ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕಲ್ಪಿಸಿ

Last Updated 21 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ನಮ್ಮ ರಾಜ್ಯದಲ್ಲಿ ಈ ವರ್ಷದ ಆರಂಭದಿಂದ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇದೆ. ಈ ತಿಂಗಳ ಅಂತ್ಯಕ್ಕೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲಿದೆ.

ಚುನಾವಣಾ ಸಿದ್ಧತಾ ಪರಿ, ಅಭ್ಯರ್ಥಿಗಳ ಆಶ್ವಾಸನೆ, ಪಡುತ್ತಿರುವ ಶ್ರಮ, ಖರ್ಚು ಇವುಗಳನ್ನೆಲ್ಲಾ ಗಮನಿಸಿದಾಗ ಇದು ಕೂಡ  ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲ ಎಂಬಂತೆ ಕಂಡುಬರುತ್ತಿದೆ. ಈ ಚುನಾವಣಾ ವೈಖರಿಯನ್ನು ಗಮನಿಸಿದರೆ ಈಗಿನ ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾದ ಅನಿವಾರ್ಯ ಇದೆ ಅನಿಸುತ್ತದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ. ಪರಿಷತ್ತಿನ ರಾಜ್ಯ ಮಟ್ಟದ ಅಧ್ಯಕ್ಷರಾಗಲು ಕನಿಷ್ಠ 10 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇಲ್ಲಿಯೂ ಕಾಸಿದ್ದವನೆ ಬಾಸ್‌ ಆಗುವುದಾದರೆ ಸಾಂಸ್ಕೃತಿಕ ಲೋಕದಲ್ಲಿಯೂ ಸಮಾನತೆಗೆ ಅರ್ಥವಿಲ್ಲದಂತಾಗುತ್ತದೆ.

ಆದಕಾರಣ, ತಾಲ್ಲೂಕು ಮಟ್ಟದ ಅಧ್ಯಕ್ಷರ ಚುನಾವಣೆ ನಡೆದು ಅವರು ಜಿಲ್ಲಾ ಘಟಕದ ಅಧ್ಯಕ್ಷರನ್ನು ಆರಿಸುವಂತಾಗಿ, ಜಿಲ್ಲಾ ಮಟ್ಟದ ಅಧ್ಯಕ್ಷರು ರಾಜ್ಯ ಮಟ್ಟದ ಅಧ್ಯಕ್ಷರನ್ನು ಆರಿಸುವ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ. ಚುನಾವಣೆ ಎಂದೊಡನೆ ಮೀಸಲಾತಿಯ ಅಗತ್ಯವೂ ಇದೆ.

ಶತಮಾನೋತ್ಸವ ಕಂಡ ಈ ಸಂಸ್ಥೆಗೆ ಇಲ್ಲಿಯವರೆಗೂ ದಲಿತರು, ಮಹಿಳೆಯರು,  ಹಿಂದುಳಿದ ವರ್ಗದವರು ಆಯ್ಕೆಯಾಗಿಲ್ಲ. ಅಲ್ಲದೆ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದವರನ್ನೇ ತಮ್ಮ ಅವಧಿಯ ಪದಾಧಿಕಾರಿಗಳನ್ನಾಗಿ ಆಯ್ದುಕೊಳ್ಳುವ ರೂಢಿ ಇದೆ. ಅದಕ್ಕಾಗಿ ಮೀಸಲಾತಿ ಅನಿವಾರ್ಯವಾಗಿದೆ. ಕೊನೆಪಕ್ಷ ಜಿಲ್ಲಾ ಘಟಕಗಳ 10 ಅಧ್ಯಕ್ಷ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಬೇಕು.

ರಾಜ್ಯ ಘಟಕದ ಅಧ್ಯಕ್ಷ ಸ್ಥಾನವು ಮೂರು ಅವಧಿಯಲ್ಲಿ ಒಮ್ಮೆ ದಲಿತರಿಗೆ, ಒಮ್ಮೆ ಮಹಿಳೆಗೆ ಮತ್ತು ಒಂದು ಅವಧಿ ಸಾಮಾನ್ಯ ವರ್ಗಕ್ಕಿರಲಿ.  ‘ಸಮಾನತೆ’ ಸಾಕಾರವಾಗುವವರೆಗೆ ಮೀಸಲಾತಿ ಇಲ್ಲಿಯೂ ಅತ್ಯಗತ್ಯ. ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗೇ ಅಗ್ರಸ್ಥಾನವಿರುವುದು ಅತ್ಯಂತ ಪ್ರಮುಖವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT