ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಭಾವದಿಂದ ಸಿಬಿಐ ಹೊರಬರುವುದೇ?

Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಭ್ರಷ್ಟಾಚಾರ ಸೇರಿದಂತೆ ಗುರುತರ ಅಪರಾಧ ಪ್ರಕರಣಗಳು ಬೆಳಕಿಗೆ ಬಂದಾಗ ರಾಜಕಿಯ ಪಕ್ಷಗಳು ಮತ್ತು ಜನರು ದೇಶದ ಪ್ರತಿಷ್ಠಿತ ಕೇಂದ್ರೀಯ ತನಿಖಾ ದಳ (ಸಿಬಿಐ)ದಿಂದ ತನಿಖೆಗೆ ಒತ್ತಾಯಿಸುವುದು ಹಿಂದೆ ಸಾಮಾನ್ಯವಾಗಿತ್ತು. ಆದರೆ ಈಗ ಸಿಬಿಐ ತನಿಖೆಗೆ ಒತ್ತಾಯ ಹಿಂದಿನಂತೆ ಇಲ್ಲ.  ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಮೇಲಿನ ಆರೋಪಗಳು ಹೆಚ್ಚಿ ಈ ಸಂಸ್ಥೆಯನ್ನೇ ಗುಮಾನಿಯಿಂದ ನೋಡುವಂತೆ ಆಗಿದೆ. ರಾಜಕೀಯ ಕಾರಣಗಳಿಗೆ ಇದರ ಬಳಕೆಯಾಗುತ್ತಿದೆ ಎನ್ನುವ ಆರೋಪ ಸಾಮಾನ್ಯವಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ 41 ಪುಟಗಳ ಪ್ರಮಾಣಪತ್ರದಲ್ಲಿ ಸಿಬಿಐಯ ಸ್ವಾಯತ್ತತೆ ಕಾಪಾಡುವ ದೃಷ್ಟಿಯಿಂದ ಅದರ ನಿರ್ದೇಶಕರ ನೇಮಕಾತಿಯ ಶಿಫಾರಸು ಮಾಡುವ ವಿಶೇಷ ಅಧಿಕಾರವನ್ನು ಇನ್ನು ಮುಂದೆ ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿ ಹೊಂದಲಿದೆ ಎಂದು ತಿಳಿಸಿದೆ. ಆ ಸಮಿತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ಹೆಸರಿಸುವ ನ್ಯಾಯಮೂರ್ತಿ ಇರುತ್ತಾರೆ ಎಂದು ಅದು ತಿಳಿಸಿದೆ.

ಇದಕ್ಕೆ ಕೇಂದ್ರ ಮುಂದಾಗುವಂತೆ ಮಾಡಿದ್ದು ಸುಪ್ರೀಂ ಕೋರ್ಟ್. ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯದ ಗಮನಕ್ಕೆ ತರುವ ಮುನ್ನವೇ ಕಾನೂನು ಸಚಿವರು ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ತೋರಿಸಿ ಸಲಹೆ ಪಡೆದ ಸಿಬಿಐ, ಸುಪ್ರೀಂ ಕೋರ್ಟಿನಿಂದ ಛೀಮಾರಿಗೆ ಒಳಗಾಗಿತ್ತು. `ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ತನಿಖೆಯ ವಿಷಯದಲ್ಲಿ ರಾಜಕೀಯ ಪಂಡಿತರಿಂದ ಸೂಚನೆ ಪಡೆಯಬೇಕಾಗಿಲ್ಲ. ಸಿಬಿಐಯ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತ ತನಿಖೆಯನ್ನೇ ಸಂದೇಹಿಸುವಂತಾಗಿದೆ' ಎಂದು ಸುಪ್ರೀಂ ಕೋರ್ಟ್ ಕಲ್ಲಿದ್ದಲು ಹಗರಣದ ವಿಚಾರಣೆ ಸಂದರ್ಭದಲ್ಲಿ ಖಾರವಾಗಿ ನುಡಿದಿತ್ತು.

ಸುಪ್ರೀಂ ಕೋರ್ಟ್ ಸಿಬಿಐಯ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಲಕಾಲಕ್ಕೆ ಸಲಹೆ, ಸೂಚನೆ, ನಿರ್ದೇಶನ ನೀಡಿದ ಹತ್ತುಹಲವು ಉದಾಹರಣೆಗಳು ಅದರ ಚರಿತ್ರೆಯಲ್ಲಿವೆ.

ಈ ಹಿಂದೆ ಜೈನ್ ಹವಾಲ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ `ಸಿಬಿಐ ಸಂಸ್ಥೆ ಗಣ್ಯರು ಮತ್ತು ಪ್ರಭಾವಿಗಳ ಬಗ್ಗೆ ತನಿಖೆ ನಡೆಸಲು ಸಾಧ್ಯವೇ ಇಲ್ಲ' ಎಂದು ಸುಪ್ರೀಂ ಕೋರ್ಟ್ ಅಸಮಾಧಾನದಿಂದ ಹೇಳಿತ್ತು. ಸಿಬಿಐ ಗಣ್ಯರ ವಿರುದ್ಧದ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕುತ್ತಿರುವ ಬಗ್ಗೆ ಈ ರೀತಿ ತನ್ನ ಅನಿಸಿಕೆಯನ್ನು ಕಟುವಾಗಿ ವ್ಯಕ್ತಪಡಿಸಿತ್ತು. ನಿರ್ದೇಶಕರ ಅಧಿಕಾರ ಅವಧಿ ಎರಡು ವರ್ಷ ಇರಬೇಕು ಎಂದೂ ಹೇಳಿತ್ತು. ಆಗ (1993ರಲ್ಲಿ) ಪತ್ರಕರ್ತ ವಿನೀತ್ ನಾರಾಯಣ್ ಅವರು ಜೈನ್ ಹವಾಲ ಪ್ರಕರಣದ ಬಗ್ಗೆ ಪ್ರಾಮಾಣಿಕ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು. 1997ರಲ್ಲಿ ಆಗಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರು ನೀಡಿದ ನಿರ್ದೇಶನ ಸಿಬಿಐಯ ಸ್ವಾಯತ್ತತೆಯ ಪರ ಇದ್ದರೂ ಕೇಂದ್ರ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

2007ರಲ್ಲಿ ಸಂಸದೀಯ ಸ್ಥಾಯಿ ಸಮಿತಿ ಸಹ ತನ್ನ ವರದಿಯಲ್ಲಿ ಸಿಬಿಐ ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕ ಕಾಯ್ದೆ ಬೇಕು ಎಂದು ಹೇಳಿತ್ತು.  ಸಿಬಿಐಗೆ ನಿರ್ದಿಷ್ಟ ಪ್ರಕರಣದ ಬಗ್ಗೆ ತನಿಖೆಗೆ ಸೂಚಿಸಿದಾಗ ಅದರ ಬದಲು ತನಿಖೆಗೆ ಒಪ್ಪಿಸದ ವಿಷಯದ ತನಿಖೆ ಕೈಗೆತ್ತಿಕೊಳ್ಳುವುದು ಕೂಡ ಸರಿಯಲ್ಲ. ಅದು ಈ ರೀತಿ ಮಾಡಿ ಛೀಮಾರಿಗೆ ಒಳಗಾದ ಉದಾಹರಣೆಗಳಿವೆ.

ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದನ್ನು  ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದಾಗಲೂ ಸಿಬಿಐ, ಕೋರ್ಟಿನ ಅಸಮಾಧಾನಕ್ಕೆ ಗುರಿಯಾಗಿತ್ತು. ಮಾಯಾವತಿ 1995ರಿಂದ 2003ರ ವರೆಗೆ ಘೋಷಿತ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಪ್ರಥಮ ಮಾಹಿತಿ ವರದಿಯಲ್ಲಿ ತಿಳಿಸಿತ್ತು.

ಆದರೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿದ್ದು 2002ರಲ್ಲಿ ನಡೆದ ತಾಜ್ ಕಾರಿಡಾರ್ ಹಗರಣದ ತನಿಖೆ ನಡೆಸುವಂತೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಣಕಾಸಿನ ಅವ್ಯವಹಾರದ ತನಿಖೆ ನಡೆಸುವ ಬದಲು ಮಾಯಾವತಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ವರದಿ ನೀಡಿ ಕೋರ್ಟಿನ ಕೆಂಗಣ್ಣಿಗೆ ಸಿಬಿಐ ಗುರಿಯಾಗಿತ್ತು, ಈ ರೀತಿ ಒಂದಲ್ಲ, ಒಂದು ಸಂದರ್ಭದಲ್ಲಿ ತರಾಟೆಗೆ ಒಳಗಾಗಿರುವ ಸಿಬಿಐಗೆ ಕಾಯಕಲ್ಪ ಅಗತ್ಯ. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದಕ್ಕೆ ಸಿಬಿಐ ನಿಷ್ಠೆ ತೋರಿಸಬಾರದು. ಕೇಂದ್ರಕ್ಕೆ ವಿರೋಧಿಗಳನ್ನು ಸದೆ ಬಡಿಯಲು ಸಿಬಿಐ ಸಾಧನ ಆಗಬಾರದು. ಅದರ ನಿರ್ದೇಶಕರ ಅಧಿಕಾರ ಅವಧಿ ಕನಿಷ್ಠ ಎರಡು ವರ್ಷ ಎಂದು ನಿಗದಿಗೊಳಿಸಲಾಗುವುದು ಎಂದೂ ಕೇಂದ್ರ ತಿಳಿಸಿದ್ದು ಸಮಾಧಾನಕರ ವಿಷಯ.

ಇತ್ತೀಚೆಗೆ ನಡೆದ ವಿದ್ಯಮಾನವಂತೂ ಅಚ್ಚರಿ ಹುಟ್ಟಿಸುವಂತಹುದು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಹಿಂದಿನ ಭಾರಿ ಪಿತೂರಿಯ ತನಿಖೆಗೆ ನೇಮಿಸಿದ ಮುಖ್ಯ ತನಿಖಾಧಿಕಾರಿ ಬಿ.ಎನ್. ಮಿಶ್ರಾ ಅವರನ್ನು ಏಕಾಏಕಿ ಅವರ ಸ್ಥಾನದಿಂದ ತೆಗೆಯಲಾಯಿತು. ಸಿಬಿಐಯ ನಿರ್ದೇಶಕ ಆರ್.ಕೆ. ಸಿನ್ಹಾ ಅವರ ಈ ಕ್ರಮ ವಿವಾದಕ್ಕೆ ಒಳಗಾಗಿದೆ. ಇದಕ್ಕೆ ಇರುವ ಕಾರಣಗಳು ಏನೇ ಇರಲಿ, ಅವರಿಗೆ ಈ ಸಂಬಂಧ ಲಿಖಿತ ಆದೇಶ ನೀಡದೆ ಮೌಖಿಕವಾಗಿ ಅವರ ಸೇವೆ ಅಗತ್ಯವಿಲ್ಲ ಎಂದು ತಿಳಿಸಿದ್ದು ಎಷ್ಟರ ಮಟ್ಟಿಗೆ ಸರಿ ?

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಬಿ.ಎನ್. ಮಿಶ್ರಾ ಅವರಿಗೆ ಇದನ್ನು ಮೌಖಿಕವಾಗಿ ತಿಳಿಸಿದುದರ ಮರ್ಮವೇನು? ಪಿತೂರಿಯ ತನಿಖೆ ನಡೆಸಬೇಕು ಎನ್ನುವುದು ಜೈನ್ ಆಯೋಗದ ತೀರ್ಮಾನ. `ಮಲ್ಟಿ ಡಿಸಿಪ್ಲಿನರಿ ಮಾನಿಟರಿಂಗ್ ಏಜೆನ್ಸಿ' ಹೆಸರಿನ ಇದಕ್ಕೆ ಬೇಹುಗಾರಿಕಾ ದಳ, `ರಾ'ಗೆ ಸೇರಿದ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಇದರ ರಚನೆ 1999ರಲ್ಲಿಯೇ ಆಗಿತ್ತು. ಮಿಶ್ರಾ ಅವರನ್ನು 2006ರಲ್ಲಿ ಇದರ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಈಗ ಏಕಾಏಕಿ ಅವರ ಸೇವೆ ಬೇಕಾಗಿಲ್ಲ ಎಂದು ಸಿಬಿಐ ತೀರ್ಮಾನಿಸಿದುದರ ಹಿನ್ನೆಲೆ ನಿಗೂಢ. ಸರ್ಕಾರದ ಆದೇಶದ ಪ್ರಕಾರ ಅಲ್ಲಿ ಅವರ ಸೇವೆ ತನಿಖೆಯ ವರದಿ ಸಲ್ಲಿಕೆಯೊಂದಿಗೆ ಅಂತ್ಯವಾಗಬೇಕಾಗಿತ್ತು. ಸಿಬಿಐಯ ನಡೆ ಗುಮಾನಿಗೆ ಕಾರಣವಾಗುವಂತೆ ಇರಬಾರದು.
                                                                                                            
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT