ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌತಮ’ ಪದ ಸ್ಪಷ್ಟನೆ

Last Updated 20 ಮಾರ್ಚ್ 2016, 19:38 IST
ಅಕ್ಷರ ಗಾತ್ರ

ಕನ್ನಡ ಪುಸ್ತಕ ಪ್ರಾಧಿಕಾರ 2010ರಲ್ಲಿ ಪ್ರಕಟಿಸಿರುವ ಡಾ.ಎಂ. ಚಿದಾನಂದ ಮೂರ್ತಿ ಅವರ ‘ಕರ್ನಾಟಕ ನಾಡಗೀತೆ: ಒಂದು ವಿಶ್ಲೇಷಣೆ’ ಕೃತಿಯನ್ನು ಇತ್ತೀಚೆಗೆ ಓದಿದೆ. ‘ನಾಡಗೀತೆ’ಯಲ್ಲಿ ಕುವೆಂಪು ಅವರು ರಾಷ್ಟ್ರದ, ಕರ್ನಾಟಕದ ಶ್ರೇಷ್ಠ ಮಹಾಪುರುಷರನ್ನು ಹೆಸರಿಸಿದ್ದಾರೆ. ಅದರಲ್ಲಿ ‘ಕಪಿಲ ಪತಂಜಲ ಗೌತಮ ಜಿನನುತ’ ಎನ್ನುವ ಸಾಲೊಂದಿದೆ.

ಚಿಮೂ ಅವರು ‘ಗೌತಮ’ ಎನ್ನುವುದನ್ನು ವಿಶ್ಲೇಷಿಸುತ್ತ ‘ಸುಮಾರು ಕ್ರಿ.ಪೂ. 600–400 ಅವಧಿಯಲ್ಲಿದ್ದ ಗೌತಮ ಅಹಲ್ಯೆಯ ಪತಿ; ಸಪ್ತರ್ಷಿಗಳಲ್ಲಿ ಒಬ್ಬ. ಇವನ ಹೆಸರಿನಲ್ಲಿ ಒಂದು ಗೋತ್ರವೇ ಇದೆ...’ ಮುಂತಾಗಿ ವಿವರಣೆ ನೀಡಿದ್ದಾರೆ. ಅದು ಸರಿಯಲ್ಲ. ಗೌತಮ ಹೆಸರಿನ ಅನೇಕ ಋಷಿಗಳಿದ್ದಾರೆ. ಕುವೆಂಪು ನಾಡಗೀತೆಯಲ್ಲಿ ‘ಗೌತಮ’ ಎಂದು ಹೇಳಿರುವುದು ಗೌತಮ ಬುದ್ಧನನ್ನು ಕುರಿತು, ಮುಂದಿನ ಪದ ‘ಜಿನ’ ಎಂದಿದೆ.

ಅದನ್ನು ಕುರಿತು ಚಿಮೂ ಅವರು ‘ಜಿನ ಎಂದರೆ ತನ್ನನ್ನ್ ತಾನು ಗೆದ್ದುಕೊಂಡು, ಅರ್ಥಾತ್‌ ಇಂದ್ರಿಯ ನಿಗ್ರಹ ಮಾಡಿ ತಪಸ್ಸನ್ನು ಆಚರಿಸಿ ಮುಕ್ತನಾದವನು. ಜೈನ ಧರ್ಮದ ಆದಿ ತೀರ್ಥಂಕರ ವೃಷಭ ದೇವನಿಂದ ಮಹಾವೀರರವರೆಗಿನ ಇಪ್ಪತ್ತುನಾಲ್ಕು ತೀರ್ಥಂಕರರನ್ನು ಜಿನ ಎಂದೇ ಕರೆಯಲಾಗುತ್ತದೆ’ ಎಂದಿರುವುದು ಸರಿ.

ನುತ ಎಂದರೆ ಶ್ರೇಷ್ಠ, ಸ್ತುತಿಸು ಎಂದರ್ಥ. ಕುವೆಂಪು  ಬುದ್ಧನನ್ನು ಕುರಿತು ‘ಮಹಾರಾತ್ರಿ ಎಂಬ ನಾಟಕ ರಚಿಸಿದ್ದಾರೆ, ಸುನೀತ ರಚಿಸಿದ್ದಾರೆ. ಅಲ್ಲದೆ ತಮ್ಮ ಮಹತ್ವದ ಕಾದಂಬರಿ ‘ಕಾನೂರು ಹೆಗ್ಗಡಿತಿ’ಯಲ್ಲಿ ಕಡೆಯ ಅಧ್ಯಾಯ ‘ಹತ್ತು ವರ್ಷಗಳಾದ ಮೇಲೆ’ ಎಂಬ ಶೀರ್ಷಿಕೆಯಲ್ಲಿ ಗೌತಮ ಬುದ್ಧನ ಮಹತ್ವವನ್ನು ಚಿತ್ರಿಸಿದ್ದಾರೆ.

ಹಾಗಾಗಿ ನಾಡಗೀತೆಯಲ್ಲಿ ಬರುವ ‘ಗೌತಮ’ ಪದ ಗೌತಮ ಬುದ್ಧನನ್ನು ಕುರಿತದ್ದು. ಆದ್ದರಿಂದ ಮುಂದಿನ ಮುದ್ರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಚಿಮೂ ಅವರು ಇದನ್ನು ಸರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT