ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಿಕ್ಷಣ ವಿಸ್ತರಣೆ: ಅತಿರೇಕದ ಅವಿವೇಕ

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹೊಟ್ಟೆಗಿಲ್ಲದ ಶಿಕ್ಷಣ ಯಾಕಾದರೂ ಬೇಕು ಎಂದು ಪದವಿ ಪಡೆದ ಲಕ್ಷಾಂತರ ಯುವ­ಜನರು ‘ನಿರುದ್ಯೋಗಿ’ ಎಂಬ ಹಣೆಪಟ್ಟಿ ಹಾಕಿ­ಕೊಂಡು ಜುಗುಪ್ಸೆಗೆ ಒಳಗಾಗಿ­ರು­ವಾಗ ರಾಷ್ಟ್ರೀಯ ಶಿಕ್ಷಕರ ತರಬೇತಿ ಪರಿಷತ್ತು (ಎನ್.ಸಿ.ಟಿ.ಇ) ಬರುವ ಶೈಕ್ಷಣಿಕ ವರ್ಷದಿಂದ ಬಿ.ಇಡಿ., ಬಿ.ಪಿ.ಇಡಿ. ಮೊದಲಾದ ಪದವಿಗಳ ಅವಧಿ­ಯನ್ನು ಎರಡು ವರ್ಷಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.  ಯೋಜನಾ ಆಯೋಗ ಅಪ್ರಸ್ತುತ ಎಂದು ಅದರ ಸ್ಥಾನದಲ್ಲಿ ‘ನೀತಿ’ (National Institution for Transforming India) ಆಯೋಗವನ್ನು ರಚಿಸಿರುವ ಕೇಂದ್ರ ಸರ್ಕಾರದ ಆಡಳಿತದ ಕೆಳಗೇ ನಿರುದ್ಯೋಗದ ಅವಧಿಯನ್ನು ವಿಸ್ತರಿಸುವ ಈ ನಿರ್ಣಯವು ವಿಪರ್ಯಾಸ.

ಯೋಜಿತ ಅರ್ಥವ್ಯವಸ್ಥೆಯೆಂದು ಕರೆದು­ಕೊಂಡಿ­ರುವ ಈ ದೇಶದಲ್ಲಿ ಇನ್ನೆಷ್ಟುಕಾಲ ಇಂಥ ಎಡಬಿಡಂಗಿ ಶಿಕ್ಷಣ ಅಥವಾ ತರಬೇತಿ  ಅವಾಂ­ತರ­ಗಳನ್ನು ನೋಡಬೇಕಾಗಿದೆಯೋ ತಿಳಿಯು­ತ್ತಿಲ್ಲ. ಒಂದು ವರ್ಷದ ಅವಧಿಯ ಬಿ.ಇಡಿ., ಮತ್ತು ಬಿ.ಪಿ.ಇಡಿ. ಪದವಿ ಪಡೆದ ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿರುವಾಗ ಇದನ್ನು ಎರಡು ವರ್ಷ ಅವಧಿಗೆ ವಿಸ್ತರಿಸಿದರೆ ಆಗಬಹುದಾದ ಅನನುಕೂಲಗಳ ಬಗ್ಗೆ ಈ ಸಂಸ್ಥೆಗೆ ಒಂದಿಷ್ಟಾದರೂ ಕಾಳಜಿ ಬೇಡವೆ?

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಯುವಜನ ಈ ತರಬೇತಿ ಪಡೆದಿದ್ದು, ಅವರಲ್ಲಿ ಉದ್ಯೋಗಿ­ಗಳಾ­ದವರು ಶೇ 10ನ್ನೂ ಮೀರಿಲ್ಲ ಎನ್ನುವುದು ಶೋಚನೀಯವಲ್ಲವೇ? ಅಂಥ ಪ್ರಶಿಕ್ಷಣ ಸಂಸ್ಥೆ­ಗ­ಳೆಲ್ಲಾ ಇದೀಗ ಮುಚ್ಚಿ ಹೋಗಿ ಹೆಸರಿಗೆ ಎಂಬಂತೆ ಕೆಲವೇ ಉಳಿದುಕೊಂಡಿವೆ. ಲಕ್ಷಾಂತರ ರೂ ಖರ್ಚು ಮಾಡಿಕೊಂಡು ಉದ್ಯೋ­ಗಾ­ವ­ಕಾಶದ ಭರವಸೆ ಇಲ್ಲದ ಪ್ರಶಿಕ್ಷಣ ಪಡೆದ ಯುವಜನ ನಿರುದ್ಯೋಗಿಗಳಾಗುವುದಾದರೆ ಅಂಥ ಸಂಸ್ಥೆ, ಕಾಲೇಜುಗಳ ಅವಶ್ಯಕತೆ­ಯಾದರೂ ಏಕೆ?

ಸರಳವಾಗಿ ಹೇಳುವುದಾದರೆ ಈ ದೇಶ, ರಾಜ್ಯಕ್ಕೆ ಯಾವ ಹಂತದಲ್ಲಿ ಎಷ್ಟು ಜನ ಶಿಕ್ಷಕರು ಬೇಕೋ ಅಷ್ಟು ಜನರಿಗೆ ತರಬೇತಿ ನೀಡುವುದರ ಬದಲಾಗಿ ಬೇಕಾಬಿಟ್ಟಿ ಅವಕಾಶ ನೀಡಿದ್ದಲ್ಲದೆ ಇದೀಗ ಗಾಯದ ಮೇಲೆ ಬರೆ ಎಳೆದಂತೆ ಈ ಅವಧಿ­ಯನ್ನು ಎರಡು ವರ್ಷಕ್ಕೆ ವಿಸ್ತರಿಸಲಾಗಿದೆ. ಪಡೆದ ಪ್ರಶಿಕ್ಷಣ ಪದವಿಯಿಂದ ಆರ್ಥಿಕ ಬದುಕು ರೂಪುಗೊಳ್ಳುವುದಿಲ್ಲ ಎಂದಾದ ಮೇಲೆ ಈ ವಿಸ್ತರಣೆಯಾದರೂ ಹಣ ಮಾಡುವ ಸಂಸ್ಥೆ­ಗಳಿಗೆ ಒಂದು ಆದಾಯ ವರ್ಷದ ವಿಸ್ತರಣೆ­ಯಾದಂ­ತಾಗುವುದಿಲ್ಲವೆ? ಮಾನವ ಸಂಪನ್ಮೂಲ ನಿರ್ಮಾಣ ಕ್ಷೇತ್ರವಾದ ಶಿಕ್ಷಣ -ಪ್ರಶಿಕ್ಷಣವು ಸಂವಿಧಾನದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಂಬಂಧಿಸಿದ ವಿಷಯ. ಎನ್.ಸಿ.ಟಿ.ಇ ಯ ಈ ತೀರ್ಮಾನಕ್ಕೆ ರಾಜ್ಯ­ಸರ್ಕಾರದ ಒಪ್ಪಿಗೆ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಎನ್.ಸಿ.ಟಿ.ಇ. ಮಾತ್ರ ಈ ಬಗ್ಗೆ ಆಯಾ ಕಾಲೇಜುಗಳಿಂದ ಅಫಿಡವಿಟ್ ಕೇಳಿದೆ.

ಈ ಪ್ರಶಿಕ್ಷಣ ಪದವಿ ಪುನರ್‌ರಚನೆಗೆ ಅದಾವ ಅಧ್ಯಯನ ತಂಡ ವರದಿ ನೀಡಿದೆಯೋ ಅಥವಾ ಅದಾವ ಅಧ್ಯಯನ ನಡೆದಿದೆಯೋ ತಿಳಿದಿಲ್ಲ. ಆದರೆ ಒಂದು ಮಾತ್ರ ಸತ್ಯ. ಈಗ ಅಂತಿಮ ವರ್ಷದ ಪದವಿಯಲ್ಲಿ ಅಧ್ಯಯನ ಮಾಡುವ ಯಾವುದೇ ವಿದ್ಯಾರ್ಥಿಯನ್ನು ಅಥವಾ ಅವರ ಪೋಷಕರನ್ನು ಅಥವಾ ಅವರಿಗೆ ಪಾಠ ಹೇಳುವ ಶಿಕ್ಷಕರನ್ನು, ಆಡಳಿತ ಮಂಡಳಿಯವರನ್ನು ಮತ್ತು ಇದಕ್ಕೆ ಸಂಬಂಧಪಟ್ಟ ಯಾರನ್ನು ಕೇಳಿದರೂ ಅವರೆಲ್ಲ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸುವವರೇ ಆಗಿದ್ದಾರೆ. ಇವರೆಲ್ಲಾ ಈ ಪ್ರಶಿಕ್ಷಣ ವ್ಯವಸ್ಥೆಯ Stake holders ಅಲ್ಲವೆ!

ಇಲ್ಲಿನ ಇನ್ನೊಂದು ಅವಾಂತರವೆಂದರೆ ಹಾಲಿ ೧೦೦ ಪ್ರಶಿಕ್ಷಣಾರ್ಥಿ­ಗಳಿಗೆ ಪ್ರವೇಶಾವಕಾಶವಿರುವ ಕಾಲೇಜುಗಳು ಮುಂದಿನ ವರ್ಷದಲ್ಲಿ, ಅಂದರೆ ಬರುವ ಆರು ತಿಂಗಳು ಕಾಲಾವಕಾಶದಲ್ಲಿ ೫೦ ವಿದ್ಯಾರ್ಥಿಗಳ ಎರಡು ಘಟಕಗಳನ್ನು ಮಾಡಬೇಕು! ಅಂದರೆ, ಈಗಿ­ರುವ ಮೂಲಸೌಲಭ್ಯಗಳಾದ ತರಗತಿ ಕೊಠಡಿ, ಪ್ರಯೋಗಾಲಯ, ಸಿಬ್ಬಂದಿ ಮೊದಲಾದವು­ಗಳನ್ನು ದ್ವಿಗುಣಗೊಳಿಸಬೇಕು! ಜೊತೆಗೆ ಬರುವ ಅಕ್ಟೋಬರ್ ತಿಂಗಳಲ್ಲಿ (ಪ್ರವೇಶಾತಿ ಪ್ರಕ್ರಿಯೆ ಮುಗಿದ ಮೇಲೆ!) ಈ ಬಗ್ಗೆ ಎನ್.ಸಿ.ಟಿ.ಇ ವತಿಯಿಂದ ತಪಾಸಣೆ ನಡೆಯ­ಲಿದ್ದು ಅದರಲ್ಲಿ ಎಲ್ಲವೂ ಸರಿಯಿದ್ದರೆ ಅನು­ಮೋದನೆ, ಇಲ್ಲವಾದರೆ ಪ್ರವೇಶ ನಿರಾಕರಣೆ.

ಈ ಸಂಸ್ಥೆಯ ಅವಿವೇಕ ಹೇಗಿದೆ ಎಂದರೆ, ಸಂಬಂ­ಧಿ­ಸಿದ ಕಾಲೇಜುಗಳಲ್ಲಿ ಮೂಲಸೌಲಭ್ಯ ಸೃಷ್ಟಿಯ ಖಾತ್ರಿ ಇಲ್ಲದೆಯೇ ಹಾಲಿ ಸಂಖ್ಯೆಯ ಪ್ರವೇಶಾತಿಗೆ ಅವಕಾಶ! ಇದು ನಮ್ಮ ಯೋಜಿತ ಅರ್ಥ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲ ತರಬೇತಿ ನೀಡುವ ಕ್ಷೇತ್ರದ ಯೋಜನಾರಹಿತ ಅವಾಂತರ. ಪ್ರಸ್ತುತ ಈ ತರಬೇತಿ ನೀಡುವ ಬಹಳಷ್ಟು ಸಂಸ್ಥೆ­ಗಳು ಖಾಸಗಿ ವಲಯದಲ್ಲಿವೆ. ೧೦೦ ಪ್ರಶಿಕ್ಷಣಾರ್ಥಿಗಳಿಗೆ ಪ್ರವೇಶಾವಕಾಶ ವಿರುವ ಸಂಸ್ಥೆಗಳು ಎರಡು ಘಟಕಗಳಿಗೆ ಪ್ರವೇಶ ನೀಡಿ, ಅಕ್ಟೋಬರ್ ತಿಂಗಳಲ್ಲಿ ನಡೆಯುವ ತಪಾಸಣೆ­ಯಲ್ಲಿ ಯಾವುದೋ ಸಣ್ಣಪುಟ್ಟ ಕಾರಣಕ್ಕೆ ಆಕ್ಷೇಪಣೆ ಬಂದರೆ ಆ ಕಾಲೇಜುಗಳನ್ನು ಮುಚ್ಚ­ಬೇಕೆ? ಅಥವಾ ಪ್ರವೇಶವಿಲ್ಲದೆಯೇ ಸಿಬ್ಬಂದಿ ವರ್ಗದವರಿಗೆ ವೇತನ ನೀಡಿ ಮುಂದುವರಿಸ­ಬೇಕೆ? ಸದ್ಯದ ನಿಯಮದ ಪ್ರಕಾರ ೧೦೦ ವಿದ್ಯಾರ್ಥಿ­ಗಳಿಗೆ ಒಂದು ತರಗತಿ. ಅಂದರೆ ಶಿಕ್ಷಕ ಮತ್ತು ವಿದ್ಯಾರ್ಥಿ ಅನುಪಾತ ೧:೧೦೦ ಆಗಿದೆ. ವೈಯುಕ್ತಿಕ ಗಮನ ನೀಡಿ ಬೋಧಿಸಲು ಈ ಅನುಪಾತದಿಂದ ಕಷ್ಟವಾಗುತ್ತದೆ ಎಂಬ ಆಲೋ­ಚನೆ, ವಿವೇಚನೆ­ಗಳು ಅನುಮೋದನೆ ಕೊಡು­ವಾಗ ದೇಶದ ಈ ಉನ್ನತ ಸಂಸ್ಥೆಗೆ ಇರಲಿಲ್ಲವೆ?

ತಪಾಸಣೆ ಎನ್ನುವ ಪ್ರಹಸನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅದೆಷ್ಟು ಅವಕಾಶ ಕೊಟ್ಟಿದೆ ಎನ್ನುವುದು ಈ ಪ್ರಕ್ರಿಯೆಗೆ ಒಳಗಾದ­ವ­ರಿಗಷ್ಟೇ ಗೊತ್ತು. ಹಾಗಾಗಿ ಈ ಹೊಸ ಬದಲಾ­ವಣೆ ಶಿಕ್ಷಕರ ತರಬೇತಿ ಕ್ಷೇತ್ರದಲ್ಲಿ ಉಂಟು ಮಾಡ­ಬಹುದಾದ ಭ್ರಷ್ಟಾಚಾರದ ಸಾಧ್ಯತೆ­ಯನ್ನು ತಳ್ಳಿಹಾಕುವಂತಿಲ್ಲ. ಈ ದೇಶದ ಶಿಕ್ಷಕ ಹುದ್ದೆಯ ಆಕಾಂಕ್ಷಿ ಪ್ರಶಿಕ್ಷಣಾರ್ಥಿಗಳಿಗೆ, ಪೋಷಕ­­ರಿಗೆ, ಆಡಳಿತ ವ್ಯವಸ್ಥೆಗೆ ಹೊಸ ಸರ್ಕಾರದ ಹೊಸ­ವರ್ಷದ ಕೊಡುಗೆಯಾಗಿದೆ ಈ ಬದಲಾವಣೆ!

ಆದ್ದರಿಂದ ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಈ ತರಬೇತಿ ಆಕಾಂಕ್ಷಿ ಯುವಜನರ ಹಿತದೃಷ್ಟಿ­ಯಿಂದ ಎನ್.ಸಿ.ಟಿ.ಇ. ಸಂಸ್ಥೆಗೆ ತಿಳಿಹೇಳಿ, ಸರಿಯಾದ ಕ್ರಮ ರೂಪಿತವಾಗುವವರೆಗೆ ಈ ಆದೇಶವನ್ನು ತಡೆಯಲು ಮಧ್ಯಪ್ರವೇಶಿಸ­ಬೇಕಾ­ಗಿದೆ. ನಿರುದ್ಯೋಗಿಗಳನ್ನು ಉತ್ಪಾದಿಸುವ ಶಿಕ್ಷಣಕ್ಕೆ ತಡೆ ಒಡ್ಡಬೇಕಾಗಿದೆ. ಉದ್ಯೋಗ ಮಾರು­ಕಟ್ಟೆಯೇ ಎಲ್ಲವನ್ನೂ ನಿರ್ವಹಿಸಲು ಅವ­ಕಾಶ ಕಲ್ಪಿಸುವುದಾದರೆ ಜನಕಲ್ಯಾಣ ಕಾಯಲು ಸರ್ಕಾರದ ವ್ಯವಸ್ಥೆಯಾದರೂ ಏಕೆ ಬೇಕು?

ಶಿಕ್ಷಣ ಪಡೆದೂ ಜನ ನಿರುದ್ಯೋಗಿಗಳಾಗು­ವು­ದಾದರೆ ಅದು ಸರ್ಕಾರದ ಹೊಣೆಗೇಡಿತನವೆ ಹೊರತು ಆ ಪ್ರಶಿಕ್ಷಣ ಪಡೆದ ಮುಗ್ಧ ಯುವಕ– ಯುವತಿಯರ ತಪ್ಪಲ್ಲ. ಇದಕ್ಕಿಂತ ಉದ್ಯೋಗ ಕೊಟ್ಟು ತರಬೇತಿ ಕೊಟ್ಟರೆ ಪ್ರಯೋಜನವೇ ಹೊರತು; ತರಬೇತಿ ಕೊಟ್ಟು ನಿರುದ್ಯೋಗಿಗಳಾಗಿ­ಸು­ವುದು ನಿಷ್ಪ್ರಯೋಜಕ. ಪೊಲೀಸ್, ರಾಜ್ಯ ಮತ್ತು ಕೇಂದ್ರ ಆಡಳಿತ ಸೇವೆ, ರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿರುವಂತೆ ಪ್ರಶಿಕ್ಷಣ ವಲಯದಲ್ಲೂ ಉದ್ಯೋಗಕ್ಕೆ ಆಯ್ಕೆ­ಯಾದ ನಂತರ ತರಬೇತಿ ನೀಡುವ ವ್ಯವಸ್ಥೆ­ಯಾ­ದರೆ ಮಾತ್ರ ಇಲ್ಲಿ ನಿರುದ್ಯೋಗ ಪಿಡುಗು ನಿರ್ನಾಮ­ವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT