ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತೀಕರಣ’ವೇ?

Last Updated 11 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ಬಿಹಾರದಲ್ಲಿ ಜಾರಿಗೆ ಬಂದಿರುವ ಮದ್ಯಪಾನ ನಿಷೇಧದ ಬಗ್ಗೆ ಬರೆಯುತ್ತಾ ಆಕಾರ್ ಪಟೇಲ್ ಅವರು ‘ಮದ್ಯ ನಿಷೇಧ ಸಂಸ್ಕೃತೀಕರಣದ ಭಾಗ’ ಎಂದು ಹೇಳಿದ್ದಾರೆ (ಪ್ರ.ವಾ., ಏ. 11).

‘ಗೋಹತ್ಯೆಯ ಮೇಲಾಗಲಿ, ಮದ್ಯಪಾನದ ಮೇಲಾಗಲಿ ನಿಷೇಧ ಹೇರುವುದಕ್ಕೆ ಮೇಲ್ಜಾತಿಯ, ಬ್ರಾಹ್ಮಣ್ಯದ ಸಂವೇದನೆ ಕಾರಣ’ ಎಂಬ  ಸಮಾಜ ವಿಜ್ಞಾನಿ ಎಂ.ಎನ್.ಶ್ರೀನಿವಾಸ್ ಅವರ ಹೇಳಿಕೆಯನ್ನು ತಮ್ಮ ವಾದ ಮಂಡನೆಗೆ ಬಳಸಿಕೊಂಡಿರುವ ಅವರು ‘ಮದ್ಯಪಾನ ನಿಷೇಧವನ್ನು ಜಾರಿಗೆ ತಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲೋಹಿಯಾವಾದಿ.

ಅವರ ಚಿಂತನೆ ರಾಮಮನೋಹರ ಲೋಹಿಯಾ ಅವರಿಂದ ಬಂದಿದೆ. ಆದರೆ, ಮದ್ಯಪಾನ ಎಷ್ಟು ಅಪಾಯ ಎಂಬುದನ್ನು ಲೋಹಿಯಾ ಅವರು ಗಾಂಧೀಜಿ ಅವರಂತೆ ಬೋಧಿಸುವುದಿಲ್ಲ’ ಎನ್ನುತ್ತಾರೆ. ಇಲ್ಲೊಂದು ಪ್ರಶ್ನೆ ಧುತ್ತೆಂದು ಏಳುತ್ತದೆ. ಮದ್ಯ ನಿಷೇಧ ಸಂಸ್ಕೃತೀಕರಣದ ಭಾಗ ಎಂದಾಗುವುದಾದರೆ, ಗಾಂಧಿ ಅವರೂ  ‘ಸಂಸ್ಕೃತೀಕರಣ’ದ ಅಥವಾ ‘ಬ್ರಾಹ್ಮಣ್ಯ’ದ ಪೋಷಕರಾಗಿದ್ದರೇ?

ಲೇಖಕರು ಮುಂದುವರಿಯುತ್ತಾ, ‘ಮದ್ಯದ ಮೇಲೆ ನಿಷೇಧ ಇಲ್ಲದ ಐರೋಪ್ಯ ರಾಷ್ಟ್ರಗಳನ್ನೂ, ನಿಷೇಧವಿರುವ ಅರಬ್ ಜಗತ್ತಿನ ಹಲವು ದೇಶಗಳನ್ನೂ ತಾಳೆ ಹಾಕಿ ನೋಡಿದಾಗ, ಯಾವ ಸಮಾಜ ಹೆಚ್ಚು ಉತ್ತಮವಾಗಿದೆ, ಹೆಚ್ಚು ನೈತಿಕವಾಗಿದೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸತ್ಯ ಸಂಗತಿ ಇಡೀ ಜಗತ್ತಿಗೇ ತಿಳಿದಿರುವಾಗ, ಮದ್ಯಪಾನವನ್ನು ಪುಷ್ಟೀಕರಿಸುವುದು ಹುಂಬತನದ ಮಾತು. ಅಲ್ಲದೆ, ಒಂದು ಜನಾಂಗದ, ದೇಶದ ನೈತಿಕತೆಯನ್ನು ಮದ್ಯಪಾನದಂತಹ ನಿಕೃಷ್ಟ ಮಾಪಕಗಳಿಂದ ಅಳೆಯ ಹೊರಡುವುದು ಸರಿಯಲ್ಲ.

ಗಾಂಧೀಜಿ ಹೇಳುವಂತೆ, ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ ಕೋರಬೇಕೇ ಹೊರತು, ಅದನ್ನು ತಿರಸ್ಕರಿಸಿದರೆ ನಮಗೇ ನಷ್ಟ. ಹೀಗಾಗಿ, ಮದ್ಯಪಾನ ನಿಷೇಧದಂತಹ ಒಂದು ಉತ್ತಮ ಸಾಮಾಜಿಕ ಕೆಲಸವನ್ನು ಹೃತ್ಪೂರ್ವಕವಾಗಿ ಸ್ವಾಗತಿಸದೆ, ಅದಕ್ಕೆ ‘ಸಂಸ್ಕೃತೀಕರಣ’ದ ಬಣ್ಣ ಬಳಿಯುವುದು, ಅವಹೇಳನ ಮಾಡುವುದು ಸಮಂಜಸವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT