ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಬಿಕ್ಕಟ್ಟು ಮತ್ತು ಹೊಸ ನೀತಿ

Last Updated 1 ಸೆಪ್ಟೆಂಬರ್ 2016, 16:06 IST
ಅಕ್ಷರ ಗಾತ್ರ

ಟಿ.ಎಸ್.ಆರ್. ಸುಬ್ರಹ್ಮಣ್ಯಂ ನೇತೃತ್ವದ ಸಮಿತಿಯು ಮೂರನೇ ರಾಷ್ಟ್ರೀಯ ಶಿಕ್ಷಣದ ಕರಡು ನೀತಿಯನ್ನು ಸಿದ್ಧಪಡಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಇದರ ಸಂಕ್ಷಿಪ್ತ ಪ್ರತಿಯನ್ನು ‘ಡ್ರಾಫ್ಟ್ ಇನ್‌ಪುಟ್ಸ್’ ಹೆಸರಿನಲ್ಲಿ ಇತ್ತೀಚೆಗೆ ಬಹಿರಂಗಪಡಿಸಿ, ಸಾರ್ವಜನಿಕರ ಆಕ್ಷೇಪ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು.

ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಹಲವು ವಿಷಯಗಳ ಬಗ್ಗೆ ಈ ಸಮಿತಿಯು ಚರ್ಚಿಸಿರುವುದರಿಂದ ಮತ್ತು ಇದು ಶೈಕ್ಷಣಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗುವ ಸಾಧ್ಯತೆ ಇರುವುದರಿಂದ, ಇದರ ಕುರಿತು ಒಂದು ಗಹನವಾದ ಚರ್ಚೆ ಮತ್ತು ಅವಲೋಕನದ ಅಗತ್ಯ ಇದೆ.

ಶಾಲಾ ಶಿಕ್ಷಣದಲ್ಲಿ ಕಳಪೆ ಗುಣಮಟ್ಟ ಇರುವ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸಿದೆ. ಆದರೆ ಇಂತಹ ಪರಿಸ್ಥಿತಿಗೆ ಕಾರಣವೇನು? ನಮ್ಮ ರಾಜ್ಯದಲ್ಲಿ ಸರಿ ಸುಮಾರು 4 ಸಾವಿರ ಏಕಶಿಕ್ಷಕ ಶಾಲೆಗಳಿವೆ! ಈ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಎಲ್ಲ ವಿಷಯಗಳನ್ನೂ ಒಬ್ಬನೇ ಶಿಕ್ಷಕ ಬೋಧಿಸಬೇಕಾದ ಶೋಚನೀಯ ಪರಿಸ್ಥಿತಿ ಇದೆ.

ಈ ಮಧ್ಯೆ ಶಿಕ್ಷಕರನ್ನು ವಿವಿಧ ಶೈಕ್ಷಣಿಕೇತರ 103 ಕಾರ್ಯಗಳಲ್ಲಿ ಸರ್ಕಾರ ತೊಡಗಿಸಿದೆ ಎಂದು ಒಂದು ಸರ್ಕಾರೇತರ ಸಂಸ್ಥೆ ವರದಿ ಮಾಡಿದೆ. ಜಾತಿಗಣತಿ, ಜನಗಣತಿ, ಜಾನುವಾರು ಗಣತಿ, ಪಲ್ಸ್ ಪೋಲಿಯೊ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದವುಗಳ ನೋಂದಣಿ ಒಂದೆಡೆಯಾದರೆ, ಇನ್ನೊಂದೆಡೆ ಬಿಸಿಯೂಟದ ಲೆಕ್ಕ, ಕೊಠಡಿ ಇತ್ಯಾದಿಗಳ ದುರಸ್ತಿ, ನಿರಂತರ ಹಾಗೂ ಸಮಗ್ರ ಮೌಲ್ಯಮಾಪನದ (ಸಿಸಿಇ) ಅಡಿಯಲ್ಲಿ ಇಡಬೇಕಾದ ದಾಖಲೆಗಳು, ಶಿಕ್ಷಣ ಇಲಾಖೆಯ ಹತ್ತಾರು ಕಾರ್ಯಕ್ರಮಗಳು, ಇವುಗಳೆಲ್ಲವುಗಳ ನಡುವೆ ಪಾಠ!

‘ಶಿಕ್ಷಣದ ಹಕ್ಕು’ ಹೆಸರಿನಲ್ಲಿ ಸರ್ಕಾರವೇ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ತಳ್ಳುವ ಮೂಲಕ ಶಿಕ್ಷಣ ನೀಡುವ ತನ್ನ ಜವಾಬ್ದಾರಿಯಿಂದ ಕಳಚಿಕೊಂಡಿದೆ. ರಾಜ್ಯದಲ್ಲಿ ಇಂದು 60 ಮಕ್ಕಳಿಗಿಂತ ಕಡಿಮೆ ಇರುವ ಪ್ರಾಥಮಿಕ ಶಾಲೆಗಳ ಸಂಖ್ಯೆ ಶೇ 90ರಷ್ಟಿದೆ! ಅಂದರೆ 3, 4, 5 ಮಕ್ಕಳಿರುವ ತರಗತಿಗಳು ಬಹುಸಂಖ್ಯೆಯಲ್ಲಿದ್ದು ಇಲ್ಲಿ ಕಲಿಕೆಯ ವಾತಾವರಣ ಸೃಷ್ಟಿಸಲು ಸಾಧ್ಯವಾದೀತೇ? ಇಂತಹ ದುಃಸ್ಥಿತಿಗೆ ಸರ್ಕಾರವೇ ನೇರ ಹೊಣೆ.

ಸಾವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಬದಲು ಹೊಸ ಶಿಕ್ಷಣ ನೀತಿಯು ‘ಸಂಯುಕ್ತ ಶಾಲೆ’ ಹೆಸರಿನಲ್ಲಿ ಶಾಲೆಗಳನ್ನು ಜೋಡಿಸಲು ಶಿಫಾರಸು ಮಾಡಿದೆ. ಈ ಮೂಲಕ ಸರ್ಕಾರಿ ಶಾಲಾ ಮುಚ್ಚುವಿಕೆ ಪ್ರಕ್ರಿಯೆಗೆ ಅಧಿಕೃತ ಪರವಾನಗಿ ನೀಡಿದಂತಾಗುತ್ತದೆ.

ಪರಿಸ್ಥಿತಿ ಹೀಗಿರುವಾಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಮೇಲೆ ವಿವರಿಸಿದ ಗಂಭೀರವಾದ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ನಿರ್ದಿಷ್ಟ ಶಿಫಾರಸುಗಳನ್ನು ಮಾಡದಿರುವುದು ನಿರಾಶೆಗೆ ಕಾರಣವಾಗಿದೆ. ಶಿಕ್ಷಕರ ಗೈರುಹಾಜರಿ, ಅವರಲ್ಲಿ ಜವಾಬ್ದಾರಿ, ತರಬೇತಿ ಮತ್ತು ಜ್ಞಾನದ ಕೊರತೆಯೇ ಗುಣಮಟ್ಟದ ಕುಸಿತಕ್ಕೆ ಕಾರಣವೆಂಬುದು ಸಮಿತಿಯ ಅಭಿಪ್ರಾಯ.

ಆದರೆ ಮೂಲ ಸೌಕರ್ಯವನ್ನು ಖಾತ್ರಿಪಡಿಸಲು, ಶಿಕ್ಷಕರ ಕೊರತೆ ನೀಗಿಸಲು ಮತ್ತು ಶಿಕ್ಷಕರನ್ನು ಶೈಕ್ಷಣಿಕೇತರ ಕಾರ್ಯಗಳಿಂದ ಮುಕ್ತಿಗೊಳಿಸಲು ನಿರ್ದಿಷ್ಟವಾದಂತಹ ನಿರ್ದೇಶನಗಳಾವುವೂ ಇಲ್ಲದಿರುವುದನ್ನು ನೋಡಿದರೆ, ನಿಜವಾಗಲೂ ಶಾಲೆಗಳ ಸಮಸ್ಯೆಗಳನ್ನು ನೀಗಿಸುವುದು ಇದರಿಂದ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಇನ್ನು, ಶಿಕ್ಷಣದ ಹಕ್ಕು ಕಾಯ್ದೆ ಜಾರಿಯಾದಾಗಿನಿಂದ (2009) ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಉತ್ತೀರ್ಣಗೊಳಿಸುವ ಯೋಜನೆ ಚಾಲ್ತಿಯಲ್ಲಿದೆ. ಇದರಿಂದ  ವಿದ್ಯಾರ್ಥಿಗಳಲ್ಲಿ ಕಲಿಕೆ ಕುರಿತಾದ ಗಾಂಭೀರ್ಯ ಮತ್ತು ಶಿಕ್ಷಕರಲ್ಲಿ ಬೋಧನೆ ಕುರಿತಾದ ಉತ್ತರದಾಯಿತ್ವ ಎರಡಕ್ಕೂ ಹಿನ್ನಡೆಯಾಗಿದೆ ಎಂದು ಹೇಳುವವರಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪ್ರಥಮ್ ಸಂಸ್ಥೆ 2011ರಿಂದ 2014ರವರೆಗೆ ನೀಡಿದ ವರದಿಗಳನ್ನು ವಿಶ್ಲೇಷಿಸಿದರೆ ಅಂಕಗಣಿತ ಹಾಗೂ ಭಾಷಾಜ್ಞಾನದ ಗುಣಮಟ್ಟ ಗಣನೀಯವಾಗಿ ಇಳಿಕೆಯಾಗಿರುವುದು ತಿಳಿದುಬರುತ್ತದೆ. ಈ ನಿಟ್ಟಿನಲ್ಲಿ ಸಮಿತಿಯು 5ನೇ ತರಗತಿಯ ನಂತರ ಕಡ್ಡಾಯ ತೇರ್ಗಡೆ ನೀತಿ ಕೈಬಿಡುವ ಶಿಫಾರಸು ಸ್ವಾಗತಾರ್ಹ.

ದೇಶದಲ್ಲಿ ಒಂದನೇ ತರಗತಿಗೆ ದಾಖಲಾಗುವವರಲ್ಲಿ ಶೇ 50ರಷ್ಟೇ ವಿದ್ಯಾರ್ಥಿಗಳು 9ನೇ ತರಗತಿ ತಲುಪುತ್ತಾರೆ (ಎನ್‌ಸಿಇಆರ್‌ಟಿ ವರದಿ). ಈ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸುತ್ತಾ, ಶಾಲೆ ತೊರೆದವರನ್ನು ತಲುಪಲು ಮುಕ್ತ ಶಿಕ್ಷಣದ ಮಾದರಿಯನ್ನು ಶಿಫಾರಸು ಮಾಡಿದೆ.

ಅಸಂಖ್ಯಾತ ವಿದ್ಯಾರ್ಥಿಗಳು ಶಾಲೆ ತೊರೆಯುವಂತಹ ಪರಿಸ್ಥಿತಿ ಏಕಿದೆ ಎಂಬ ಗಂಭೀರ ಅಧ್ಯಯನವಾಗಲಿ ಅಥವಾ ಅವರನ್ನು ಪುನಃ ಶಾಲೆಗೆ ಕರೆತರುವ ಯೋಜನೆಯಾಗಲಿ ಸಮಿತಿಗೆ ಇಲ್ಲವೆಂಬುದು ಅರಿವಾಗುತ್ತದೆ.

ಶಾಲೆಗಳಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಡೊನೇಷನ್ ಹಾವಳಿ. ನಿತ್ಯನವನವೀನವಾದ ವಸೂಲಿ ಮಾದರಿಯನ್ನು ಕೆಲವು ಖಾಸಗಿ ಶಾಲೆಗಳು ಅಳವಡಿಸಿಕೊಂಡಿವೆ. ಇನ್ನು, ಅತಿ ಹೆಚ್ಚು ರ್‍ಯಾಂಕ್‌ಗಳನ್ನು ಬಾಚಿಕೊಂಡು, ಶೇಕಡ ನೂರರಷ್ಟು ಫಲಿತಾಂಶ  ಪಡೆದು ತಮ್ಮ ಶಾಲೆಗಳ ‘ಮಾರುಕಟ್ಟೆ ಮೌಲ್ಯ’ವನ್ನು ಹೆಚ್ಚಿಸಿಕೊಳ್ಳಲು ತೀವ್ರವಾದ ಒತ್ತಡವನ್ನು ಈ ಶಾಲೆಗಳು ವಿದ್ಯಾರ್ಥಿಗಳ ಮೇಲೆ ಹೇರುತ್ತಿವೆ.

ಶೇ 80ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಹ ಪೋಷಕರು, ಶಿಕ್ಷಕರ ನಿರೀಕ್ಷೆಯನ್ನು ಸಫಲಗೊಳಿಸಲಾಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳನ್ನು ನಾವು ಕಂಡಿದ್ದೇವೆ. ಸಮಿತಿಯು ಈ ಎರಡೂ ಪಿಡುಗುಗಳ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮವನ್ನು ಶಿಫಾರಸು ಮಾಡಿಲ್ಲ.

ಪ್ರೌಢಶಾಲಾ ಹಂತದಲ್ಲಿ ಬಹುತೇಕ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌  ಭಾಷೆಯಲ್ಲಿ ಅನುತ್ತೀರ್ಣರಾಗುವುದನ್ನು ತಡೆಯಲು ಸಮಿತಿಯು ಪಾರ್ಟ್‌ ‘ಎ’ ಮತ್ತು ಪಾರ್ಟ್‌ ‘ಬಿ’ ಎಂಬ ಎರಡು ಪರೀಕ್ಷೆಗಳನ್ನು ನಮೂದಿಸಿದೆ.

ಶಿಕ್ಷಣವನ್ನು ಮುಂದುವರಿಸಬೇಕೆಂದಿರುವವರು ಈಗ ಚಾಲ್ತಿಯಲ್ಲಿರುವ ಕಠಿಣ ಮಟ್ಟದ ಪಾರ್ಟ್‌ ‘ಎ’ ಪರೀಕ್ಷೆಗೆ ಹಾಜರಾಗಬಹುದು. ಇಲ್ಲದಿದ್ದವರು ಸುಲಭವಾಗಿ ತೇರ್ಗಡೆ ಹೊಂದಬಹುದಾದ ಪಾರ್ಟ್‌ ‘ಬಿ’ ಪರೀಕ್ಷೆ ಆರಿಸಿಕೊಳ್ಳಬಹುದು. ಇಂತಹ ವ್ಯವಸ್ಥೆಯೊಂದರ ಅಪಾಯಗಳನ್ನು ಒತ್ತಿ ಹೇಳಬೇಕಾಗಿಲ್ಲವಷ್ಟೆ. ಲಕ್ಷಾಂತರ ಬಡ ವಿದ್ಯಾರ್ಥಿಗಳು ಮನೆಗಳಲ್ಲಿ, ಶಾಲೆಗಳಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ತರಬೇತಿಗಳಿಂದ ವಂಚಿತರಾಗಿದ್ದಾರೆ.

ಹಾಗಾಗಿ ಗಣಿತ, ವಿಜ್ಞಾನ, ಇಂಗ್ಲಿಷ್‌ ಅವರಿಗೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಇಂತಹ ವಾತಾವರಣವನ್ನು ಬದಲಾಯಿಸುವ ಬದಲಿಗೆ ಕಲಿಕೆಯಲ್ಲಿ ಸದಾಕಾಲ ತಾರತಮ್ಯವನ್ನು ಪೋಷಿಸುವ ಶಿಫಾರಸು ಇದಾಗಿದೆ. ವಿಜ್ಞಾನಿಗಳಾದ ಐನ್‌ಸ್ಟೀನ್‌, ಥಾಮಸ್ ಆಲ್ವ ಎಡಿಸನ್‌ ಅವರೂ  ಬಾಲ್ಯದಲ್ಲಿ ಗಣಿತ, ವಿಜ್ಞಾನದಲ್ಲಿ ಅನುತೀರ್ಣರಾಗಿದ್ದರು ಎಂಬುದನ್ನು ಜ್ಞಾಪಿಸಿಕೊಳ್ಳುವುದು ಸೂಕ್ತ!

ಕೌಶಲಾಧಾರಿತ ಶಿಕ್ಷಣದ ಬಗ್ಗೆ ಶಿಫಾರಸುಗಳನ್ನು ಮಾಡಿರುವುದರಲ್ಲಿ ಈ ಸಮಿತಿಯೇ ಮೊದಲಲ್ಲ. ಮನುಷ್ಯರನ್ನು ಯಂತ್ರಗಳಂತಾಗಿಸುವ ಶಿಕ್ಷಣದ ಬದಲಿಗೆ ವಿವೇಕ, ಚಾರಿತ್ರ್ಯಗಳನ್ನು ಮೈಗೂಡಿಸುವ, ಅವರನ್ನು ಸಮಾಜಮುಖಿಗಳನ್ನಾಗಿಸುವ ಶಿಕ್ಷಣದ ಅಗತ್ಯ ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT