ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ರಾಷ್ಟ್ರ!

Last Updated 1 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಧರ್ಮ ಹಾಗೂ ರಾಜಕಾರಣಗಳನ್ನು ಬೆರೆಸುವ ಕೆಲಸ ಭರದಿಂದ ಸಾಗಿದೆ. ಭಾರತವನ್ನು ಶುದ್ಧ ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದು ಬಹಿರಂಗವಾಗಿಯೇ ಈ ಮಾತನ್ನು ಹೇಳಿದೆ. ಇಂತಹ ಬೇಡಿಕೆಗಳು ಹಾಗೂ ಇದಕ್ಕೆ ಪೂರಕವಾಗಿ ತೆರೆಮರೆಯಲ್ಲಿ ನಡೆದಿರುವ ಕಿತಾಪತಿಗಳು, ಜಾತ್ಯತೀತರ ನಿದ್ದೆಗೆಡಿಸಿವೆ.

ಪಾಕಿಸ್ತಾನ ಹುಟ್ಟಿದ್ದೇ ಧರ್ಮ ಹಾಗೂ ರಾಜಕಾರಣ ಗಳನ್ನು ಬೆರಕೆ ಮಾಡಿ. ಆದರೆ, ಸಮಕಾಲೀನ ಪಾಕಿಸ್ತಾನದ ಸಾಮಾನ್ಯ ಪ್ರಜೆಗಳನ್ನು ಕೇಳಿದಾಗ ಮಾತ್ರ, ಸದರಿ ಬೆರಕೆಯಿಂದಾಗಿ ಪಾಕಿಸ್ತಾನಕ್ಕೆ ಒಳ್ಳೆಯದಕ್ಕಿಂತ ಕೆಟ್ಟದ್ದಾಗಿರುವುದೇ ಹೆಚ್ಚು ಎಂಬ ನಿಸ್ಸಂದಿಗ್ಧ ಉತ್ತರ ಬರುತ್ತದೆ. ಪಾಕಿಸ್ತಾನದ ಡೋಲಾಯಮಾನ ರಾಜಕೀಯ ಪರಿಸ್ಥಿತಿಗಮನಿಸುತ್ತಿರುವ, ಹೊರಗಿನವರಾದ ನಮಗೂ ಹಾಗೆಯೇ ಅನ್ನಿಸುತ್ತದೆ. ಆದರೆ ನಮ್ಮಲ್ಲಿ ಅನೇಕರಿಗೆ ಹಾಗನ್ನಿಸಿಲ್ಲ.

ತಾವೂ ಒಮ್ಮೆ ಪಾಕಿಸ್ತಾನದ ಅನುಕರಣೆ ಮಾಡಿ, ಕೆಟ್ಟೇ ಬುದ್ಧಿ ಕಲಿಯಬೇಕು ಎಂದೆನ್ನಿಸಿಬಿಟ್ಟಿದೆ ಅವರಿಗೆ. ಮುಸಲ್ಮಾನ ಪ್ರತ್ಯೇಕತಾವಾದಿಗಳಿಂದ ಪಾಠ ಕಲಿಯುತ್ತಿದ್ದಾರೆ ಹಿಂದೂ ಪ್ರತ್ಯೇಕತಾವಾದಿಗಳು. ಭಾರತ ದೇಶದಲ್ಲಿ ಹಿಂದೂಗಳಿಗಾಗುತ್ತಿರುವ ಅನ್ಯಾಯ, ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದ ಕಾಂಗ್ರೆಸ್ಸಿಗರು ಹಾಗೂ ಎಡಪಂಥೀಯರು ದೇಶಕ್ಕೆ ಎಸಗಿದ ಅನ್ಯಾಯ, ಜನಸಂಖ್ಯೆಯ ವ್ಯತ್ಯಯ, ಗೋಮಾಂಸ ಭಕ್ಷಣೆ ಇತ್ಯಾದಿ ನೂರು ಕಾರಣಗಳಿವೆ ಇವರಿಗೆ ಭಾರತವನ್ನು ಶುದ್ಧ ಹಿಂದೂ ರಾಷ್ಟ್ರವಾಗಿಸಲಿಕ್ಕೆ.

ಪಾರ್ಕಿನಲ್ಲಿ ಕುಳಿತಿರುವ ಬೆರಕೆ ಪ್ರೇಮಿಗಳು, ದೇವರ ಹಚ್ಚೆ ಹುಯ್ಯಿಸಿಕೊಂಡ ವಿದೇಶೀಯರು, ಗೋಮಾಂಸ ತಿನ್ನುವ ಮುಸ್ಲಿಮರು, ಬಾಬಾಬುಡನ್ನಿನ ದತ್ತಪೀಠ, ಏನು ಬೇಕಾದರೂ ಆದೀತು ಹಿಂದೂ ರಕ್ತ ಕುದಿಸಲಿಕ್ಕೆ. ತೀವ್ರತರ ದ್ವೇಷವೆಂಬುದು ತೀವ್ರತರ ಪ್ರೀತಿಯ ಮತ್ತೊಂದು ಮುಖ ಎಂದು ತಿಳಿದವರು ಹೇಳುತ್ತಾರೆ ತಾನೆ?

ನಾನನ್ನುತ್ತೇನೆ, ಧರ್ಮ ಮತ್ತು ರಾಜಕಾರಣ ಬೆರೆಯಬೇಕು ಎಂದು, ತನ್ನ ಮೂಲ ಅರ್ಥದಲ್ಲಿ ಬೆರೆಯಬೇಕು ಎಂದು. ಬೆರೆಯದೆ ಉಳಿದದ್ದೇ ಈ ಎಲ್ಲ ಪ್ರತ್ಯೇಕತಾವಾದಿ ಕಿತಾಪತಿಗಳಿಗೆ ಕಾರಣವಾಗಿದೆ ಎಂದು. ಧರ್ಮ ಹಾಗೂ ರಾಜಕಾರಣ ತನ್ನ ಮೂಲ ಅರ್ಥದಲ್ಲಿ ಬೆರೆತಾಗ ಭಾರತ ದೇಶ ಹಿಂದೂರಾಷ್ಟ್ರ ಹೇಗೆ ತಾನೆ ಆದೀತು? ಪ್ರತ್ಯೇಕತಾವಾದ ಬೆರೆಸುತ್ತಿಲ್ಲ, ಪ್ರತ್ಯೇಕಿಸುತ್ತಿದೆ.

ಧರ್ಮಗಳ ಮೂಲ ಆಶಯ ಹಾಗೂ ರಾಜಕಾರಣದ ಮೂಲ ಆಶಯ ಒಂದೇ. ಅದು ಸಹಕಾರ ಹಾಗೂ ಸಮಾನತೆಯ ಸಮಾಜ ಸ್ಥಾಪನೆ. ಧರ್ಮವು ವೈಯಕ್ತಿಕ ನೆಲೆಯಲ್ಲಿ ಈ ಆಶಯವನ್ನು ಸ್ಥಾಪಿಸಿದರೆ ರಾಜಕಾರಣವು ಸಾರ್ವಜನಿಕ ನೆಲೆಯಲ್ಲಿ ಇದೇ ಆಶಯವನ್ನು ಸ್ಥಾಪಿಸಬೇಕು.

ಇತ್ತ ಧರ್ಮಗಳೂ ಮೂಲ ಆಶಯ ಮರೆತು ಕುಳಿತಿವೆ, ಅತ್ತ ರಾಜಕಾರಣವೂ ಮೂಲ ಆಶಯ ಮರೆತು ಕುಳಿತಿದೆ. ಎರಡೂ ಕ್ಷೇತ್ರಗಳೂ ಹಣದ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿವೆ. ಸುಲಭ ಬದುಕಿನಲ್ಲಿ ಮುಳುಗಿತೇಲಿವೆ. ಮೂಲ ಆಶಯವನ್ನು ಸಾಂಕೇತಿಕವಾಗಿಸಿ ಸಂಕೇತಗಳ ಬಡಿದಾಟಕ್ಕೆ ಎರಡೂ ಸಂಸ್ಥೆಗಳು ಕುಮ್ಮಕ್ಕು ನೀಡುತ್ತಿವೆ. ಬಡಜನರು ಬಡಿದಾಡುತ್ತಾರೆ, ಉಳ್ಳವರು ಮಠಮಾನ್ಯ ಕಟ್ಟುತ್ತಾರೆ. ಇಲ್ಲವೇ ದೇಶದ ಪ್ರಧಾನಮಂತ್ರಿಯೋ ರಾಜ್ಯದ ಮುಖ್ಯಮಂತ್ರಿಯೋ ಆಗಿ ವಿಜೃಂಭಿಸುತ್ತಾರೆ.

ನನಗೆ ತಿಳಿದಮಟ್ಟಿಗೆ ಯಾವ ಧರ್ಮವೂ ಬಂಡವಾಳಶಾಹಿಯ ಪರವಾಗಿದ್ದಿದ್ದಿಲ್ಲ. ಬಂಡವಾಳಶಾಹಿಯೇ ಏಕೆ, ಹಳೆಯ ಮಾದರಿಯ ಶ್ರೀಮಂತಶಾಹಿಯ ಪರವಾಗಿ ಸಹಿತ ಇದ್ದಿದ್ದಿಲ್ಲ. ಯಂತ್ರಗಳ ಪರವಾಗಿ ಇದ್ದಿದ್ದಿಲ್ಲ, ಮಾರುಕಟ್ಟೆಯ ಪರವಾಗಿ ಇದ್ದಿದ್ದಿಲ್ಲ, ಸುಲಭ ಬದುಕಿನ ಪರವಾಗಿ ಇದ್ದಿದ್ದಿಲ್ಲ. ಎಲ್ಲ ಧರ್ಮಗಳೂ, ಎಲ್ಲ ತರಹದ ದುರ್ಬಳಕೆಯನ್ನು, ಹಣ ಯಂತ್ರ ಮಂತ್ರ ಮಾರುಕಟ್ಟೆ ಇತ್ಯಾದಿ ಎಲ್ಲ ದುರ್ಬಳಕೆಯನ್ನೂ ಖಂಡಿಸಿವೆ. ಧರ್ಮಗಳಿರುವುದು ಕಾಯಕಜೀವಿಗಳ ಪರವಾಗಿ. ಕಾಯಕ ಜೀವಿಗಳನ್ನು ಪರಸ್ಪರ ಬಡಿದಾಟಕ್ಕೆ ಹಚ್ಚುತ್ತಿರುವ ಪ್ರತ್ಯೇಕತಾವಾದಿಗಳು ಧರ್ಮಲಂಡರೂ ಹೌದು  ಹೊಣೆಗೇಡಿ ರಾಜಕಾರಣಿಗಳೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT