ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠತೆಯ ಅಹಂ

Last Updated 11 ಜನವರಿ 2016, 19:54 IST
ಅಕ್ಷರ ಗಾತ್ರ

ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ‘ಸಂಸ್ಕೃತ ನಿರ್ಲಕ್ಷ್ಯದಿಂದ ವಿದ್ವತ್ತಿಗೆ ಅಧೋಗತಿ’ ಎಂದು ಹೇಳಿರುವುದು (ಪ್ರ.ವಾ., ಜ. 11) ಅಚ್ಚರಿ ಮೂಡಿಸಿದೆ. ಜೊತೆಗೆ, ಕನ್ನಡದಲ್ಲಿ ಜನಪ್ರಿಯ ಕಾದಂಬರಿಗಳನ್ನು ಕೊಟ್ಟ ಭೈರಪ್ಪನವರಲ್ಲಿ ಒಂದು ಭಾಷೆ ಶ್ರೇಷ್ಠ ಮತ್ತೊಂದು ಕನಿಷ್ಠ ಎಂಬ ಮನೋಭಾವ ಗಟ್ಟಿಯಾಗಿ ನೆಲೆಯೂರಿರುವುದು  ಆಘಾತವನ್ನೂ ಮೂಡಿಸಿದೆ.

ಸಾಹಿತ್ಯದಲ್ಲಿ ಪ್ರಥಮ, ದ್ವಿತೀಯ, ತೃತೀಯ ದರ್ಜೆಗಳೆಂದಿರುತ್ತವೆಯೇ? ಇಷ್ಟವಾಗುವ ಸಾಹಿತ್ಯ, ಇಷ್ಟವಾಗದ ಸಾಹಿತ್ಯವಷ್ಟೆ ಅಲ್ಲವೇ ಇರುವುದು? ಸಂಸ್ಕೃತದ ಗಂಧ ಗಾಳಿ ಗೊತ್ತಿಲ್ಲದ ಭಾಷೆಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳೇ ಬಂದಿಲ್ಲವೇ? ಕನ್ನಡದಲ್ಲಿ ಸಂಸ್ಕೃತದ ಪದಗಳ ಕೊಡುಕೊಳ್ಳುವಿಕೆ ಇರಬಹುದೆಂಬ ಕಾರಣಕ್ಕೆ, ಕನ್ನಡವಷ್ಟೇ ಗೊತ್ತಿರುವವರ ಸಾಹಿತ್ಯದಲ್ಲಿ ಸತ್ವವೇ ಇಲ್ಲ ಎಂದು ತಿಳಿದವರು ಎನ್ನಿಸಿಕೊಂಡವರೂ ಭಾವಿಸುತ್ತಾರೆಂದರೆ ಅವರು ಇತರರ ಕೃತಿಗಳನ್ನು ಓದುವುದನ್ನು ಬಿಟ್ಟು ಬಹಳ ವರ್ಷಗಳಾಗಿರಬೇಕೆಂದು ತಿಳಿಯಬೇಕಾಗುತ್ತದೆ.

ಇನ್ನು ಸಂಸ್ಕೃತ ದ್ವೇಷವೆಂಬುದು ಮೂಡಿದ್ದಕ್ಕೆ ದ್ವೇಷಿಸುವವರ ಮೇಲೆಯೇ ಹೊಣೆ ಹೊರಿಸುವುದು ಸರಿಯಲ್ಲ. ಸಂಸ್ಕೃತವನ್ನು ಬ್ರಾಹ್ಮಣರ ಹೊರತಾಗಿ ಮತ್ತೊಬ್ಬರು ಕಲಿಯಲಾಗದಂತೆ ಮಾಡಿದ ವ್ಯವಸ್ಥೆಯ ಬಗ್ಗೆ ಏಕೆ ಇವರು ತುಟಿ ಬಿಚ್ಚುವುದಿಲ್ಲ? ಶ್ರೇಷ್ಠತೆಯ ಅಹಮಿನಲ್ಲಿ ಸಂಸ್ಕೃತ ಭಾಷೆಯನ್ನು ಬಂಧಿಸಿಟ್ಟ ಜನ ಆ ಭಾಷೆಯ ಅವನತಿಗೆ ಕಾರಣರೇ ಹೊರತು ಸಂಸ್ಕೃತದಿಂದ ದೂರ ಉಳಿದವರಲ್ಲ. 

ಕನ್ನಡಕ್ಕೆ ತನ್ನದೇ ಆದ ಸೊಗಡಿದೆ, ಸಂಸ್ಕೃತವೂ ಸೇರಿದಂತೆ ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳಂನಿಂದ ಮೆಚ್ಚುಗೆಯೆನ್ನಿಸಿದ ಪದಗಳನ್ನು ತನ್ನೊಡಲಿಗೆ ಸೇರಿಸಿಕೊಂಡು ಕನ್ನಡೀಕರಣಗೊಳಿಸಿದೆ, ಉಳಿದ ಭಾಷೆಗಳಿಗೆ ಉದಾರವಾಗಿ ತನ್ನೊಡಲಿನ ಪದಗಳನ್ನು ನೀಡಿದೆ. ಭಾಷೆಗಳನ್ನು ಶ್ರೇಷ್ಠ, ಕನಿಷ್ಠ ಎಂದು ವಿಂಗಡಿಸುವುದು ತರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT