ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ ವಾಗ್ವಾದ ಬೇರೆ: ದಾಳಿ ದಬ್ಬಾಳಿಕೆ ಬೇರೆ

Last Updated 28 ಮೇ 2014, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಪತ್ರಿಕೆಯಲ್ಲಿ (ಮೇ ೨ ಮತ್ತು ಮೇ ೧೫) ಪ್ರಕಟವಾಗಿರುವ ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ಬಿ. ರಾಜ­ಶೇಖರಪ್ಪ ಅವರ ಬರಹಗಳಿಗೆ ಈ ಪ್ರತಿಕ್ರಿಯೆ.

ಡಾ. ಕಲಬುರ್ಗಿ ಅವರು ಬೆಂಗಳೂರಿನಲ್ಲಿ ಸಂಕಿರಣ­ವೊಂದರಲ್ಲಿ ಮಾತನಾಡಿದ್ದಕ್ಕೆ ವಿಷ­ಯಾಂ­­ತರ­­ವಾಗದಂತೆ ಉತ್ತರಿಸಿದ್ದೇನೆ (ಪ್ರ.ವಾ. ಏ.೨೫). ಜೈನರೇ ಮುಂದಾಗಿ ಅನ್ಯಮತಗಳ ಮೇಲೆ ಭೌತಿಕ, ಬೌದ್ಧಿಕ ದಾಳಿ ಮಾಡಿದ ವಿವರ­ಗಳು ಇತಿಹಾಸದಲ್ಲಿವೆ ಎಂಬ ಅವರ ಮಾತಿಗೆ ಪೂರಕವಾಗಿ ಬಿ. ರಾಜಶೇಖರಪ್ಪ­ನ­ವರು ‘...ಬಿಟ್ಟ ಸಂಗತಿಗಳು’ ಎಂದು ದೃಷ್ಟಾಂತ ಕೊಟ್ಟಿದ್ದಾರೆ.

ತಮ್ಮ ಅಸ್ತಿತ್ವ, ವಿಸ್ತಾರಕ್ಕಾಗಿ ಎಲ್ಲ ಮತಧರ್ಮದವರು ವಾದ ಮಾಡಿದ್ದಾರೆ. ಷಡ್ದ­ರ್ಶನ­­ಗಳವರು, ಜೈನರು, ಬೌದ್ಧರು, ಶೈವರು ವಾದದಲ್ಲಿ ಒಬ್ಬರನ್ನೊಬ್ಬರು ಹತ್ತಿಕ್ಕಿದ ಹೆಗ್ಗಳಿಕೆಯನ್ನು ಹೇಳಿದ್ದಾರೆ. ಈ ವಾದ ಪ್ರತಿವಾದ ಭಯಂಕರರು ತಮ್ಮತಮ್ಮ ನಡುವೆ ಮಂಡನೆ ಖಂಡನೆಯನ್ನು ವಾದಗೋಷ್ಠಿಯಲ್ಲೂ ರಾಜರ ಆಸ್ಥಾನದಲ್ಲೂ ಮಾಡುತ್ತಿದ್ದರು.

ಗೆದ್ದವ­ರಿಗೆ ರಾಜಶೇಖರಪ್ಪ ಉದಾಹರಿಸಿದ ವಾದ ವಿಜೇತ ಪ್ರಶಸ್ತಿಗಳನ್ನಿತ್ತು ಸನ್ಮಾನಿಸುತ್ತಿದ್ದರು. ಸ್ವಾರಸ್ಯ­ವೆಂದರೆ ಈ ಧರ್ಮಗಳವರೆಲ್ಲ ಒಟ್ಟಾಗಿ ಚಾರ್ವಾಕ (ಲೋಕಾಯತ), ಆಜೀವಿಕರನ್ನು ಖಂಡಿಸು­ತ್ತಿದ್ದರು. ಶ್ರವಣಬೆಳಗೊಳವಲ್ಲದೆ ಇತರೆಡೆ­ಗಳಲ್ಲೂ ಶಾಸನಗಳಲ್ಲಿ ವಾದವರೇಣ್ಯರ ಬಿರುದಾ­ವಳಿ ಇವೆ.

ಕಾಪಾಲಿಕ, ಪಾಶುಪತ, ಲಕುಲೀಶ, ಕಾಳಾಮುಖ ಮಹಾವ್ರತಿಗಳೂ ವಾದದಲ್ಲಿ ಗಟ್ಟಿಗರು. ಬಳ್ಳಿಗಾವಿಯ ಲಕುಲೀ­ಶ್ವರ ಪಂಡಿತನು ಲೋಕಾ ಯತ ಮಹಾವೃಕ್ಷವನ್ನು ಕತ್ತರಿಸಿ ಉರು ಳಿಸುವ ಗರಗಸ ಆಗಿದ್ದನು. ಜೈನರೂ ಬೌದ್ಧರೂ ಭಯಂಕರವಾದಿಗ­ಳಾ­ಗಿ­ದ್ದರು. ಈ ಬಗೆಯ ವಾದ-ವಿವಾದಗಳೂ ಪ್ರಶಸ್ತಿ­ಗಳೂ ಬೌದ್ಧಿಕ ಸ್ತರಕ್ಕೆ ಮೀಸಲಾದುವು. ವಾದ­ದಲ್ಲಿ ಗೆದ್ದವರು ಯಾರೂ ಸಶಸ್ತ್ರ ಸೈನ್ಯ ಕಟ್ಟಿ ಸೋತ ಧರ್ಮದವರ ಊರುಕೇರಿ ಮನೆ ಮಠ ಮಂದಿರ ನಾಶ ಮಾಡಲಿಲ್ಲ. ಹೆಂಗಸರ ಬಟ್ಟೆ ಕಳಚ­ಲಿಲ್ಲ. ದೇವಾಲಯ ದೇವರ ವಿಗ್ರಹ ತುಳಿದು ತುಂಡರಿಸಲಿಲ್ಲ.

ಜೈನರನ್ನು ಹಿಂಸಿಸಿದರೆಂದು ನಾನು ಹೊಸ­ದಾಗಿ ಕಲ್ಪಿಸಿ ಹೇಳಿಲ್ಲ. ವೀರಶೈವ ಪುರಾಣ­ಗಳೂ ಕವಿಗಳೂ ಶಾಸನಗಳೂ ವಿಸ್ತಾರ­ವಾಗಿ ಬರೆದಿರುವುದರಲ್ಲಿ ಸ್ವಲ್ಪ ಮಾತ್ರ ಉದಾ­ಹರಿಸಿ­ದ್ದೇನೆ. ಓದುಗರಲ್ಲಿ ಕನಿಕರ ಹುಟ್ಟಿಸುವ ಜರೂರು ನನಗಿಲ್ಲ. ಬೌದ್ಧರನ್ನು ನನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಜಾಣತನ ತೋರಿಸಿದೆನೆಂಬುದು ಕೊಂಕು ಮಾತು. ಜೈನರನ್ನೂ ಬೌದ್ಧರನ್ನೂ ಒಟ್ಟೊ­ಟ್ಟಿಗೆ ನರಬೇಟೆಯಾಡಿ ಸಾಮೂಹಿಕ ಹತ್ಯೆ ಮಾಡಿದ ವರ್ಣನೆಯೂ ನನ್ನದಲ್ಲ. ಅಬ್ಬಲೂರು ಮತ್ತು ತಾಳಿಕೋಟೆ ಶಾಸನೋಕ್ತ ದಾಖಲೆ ಗಳು. ಅಬ್ಬ­ಲೂರು ಶಾಸನದ ಆರಂಭದಲ್ಲೇ ‘ಸಾಕ್ಷಾತ್ ಮಹೇಶ್ವ ರನೇ ಪರಸಮಯಿಗಳನ್ನು ಹಿಂಸಿಸು’ ಎಂದು ಅಪ್ಪಣೆ ಮಾಡಿದನೆಂದಿದೆ. ತಮ­ಗಿರುವ ಮತದ್ವೇಷವನ್ನು ಲೋಕ ಆರಾಧಿ­ಸುವ ಮಹೇಶ್ವರ ನಿಗೆ ಆರೋಪಿಸುವ ಬುದ್ಧಿಗೆ ಏನು ಹೇಳುವುದು.

ಎಲ್ಲ ಧರ್ಮದವರೂ ಅವರವರ ಗುಡಿಗಳನ್ನ್ನು ಕಟ್ಟಿಸು­ವುದು ಸಹಜ. ಬೇರೆಯವರ ದೇವಾಲಯ­ಗಳನ್ನು ಧ್ವಂಸ ಮಾಡಿ ಅಪವಿತ್ರಗೊಳಿಸುವುದು ಅಕ್ಷಮ್ಯ ಅಪರಾಧ. ಸ್ಥಳೀಯ ಕನ್ನಡಿಗರು ಎಲ್ಲ ಧರ್ಮ­ಗಳನ್ನು ಗೌರವಿಸಿದ ಧರ್ಮ ಸಹಿಷ್ಣು­ಗಳು. ದೇವಾಲಯಗಳ ನಿರ್ಮಾಣದಿಂದ ಅಸಂಖ್ಯಾತ ಕನ್ನಡಿಗರಿಗೆ ಉದ್ಯೋಗ ದೊರೆತು ಬದು­ಕಿಗೆ ಅನ್ನ ನೀರು ನೆರಳು ಒದಗಿತು. ಸ್ಥಳೀಯ ಪರಿಣತ ಕಲಾವಿದರ ಪ್ರತಿಭೆ ಪ್ರಕಾಶಿತ­ವಾಯಿತು. ಹೊಟ್ಟೆಕಿಚ್ಚು ಪಟ್ಟವರು ಕನ್ನಡಿಗರಲ್ಲ.

‘ಪ್ರಭುವರ್ಗ ಸೊಕ್ಕಿತು, ಪ್ರಜಾವರ್ಗ ಸೊರಗಿತು, ಮಹಿಳೆಯು ಧಾರ್ಮಿಕ ವಿಧಿಗಳಿಂದ ಮೋಕ್ಷ­ದಿಂದ ವಂಚಿತಳಾಗಿದ್ದಳು’ ಎಂಬ ಮಾತು­ಗಳು ಅತಿರಂಜಿತ ಪ್ರಚೋದಕಗಳು. ಪ್ರಸ್ತುತ ಚರ್ಚೆಯ ಪರಿಪ್ರೇಕ್ಷ್ಯಕ್ಕೆ ಸಲ್ಲದ ಸೊಲ್ಲು­ಗಳು. ಪ್ರಭುವರ್ಗದ ಪ್ರಜಾವತ್ಸಲತೆ ಅಮಿತವಾಗಿತ್ತು. ರಾಜರು ಪರಸಮಯ ಸಮುದ್ಧರಣರಾಗಿದ್ದರು.

ಮಹಿಳೆ­ಯರು ಅಭಿಷೇಕ, ನೋಂಪಿ ಆರಾಧನೆ ಮೊದ­ಲಾದ ಧಾರ್ಮಿಕ ವಿಧಾನಗಳಲ್ಲಿ ಪಾಲುಗಾರ­ರಾಗಿದ್ದರು. ಆಕೆ ಮೋಕ್ಷದಿಂದ ವಂಚಿತ­ಳಾಗಿ­ರಲಿಲ್ಲ. ಸ್ತ್ರೀಣಾ ತದ್ಭವೇ ಮೋಕ್ಷಃ –- ಮಹಿ­ಳೆಗೆ ಅದೇ ಭವದಲ್ಲಿ ಮೋಕ್ಷವಿತ್ತು. ಸಗ್ರಂಥಾನಾಂ ಮೋಕ್ಷಃ– - ಬಟ್ಟೆ ತೊಟ್ಟವರಿಗೂ ಮೋಕ್ಷ ಪ್ರಾಪ್ತಿಯಿತ್ತು. ಮಹಿಳೆ ಮಲ್ಲಿಯು ತೀರ್ಥಂಕರಳಾಗಿದ್ದಳು. ಆದಿತೀರ್ಥಂಕರನಿಗಿಂತ ಆಕೆಯ ತಾಯಿ ಮೊದಲು ಮೋಕ್ಷ ಪಡೆದಿದ್ದಳು!

ಕನ್ನಡ ಭಾಷೆಯನ್ನು ಬಳಸಿ ಉತ್ತರ ಭಾರತದ ಕೃತಿಗಳು ಅನುವಾದಗೊಂಡುವೆಂಬ ಆಕ್ಷೇಪ ಹುರುಳಿಲ್ಲದ ಮಾತು. ಭಾಷೆ ಯಾರ ಗುತ್ತಿಗೆಯೂ ಅಲ್ಲ. ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕೆಂದು ಒತ್ತಾಯಿಸುವ ನಾವೇ ಉಲ್ಟಾ ಹೊಡೆದರೆ ಹೇಗೆ? ಕನ್ನಡ ಕಲಿತು ಕನ್ನಡದಲ್ಲೇ ಮಹಾಕಾವ್ಯಗಳನ್ನು ರಚಿಸಿದ್ದು ಹೆಮ್ಮೆಪಡುವ ಸಂಗತಿ. ಲೇವಡಿ ತರವಲ್ಲ. ಹಾಗಾದರೆ ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ ಉತ್ತರ ಭಾರ­ತದ ವಸ್ತು ಒಳಗೊಂಡಿವೆಯೆಂದು ತಿರಸ್ಕರಿ­ಸುತ್ತೇವೆಯೆ? ಹೊಸವಸ್ತು ವಿಚಾರ­ಗಳಿಂದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಹಿಗ್ಗಿ ವೈವಿಧ್ಯದಿಂದ ಕಂಗೊಳಿಸುತ್ತಿದೆ. ಭಾಷೆ ಸಾಹಿತ್ಯ ಸಂಸ್ಕೃತಿಗಳ ಸಂಗಮವು ಸಮನ್ವಯ ಪಥ. ಇದರಿಂದ ಕನ್ನಡದ ಅರಿವು ಹೆಚ್ಚಿತು, ಅಸ್ಮಿತೆ ಇನ್ನೂ ಬಲವಾಯಿತು.

ಬಸವಣ್ಣನವರ ಚಳವಳಿ ಉತ್ತರ ಭಾರತದ ಸಂಸ್ಕೃತಿಯ ವಿರುದ್ಧವಾಗಿತ್ತೆಂಬುದು ಅಪ­ವ್ಯಾಖ್ಯಾನಕ್ಕೆ ಒಳ್ಳೆಯ ಉದಾಹರಣೆ ಆಗಬಹು­ದಷ್ಟೆ. ವಲಸೆ ಬಂದವರು ಎಂಬ ಚರ್ವಿತ ಚರ್ವಣ ಪೂರ್ವಗ್ರಹ ಆರೋಗ್ಯಕರ ಚಿಂತನೆ ಎನಿಸದು. ಆ ಚಕ್ರತೀರ್ಥದ ಸುಳಿಯಲ್ಲಿ ಸುತ್ತು­ವವರಿಗೆ ದಿಟದ ದರ್ಶನ ಬಿಸಿಲ್ಗುದುರೆ. ವೀರ­ಶೈವ ಲಿಂಗಾಯತರು ಪೂಜಿಸುವ ಶಿವ, ಪಾರ್ವತಿ, ಗಣೇಶ ಉತ್ತರ ಭಾರತದಿಂದ ಬಂದ ವಲಸೆ ದೇವರೆನ್ನೋಣವೆ?

ಉತ್ತರದಿಂದ ವಲಸೆ ಬಂದವರು ಎಂಬಿತ್ಯಾದಿ ಹಣೆಪಟ್ಟಿ ಕಟ್ಟಿ ಸೀಳಿ ಆಳುವ ಮೈಂಡ್ ಸೆಟ್ ಅಥವಾ ಅಜೆಂಡ ಆತ್ಮ­ಹತ್ಯಾ­ಕಾರಿ. ಸೌಹಾರ್ದದಿಂದ ಒಟ್ಟಿಗೆ ಕೂಡಿ ಬಾಳಲು ಬಯಸುವ ಕನ್ನಡ ಮನಸುಗಳಿಗೆ ಆಘಾತ­­­ಕಾರಿ. ಅಸಹನೆಯ ಕಾಳು ಬಿತ್ತಿ ರಾಗ­ದ್ವೇಷದ ಬೆಳೆಯನ್ನು ಅಪೇಕ್ಷಿಸುವುದು ಫ್ಯಾಸಿಸ್ಟ್ ಮನೋವೃತ್ತಿಗೆ ಹತ್ತಿರ. ಉತ್ತರ­ದವರು, ವಲಸೆ ಬಂದ­ವರು, ನಮ್ಮ ಭಾಷೆಯಲ್ಲಿ ಬರೆದರು, ಅವರ ದೇವಾಲಯ­ಗಳನ್ನು ಕಟ್ಟಿ ಅವರ ದೇವರನ್ನು ಬಿಟ್ಟರು - ಎಂಬಿತ್ಯಾದಿ ಬರಹ ಓದು­ತ್ತಿದ್ದರೆ ಸರ್ವಾಧಿಕಾರಿಯ ಕತ್ತಿ ತೂಗಾಡುತ್ತಿರುವ ದೃಶ್ಯ ಕಾಣುತ್ತದೆ. ಭಾರತೀ­ಯತ್ವ, ಪ್ರಜಾ­ಪ್ರಭುತ್ವ ಮತ್ತು ಮಾನವತ್ವ ನಂಬುವ ಕನ್ನಡಿಗ­ರಿಗೆ ಅಪಾಯಕಾರಿ ಧೋರಣೆ ಎನಿಸುತ್ತದೆ.
(ಈ ವಿಷಯ ಕುರಿತ ಚರ್ಚೆ ಇಲ್ಲಿಗೆ ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT