ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಸಿಡಿಸುವ ಮುನ್ನ

Last Updated 17 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಿಂಗಲ್‌ ದೇವಾಲಯದಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ನೂರಕ್ಕೂ ಹೆಚ್ಚು ಜನ ಬಲಿಯಾದ ಸುದ್ದಿ ಎಂಥವರ ಮನಸ್ಸನ್ನೂ ಕಲಕುವಂತಹುದು.  ಈ ಘಟನೆಯು ಪಟಾಕಿಯ ವಿಚಾರದಲ್ಲಿ ಒಂದಿಷ್ಟು ಚಿಂತನೆ ನಡೆಸಲು ಪ್ರೇರೇಪಿಸುತ್ತದೆ.

ದೀಪಾವಳಿ ಸಂದರ್ಭವಿರಲಿ, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಸಂದರ್ಭವಿರಲಿ, ನಮ್ಮ ಕ್ರಿಕೆಟ್‌ ತಂಡ ಪಾಕ್‌ ವಿರುದ್ಧ ಗೆದ್ದಾಗಿನ ಸಂದರ್ಭವಿರಲಿ– ಹೀಗೆ ಹಲವು ಸಂದರ್ಭಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವ(?) ಹುಚ್ಚು ನಮ್ಮವರಲ್ಲಿದೆ. ಹೀಗೆ ಪಟಾಕಿ ಸಿಡಿಸುವವರು ಕೆಳಗಿನ ವಿಚಾರವಾಗಿ ಒಂದಿಷ್ಟು ಚಿಂತಿಸುವುದು ಒಳಿತು.

ಪಟಾಕಿ ಸಿಡಿಸಿದಾಗ ಅಪಾರ ಪ್ರಮಾಣದಲ್ಲಿ ಶಾಖ ಬಿಡುಗಡೆಯಾಗುತ್ತದೆ. ಈ ಶಾಖ, ವಾತಾವರಣದ ಉಷ್ಣತೆಯನ್ನು ಹೆಚ್ಚಿಸಿ ‘ಗ್ಲೋಬಲ್‌ ವಾರ್‍ಮಿಂಗ್‌’ಗೆ ಒಂದಿಷ್ಟು ಕೊಡುಗೆ ನೀಡುತ್ತದೆ. ಪಟಾಕಿ ಸಿಡಿಸಿದಾಗ ಉಂಟಾಗುವ ಹೊಗೆಯಲ್ಲಿ ಹಲವಾರು ವಿಧದ ರಾಸಾಯನಿಕಗಳು ವಾಯುಮಂಡಲವನ್ನು ಕಲುಷಿತಗೊಳಿಸಿ ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಆಸ್ತಮಾ ರೋಗಿಗಳಿಗಂತೂ ಪಟಾಕಿಯ ಹೊಗೆ ನರಕಯಾತನೆಗೆ ಕಾರಣವಾಗುತ್ತದೆ.

ಇನ್ನು ಪಟಾಕಿ ಹೊರಸೂಸುವ ಕಣ್ಣು ಕೋರೈಸುವ ಬೆಳ ಕಂತೂ ಕಣ್ಣುಗಳಿಗೆ ಬಹಳ ಅಪಾಯಕರ. ಇಷ್ಟು ಮಾತ್ರವಲ್ಲ, ಪಟಾಕಿ ಸಿಡಿಸಿದಾಗ ಉಂಟಾಗುವ ಕಿವಿಗಡಚಿಕ್ಕುವ ಭಾರಿ ಶಬ್ದವು ಶ್ರವಣ ತಜ್ಞರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕಿವುಡರನ್ನು ಒದಗಿಸಿಕೊಡಬಲ್ಲದು! ಪಟಾಕಿ ಸಿಡಿಸಿದ ನಂತರ ಊರು ತುಂಬಾ ಬೀಳುವ ಕಸವನ್ನು ತೆಗೆಯುವುದೇ ಒಂದು ದೊಡ್ಡ ಕೆಲಸವಾಗುತ್ತದೆ. ಇನ್ನು ಪಟಾಕಿ ತಯಾರಿಕೆಯಲ್ಲಿ ಬಾಲ ಕಾರ್ಮಿಕರನ್ನೇ ಹೆಚ್ಚಾಗಿ ಬಳಸಲಾಗುತ್ತದೆ.

ಇದು ಅಪರಾಧ. ಹಾಗಾಗಿ ಪಟಾಕಿ ಸಿಡಿಸುವುದರಿಂದ ಪರೋಕ್ಷವಾಗಿ ಈ ಅಪರಾಧದಲ್ಲಿ ನಾವೂ ಭಾಗಿಯಾದಂತೆಯೇ. ನೀವು ಹೇಳಬಹುದು, ‘ಸರಿಯಾದ ಮುನ್ನೆಚ್ಚರಿಕೆ ವಹಿಸಿದರೆ ಪಟಾಕಿಯ ಅವಘಡಗಳನ್ನು ತಡೆಯಬಹುದು’ ಅಂತ. ಆದರೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಪಟಾಕಿಯ ಶಬ್ದವನ್ನು ನಿಯಂತ್ರಿಸಿ ಶಬ್ದಮಾಲಿನ್ಯವನ್ನು ತಡೆಯಲಿಕ್ಕಾಗುತ್ತದೆಯೇ? ವಾಯು ಮಾಲಿನ್ಯವನ್ನು ತಡೆಯಲು ಸಾಧ್ಯವೇ? ಕಸವನ್ನು ಬೀಳದ ಹಾಗೆ ಮಾಡಲು ಸಾಧ್ಯವೇ?

ಇಷ್ಟೆಲ್ಲ ಹೇಳಿದ ಮೇಲೆ ಪಟಾಕಿ ಸುಡುವುದರ ಪರವಾಗಿ  ಒಂದೇ ಒಂದು ಕಾರಣವನ್ನು ಕೊಡಬಲ್ಲಿರಾ?  ಇಷ್ಟೊಂದು ಋಣಾತ್ಮಕ ಅಂಶಗಳಿರುವಾಗ, ಒಂದೇ ಒಂದು ಧನಾತ್ಮಕ ಅಂಶವನ್ನು  ತೋರಿಸಿಕೊಡಬಲ್ಲಿರಾ? ಅಕಸ್ಮಾತ್‌ ಒಂದಾದರೂ ಧನಾತ್ಮಕ ಅಂಶವಿದ್ದ ಪಕ್ಷದಲ್ಲಿ ಪಟಾಕಿ ಸಿಡಿಸುವುದರಿಂದುಂಟಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ತ್ಯಜಿಸಲು ಸಾಧ್ಯವಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT