ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮುಕ್ತ ಬದುಕಿಗೆ ಸಂದ ನೊಬೆಲ್‌

Last Updated 15 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ರಾಷ್ಟ್ರದ ಅಭ್ಯುದಯಕ್ಕಾಗಿ ಮಕ್ಕಳಿಗೆ ಮುಕ್ತವಾದ ವಾತಾವರಣ ನಿರ್ಮಾಣವಾಗಬೇಕು; ಎಲ್ಲಿಯವ­ರೆಗೆ ಮಕ್ಕಳ ಅಸ್ತಿತ್ವಕ್ಕೆ ಸಿಂಧುತ್ವ ದೊರೆಯದೋ ಅಲ್ಲಿ­ಯ­ವ­ರೆಗೂ ಆ ರಾಷ್ಟ್ರಕ್ಕೆ ಅಭಿವೃದ್ಧಿ ಪಥ ಇಲ್ಲವೆಂದೇ ಭಾವಿಸಿ­ಕೊಳ್ಳ-­ಬೇಕು’ ಎಂದು ಹೇಳುವ ಮಕ್ಕಳ ಹಕ್ಕುಗಳ ಪ್ರತಿಪಾದಕರಿಗೆ ಸಂಭ್ರ­ಮಿಸಲು ಇದಕ್ಕಿಂಥ ಉತ್ತಮ ಅವಕಾಶ ದೊರೆಯ­ಲಾರದು.

ಜಗತ್ತಿನ ಅತ್ಯುತ್ಕೃಷ್ಟ ಪಾರಿತೋಷಕ ಎಂದೇ ಪರಿಗಣಿಸ­ಲಾಗುವ ನೊಬೆಲ್ ಶಾಂತಿ ಪ್ರಶಸ್ತಿಗೆ ಮಕ್ಕಳ ಹಕ್ಕುಗಳ ಅಸೀಮ ಹೋರಾಟಗಾರರಾದ ಕೈಲಾಶ್ ಸತ್ಯಾರ್ಥಿ ಮತ್ತು ಮಲಾಲ ಭಾಜನರಾಗಿದ್ದಾರೆ. ಅವರಿಬ್ಬರ ಯೋಚನೆ, ಲಹರಿ ಗಳು ಒಂದೇ. ಮಕ್ಕಳ ವಿಷಯವನ್ನು, ಅದರಲ್ಲೂ ಅವಕಾಶ ವಂಚಿತ ಹಾಗೂ ತಿರಸ್ಕಾರಕ್ಕೆ ಒಳಗಾದ ಮಕ್ಕಳ ವಿಚಾರವನ್ನು ಕೈಗೆತ್ತಿ­ಕೊಂಡು ಅದಕ್ಕೊಂದು ಗಾಂಧಿ ಹೋರಾಟದ ಹಾದಿಯನ್ನು ತೋರಿಸಿಕೊಟ್ಟವರು ಕೈಲಾಶ್ ಸತ್ಯಾರ್ಥಿ. ದೆಹಲಿಯನ್ನು ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು, ಮಕ್ಕಳ ಸಮಸ್ಯೆಗಳ ಬಗ್ಗೆ ವಿಶ್ವದ ಗಮನ ಸೆಳೆಯುವ ಪ್ರಯತ್ನಕ್ಕೆ ಅವರು ಚಾಲನೆ ಒದಗಿಸಿದರು. 1983ರಲ್ಲಿ ‘ಬಚ್‌ಪನ್ ಬಚಾವೋ’ ಆಂದೋ­ಲನದ ಕಾರ್ಯದರ್ಶಿಯಾಗಿ ಅವರು ಕೈಗೊಂಡ ಕಾರ್ಯ­ಕ್ರಮ­ಗಳು ಅಗಾಧವಾದವು.

ಮನೆಯಲ್ಲಿ ದುಡಿಯುವ ಮಗುವಿದ್ದರೆ ಭೂಷಣ ಎಂಬ ನಂಬಿಕೆಯಿಂದ ಧನಿಕರು ಅಲ್ಪ ಹಣ ಕೊಟ್ಟು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರ ಮಕ್ಕಳನ್ನು ಕೊಳ್ಳತೊಡಗಿದರು. ಸುಶಿಕ್ಷಿತ ವರ್ಗವು ಹಳ್ಳಿಗಾಡಿನ ಮಕ್ಕಳನ್ನು ನಗರಕ್ಕೆ ತಂದು ಅವರ ಬಡತನವನ್ನು ತಮ್ಮ ಲೂಟಿಗಾಗಿ ಬಳಸಿಕೊಂಡಿತು. ಅದಲ್ಲದೆ, ಜಮೀನ್ದಾರರು ಜೀತಕ್ಕಾಗಿ ಮಕ್ಕಳನ್ನು ಅಡವಿಟ್ಟು­ಕೊಂಡು, ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಯನ್ನು ಕುಗ್ಗಿಸಿದ್ದರು. ಹೋಟೆಲ್ ಉದ್ಯಮದಲ್ಲಂತೂ ಮಕ್ಕಳು ಎಂಜ­ಲನ್ನು ಎತ್ತುತ್ತಲೇ ಎಂಜಲಾಗಿ ಹೋಗಿದ್ದರು. ಅವರ ಮೇಲೆ ಘನ ಸರ್ಕಾರದ ಕಣ್ಣು ಬೀಳಲೇ ಇಲ್ಲ. ಇಂತಹ ಮಕ್ಕಳ ಪರ­ವಾಗಿ ಮಿಡಿದ ಕೈಲಾಶ್‌ ಮಕ್ಕಳ ಸಮಸ್ಯೆಗಳನ್ನು ಬೆಳಕಿಗೆ ತಂದಿ­ದ್ದ­ಲ್ಲದೇ, ಸರ್ಕಾರ ಈ ಸಮಸ್ಯೆಗಳ ಬಗ್ಗೆ ಚಿಂತಿಸುವಂತೆ ಮಾಡಿದರು.

ಗಣಿಗಳಲ್ಲಿ, ರಾಸಾಯನಿಕ ಕಾರ್ಖಾನೆಗಳಲ್ಲಿ, ಚರ್ಮ ಹದ­ಗೊಳಿಸುವ ಕಾರ್ಖಾನೆಗಳಲ್ಲಿ ಚೆಂದದ ಮಕ್ಕಳು ಅರಳುವ ಮೊದಲೇ ಮುಕ್ಕಾಗಿ ಹೋಗುತ್ತಿದ್ದುದನ್ನು ನೋಡಲಾಗದೆ, ರಾಷ್ಟ್ರ­ದಾದ್ಯಂತ ಪ್ರವಾಸ ಕೈಗೊಂಡು ‘ಬಾಲ ಕಾರ್ಮಿಕ ವಿರೋಧಿ ಜಾಗೃತಿ ನಡಿಗೆ’ಯನ್ನು ಪ್ರಾರಂಭಿಸಿದರು. ಸಾಹಿತಿ­ಗಳು, ವಿಚಾರವಂತರು, ಕಾರ್ಮಿಕರು,   ಜನಸಾಮಾನ್ಯರು, ಹಲ­ವಾರು ಸಂಘಟನೆಗಳನ್ನು ಒಳಗೊಂಡ 15 ಸಾವಿರ ಕಿ.ಮೀ. ಉದ್ದದ ಜಾಥಾವನ್ನು ನಡೆಸಿದರು. ಇದರಿಂದ ಅದೇ ಮೊದಲ ಬಾರಿಗೆ ಸರ್ಕಾರಗಳು ನೊಂದ ಮಕ್ಕಳೆಡೆಗೆ ದೃಷ್ಟಿ ಹರಿಸುವ ಪರಿಣಾಮಕಾರಿ ಬದಲಾವಣೆ ಸಾಧ್ಯವಾಯಿತು. ಮಕ್ಕಳನ್ನು ಮಾರಿ ಬದುಕುವ, ಅವರಿಂದ ದುಡಿಸಿಕೊಂಡು ತಿನ್ನುವ ಕುಟುಂಬಗಳ ಅಸಹಾಯಕತೆಯನ್ನು ಜನ ಸರ್ಕಾರದ ಗಮನಕ್ಕೆ ತಂದರು.

ಕೈಲಾಶ್‌ ಅವರ ಹೋರಾಟದ ಹಾದಿ ಎಂದಿಗೂ ಸಮಾ­ಧಾನ­­ಚಿತ್ತದಿಂದ ಕೂಡಿರಲಿಲ್ಲ. ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವ ವಿಕೃತ ಜನರಿಂದ ಅವರ ಮೇಲೆ ಹಲ್ಲೆ, ಕೊಲೆ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸರ್ಕಾರ­ಗಳು ಕೂಡ ಅವರ ವಿರುದ್ಧ ದೂರುಗಳನ್ನು ದಾಖಲಿಸುತ್ತಲೇ ಬಂದಿವೆ. ಅಷ್ಟರ ಮಟ್ಟಿಗೆ ಮಾತ್ರ ಕೈಲಾಶ್‌ ಅವರ ಪರಿಚಯ ನಮ್ಮನ್ನಾಳುವ ಸರ್ಕಾರಗಳಿಗೆ ಇದೆ!  ಆದರೆ ಅವರ ಪ್ರಯತ್ನದ ಹಾದಿಯನ್ನು ರಾಷ್ಟ್ರದ ಜನ ಗುರುತಿಸಿದ್ದಾರೆ.  ಅಂತರ ರಾಷ್ಟ್ರೀಯ ಮನ್ನಣೆ, ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.

ಶಿಕ್ಷಣ ವಂಚಿತ ಮಕ್ಕಳು ಕಾರ್ಖಾನೆಗಳಲ್ಲಿ ತಯಾರಿಸುವ ವಸ್ತು­ಗಳನ್ನು ಗ್ರಾಹಕರು ಕೊಳ್ಳಬಾರದು ಎಂಬ ಅಂತಃಕರಣ­ಪೂರ್ವಕ ಸಂದೇಶವನ್ನು ಕೈಲಾಶ್‌ ಬಿತ್ತರಿಸಿದರು. ಪರಿಣಾಮ­ವಾಗಿ ಪ್ರಜ್ಞಾವಂತ ನಾಗರಿಕರು ಮಕ್ಕಳಿಂದ ತಯಾರಾದ ಕೆಲವು ವಸ್ತು­ಗಳನ್ನು ತಿರಸ್ಕರಿಸತೊಡಗಿದರು. ಇದೊಂದು ಗಾಂಧಿ ಮಾದರಿಯೇ ಸರಿ. ಈ ಪ್ರಯತ್ನದಿಂದಾಗಿ ‘ಶಿವಕಾಶಿ’ಯ ಪಟಾಕಿ ಉದ್ಯಮ ನಿಲ್ಲುವ ಹಂತಕ್ಕೆ ಬಂದಿತಲ್ಲದೆ, ಎಷ್ಟೋ ಪಟಾಕಿ ಕಾರ್ಖಾನೆಗಳು ಮಕ್ಕಳ ದುಡಿತವಿಲ್ಲದೇ ನಿಂತು­ಹೋದವು. ಹಾಗೆಯೇ ಪುರಿ ಮಂಡಿಗಳಲ್ಲಿ, ಚರ್ಮದ ಕಾರ್ಖಾ­ನೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಮಕ್ಕಳು ಕಾರ್ಖಾ­ನೆಗಳಿಂದ ಹೊರಬಂದರು. ಹೀಗೆ ಬಂದ ಮಕ್ಕಳ ಭವಿಷ್ಯದ  ಪ್ರಶ್ನೆ ಎದುರಾದಾಗ ‘ಬಾಲ ಕಾರ್ಮಿಕ ವಿರೋಧಿ ಆಂದೋ­ಲನ’ ಹಾಗೂ ‘ಬಚ್‌ಪನ್ ಬಚಾವೋ’ ಆಂದೋಲ­ನ­ಗಳ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯನ್ನೇ ಜಾರಿಗೆ ತಂದಿತು.

ಪ್ರಾಥಮಿಕ ಹಂತದಲ್ಲಿ ಉಚಿತ ಶಿಕ್ಷಣ ಜಾರಿಯಾಗ­ಬೇಕೆಂದು ಪಣ ತೊಟ್ಟು, ಒಂಬತ್ತು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿಯ ಹೈಕೋರ್ಟ್‌ನಲ್ಲಿ ಕೈಲಾಶ್‌ ಸಲ್ಲಿಸಿದರು. ಈ ಹೋರಾಟದ ಫಲವೇ ‘2010ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ’. ಇದನ್ನು , ತಿರಸ್ಕಾರಕ್ಕೆ ಒಳಪಟ್ಟ ಯಾವ ಮಗುವೂ ಭವಿಷ್ಯದಲ್ಲಿ ನೆನೆಯದೇ ಇರಲಾರದು.

ವಿಶ್ವಸಂಸ್ಥೆಯ 1991ರ ಅಂತರ ರಾಷ್ಟ್ರೀಯ ಒಪ್ಪಂದದ ಪ್ರಕಾರ, ಕಾರ್ಪೊರೇಟ್‌ ವಲಯಗಳು ಮಕ್ಕಳನ್ನು ದುಡಿಸಿ­ಕೊಳ್ಳು­ವಂತಿಲ್ಲ ಎಂಬ ಕಾನೂನಿನ ಹಿಂದೆ ಕೈಲಾಶ್‌ ಅವರ ಪಾತ್ರ ದೊಡ್ಡದಾಗಿಯೇ ಇದೆ. ಸಂರಕ್ಷಿಸಿದ ಮಕ್ಕಳ ಲಾಲನೆ, ಪಾಲನೆ­ಗಾಗಿ ತಮ್ಮದೇ ‘ಮುಕ್ತಿ’ ಆಶ್ರಮವನ್ನು ಅವರು ತೆರೆದಿದ್ದಾರೆ. ಇಂತಹ ಹೋರಾಟಗಾರನಿಗೆ ನೊಬೆಲ್ ಪಾರಿತೋಷಕ ದಕ್ಕಿರು­ವುದು ಪ್ರಾಮಾಣಿಕ ಹೋರಾಟಗಾರರೆಲ್ಲರ ಎದೆಯಲ್ಲಿಯೂ ಪ್ರಶಾಂತ ದೀಪದ ಕಿಚ್ಚು ಹಚ್ಚಿಸಿದಂತಿದೆ. ಅದು ಬೆಳಗಬೇಕು, ಬೆಳೆಯಬೇಕು.

ತಾಲಿಬಾನೀಯರಿಗೆ ಹೆಣ್ಣೆಂದರೆ ಹಡೆಯುವ, ದುಡಿಯುವ ಯಂತ್ರ,  ಜನರೆಂದರೆ ತಮ್ಮ ಸಹಚರರು ಎಂದೇ ಅರ್ಥ. ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡ ಎಂಬ ಅವರ ನಿಲುವಿನ ವಿರುದ್ಧ ಜೋರಾಗಿ ಧ್ವನಿ ಎತ್ತಲಾಗದೇ, ಸಾರ್ವಜನಿಕ ಸ್ಥಳಗಳಿಗೆ ತೆರಳಲಾಗದೇ ಹೆಣ್ಣು ಮಕ್ಕಳು ಯಾತನೆ ಪಡುತ್ತಿದ್ದರು.

ಇಂತಹ ಪರಿಸರದಲ್ಲಿ ಆರೂವರೆ ವರ್ಷಗಳ ಹಿಂದೆ ‘ಯಾವ ಧೈರ್ಯದಿಂದ ತಾಲಿಬಾನೀಯರು ನನ್ನ ಸ್ವಾತಂತ್ರ್ಯವನ್ನು, ಭಾವನೆ­ಯನ್ನು ಕಸಿಯಲು ಸಾಧ್ಯ? ನನ್ನ ಶಿಕ್ಷಣ ನನ್ನ ಹಕ್ಕು. ಅದನ್ನು ಮೊಟಕುಗೊಳಿಸಲು ನೀವ್ಯಾರು? ನಾನು ಶಾಲೆಗೆ ಹೋಗ­ದಂತೆ ಮಾಡಿದ ಆದೇಶಕ್ಕೆ ಯಾವ ದೇವರ ಸಹಿ ಇದೆ’ ಎಂದು ಮಲಾಲ ಪೆಷಾವರದ ಪತ್ರಿಕಾಗೋಷ್ಠಿಯಲ್ಲಿ ತಾಲಿ­ಬಾನೀ­ಯರ ಎದೆಗೆ ಒದ್ದಂತೆ ಕೇಳಿದ್ದಳು. ಈ ಮಾತುಗಳು ಇಂದು ಆಕೆಯನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ.

‘ನನ್ನ ಧ್ಯೇಯವನ್ನು, ಧೈರ್ಯವನ್ನು ಸುಲಭವಾಗಿ ಬದಲಾ­ಯಿಸಿ ಬಿಡಬಹುದು. ಯಕಃಶ್ಚಿತ್ ಹೆಣ್ಣು ಮಗಳೊಬ್ಬಳು ನಮ್ಮ ಗುರಿಗಳಿಗೆ ಅಡ್ಡಿಯಾಗಲಾರಳು, ಏಕೆಂದರೆ ನಮ್ಮ ಗುಂಡುಗಳು ಅವಳನ್ನು ಮುಚ್ಚಿಹಾಕಿಬಿಡುತ್ತವೆ ಎಂದು ಉಗ್ರರು ಅಂದು­ಕೊಂಡಿ­ದ್ದರು. ಆದರೆ ಆ ರೀತಿಯಾಗಲಿಲ್ಲ. ನನ್ನಲ್ಲಿದ್ದ ಭಯ, ದೌರ್ಬಲ್ಯ, ಅಸಹಾಯಕತೆ ಸತ್ತುಹೋಗಿ, ಅವುಗಳ ಜಾಗದಲ್ಲಿ ಹೊಸ ಬಲ, ಶಕ್ತಿ, ಧೈರ್ಯ ಹುಟ್ಟಿದೆ’ ಎಂದು ಮಲಾಲ ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಇಡೀ ಜಗತ್ತೇ ಅವಳ ಪರವಾಗಿ ನಿಂತಿತು.

2012ರ ಅಕ್ಟೋಬರ್ 9ರಂದು ಶಾಲೆಗೆ ಹೋಗಿ ಹಿಂತಿ­ರು­ಗುವಾಗ  ಬಸ್ಸಿನಲ್ಲಿ ಅಡಗಿದ್ದ ಬಂದೂಕುಧಾರಿ ಉಗ್ರ ಗುಂಡಿನ ದಾಳಿ ನಡೆಸಿದ. ಈ  ಘಟನೆಗೆ ಇಡೀ ಜಗತ್ತೇ ಬೆಚ್ಚಿಬಿದ್ದಿತ್ತು ಮತ್ತು ಪಾಕಿಸ್ತಾನದ ಬಗ್ಗೆ ತಿರಸ್ಕಾರದ ನೋಟ ಬೀರತೊಡ­ಗಿತು. ಈ ಘಟನೆಯನ್ನು ಪಾಕಿಸ್ತಾನದ ಮಾನವಂತ ಪ್ರಜೆಗಳು ಕೂಡ ಖಂಡಿಸಿದರು. ಪರಿಣಾಮವಾಗಿ ಅಲ್ಲಿ ಹೆಣ್ಣು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಯಿತು. ಈಕೆಯ ಪುಟ್ಟಪುಟ್ಟ ಹೆಜ್ಜೆಗಳು ತಾಲಿಬಾನೀಯರ ಬಂದೂಕಿಗಿಂತಲೂ ತೀವ್ರವಾಗಿರುತ್ತವೆ ಎಂಬುದನ್ನು ಯಾರೂ ಕನಸು ಮನಸಿ­ನಲ್ಲೂ ಎಣಿಸಿರಲಿಲ್ಲ!

ಕ್ರೌರ್ಯವನ್ನು ಕಡೆಗಾಣಿಸುವ ನಿಟ್ಟಿನಲ್ಲಿ ಕೈಲಾಶ್ ಮತ್ತು ಮಲಾಲ ಒಂದು ಪಣ ತೊಟ್ಟಿದ್ದಾರೆ. ಅದೆಂದರೆ ‘ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧ ಸಹೋದರತ್ವದಿಂದ ಕೂಡಿದೆ. ಸಂಬಂಧಗಳು ಮಮಕಾರದಿಂದ ಗಟ್ಟಿಗೊಳ್ಳಲು ನಾವಿಬ್ಬರೂ ಪ್ರಯತ್ನಿಸುತ್ತೇವೆ. ಕೆಲವು ಕ್ಷುಲ್ಲಕ ಕಾರಣಗಳಿಂದ ವ್ಯಗ್ರವಾಗಿರುವ ಜನರ ಒಡಲಿನಲ್ಲಿ ಶಾಂತಿ ಮಂತ್ರ ಪಠಿಸಬೇಕು. ಆ ನಿಟ್ಟಿನಲ್ಲಿ ನಮ್ಮಿಬ್ಬರ ಪ್ರಯತ್ನವಿದೆ’ ಎಂಬ ಸಂದೇಶವನ್ನು ಸಾರಿದ್ದಾರೆ. ಈ ಸಂದೇಶ ನಿಜವಾಗಲಿ ಎಂದು ತಾಯಿ ಹೃದಯದ ಎಲ್ಲ ಮನಸ್ಸುಗಳೂ ಹಾರೈಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT