ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಗೋಣು ಮುರಿಯುವವರು

ಭ್ರಷ್ಟರು ‘ನೇಯುವ’ ಕೈಂಕರ್ಯದ ಬದಲು ಮೇಯುವ ಕಾಯಕದಲ್ಲಿ ನಿರತರಾಗಿದ್ದಾರೆ
Last Updated 18 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ವೇದಕಾಲದ ಚಾತುರ್ವರ್ಣದಿಂದ ನಲುಗಿದ ಭಾರತ ಪೋರ್ಚುಗೀಸರ, ಡಚ್ಚರ, ಹೂಣರ, ಮೊಗಲರ, ಬ್ರಿಟಿಷರ ಕೈಕೆಳಗೆ ನಲುಗಿತು. ಈಗ ಸ್ವಾತಂತ್ರ್ಯಾ ನಂತರ ಸ್ವಕೀಯರ ಕೈಕೆಳಗೆ ಗುಲಾಮಿ ಆಗುತ್ತಿರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅಂಥ ಹೀನ ದೀನ ದುಃಸ್ಥಿತಿಗೆ ದೇಶ ತಲುಪುತ್ತಿದೆ. ಸ್ವಜನಪಕ್ಷಪಾತ ಎಲ್ಲ ನಾಚಿಕೆ ಬಿಟ್ಟು ಇದ್ದಬದ್ದ ಬಟ್ಟೆಯನ್ನೆಲ್ಲ ಕಳಚಿ ಬೆತ್ತಲಾಗುತ್ತಿದೆ.

ಲಾಲ್‌ಬಹದ್ದೂರ್‌ ಶಾಸ್ತ್ರಿಯವರ, ವಿನೋಬಾ ಅವರ, ಮಹಾತ್ಮ ಗಾಂಧಿಯವರ ಆದರ್ಶ ಅಣಕವಾಗಿ ಜೆ.ಪಿ.ಯವರ ಸಂಪೂರ್ಣ ಕ್ರಾಂತಿಗೆ ತಿಲಾಂಜಲಿ ನೀಡಲಾಗಿದೆ. ಈಗ ಎಲ್ಲಿಗೆ ಬಂದಿದ್ದೇವೆ ಎಂದರೆ ‘ದಂ’ ಇದ್ದವರಿಗೆ ಪಕ್ಷದ ಟಿಕೆಟ್‌ ಎಂದು ಹಣವನ್ನೇ ಪ್ರಧಾನವಾಗಿ ಪರಿಗಣಿಸುವ ಮಾಜಿ ಪ್ರಧಾನಿಯಂಥವರ ಹಿಡಿತಕ್ಕೆ! ಇದು ಏನನ್ನು ಧ್ವನಿಸುತ್ತದೆ?

ದಶಕಗಳು ಕಳೆದಂತೆ ಭಾರತದಲ್ಲಿ ಚುನಾವಣೆಗಳು ನಾಟಕೀಯ ಬೆಳವಣಿಗೆಯಿಂದ ರಂಜನೀಯವಾಗಿವೆಯೇ ಹೊರತು ಮೌಲ್ಯ ಗಟ್ಟಿಗೊಳಿಸುವತ್ತ ಸಾಗುತ್ತಿಲ್ಲ. ನಿಷ್ಠಾವಂತರಿಗೆ ಮಣೆ ಹಾಕುವುದಿಲ್ಲ. ‘ಇಡೀ ದೇಹದಲ್ಲಿ ಮೆದುಳನ್ನು ಹೊಂದಿರುವ ಏಕೈಕ ವ್ಯಕ್ತಿ ಎಂದರೆ ಡಾ. ಲೋಹಿಯಾ’ ಎಂದು ಗಾಂಧೀಜಿ ಹೇಳಿದ್ದರು. ಅಂಥ  ಲೋಹಿಯಾ ಅವರನ್ನು ಬ್ರಿಟಿಷ್‌ ಆಳ್ವಿಕೆಯಲ್ಲಿ ಮೂರು ಸಲ ಜೈಲಿಗೆ ಹಾಕಿದ್ದರೆ, ಸ್ವತಂತ್ರ ಭಾರತದಲ್ಲಿ 13 ಸಲ ಜೈಲಿಗೆ ಹಾಕಲಾಯಿತು. ಕಾರಣ ಆತ್ಮವಂಚನೆಯಿರದ ಅವರ ನೇರ ಸತ್ಯದ ನಡೆ ನುಡಿಗಾಗಿ!

ಆತ್ಮವಂಚನೆ ಆತ್ಮಹತ್ಯೆಗಿಂತ ಕ್ರೂರವಾದುದು ಎನ್ನುವ ಸತ್ಯದ ಅರಿವು ಈ ರಾಜಕೀಯ ಚತುರರಿಗೆ ಎಂದು ಹೊಳೆದೀತು?
ಈಗ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ  ಚುನಾವಣೆ ಕರ್ನಾಟಕದಲ್ಲಿ ನಡೆಯುತ್ತಿದೆ. ಎಲ್ಲೆಡೆಯೂ ಸ್ವಜನಪಕ್ಷಪಾತದ ಪಿಡುಗು ಪ್ಲೇಗಿನಂತೆ ಹರಡುತ್ತಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡ ಎಚ್‌.ಡಿ.ದೇವೇಗೌಡರ ಸೊಸೆ, ಶಾಸಕ ಎಚ್.ಎಸ್‌.ಪ್ರಕಾಶ್ ಅವರ ಮಗ, ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರ ಪತ್ನಿ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಪುತ್ರ, ಶಾಸಕ ಸಿ.ಎಸ್‌.ಬಾಲಕೃಷ್ಣ ಅವರ ಪತ್ನಿ ಹಾಗೂ ಸಹೋದರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಅವರ ಪುತ್ರ,  ವಿಧಾನ ಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಂ ಅವರ ಸಹೋದರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಪಕ್ಷದ ಟಿಕೆಟ್‌ ಪಡೆಯುವಲ್ಲಿ ಹಣದ ದಂಧೆ ನೀರಿನಂತೆ ಹರಿದಾಡುತ್ತಿದೆ. ಯಾವ ಪಕ್ಷವೂ ಈ ಕಳಂಕದಿಂದ ಮುಕ್ತವಾಗಿಲ್ಲ. ಹಾಸನ ಜಿಲ್ಲೆಯೊಂದರಲ್ಲಿಯೇ ಇಂಥ ಸ್ಥಿತಿ ತಾಂಡವವಾಡುತ್ತಿರಬೇಕಾದರೆ ಇನ್ನು ಕರ್ನಾಟಕದಾದ್ಯಂತ ಎಂಥ ಪರಿಸ್ಥಿತಿ ಇರಬಹುದು ಎಂದು ಊಹಿಸಲೂ ಸಾಧ್ಯವಾಗದು. ಈ ಪಿಡುಗು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಷ್ಟೇ ಸೀಮಿತವಾಗಿಲ್ಲ. ರಾಷ್ಟ್ರ ರಾಜಕಾರಣವನ್ನು ಗಮನಿಸಿದರೆ ಅದು ಈ ಪರಿಸ್ಥಿತಿಗಿಂತ ಕಡಿಮೆಯೇನಲ್ಲ. ಅದಕ್ಕೆ ಬಿಹಾರ ರಾಜ್ಯವೇ ಸಾಕ್ಷಿಯಾಗಿದೆ. 

ಇದನ್ನು ಮನಗಂಡಿದ್ದ ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯಲ್ಲಿ 1949ರ ನವೆಂಬರ್‌ 26ರಂದು ವ್ಯಕ್ತಪಡಿಸಿದ ಆತಂಕ ಎಂದರೆ: ‘ಜಾತಿ, ವರ್ಗ, ಪಂಥಗಳೆಂಬ ನಮ್ಮ ಹಳೆಯ ಶೃತ ಶಕ್ತಿಗಳ ಜೊತೆಗೆ ಭಾರತ ಗಣರಾಜ್ಯದಲ್ಲಿ ರಾಜಕೀಯ ಪಕ್ಷಗಳೆಂಬ ಹೊಸ ಶಕ್ತಿ ಕೇಂದ್ರಗಳು ಸೃಷ್ಟಿಯಾಗಲಿದ್ದು ಇವುಗಳೂ ಶೋಷಕ ಶಕ್ತಿಗಳಾಗುವ ಅಪಾಯವಿದೆ. ಜಾತಿ, ವರ್ಗ, ಪಂಥಗಳ  ಹಿತಾಸಕ್ತಿಗಳೇ ಮುಖ್ಯವಾಗಿ ನಾವು ಹಲವಾರು ವಿದೇಶಿ ಆಳ್ವಿಕೆಗೆ ಗುಲಾಮರಾದೆವು. ಒಂದು ವೇಳೆ ರಾಜಕೀಯ ಪಕ್ಷಗಳೂ ಸ್ವತಂತ್ರ ಭಾರತದಲ್ಲಿ ಸ್ವಹಿತಾಸಕ್ತಿಯನ್ನೇ ಮುಖ್ಯವಾಗಿ ಪರಿಗಣಿಸಿ ರಾಷ್ಟ್ರಹಿತ ಕಡೆಗಣಿಸಿದ್ದೇ ಆದಲ್ಲಿ ಈ ಸಂವಿಧಾನವೂ ನಿಷ್ಪ್ರಯೋಜಕವಾಗಿ ಬಿಡಬಹುದು. ಆಗ ನಮ್ಮ ಸ್ವಾತಂತ್ರ್ಯವೂ ಅಪಾಯಕ್ಕೆ ಗುರಿಯಾಗಬಹುದು’.

ಸದ್ಯ ಭಾರತದಲ್ಲಿ ದೇಶದ ಐತಿಹಾಸಿಕ ನಡೆಯ ಅರಿವಿರದವರ ಕೈಗೆ ಅಧಿಕಾರ ಸಿಕ್ಕಿ ದಿನದಿಂದ ದಿನಕ್ಕೆ ದೈನ್ಯಸ್ಥಿತಿಗೆ ತಲುಪುತ್ತಿದ್ದೇವೆ. ರಾಜಕೀಯ ಭ್ರಷ್ಟಾಚಾರದಿಂದಾಗಿ ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿವೆ. ಕಾಂಗ್ರೆಸ್‌ ತನ್ನ ದೀರ್ಘಕಾಲದ ಆಳ್ವಿಕೆಯಿಂದ ಎಸಗಿದ ಭ್ರಷ್ಟಾಚಾರದ ವಿರುದ್ಧ ಜಯಪ್ರಕಾಶ್‌ ನಾರಾಯಣ್‌ ಅವರು ಸಂಪೂರ್ಣ ಕ್ರಾಂತಿಯ ಹರಿಕಾರರಾಗಿ 1977ರಲ್ಲಿ ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದರು.

ದಕ್ಷ, ಸ್ವಚ್ಛ ಆಡಳಿತ ನೀಡಬೇಕಾಗಿದ್ದ ಜನತಾ ಪಕ್ಷ ಅವಧಿಗೆ ಮೊದಲೇ ಪತನವಾಗಿ ಹರಿದು ಹಂಚಿಹೋಯಿತು. ನಾಯಕರು ತಮ್ಮ ತಮ್ಮೊಳಗೇ ಹೊಡೆದಾಡಿಕೊಂಡರು. ಪರಸ್ಪರ ನಿಂದಿಸುತ್ತಾ ಹೊಡೆದಾಡಿಕೊಂಡಿರುವುದು ಭಾರತೀಯರಿಗೆ ಉಸಿರಿನಷ್ಟು ಸಹಜವಾಗಿದೆ.  ಈ ಆಂತರಿಕ ಕಚ್ಚಾಟ ಅಂದಿಗೆ ಮುಗಿದಿಲ್ಲ. ಇಂದಿಗೂ ಇನ್ನೂ ಬೃಹದಾಕಾರವಾಗಿ ಮುನ್ನಡೆಯುತ್ತಿದೆ.

ಭವ್ಯ ಭಾರತದ ಕಲ್ಪನೆ ಯಾವ ರಾಜಕಾರಣಿಯಲ್ಲೂ ನೈಜವಾಗಿ ಕಾಣುತ್ತಿಲ್ಲ. ಭವ್ಯ ಭಾರತದ ಕಲ್ಪನೆ ಉಳ್ಳವರು ರಾಜಕಾರಣಿಗಳ ಕಣ್ಣಿಗೆ ಬೀಳುತ್ತಿಲ್ಲ ಅಥವಾ ರಾಜಕಾರಣಿಗಳಿಗೆ ಬೇಕಾಗಿಲ್ಲ. ಆದರೆ ಅಧಿಕಾರ ಸ್ಥಾನದಲ್ಲಿದ್ದು ಗಣ್ಯರೆಂದು ಕರೆಸಿಕೊಳ್ಳುವವರು ಪ್ರಜಾಪ್ರಭುತ್ವದ ಗೋಣು ಮುರಿಯುವಲ್ಲಿ ನಿದ್ದೆಗೆಟ್ಟು ನಿರತರಾಗಿದ್ದಾರೆ.

ಒಂದು ರೂಪಕ ಭಾಷೆಯಲ್ಲಿ ಹೇಳುವುದಾದರೆ: ನಾನು ಬೆಂಗಳೂರಿನ ಆರ್‌.ಸಿ. ಕಾಲೇಜಿನಲ್ಲಿ ಓದುತ್ತಿದ್ದೆ. ಆ ಕಾಲೇಜಿನ ಹಿಂಭಾಗಕ್ಕೆ ಕುದುರೆ ಜೂಜಿನ ಮೈದಾನವಿದೆ. ಅಲ್ಲಿ ತರಬೇತಿ ಪಡೆದ ಕುದುರೆಗಳನ್ನು ಜೂಜಿಗೆ ಬಿಟ್ಟರೆ ಗೆಲ್ಲುತ್ತಿದ್ದುದು ಒಂದೇ ಕುದುರೆಯಾದರೂ ಮಿಕ್ಕವು ಟ್ರ್ಯಾಕ್‌ ಫಿನಿಷ್‌ ಮಾಡುತ್ತಿದ್ದವು. ಅದೇ ಮೈದಾನದಲ್ಲಿ ವರ್ಷಕ್ಕೆ ಒಂದೆರಡು ಬಾರಿ ಜಟಕಾ ಕುದುರೆಗಳನ್ನು ಜೂಜಿಗೆ ಬಿಡುತ್ತಿದ್ದರು.

ಬಿಟ್ಟ ತಕ್ಷಣ ಅವು ಗುರಿಗಿಂತ ಮುಖ್ಯವಾಗಿ, ಬೆಳೆದು ನಿಂತಿದ್ದ ಹಸಿರು ಹುಲ್ಲಿನ ಗರಿಯತ್ತ ಹೋಗಿ ಮೇಯುತ್ತ ನಿಂತು ಬಿಡುತ್ತಿದ್ದವು. ಇಂದಿನ ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಸಿರು ಹುಲ್ಲುಗಾವಲಾಗಿದೆ. ಅವರು ರಾಷ್ಟ್ರ ನಿರ್ಮಾಣಕ್ಕಾಗಿ ನೇಯುವ ಕೈಂಕರ್ಯದ ಬದಲಿಗೆ ಮೇಯುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅದರಿಂದ ಬಿಡುಗಡೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT