುತ್ತ ಇರಿಸಿಕೊಂಡು ಆಳ್ವಿಕೆ ನಡೆಸುವ ಸರ್ಕಾರಗಳು ಸಮುದಾಯದ ವ್ಯವಸ್ಥೆ ಮತ್ತು ಸಾಮಾಜಿಕ ಅಸಮತೋಲನವನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಮೇಲ್ಕಂಡವರು ಇದ್ದಾರೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲದೆ ಏನಿಲ್ಲ. ಆದರೆ ಅವರಿಗೆ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿರುವುದು ತೃಣಮಾತ್ರ. ಈ ಅತಂತ್ರ ಸಮುದಾಯಗಳಿಗೆ ಶಾಸನಬದ್ಧವಾದಂತಹ ಬದುಕುವ ಹಕ್ಕು, ಕಳಂಕರಹಿತವಾದಂತಹ ಜೀವನ, ಆರೋಗ್ಯ, ವಸತಿ, ಆರ್ಥಿಕ ಸ್ವಾವಲಂಬನೆಯ ಘನತೆಯುಕ್ತ ಬದುಕು ಬೇಕಾಗಿದೆ.

ಸಮಾಜದಿಂದ ಹಾಗೂ ಸರ್ಕಾರಗಳಿಂದ ನಿರಂತರ ನಿರ್ಲಕ್ಷ್ಯ, ಅವಮಾನ ಹಾಗೂ ಅನುಮಾನಗಳೊಡನೆ ಲೈಂಗಿಕ ಶೋಷಣೆಗೊಳಪಟ್ಟು, ಮಾನವೀಯ ಸಂಬಂಧಗಳ ಬೇರುಗಳನ್ನು ಕಡಿದುಕೊಳ್ಳುತ್ತಿರುವ ಮಹಿಳೆಯರು ಹಾಗೂ ಅವರ ಮಕ್ಕಳು ಸಾಮಾಜಿಕ ನಿಷ್ಕೃಷ್ಟತೆಗೆ ಗುರಿಯಾದವರೆಂದು ಒತ್ತಿ ಹೇಳಬೇಕಾಗಿಲ್ಲ.

ವಂಚನೆ, ಆರ್ಥಿಕ, ಸಾಮಾಜಿಕ ಒತ್ತಡ ಸರ್ಕಾರದ ಅವೈಜ್ಞಾನಿಕ ನೀತಿಗಳು ಹಾಗೂ ಧಾರ್ಮಿಕ ಕಾರಣಗಳಿಂದ ಶೋಷಿಸಲ್ಪಟ್ಟು ವೇಶ್ಯಾವಾಟಿಕೆಗೆ ದೂಡಲ್ಪಡುತ್ತಿರುವ ಅಸಂಖ್ಯಾತ ಮಹಿಳೆಯರ ಮತ್ತು ಮಕ್ಕಳ ನರಕಸದೃಶ ಜೀವನ ಯಾವುದೇ ಕಲ್ಯಾಣ ರಾಷ್ಟ್ರಕ್ಕೆ ಶೋಭೆಯಲ್ಲ. ದೌರ್ಜನ್ಯ, ಅಪೌಷ್ಟಿಕ ಆಹಾರ, ಅನಾರೋಗ್ಯ, ಕಲುಷಿತ ವಾತಾವರಣ, ಅಪ್ಪ ಯಾರೆಂಬ ಪ್ರಜ್ಞೆ ಇಲ್ಲದೇ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಾ ಮಕ್ಕಳು ಬೆಳೆಯುತ್ತಿದ್ದಾರೆ.

ಯಾರೂ ಕಾಣದ ಕತ್ತಲೆ ಕೂಪದ ಮೂಲೆ ಸೇರಿದ ಇವರು ಮೂರನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಮೂಲಭೂತ ಅಗತ್ಯಗಳಾದ ಶಿಕ್ಷಣ, ಆರೋಗ್ಯ, ವಸತಿ ಅಂತಹ ಸೇವೆಗಳಿಂದ ವಂಚಿತರಾಗಿರುವ ಇವರು ಪೊಲೀಸ್ ವ್ಯವಸ್ಥೆಯಿಂದಲೂ ನಲುಗಿಹೋಗಿದ್ದಾರೆ. ಪಡಿತರ ಚೀಟಿ, ಯಶಸ್ವಿನಿ ಯೋಜನೆಯಂತಹ ಆರೋಗ್ಯ ವ್ಯವಸ್ಥೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಜೀವವಿಮೆ, ಆಶ್ರಯ ಯೋಜನೆ ಹಾಗೂ ಯಾವುದೇ ನಾಗರಿಕ ಸೇವೆಗಳನ್ನು  ಪಡೆಯುವಲ್ಲಿ  ತಮಗೆ ಅಂಟಿರುವ ಕಳಂಕದಿಂದ, ತಾರತಮ್ಯದಿಂದಾಗಿ ದೂರ ಉಳಿದಿದ್ದಾರೆ.

ಮಾನವ ಹಕ್ಕುಗಳ ಬೆಳಕಿನಲ್ಲಿ ಈ ಸಮಸ್ಯೆಯನ್ನು ನೋಡುವುದು ಅತ್ಯವಶ್ಯಕವಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ವ್ಯಾಖ್ಯೆಯಡಿ, ಮೀಸಲಾತಿಯ ಪ್ರಸ್ತಾಪ ಹೆಚ್ಚು ಅವಶ್ಯಕವೆನಿಸುತ್ತದೆ. ಲೈಂಗಿಕ ಶೋಷಿತರ ಮಕ್ಕಳ ಬಗ್ಗೆ ಮಾತನಾಡುವ ನ್ಯಾಯಾಲಯಗಳು ತಾಯಂದಿರನ್ನು ಆ ದಂಧೆಯಿಂದ ದೂರವಿಡುವ, ಹೆಣ್ಣು ಮಕ್ಕಳ ಜೀವನ ಹಾಗೂ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಬೆಳಕು ನೀಡಬೇಕಾಗಿದೆ.

ಅತಂತ್ರ ತಾಯಂದಿರ ನೆರಳಿನಲ್ಲೇ ಬೆಳೆಯುವ ಮಕ್ಕಳು ವೇಶ್ಯಾವಾಟಿಕೆಯೊಂದಿಗೆ ತಳಕು ಹಾಕಿಕೊಂಡೇ ಇರುತ್ತಾರೆ. ಅತ್ಯಾಚಾರಕ್ಕೊಳಪಟ್ಟ ಹೆಣ್ಣು ಮಕ್ಕಳ ಬದುಕೂ ಇದೇ ರೀತಿಯದ್ದು. ಭ್ರೂಣವಾಗಿದ್ದಾಗಿಂದಲೂ ತಾಯಿಯ ಒಡಲಲ್ಲಿ ಬೆಚ್ಚಗಿರದೇ ಜಂಜಾಟಗಳಿಂದ ನಲುಗುವ ಕಂದಮ್ಮಗಳ ಪಯಣ ಜೀವನದುದ್ದಕ್ಕೂ ಜರ್ಜರಿತವಾಗಿರುತ್ತದೆ.

ರಾಷ್ಟ್ರ ರಾಷ್ಟ್ರಗಳ ಸ್ಪರ್ಧಾತ್ಮಕ ಆರ್ಥಿಕ ಪೈಪೋಟಿ ಹಾಗೂ ಅಭಿವೃದ್ಧಿಯ ಗಾಲಿಗೆ ಸಿಲುಕಿ ಮೇಲೇಳದಂತೆ ನೆಲ ಕಚ್ಚಿದ ಸಮುದಾಯಗಳಲ್ಲಿ ಮಹಿಳೆಯರು ,ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರೀಕರಣದ ಆಧುನಿಕ ಬೇಡಿಕೆಗಳಿಗೆ ಸರಕುಗಳಂತೆ ದಾಸ್ತಾನಾಗಿ ವಿವರ ಗೊತ್ತಿಲ್ಲದ ದಿಕ್ಕುಗಳಿಗೆ ಸರಬರಾಜು ಆಗುತ್ತಿದ್ದಾರೆ.

ಶಿಕ್ಷಣ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಾಂಪ್ರದಾಯಿಕ ಮನಸ್ಥಿತಿ ಹಾಗೂ ನೈತಿಕ ಪೊಲೀಸ್‌ಗಿರಿಯಲ್ಲಿ ಈಗಾಗಲೇ ನಲುಗಿ ಹೋಗಿರುವ ಮಹಿಳೆಯರನ್ನು ಮಕ್ಕಳನ್ನು ಘನತೆಯತ್ತ ಒಯ್ಯುವಲ್ಲಿ ಸರ್ಕಾರದ ಯಾವುದೇ ಸೇವಾ ಕಾರ್ಯಕ್ರಮಗಳು ದಕ್ಷತೆಯಿಂದ ನಿರ್ವಹಣೆಗೊಂಡಿರುವುದಿಲ್ಲ. ತಮ್ಮ ಇರುವಿಕೆಯ ಬಗ್ಗೆ ಅವಮಾನ ಹಾಗು ಅನುಮಾನಕ್ಕೊಳಗಾಗಿರುವ ಈ ಜನತೆ ಮೇಲೇಳಬಹುದಾಗಿರುವುದು ಸಂವಿಧಾನದ ಆಶಯಗಳ ಅನುಷ್ಠಾನದ ಮೂಲಕ ಮಾತ್ರ.

ಮಾನವ ಸಾಗಾಣಿಕೆ, ಅತ್ಯಾಚಾರ, ಆ್ಯಸಿಡ್ ದಾಳಿ ಹಾಗೂ ಇತರೆ ರೀತಿಯ ದೈಹಿಕ, ಲೈಂಗಿಕ ದೌರ್ಜನ್ಯಕ್ಕೊಳಪಟ್ಟ ಮಹಿಳೆಯರು ಮತ್ತು ಮಕ್ಕಳನ್ನು ಸಾಮಾಜಿಕ ನ್ಯಾಯದಡಿ ತರುವ ಕಾರ್ಯ ಸರ್ಕಾರದಿಂದ ಆಗಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಈ ಸಮುದಾಯದೊಳಗಿನ ವ್ಯಕ್ತಿಗಳನ್ನು ಆಡಳಿತ, ಉನ್ನತ ಶಿಕ್ಷಣ, ಉನ್ನತ ವೃತ್ತಿ ಹಾಗೂ ಮಾನ್ಯತೆಯತ್ತ ಕೊಂಡೊಯ್ದಾಗ ಮಾತ್ರ ಅವರಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕ ಹಾಗೂ ಕೀಳರಿಮೆಯ ಮನಸ್ಥಿತಿಗಳನ್ನು ಕಿತ್ತೊಗೆಯಬಹುದಾಗಿದೆ.

ಅಧಿಕಾರ ಹಂಚಿಕೆಯಲ್ಲಿ ಹಿಂದುಳಿದವರಲ್ಲಿ ಹಿಂದುಳಿದವರಾದ, ಅಸ್ಪೃಶ್ಯದ ನೆರಳಿನಿಂದ ಹೊರಬರಲಾಗದ ಈ ವರ್ಗವನ್ನು ಪರಿಗಣಿಸಬೇಕಾಗಿದೆ. ಶೇಕಡಾ 4ರಷ್ಟು ಪ್ರಕರಣಗಳಲ್ಲಿ ಮಾತ್ರ ಕಾನೂನಿನ ನ್ಯಾಯ ದಕ್ಕಿಸಿಕೊಂಡಿರುವ ಅತ್ಯಾಚಾರಕ್ಕೊಳಪಟ್ಟವರು ಕೂಡ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ.

ಶೀಲ ಹಾಗೂ ಆಂಗಿಕ ಸೌಂದರ್ಯವೇ ಅತಿ ಮುಖ್ಯವೆನಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಲೈಂಗಿಕ ದಂಧೆಗೆ ಮಾರಾಟಕ್ಕೊಳಪಟ್ಟವರು, ಅತ್ಯಾಚಾರಕ್ಕೊಳಪಟ್ಟವರು, ಆ್ಯಸಿಡ್ ದಾಳಿ ಹಾಗೂ ಸುಟ್ಟ ಗಾಯಗಳಿಗೆ ಒಳಗಾದವರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಸಮಾಜದ ತಿರಸ್ಕಾರ ಹಾಗೂ  ಸಾಮಾಜಿಕ ಕಳಂಕಕ್ಕೊಳಪಟ್ಟು ಘನತೆಯುಕ್ತ  ಜೀವನದಿಂದ ಅತಿ ದೂರ ಸರಿಸಲ್ಪಟ್ಟಿದ್ದಾರೆ.

ಸಂಪ್ರದಾಯಸ್ಥ ಸಮಾಜಗಳಲ್ಲಿ ಮಂಗಳಮುಖಿಯರ ಗೋಳು  ಹೇಳತೀರದು. ಮಾನಸಿಕವಾಗಿ ಸ್ತ್ರೀ ಎನಿಸಿಕೊಂಡಿರುವ ಇವರುಗಳು ಸ್ತ್ರೀಯರಂತೆ ಬದುಕುವ ಪ್ರಾಮಾಣಿಕತೆ ವ್ಯಕ್ತಪಡಿಸಿದರೂ ಅದನ್ನು ಮೆಚ್ಚುವ ಹಾಗೂ ಮಾನ್ಯಗೊಳಿಸುವ ಮನಸ್ಸು ಸಮಾಜಕ್ಕಿಲ್ಲ. ಹಾಗಾಗಿ ಅವರು ಕೂಡ ಕೀಳರಿಮೆ, ಸಾಮಾಜಿಕ ಕಳಂಕ, ಅಸ್ಥಿರತೆ ಹಾಗೂ ನಿರಂತರ ಲೈಂಗಿಕ ಹಿಂಸೆಗೆ ಒಳಗಾಗಿ ಮುಖ್ಯವಾಹಿನಿಯಿಂದ ಬೇರ್ಪಟ್ಟಿದ್ದಾರೆ.   

ಭಾರತದ ಅನೇಕ ರಾಜ್ಯಗಳು ನೊಂದ ಸಮುದಾಯಗಳನ್ನು ಗುರುತಿಸಿ ಮೀಸಲಾತಿ ನೀಡುವುದರ ಮೂಲಕ ಅವುಗಳನ್ನು ಅಧಿಕಾರ ಹಂಚಿಕೆ ಹಾಗೂ ಆಡಳಿತ ಯಂತ್ರದಲ್ಲಿ ಒಳಗೊಳ್ಳುವಂತೆ ಮಾಡಿವೆ. ಅವುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲ ವ್ಯಕ್ತಿಗಳು ಸಾಮಾನ್ಯವಾಗಿ ಕಂಡುಬರುವ ಸಮುದಾಯಗಳಾಗಿವೆ. ಪಂಜಾಬಿ ಕುಟುಂಬಗಳಲ್ಲಿ ಜನಿಸುವ ಏಕೈಕ ಹೆಣ್ಣು ಮಗುವಿಗೆ ವೃತ್ತಿ ಮೀಸಲಾತಿ ಇದೆ.

ಕಾಶ್ಮೀರದಲ್ಲಿ ಹೋರಾಡುತ್ತಾ ಮಡಿದವರ ಅವಲಂಬಿತರಿಗೂ ಪ್ರಾಶಸ್ತ್ಯವಿದೆ. ಹೀಗಿರುವಾಗ ತನ್ನದಲ್ಲದ ತಪ್ಪುಗಳಿಗೆ ಬಿಕರಿಯಾಗಿ ತನ್ನೆಲ್ಲ ಪಂಚೇಂದ್ರಿಯಗಳನ್ನು, ಅನಾಮಿಕನಾಗಿ ಬಂದು ಹೋಗುವ ವಿಟಪುರುಷನಲ್ಲಿ ಒಪ್ಪಿಸಿ, ಸಾಮಾಜಿಕ ಕಳಂಕದೊಡನೆ ಪ್ರತಿಕ್ಷಣ ಸಾಯುತ್ತಿರುವ ಅಸಂಖ್ಯಾತ ಹೆಣ್ಣು ಮಕ್ಕಳನ್ನು ಸಂವಿಧಾನದ ಸಮಾನತೆಯ ಪರಿಕಲ್ಪನೆಯಡಿ ತರುವ ಪ್ರಯತ್ನ ಯಾವುದೇ ಸರ್ಕಾರದ ಮಾನವೀಯ ಮೌಲ್ಯ ಹಾಗೂ ಜೀವಂತಿಕೆಗೆ  ಸಾಕ್ಷಿಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT