ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗುರಿನಿಂದ ಹೋಗುವುದಕ್ಕೆ ...

ಯುಡಿಆರ್‌ಎಸ್‌: ಎಷ್ಟು ಅಗತ್ಯ?
Last Updated 19 ಫೆಬ್ರುವರಿ 2016, 19:32 IST
ಅಕ್ಷರ ಗಾತ್ರ

ಬದುಕಿನ ಎಲ್ಲ ಕ್ಷೇತ್ರಗಳನ್ನೂ ನಾವು ತಂತ್ರಜ್ಞಾನದ ಅಧೀನಕ್ಕೆ ಒಪ್ಪಿಸುತ್ತಿದ್ದೇವೆ. ಈ  ಹಿನ್ನೆಲೆಯಲ್ಲಿ, ಕ್ರಿಕೆಟ್ ಅಂಪೈರಿಂಗ್ ವಲಯಕ್ಕೆ ತಂತ್ರಜ್ಞಾನದ ಪ್ರವೇಶವನ್ನು ಎಷ್ಟರಮಟ್ಟಿಗೆ ಒಪ್ಪಬಹುದು ಎಂಬುದನ್ನು ನಾವೀಗ ಚರ್ಚಿಸಬೇಕಾಗಿದೆ.

ಅಂಪೈರ್‌ಗಳು ಕೊಡುವ ಎಲ್ಲ ತೀರ್ಮಾನಗಳು ನೂರಕ್ಕೆ ನೂರರಷ್ಟು ಸರಿಯಾಗಿರುತ್ತವೆ ಎಂದು ಶ್ರೇಷ್ಠ ಅಂಪೈರ್‌ಗಳು ಕೂಡ ಇದುವರೆಗೆ ಹೇಳಿಲ್ಲ. ತಮ್ಮ ತೀರ್ಪುಗಳು ಪ್ರಾಮಾಣಿಕವಾಗಿರುತ್ತವೆ, ಪೂರ್ವಗ್ರಹದಿಂದ ಕೂಡಿರುವುದಿಲ್ಲ ಎಂದು ಮಾತ್ರವೇ ಅವರು ಹೇಳುತ್ತಾರೆ. ಈ ಧೋರಣೆಯನ್ನು ಒಪ್ಪಿಕೊಂಡು ಕ್ರಿಕೆಟ್‌ ತನ್ನ ಪರಂಪರೆಯನ್ನು ನಿರ್ಮಿಸಿ ಕೊಂಡಿದೆ.

ಯುಡಿಆರ್‌ಎಸ್‌ ವ್ಯವಸ್ಥೆಯು ಅಂಪೈರ್‌ಗಳ ತೀರ್ಮಾನವನ್ನು ಕೇವಲ ಒಂದೆರಡು ಕ್ಷೇತ್ರಗಳಲ್ಲಷ್ಟೇ ಸುಧಾರಿಸಬಹುದು. ಮುಖ್ಯವಾಗಿ ಎಲ್‌ಬಿಡಬ್ಲ್ಯು ಮತ್ತು ವಿಕೆಟ್‌ ಕೀಪರ್‌ ಹಿಡಿಯುವ ಕ್ಯಾಚ್‌ ಬಗ್ಗೆ ಯುಡಿಆರ್‌ಎಸ್ ತರಬಹುದಾದ ಸುಧಾರಣೆ ಕೂಡ ಮತ್ತೆ ನೂರಕ್ಕೆ ನೂರರಷ್ಟು ಕರಾರುವಾಕ್‌ ಆದುದಲ್ಲ. ಏಕೆಂದರೆ, ಮಹೇಂದ್ರಸಿಂಗ್ ದೋನಿ ಅವರು ಹೇಳಿರುವಂತೆ, ಚೆಂಡಿನ ದಿಕ್ಕು ಮತ್ತು ವೇಗವು ಕೆಲವೇ ಇಂಚುಗಳ ಪ್ರಮಾಣದಲ್ಲಿ ಮಾತ್ರವಲ್ಲ, ಮಿಲಿಮೀಟರ್‌ಗಳ ಪ್ರಮಾಣದಷ್ಟು ಬದಲಾವಣೆಯಾದರೂ ಪರಿಣಾಮ ಬೇರೆಯೇ ಆಗುತ್ತದೆ.

ಈಗಿರುವ ತಂತ್ರಜ್ಞಾನವನ್ನು ಇಡಿಯಾಗಿ ಬಳಸಿದರೂ ಚೆಂಡಿನ ಗತಿ, ದಿಕ್ಕು, ವೇಗ, ಚಿಮ್ಮುವಿಕೆ, ಪುಟಿತವನ್ನು ಸೂಕ್ಷ್ಮ  ಪ್ರಮಾಣದಲ್ಲಿ ಊಹಿಸುವುದು ಅಥವಾ ಲೆಕ್ಕ ಹಾಕುವುದು ಕಷ್ಟ. ಅಲ್ಲದೇ ಹಾಕುವ ಲೆಕ್ಕವೂ ತಪ್ಪಾಗುತ್ತದೆ. ಅದೂ ಅಲ್ಲದೆ ಇವೆಲ್ಲ ಪ್ರಯೋಜನಕ್ಕೆ ಬರುವುದು ಆಟಗಾರರು ಔಟಾಗುವ ಒಂದೆರಡು ವಿಧಾನಗಳ ಬಗ್ಗೆ ಯೋಚಿಸುವಾಗ, ನಿರ್ಧಾರ ತಳೆಯಬೇಕಾದಾಗ ಮಾತ್ರ.

ಒಂದು ಇನಿಂಗ್ಸ್‌ನಲ್ಲಿ ತಂಡವೊಂದು ತನ್ನ ಆಟವನ್ನು ಮುಗಿಸುವ ಮುನ್ನ ಈ ವಿಧಾನದಲ್ಲಿ ಒಬ್ಬ ಅಥವಾ ಇಬ್ಬರು ಆಟಗಾರರನ್ನು ಕಳೆದುಕೊಳ್ಳಬಹುದು. ಇಂತಹ ವಿಧಾನದಲ್ಲಿ ಆಟಗಾರರು ಔಟಾದಾಗ ಅಂಪೈರ್‌ಗಳು ತಳೆಯುವ ನಿಲುವುಗಳು ಎಲ್ಲ ಸಂದರ್ಭಗಳಲ್ಲಿ ತಪ್ಪಾಗುತ್ತವೆ ಮತ್ತು ಪೂರ್ವಗ್ರಹದಿಂದ ಕೂಡಿ ಅಪ್ರಾಮಾಣಿಕವಾಗಿರುತ್ತವೆ ಎಂದು ಕಲ್ಪಿಸಿಕೊಳ್ಳುವುದಕ್ಕೆ ಯಾವ ಕಾರಣಗಳೂ ಇಲ್ಲ.

ಉದ್ದೇಶಿತ  ಬದಲಾವಣೆಗಳನ್ನು ಜಾರಿಗೆ  ತರುವ ವ್ಯವಸ್ಥೆಯಿಂದ ಅಂಪೈರ್‌ಗಳ ಮನೋಸ್ಥೈರ್ಯದ ಮೇಲೆ ತೀವ್ರ ಮತ್ತು ನಕಾರಾತ್ಮಕ ಪರಿಣಾಮಗಳಾಗುತ್ತವೆ. ತಮ್ಮ ಯಾವುದೇ ತೀರ್ಪುಗಳನ್ನು ಲಕ್ಷಾಂತರ ಪ್ರೇಕ್ಷಕರು ಟೆಲಿವಿಷನ್, ಕಂಪ್ಯೂಟರ್‌ಗಳ ಮೂಲಕ ವೀಕ್ಷಿಸುತ್ತಾರೆ, ಪರಿಣತರು, ತಂತ್ರಜ್ಞರು ಕ್ಷಣಕ್ಷಣವೂ ಪರೀಕ್ಷಿಸುತ್ತಿರುತ್ತಾರೆ, ಇದೆಲ್ಲದರ ಜೊತೆಗೆ ತಮ್ಮ ತೀರ್ಪುಗಳನ್ನು ಮರುಪರಿಶೀಲಿಸಲಾಗುತ್ತದೆ ಎಂಬ ಅಂಶವು ಅಂಪೈರ್‌ಗಳ ಮೇಲೆ ಇನ್ನಿಲ್ಲದ ಒತ್ತಡ ಹೇರಬಹುದು.

ಅಂದರೆ ಒಟ್ಟು ಆಟದ ಒಂದೆರಡು ವಿಧಾನಗಳಲ್ಲಿ ಔಟಾಗುವ ಸಾಧ್ಯತೆಗಳ ಬಗ್ಗೆ ನಿಖರವಾದ ತೀರ್ಮಾನಗಳನ್ನು ತಳೆಯಲು ಸಾಧ್ಯವಿರಬಹುದೆಂದು ಭಾವಿಸಿ ಜಾರಿಗೆ ತರುವ ವ್ಯವಸ್ಥೆಯು ಇಡೀ ಅಂಪೈರಿಂಗ್ ಕ್ಷೇತ್ರ ಮತ್ತು ಅವರ ಮನೋಧರ್ಮದ ಮೇಲೆ ನಕಾರಾತ್ಮಕ ದೂರಗಾಮಿ ಪರಿಣಾಮ ಬೀರಬಹುದು.

ಯುಡಿಆರ್‌ಎಸ್ ಪ್ರೇಕ್ಷಕರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡಿದೆ ಮತ್ತು ಆಟದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂಬುದು ಇನ್ನೊಂದು ವಾದವಾಗಿದೆ. ಈಗ ಕ್ರಿಕೆಟ್‌ಗಿರುವ ವಿಶ್ವಾಸಾರ್ಹತೆಯು ಹೋಗಿರುವುದು ಯಾವ ಯಾವ ಕಾರಣಗಳಿಂದ?

ವಾಣಿಜ್ಯೀಕರಣದಿಂದ, ಬಿಡುವೇ ಇಲ್ಲದ ಪಂದ್ಯಗಳಿಂದ, ಕುಸಿಯುತ್ತಿರುವ ಆಟಗಾರರ ಶೈಲಿಯಿಂದ, ಕ್ರಿಕೆಟ್ ಸಂಸ್ಕೃತಿಯ ಮುಖ್ಯ ಭಾಗವಾಗಿದ್ದ ವಿಧಾನ ಮತ್ತು ವ್ಯವಧಾನವನ್ನು ಹಿಂಬದಿಗೆ ತಳ್ಳಿ ದಿಢೀರ್ ಆಟದ ಶೈಲಿಯನ್ನು ಮುನ್ನೆಲೆಗೆ ತಂದಿದ್ದರಿಂದ, ಆಟಗಾರರು ಭಾಗಿಯಾಗುವ ಮ್ಯಾಚ್ ಫಿಕ್ಸಿಂಗ್‌ನಿಂದ ಮತ್ತು ಕ್ರಿಕೆಟ್‌ ಆಡಳಿತದಲ್ಲಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದ. ಕಳೆದ ಒಂದೆರಡು ದಶಕಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಮತ್ತು ಆಡಳಿತದ ವಿಧಿ ವಿಧಾನಗಳನ್ನು ಗಮನಿಸಿದರೆ ಕೆಟ್ಟ ಅಥವಾ ಅಪ್ರಾಮಾಣಿಕವಾದ ಅಂಪೈರಿಂಗ್ ತೀರ್ಮಾನಗಳಿಂದ ಆಟದ ಘನತೆಗೆ ಧಕ್ಕೆಯಾಗಿರುವ ಸಂದರ್ಭಗಳು ತೀರಾ ಕಡಿಮೆ.  ಉಗುರಿಗೆ ಚುಚ್ಚಿಕೊಂಡಿರುವ ಸಿಬುರನ್ನು ತೆಗೆಯಲು ಕೊಡಲಿ ನಿಷ್ಪ್ರಯೋಜಕ ಮತ್ತು ಒಂದೊಮ್ಮೆ ಅದನ್ನು ಬಳಸಿದರೆ ಸಿಬುರು ವ್ರಣವಾಗುತ್ತದೆ.

ಕ್ರಿಕೆಟ್‌ನ ಟೆಲಿಪ್ರಸಾರ ಪ್ರಾರಂಭವಾಗುವ ಮುಂಚಿನ ದಿನಗಳಲ್ಲಿ ವೀಕ್ಷಕ ವಿವರಣೆ ನೀಡುವವರಿಗೆ ಕೆಲವು ಸೂತ್ರಗಳಿದ್ದವು. ಅವರು ನೀಡುವ ವಿವರಣೆಯು ಭಾವೋದ್ವೇಗದಿಂದ ಕೂಡಿರಬಾರದು, ಅತಿರಂಜಿತವಾಗಿರಬಾರದು, ವಸ್ತುನಿಷ್ಠವಾಗಿರಬೇಕು, ಹಾಗಿಲ್ಲದೆ ಹೋದರೆ ಆಟಗಾರರು ಅಂಪೈರ್‌ಗಳ  ಮೇಲೆ ಅನಗತ್ಯವಾದ ಮಾನಸಿಕ ಒತ್ತಡ ಸೃಷ್ಟಿಯಾಗುತ್ತದೆಂಬುದೇ  ಆ ಸೂತ್ರ.

ಭಾವೋದ್ವೇಗದಿಂದ, ಕೀರಲು ಧ್ವನಿಯಲ್ಲಿ, ಅತಿಯಾದ ದೇಶಪ್ರೀತಿಯಿಂದ ವಿವರಣೆ ನೀಡುತ್ತಿದ್ದ ಕೆಲವು ವರದಿಗಾರರು ಕೆಲಸ ಕಳೆದುಕೊಂಡದ್ದೂ ಉಂಟು.  ಹಾಗಿದ್ದೂ ಕೆಲಸ ಉಳಿಸಿಕೊಂಡ ಕೆಲವರಿಗೆ ವೀಕ್ಷಕರು, ಪ್ರೇಕ್ಷಕರು, ಆಟಗಾರರು, ಕೊನೆಯದಾಗಿ ಅಂಪೈರ್‌ಗಳು ಯಾವುದೇ ರೀತಿಯ ಗೌರವವನ್ನೂ ನೀಡುತ್ತಿರಲಿಲ್ಲ.

ಆ ದಿನಗಳಿಗೆ ಹೋಲಿಸಿದರೆ ಈಗ ನಾವು ಎಲ್ಲಿಗೆ ಬಂದು ತಲುಪಿದ್ದೇವೆ? ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ? ಮನುಷ್ಯರು ತಪ್ಪು ಮಾಡಲೇಬಾರದು ಮತ್ತು ಅವರು  ಮಾಡಬಹುದಾದ ತಪ್ಪುಗಳೆಂದು ನಾವು ಊಹಿಸುವಂತಹದ್ದನ್ನು ತಂತ್ರಜ್ಞಾನದಿಂದಲೇ ಪರಿಹರಿಸಿಕೊಳ್ಳಬಹುದು ಎಂಬುದು ಯಾವ ಕಾರಣಕ್ಕೂ ಕ್ರೀಡಾ ಮನೋಧರ್ಮವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT