ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗ ತೆರವುಗೊಳಿಸಿ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಕುಮಾರಸ್ವಾಮಿ ಬಡಾವಣೆಯ, ವಾಟರ್ ಟ್ಯಾಂಕ್ ಮತ್ತು 15 ಎಫ್ ಬಸ್ ನಿಲ್ದಾಣದ ನಡುವಿನ ರಸ್ತೆಯ ಬದಿಗೆ ಸುಸಜ್ಜಿತವಾದ ಪಾದಚಾರಿ ಮಾರ್ಗವಿದ್ದರೂ, ತರಕಾರಿ ಮಾರುವವರು, ಹಾಲು ಮಾರಾಟಗಾರರು, ಫಾಸ್ಟ್‌ಫುಡ್ ಗಾಡಿಗಳವರು ರಸ್ತೆಯನ್ನು ಆಕ್ರಮಿಸಿಕೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗವೇ ಇಲ್ಲದಂತೆ ಮಾಡಿದ್ದಾರೆ.

ಕೆಲವರಂತೂ ಶಾಶ್ವತವಾದ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಂಜೆಯಾಯಿತೆಂದರೆ, ರಾಜ್‌ಕುಮಾರ್ ಪಾರ್ಕ್ ಹಾಗೂ ಲವಕುಶ ಪಾರ್ಕ್ ಎದುರುಗಡೆ ಇವರದ್ದೇ ಕಾರುಬಾರು. ತಿಂಡಿ ತಿನ್ನಲು ಬರುವ ಗ್ರಾಹಕರೂ ತಮ್ಮ ವಾಹನಗಳನ್ನು ಪಾದಚಾರಿ ಮಾರ್ಗಗಳಲ್ಲಿಯೇ ನಿಲ್ಲಿಸುವುದರಿಂದ ಉದ್ಯಾನವನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

ಇದೇ ರಸ್ತೆಯಲ್ಲಿರುವ ಬಾರ್‌ವೊಂದರ ಮುಂದೆ ಸಾಯಂಕಾಲ 7ರಿಂದ ನಡುರಾತ್ರಿಯವರೆಗೆ ಕನಿಷ್ಟ 2 ಫರ್ಲಾಂಗು ಉದ್ದಕ್ಕೆ ರಸ್ತೆಯ ಬದಿಗೆ ವಾಹನಗಳು ನಿಂತಿರುತ್ತವೆ. ಪಾದಚಾರಿಗಳಿಗೆ ನಡೆದಾಡುವುದಕ್ಕೆ ಕೊಂಚವೂ ಸ್ಥಳ ಲಭ್ಯವಿರುವುದಿಲ್ಲ. ಹೀಗಾಗಿ ರಸ್ತೆಯ ಮಧ್ಯದಲ್ಲಿಯೇ ನಡೆಯಬೇಕಾದ ಅನಿವಾರ್ಯತೆ. ಇದರಿಂದಾಗಿ ಎಷ್ಟೋ ಮಂದಿ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಅಪಘಾತಗಳಾಗಿದ್ದೂ ಇದೆ.

ಇದೇ ರಸ್ತೆಯ ಬದಿಗೆ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಕಟ್ಟಡ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿಯೇ ಶೇಖರಿಸಿಟ್ಟಿರುವುದು ಮತ್ತೊಂದು ಸಮಸ್ಯೆ. ವ್ಯಾಪಾರಸ್ಥರು ಪಾದಚಾರಿ ಮಾರ್ಗದಲ್ಲಿಯೇ ತಮ್ಮ ದಾಸ್ತಾನುಗಳನ್ನು ಮಾರಾಟ/ಪ್ರದರ್ಶನಕ್ಕೆ ಇಡುವುದು ಸಾಮಾನ್ಯ ನೋಟ.

ಸಂಚಾರಿ ಪೊಲೀಸರು ಯಾವಾಗಲಾದರೊಮ್ಮೆ ಬಂದು ಇವರಿಗೆ ಸ್ಥಳ ತೆರವುಗೊಳಿಸಲು ಆದೇಶ ನೀಡಿ ಹೋದರೂ ಅವರು ತೆರಳಿದ ತಕ್ಷಣ ಎಲ್ಲವೂ ಮಾಮೂಲಿ ಸ್ಥಿತಿಗೆ ಮರಳುತ್ತದೆ. ಹಾಗಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಬಡಾವಣೆಯ, ವಾಟರ್ ಟ್ಯಾಂಕ್ ಮತ್ತು 15 ಎಫ್ ಬಸ್ ನಿಲ್ದಾಣದ ನಡುವಿನ ರಸ್ತೆಯ ಪಾದಚಾರಿಗಳನ್ನು ಅಪಾಯದಿಂದ ಪಾರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT