ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ಶಾಂತಿ ಮಂತ್ರ, ಕಂಕುಳಲ್ಲಿ ದೊಣ್ಣೆ

Last Updated 29 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನೆರೆಹೊರೆಯ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಹೊಂದಿರಬೇಕು ಎನ್ನುವುದು ನಿಜ. ಆದರೆ ನಮ್ಮ ದೇಶಕ್ಕೆ ಪಾಕಿಸ್ತಾನ ನೆರೆಯ `ಹೊರೆ' ರಾಷ್ಟ್ರವಾಗಿದೆ. ಕಾಲು ಕೆರೆದು ಜಗಳಕ್ಕೆ ಬರುವುದು ಅದರ ಜಾಯಮಾನವಾಗಿದೆ. ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ದಿನ ನಮ್ಮ ಗೃಹ ಸಚಿವರು `ಸಿಖ್ ಉಗ್ರವಾದಕ್ಕೆ ಮರುಜೀವ ಕೊಡಲು ಪಾಕ್ ಯತ್ನಿಸುತ್ತದೆ.

ನಮ್ಮ ದೇಶದ ಒಳಗೆ ಹಿಂಸಾಚಾರ ನಡೆಸಲು ಯುವಕರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ತರಬೇತಿ ನೀಡುತ್ತಿದೆ' ಎಂದಿದ್ದರು. ಇತ್ತೀಚೆಗೆ ಭಾರತ- ನೇಪಾಳ ಗಡಿಯಲ್ಲಿ ಬಂಧಿತನಾದ ಕುಖ್ಯಾತ ಭಯೋತ್ಪಾದಕ ಅಬ್ದುಲ್ ಕರೀಂ ತುಂಡಾ ಅಲಿಯಾಸ್ ಅಬ್ದುಲ್ ಖುದ್ದೂಸ್, `ನನಗೆ ಐಎಸ್‌ಐ ಜತೆ ಸಂಪರ್ಕ ಇತ್ತು. ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇದ್ದಾನೆ. ಭಯೋತ್ಪಾದನೆಗೆ ಆತ ಹಣಕಾಸಿನ ನೆರವು ನೀಡುತ್ತಿದ್ದಾನೆ. ಅಲ್ಲಿ ಆತನಿಗೆ ಐಎಸ್‌ಐ ರಕ್ಷಣೆ ಇದೆ ' ಎಂದು ಹೇಳಿದ್ದ.

ಬಾಯಲ್ಲಿ ಶಾಂತಿಯ ಮಂತ್ರ; ಕಂಕುಳಲ್ಲಿ ದೊಣ್ಣೆ ಪಾಕಿಸ್ತಾನದ ಹಳೆಯ ಕುತಂತ್ರ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ.  ಮುಂಬೈ ಮೇಲಿನ ದಾಳಿಯ ಪಿತೂರಿಕೋರ ಹಫೀಜ್ ಸಯೀದ್‌ನನ್ನು ಹಸ್ತಾಂತರ ಮಾಡುವಂತೆ ಭಾರತ ಪಾಕಿಸ್ತಾನವನ್ನು ಬಹಳ ವರ್ಷಗಳ ಹಿಂದೆಯೇ ಕೋರಿದೆ. ಆದರೆ ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಶೂನ್ಯ. ಕೆಲ ತಿಂಗಳ ಹಿಂದೆ ಅಮೆರಿಕ ಆತನ ತಲೆಗೆ ಲಕ್ಷಾಂತರ ಡಾಲರ್ ಬಹುಮಾನವನ್ನೇ ಪ್ರಕಟಿಸಿದೆ. ತಮಾಷೆಯ ಸಂಗತಿ ಎಂದರೆ ಆತ ಪಾಕಿಸ್ತಾನದಲ್ಲಿ ಭಾರತ- ಅಮೆರಿಕ ವಿರುದ್ಧ ರ್‍ಯಾಲಿ ಏರ್ಪಡಿಸುತ್ತಾ ಈ ಎರಡು ರಾಷ್ಟ್ರಗಳ ವಿರುದ್ಧ ವಿಷ ಕಾರುತ್ತಾ ಓಡಾಡುತ್ತಿದ್ದಾನೆ. ಆತನ ಕೂದಲು ಕೊಂಕದಂತೆ ನೋಡಿಕೊಳ್ಳುತ್ತಿರುವ ಪಾಕ್ ಮಾತ್ರ ಭಾರತದ ಜತೆ ಶಾಂತಿ ಮಾತುಕತೆ ಪುನಃ ಆರಂಭಿಸುವ ಇಚ್ಛೆಯನ್ನು ಮತ್ತೆ ಮತ್ತೆ ಪ್ರಕಟಿಸುತ್ತಿದೆ!

ಈ ತಿಂಗಳ 6ರಂದು ಕಾಶ್ಮೀರದ ಪೂಂಚ್ ವಲಯದಲ್ಲಿ ಗಡಿ ದಾಟಿ ಬಂದ ಪಾಕಿಸ್ತಾನದ ಸೈನಿಕರು ಹಾಗೂ ಭಯೋತ್ಪಾದಕರನ್ನು ಒಳಗೊಂಡ ತಂಡ ನಮ್ಮ ಐವರು ಸೈನಿಕರನ್ನು ಅಮಾನುಷವಾಗಿ ಸಾಯಿಸಿದ ಘಟನೆಯ ಬಳಿಕ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, `ಭಯೋತ್ಪಾದಕರು ಪಾಕ್ ಸೈನಿಕರ ಸಮವಸ್ತ್ರ ಧರಿಸಿ ಬಂದು ಈ ಕೃತ್ಯ ಎಸಗಿದ್ದಾರೆ' ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಸೇನಾ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವಿಷಯವನ್ನು ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾಯಿತು. ಇದರ ಬಳಿಕ `ಪಾಕ್ ಸೈನಿಕರು ಮತ್ತು ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ' ಎಂದು ತಮ್ಮ ಮೊದಲ ಹೇಳಿಕೆಯನ್ನು ತಿದ್ದಿ ಮರು ಹೇಳಿಕೆಯನ್ನು ಆಂಟನಿ ನೀಡಬೇಕಾಗಿ ಬಂತು.

ಈ ಹೇಳಿಕೆ ನೀಡಿದ ಒಂದು ಗಂಟೆಯ ಬಳಿಕ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿಕೆ ನೀಡಿ, `ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಘಟನೆ ಹಾಗೂ ಅಮೂಲ್ಯ ಜೀವಗಳ ಹಾನಿ ನನಗೆ ದುಃಖ ತಂದಿದೆ. ಭಾರತ ಮತ್ತು ಪಾಕಿಸ್ತಾನ ಗಡಿನಿಯಂತ್ರಣ ರೇಖೆಯ ಬಳಿ ಕದನವಿರಾಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ' ಎಂದ್ದ್ದಿದರು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಈ ದುಷ್ಕೃತ್ಯ ಎಸಗಿದ್ದು ತಮ್ಮ ಸೇನೆಯಲ್ಲ ಎಂದು ಪಾಕ್ ಪ್ರಧಾನಿ ಹೇಳಿಲ್ಲ.

ಈ ಹಿಂದೆ ಭಾರತದ ಇಬ್ಬರು ಸೈನಿಕರ ತಲೆ ಕತ್ತರಿಸಿದ ಘಟನೆ ನಡೆದಾಗ ಭಾರತ ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಈ ಹತ್ಯೆಯ ವಿಚಾರಣೆ ನಡೆಸುವುದಾಗಿ ಪಾಕ್ ಹೇಳಿತ್ತು. ಆ ಮೇಲೆ ಏನಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಇದಕ್ಕೆ ಮುನ್ನ ಮುಂಬೈಯಲ್ಲಿ ದಾಳಿ ನಡೆದಾಗ `ಆ ಉಗ್ರರು ಪಾಕಿಸ್ತಾನದವರಲ್ಲ' ಎಂದು ಹೇಳಿ ಉಗ್ರರ ಶವ ಪಡೆದುಕೊಳ್ಳಲು ಪಾಕ್ ಸರ್ಕಾರ ನಿರಾಕರಿಸಿತ್ತು. ಆದರೆ ಕಸಾಬ್‌ನ ಪಾಲಕರ ಮನೆಗೆ ಹೋದ ಪಾಕ್ ಮಾಧ್ಯಮ ಪ್ರತಿನಿಧಿಗಳು ಸಂದರ್ಶನ ಮಾಡಿ ಅದನ್ನು ಟಿ.ವಿ.ಯಲ್ಲಿ ಪ್ರಸಾರ ಮಾಡಿ ಅಲ್ಲಿನ ಸರ್ಕಾರವನ್ನೇ ಬೆಚ್ಚಿ ಬೀಳಿಸುವುದರಲ್ಲಿ ಯಶಸ್ವಿಯಾಗಿದ್ದರು. ಇಂತಹ ಘನಘೋರ ಅಪರಾಧ ಕೃತ್ಯಗಳು ನಡೆದಾಗ ಅವುಗಳ ಜವಾಬ್ದಾರಿ ಹೊರದೆ ನುಣುಚಿಕೊಳ್ಳುವುದು ಪಾಕಿಸ್ತಾನದ ಹಳೆಯ ಚಾಳಿ.

ಸ್ವಾತಂತ್ರ್ಯದ ದಿನದ ಮುನ್ನಾ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು `ಗಡಿಯಲ್ಲಿ ಪದೇ ಪದೇ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದೆ. ನಮ್ಮ ಸಹನೆಗೂ ಮಿತಿ ಇದೆ' ಎಂದು ಹೇಳಿದ್ದಾರೆ. ಅದೇ ದಿನ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಜತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, `ನಮ್ಮ ಉದ್ದೇಶ ಶಾಂತಿ ಕಾಪಾಡುವುದೇ ಆಗಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಶಮನ ಮಾಡುವುದಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಭಾರತ ಕೂಡ ಪೂರಕವಾಗಿ ಸ್ಪಂದಿಸುತ್ತದೆ ಎಂದು ನಾವು ಆಶಿಸಿದ್ದೇವೆ' ಎಂದಿದ್ದಾರೆ. ಇದೊಂದು ಜೊಳ್ಳು ಹೇಳಿಕೆ ಎಂದು ಬೇರೆ ಹೇಳಬೇಕಾಗಿಲ್ಲ.

ಸಂಸತ್, ಮುಂಬೈ ಮೇಲಿನ ದಾಳಿ ಹಾಗೂ ನಮ್ಮ ಯೋಧರ ಕತ್ತು ಕತ್ತರಿಸಿದ ಘಟನೆ ನಡೆದಾಗಲೂ ಪಾಕ್ ನಾಯಕರು ಇದಕ್ಕಿಂತ ಭಿನ್ನ ಹೇಳಿಕೆ ನೀಡಿರಲಿಲ್ಲ. ಅಲ್ಲಿನ ಸೈನಿಕರು ಅನಗತ್ಯವಾಗಿ ಗುಂಡಿನ ಚಕಮಕಿ ನಡೆಸಿದಾಗಲೂ `ಭಾರತವೇ ತಪ್ಪು ಮಾಡಿದೆ' ಎಂಬಂತೆ ಅಲ್ಲಿನ ಸರ್ಕಾರ ವರ್ತಿಸಿದೆ. ನಮಗೆ ಶಾಂತಿಯ ಮಂತ್ರ ಬೋಧಿಸ್ದ್ದಿದೂ ಇದೆ. ನಮ್ಮ ದೇಶಕ್ಕೆ ಅಲ್ಲಿನ ಭಯೋತ್ಪಾದಕರ ಜತೆ ಸೇನೆ ಕೂಡ ದೊಡ್ಡ ತಲೆ ನೋವಾಗಿದೆ. 

ಮುಷರಫ್ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ಗಡಿ ಉಲ್ಲಂಘಿಸಿ ಭಯೋತ್ಪಾದಕರು ಭಾರತದ ಒಳಗೆ ನುಗ್ಗಿದ ಹತ್ತು ಹಲವು ಘಟನೆಗಳು ನಡೆದು ಕೊನೆಗೆ ಕಾರ್ಗಿಲ್ ಯುದ್ಧವೇ ನಡೆದು ಹೋಯಿತು. ಕಯಾನಿ ಸೇನಾ ಮುಖ್ಯಸ್ಥರಾದ ಬಳಿಕ ಗಡಿ ಉಲ್ಲಂಘನೆ ನಿಲ್ಲಲಿಲ್ಲ. ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಶಾಂತಿ ಕಾಪಾಡುವ ಉದ್ದೇಶದಿಂದ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಬಂದರೂ ಪಾಕ್ ಕಡೆಯಿಂದ ಗುಂಡು ಹಾರಿಸುವುದು ನ್ಲ್ಲಿಲಲಿಲ್ಲ. ಅಲ್ಲಿನ ಸೈನಿಕರು ವಿನಾಕಾರಣ ಗುಂಡು ಹಾರಿಸುತ್ತಿಲ್ಲ.  ಅಕ್ರಮವಾಗಿ ನುಸುಳುವವರಿಗೆ ನೆರವಾಗಲೆಂದೇ ಈ ಕೃತ್ಯ ಎಸಗುತ್ತಿದ್ದಾರೆ.

ಈ ಹಿಂದೆ ಅಮೆರಿಕ, ಪಾಕಿಸ್ತಾನಕ್ಕೆ ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ನೀಡಿದಾಗ ಭಾರತ ಆಕ್ಷೇಪಿಸಿತ್ತು. ಇದನ್ನು ಭಾರತದ ವಿರುದ್ಧ ಬಳಸುವ ಸಾಧ್ಯತೆ ಇದೆ ಎಂದು ಒಬಾಮ ಸರ್ಕಾರಕ್ಕೆ  ತಿಳಿಸಿತ್ತು. ಅಮೆರಿಕದ ಹಿಂದಿನ ಸರ್ಕಾರಗಳೆಲ್ಲ `ಭಾರತದ ವಿರುದ್ಧ ಈ ಶಸ್ತ್ರಾಸ್ತ್ರಗಳನ್ನು ಬಳಸಕೂಡದು' ಎಂಬ ಷರತ್ತು ವಿಧಿಸಿಯೇ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಿದ್ದವು. ಒಬಾಮ ಸರ್ಕಾರ ಮಾತ್ರ ಇಂತಹ ಷರತ್ತು ವಿಧಿಸದೆ ಪೂರೈಕೆ ಮಾಡಿದಾಗ ಭಾರತ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ರೀತಿ ಅಸಮಾಧಾನ ಮತ್ತು ಸಂದೇಹ ವ್ಯಕ್ತಪಡಿಸಲು ಕಾರಣವಿದೆ. ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಸೋವಿಯತ್ ಸೇನೆ ಇದ್ದಾಗ ಅಲ್ಲಿ ಮುಜಾಹಿದ್ದೀನ್‌ಗಳಿಗೆ ಆ ಸೇನೆಯ ವಿರುದ್ಧ ಹೋರಾಡಲು ಅಮೆರಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಾಕ್ ಮೂಲಕ ಪೂರೈಸಿತ್ತು.

ಆದರೆ ಅದನ್ನು ಪಾಕ್ ತನ್ನಲ್ಲಿರುವ ಭಯೋತ್ಪಾದಕರಿಗೆ ಒದಗಿಸಿತ್ತು. ಇದರ ಬಗ್ಗೆ ಭಾರತ ಆಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಏಕೆಂದರೆ ಆ ಶಸ್ತ್ರಾಸ್ತ್ರ ಬಳಕೆಯಾದುದು ಸೋವಿಯತ್ ಸೇನೆಯ ವಿರುದ್ಧ ಮಾತ್ರವಲ್ಲ, ಭಾರತದ ಮುಗ್ಧರ ವಿರುದ್ಧ ಕೂಡ.
ಪಾಕಿಸ್ತಾನದ ಭಯೋತ್ಪಾದನೆ ಮತ್ತು ಕುಚೇಷ್ಟೆ ಈ ಎರಡಕ್ಕೂ ಕಡಿವಾಣ ಹಾಕಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಎರಡೂ ರಾಷ್ಟ್ರಗಳು ಅಣ್ವಸ್ತ್ರ ಸಜ್ಜಿತವಾದ ಕಾರಣ ಯುದ್ಧ ಇದಕ್ಕೆ ಉತ್ತರವಾಗುವ ಬದಲು ಉಪಖಂಡದಲ್ಲಿ ಭಾರಿ ದುರಂತಕ್ಕೆ ಎಡೆ ಮಾಡಿಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT