ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷೆಯಲ್ಲ; ನಮ್ಮ ಹಕ್ಕು

ಡಿಜಿಟಲ್‌ ಜಗತ್ತಿನಲ್ಲಿ ಕನ್ನಡ
Last Updated 21 ಆಗಸ್ಟ್ 2016, 10:22 IST
ಅಕ್ಷರ ಗಾತ್ರ

ಐಟಿ ಸಾಧನಗಳಲ್ಲಿ ಭಾಷೆ, ಲಿಪಿ
ಮೂಲತಃ ಕಾಗದದ ಮೇಲೆ ಮುದ್ರಿತವಾದ ಈ ಲೇಖನವನ್ನು ನೀವು ಫೇಸ್‌ಬುಕ್‌ನಂತಹ ಸಮಾಜತಾಣದಲ್ಲೂ ಓದಬಹುದು; ಕಿಂಡಲ್‌ನಲ್ಲಿ ಮಾತ್ರ ಓದಲಾರಿರಿ! ಕಿಂಡಲ್‌ ಎಂಬುದು ಅಮೆಜಾನ್‌ ಎಂಬ ದೈತ್ಯ ಮಾರಾಟಗಾರ ಸಂಸ್ಥೆಯು ತಯಾರಿಸಿ ಮಾರುತ್ತಿರುವ ಪಠ್ಯ ಆಧಾರಿತ ಪುಸ್ತಕಗಳನ್ನು ಓದುವುದಕ್ಕೆಂದೇ ರೂಪುಗೊಂಡ ಬುಕ್‌-ರೀಡರ್.

ಕೇವಲ ಮುದ್ರಿತ ಪುಸ್ತಕಗಳನ್ನೇ ಮಾರಿ ತನ್ನ ಲಾಭವನ್ನು ಹಿಗ್ಗಿಸಿಕೊಂಡು ಬೆಳೆದ ಸಂಸ್ಥೆಯು ಈಗ ಪುಸ್ತಕಗಳ ಎಲೆಕ್ಟ್ರಾನಿಕ್‌ ಆವೃತ್ತಿಯಲ್ಲಿ ಭಾರತೀಯ ಭಾಷೆಗಳ ಬಗ್ಗೆ ತೋರುತ್ತಿರುವ ಅನಾದರವು ವಿಲಕ್ಷಣ, ಕಾರಣರಹಿತ ಮತ್ತು ಖಂಡನೀಯ.

ಭಾರತದಲ್ಲಿ ಇಂಗ್ಲಿಷಿಗಿಂತ ಹೆಚ್ಚಾಗಿ ಭಾರತೀಯ ಭಾಷೆಗಳಲ್ಲೇ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ; ಮಾರಾಟವಾಗುತ್ತವೆ. ಆದರೆ ಕಿಂಡಲ್‌, ಆ್ಯಪಲ್‌ ಬುಕ್‌ ರೀಡರ್‌ಗಳಲ್ಲಿ ಕನ್ನಡಕ್ಕಾಗಲಿ, ಭಾರತೀಯ ಭಾಷೆಗಳಿಗಾಗಲಿ ಬೆಂಬಲ ಇಲ್ಲ.

ಇದು ಭಾಷಾ ವಸಾಹತುಶಾಹಿಯ ಇನ್ನೊಂದು ಕೆಟ್ಟ ಅವತಾರ. 1800 ಜನ ಮಾತನಾಡುವ ಕೆರ್ನೋವೆಶ್‌, 100 ಜನ ಮಾತನಾಡುವ ಮ್ಯಾಂಕ್ಸ್‌, 3.5 ಲಕ್ಷ ಜನರಿರುವ ಪ್ರೋವೆನ್ಸಾಲ್‌, 4.8 ಲಕ್ಷ ಜನರಿರುವ ಫ್ರಿಶಿಯನ್‌ ಭಾಷೆಗಳಿಗೆ ಬೆಂಬಲ ನೀಡುವ ಕಿಂಡಲ್‌ನಲ್ಲಿ ಭಾರತೀಯ ಭಾಷೆಗಳು ತಮ್ಮ ಪಾಳಿಗೆ ಕಾಯಬೇಕಿದೆ!  ಆ್ಯಪಲ್‌ ಐಬುಕ್‌ನ ಕಥೆಯೂ ಭಿನ್ನವಾಗೇನಿಲ್ಲ.

ಅದು ಭಾರತದ ಎಂಟನೇ ಪರಿಚ್ಛೇದದಲ್ಲಿ ಇರುವ ಉರ್ದು ಮತ್ತು ತಮಿಳು ಭಾಷೆಗಳಿಗೆ ಬೆಂಬಲ ಇಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ. ಉಳಿದ ಭಾಷೆಗಳು ಇದ್ದಿದ್ದೇ ಅದರ ಗಮನಕ್ಕೆ ಬಂದಂತಿಲ್ಲ ಬಿಡಿ.

ಎಲ್ಲ ಇ-ಬುಕ್‌ ರೀಡರ್‌ಗಳೂ ಇದೇ ಧಿಮಾಕನ್ನು ತೋರಿಸಿಲ್ಲ. ಗೂಗಲ್‌ ಪ್ಲೇಬುಕ್ಸ್‌ (ಇದು ಆ್ಯಪ್‌), ವಿಂಕ್ ಮತ್ತು ಕೊಬೋ ಮಾತ್ರ ಭಾರತೀಯ ಭಾಷೆಗಳಿಗೆ ನಿರ್ಬಂಧವಿಧಿಸಿಲ್ಲ. ಇನ್ಫಿಬೀಮ್‌ ಸಂಸ್ಥೆಯ ಪೈ ಬುಕ್‌ ರೀಡರ್‌ನಲ್ಲೂ ಎಲ್ಲ ಭಾರತೀಯ ಭಾಷೆಗಳು ಲಭ್ಯ.

ಭಾರತೀಯ ಭಾಷಾ ಲಿಪಿಗಳೂ ಯುನಿಕೋಡ್‌ ಮಾನದಂಡಕ್ಕೆ ಅನುಗುಣವಾಗಿ ರೂಪುಗೊಂಡು ದಶಕ ಸಂದಿದೆ. ಹತ್ತಾರು ಬಗೆಯ ಕೀಲಿಮಣೆಗಳು, ಫಾಂಟುಗಳು ಬಂದಿವೆ. ಯುನಿಕೋಡ್‌ ಫಾಂಟ್‌ ಆಧಾರಿತ ಪೇಜಿನೇಶನ್‌ ತಂತ್ರಾಂಶಗಳೂ ಬರತೊಡಗಿವೆ.

ಹೀಗೆ ಆನ್‌ಲೈನ್‌ ಫಾಂಟ್‌ಗಳೇ ಮುದ್ರಣಕ್ಕೆ ಬಂದಿರುವಾಗ ಕಿಂಡಲ್‌ನಂಥ, ಪಠ್ಯವೇ ಮುಖ್ಯವಾಗಿರುವ ಎಲೆಕ್ಟ್ರಾನಿಕ್‌ ಸಾಧನದಲ್ಲಿ ಕನ್ನಡದ ಫಾಂಟ್‌ ಇಲ್ಲ ಎನ್ನುವುದು ಯುನಿಕೋಡ್‌ ಕ್ರಾಂತಿಗೇ ಅವಮಾನ.

ಕಿಂಡಲ್‌ನಂಥ ಸಾಧನಗಳಲ್ಲಿ ಕನ್ನಡ ಪುಸ್ತಕಗಳು, ವಿಷಯ ವಸ್ತುಗಳು (ಲ್ಯಾಂಗ್ವೇಜ್‌ ಕಂಟೆಂಟ್‌) ಇರಬೇಕು ಎನ್ನುವುದು ಒಂದು ಮಹತ್ವದ ಬೇಡಿಕೆಯಾದರೆ, ಈ ಸಾಧನಗಳ ಬಳಕೆಯ ಮಾಧ್ಯಮವೂ (ಲ್ಯಾಂಗ್ವೇಜ್‌ ಇಂಟರ್‌ಫೇಸ್‌) ಭಾರತೀಯ ಭಾಷೆಗಳಲ್ಲಿ ಇರಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲ.

ಗೂಗಲ್‌ ಸಂಸ್ಥೆಯು ಇದನ್ನು ಎಲ್ಲರಿಗಿಂತ ಮೊದಲು ಅರಿತು ಹೆಜ್ಜೆ ಇಟ್ಟಿದೆ. ಆಂಡ್ರಾಯ್ಡ್‌ ಆಧಾರಿತ ಆ್ಯಪ್‌ಗಳಲ್ಲಿ ಭಾಷಾ ಪುಸ್ತಕಗಳನ್ನು, ಪತ್ರಿಕೆ, ನಿಯತಕಾಲಿಕಗಳನ್ನು ಓದುವುದು ಒಂದು ಹೊಸ ವಾಣಿಜ್ಯ ಚಟುವಟಿಕೆಯಾಗಿದೆ.

ಇಲ್ಲಿ ಇನ್ನೊಂದು ಬೆಳವಣಿಗೆಯನ್ನೂ ಗಮನಿಸಬೇಕು. ಒಂದೆಡೆ ಚಿಕ್ಕಪುಟ್ಟ ಇ-ಬುಕ್‌ ಮಾರಾಟ ಸಂಸ್ಥೆಗಳು ಜನಪ್ರಿಯ ಲೇಖಕರ ಹಿಂದೆ ಬಿದ್ದು ವ್ಯವಹಾರ ಕುದುರಿಸುತ್ತವೆ. ಆದರೆ ಕಿಂಡಲ್‌ನಂಥ ವೇದಿಕೆಗಳ ಮುಂದೆ ಲೇಖಕರು ಸಾಲುಹಚ್ಚಿ ನಿಲ್ಲಬೇಕಾಗಿದೆ.

ಇನ್ನೊಂದೆಡೆ ಮಧ್ಯಮ ಸ್ತರದ ಇ-ಬುಕ್‌ ರೀಡರ್‌ಗಳು ಭಾಷಾ ಬೆಂಬಲ ಕೊಡುತ್ತವೆ; ಕಿಂಡಲ್‌ಗೆ ನಾವು ತಗ್ಗಿ ಬಗ್ಗಿ ಕೇಳಬೇಕು. ಇದೊಂಥರ ಸ್ಥಳೀಯ ಮತ್ತು  ಬಹುರಾಷ್ಟ್ರೀಯ ಸಂಸ್ಥೆಗಳ ನಡುವಣ ಸಮರವೂ ಆಗಿಬಿಟ್ಟಿದೆ.

ಬ್ರ್ಯಾಂಡ್‌ ಇರುವ ಪ್ರಕಾಶನ ಸಂಸ್ಥೆಗಳಿಂದ ಹೊರತಾಗಿ ಲೇಖಕರೇ ಸ್ವತಂತ್ರವಾಗಿ ಪುಸ್ತಕ ಪ್ರಕಟಿಸುವ ಹೊಸ ವಿದ್ಯಮಾನವಾದ ‘ಇಂಡೀ ಪಬ್ಲಿಶಿಂಗ್‌’ನ ಪ್ರಮಾಣ ದಿನೇದಿನೇ ಹೆಚ್ಚುತ್ತಿರುವಾಗ ಭಾಷಾ ಬೆಂಬಲವೂ ಮಾರುಕಟ್ಟೆ ಆಧಾರಿತವಾಗುತ್ತಿದೆ.

ಕೇಂದ್ರ ಸರ್ಕಾರದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾಗವಾದ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿ-ಡ್ಯಾಕ್‌), ಅದರ ಮೇಲ್ವಿಚಾರಣಾ ಸಂಸ್ಥೆಯಾದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (ಡೀಟಿ), ಟೆಕ್ನಾಲಜಿ ಡೆವಲಪ್‌ಮೆಂಟ್‌ ಫಾರ್‌ ಇಂಡಿಯನ್‌ ಲ್ಯಾಂಗ್ವೇಜಸ್‌ (ಟಿಡಿಐಲ್‌) ಇವು ಭಾರತೀಯ ವಿಜ್ಞಾನ ಸಂಸ್ಥೆ, ವಿವಿಧ ಐಐಟಿಗಳೊಂದಿಗೆ ಸೇರಿಕೊಂಡು ಹಲವು ಭಾಷಾ ತಂತ್ರಾಂಶಗಳನ್ನು ರೂಪಿಸಿವೆ.

2003ರಿಂದ ಆರಂಭವಾದ ಈ ಭಾಷಾ ತಂತ್ರಜ್ಞಾನ ಕ್ರಾಂತಿಯು 2004ರಲ್ಲಿ ಪರಾಕಾಷ್ಠೆ ತಲುಪಿ, ಆನಂತರದ ಹತ್ತು ವರ್ಷಗಳಲ್ಲಿ ಕ್ಷೀಣಿಸಿತು. ಈ ಸಂಸ್ಥೆಗಳ ವಿವಿಧ ವಾರ್ಷಿಕ ವರದಿಗಳನ್ನು ಓದಿ, ಹಲವು ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲು ವಿಫಲನಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಅರೆಬರೆ ಉತ್ತರಗಳನ್ನು ಪಡೆದ ನಾನು ಕಂಡುಕೊಂಡಿದ್ದಿಷ್ಟೆ:

2005-2014ರ ಅವಧಿಯಲ್ಲಿ ಈ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಬಳಸಿಯೂ ಭಾರತೀಯ ಭಾಷೆಗಳ ತಂತ್ರಾಂಶಗಳನ್ನು ಸಾರ್ವಜನಿಕ ಬಳಕೆಗೆ ಕೊಡಲು ವಿಫಲವಾದವು.

‘ಮುಕ್ತ ಬಳಕೆಗೆ’ ಎಂಬ ಘೋಷಣೆಯಡಿ ಟಿಡಿಐಲ್‌ ರೂಪಿಸಿದ ಹಲವು ತಂತ್ರಾಂಶಗಳು ಒಂದೋ ಕೈಗೆ ಸಿಗುತ್ತಿಲ್ಲ; ಸಿಕ್ಕಿದರೆ ಅವು ಈಗಿನ ಆಪರೇಟಿಂಗ್‌ ವ್ಯವಸ್ಥೆಗಳಿಗೆ ತಕ್ಕಂತೆ ಮೇಲ್ದರ್ಜೆಗೇರಿಲ್ಲ. ಹೊಸ ಸರ್ಕಾರ ಬಂದಮೇಲೆ ಒಂದಷ್ಟು ಪ್ರಯತ್ನಗಳು ನಡೆದಿವೆ; ಆಗಬೇಕಾದ್ದು ಬಾಕಿ ಇದೆ.

ಕರ್ನಾಟಕ ಸರ್ಕಾರವು 76 ಲಕ್ಷ ರೂಪಾಯಿ ಖರ್ಚು ಮಾಡಿ ತಯಾರಿಸಿದ್ದು ಯಾರೂ ಬಳಸಲಾಗದ ಯುನಿಕೋಡ್‌ ಫಾಂಟ್‌ಗಳು, ಅವೈಜ್ಞಾನಿಕ ಯುನಿಕೋಡ್‌ ಪರಿವರ್ತಕ, ಅಂಧರಿಗೆ ಅಪ್ರಯೋಜಕವಾದ ಬ್ರೈಲ್‌ ಕೀಲಿಮಣೆ! ಇವನ್ನು ನಮ್ಮಲ್ಲಿ ಎಷ್ಟು ಜನ ಬಳಸುತ್ತಿದ್ದಾರೆ?

ಯುನಿಕೋಡ್‌ ಬಳಕೆ ಕಡ್ಡಾಯ ಮಾಡಿದ ಸುತ್ತೋಲೆ ಬಂದು ಮೂರು ವರ್ಷಗಳಾದವು; ಆದರೆ ಅದರ ದಕ್ಷ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ. ಅಂದಮೇಲೆ ಈ ಸರ್ಕಾರಗಳು ಖಾಸಗಿ ಉತ್ಪನ್ನಗಳಲ್ಲಿ ಭಾಷಾ ಪ್ರಾತಿನಿಧ್ಯ ಕೇಳುವುದಾದರೂ ಹೇಗೆ? ಉಳಿದ ರಾಜ್ಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 

ಭಾಷಾ ತಂತ್ರಜ್ಞಾನಗಳನ್ನು ರೂಪಿಸುವುದು ಇಡೀ ಭಾಷಾ ತಂತ್ರಾಂಶ ಬೆಳವಣಿಗೆಯ ಮೊದಲರ್ಧ ಹೊಣೆಗಾರಿಕೆ. ಭಾಷೆಗಳನ್ನು ಅಳವಡಿಸಿಕೊಳ್ಳುವಂತೆ ಸಾಧನ-ಸಲಕರಣೆಗಳ ಉತ್ಪಾದಕರ ಮೇಲೆ ಒತ್ತಡ ಹೇರಬೇಕಾದ್ದು ಇನ್ನರ್ಧದ ಕೆಲಸ.

ಇದಕ್ಕೆ ಕೇವಲ ತಂತ್ರಜ್ಞಾನ ಇಲಾಖೆಯಷ್ಟೇ ಅಲ್ಲ, ವಾಣಿಜ್ಯ ಇಲಾಖೆಯೂ ಕೈಜೋಡಿಸಬೇಕಿದೆ. ಉತ್ಪನ್ನಗಳ ಮಾನಕೀಕರಣ ಕುರಿತಂತೆ ಪ್ರಾಚೀನ ಮುದ್ರಣ ಯುಗ ಆಧಾರಿತ ಕಾಯ್ದೆಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕಿದೆ.

ಕಳೆದ ಫೆಬ್ರುವರಿಯಲ್ಲಿ ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ಒಂದು ಸುತ್ತೋಲೆ ಹೊರಡಿಸಿ ಮೊಬೈಲ್‌ಗಳಲ್ಲಿ ಇಂಗ್ಲಿಷ್‌ ಜೊತೆಗೆ ಹಿಂದಿ ಮತ್ತು ಯಾವುದಾದರೂ ಒಂದು ಭಾರತೀಯ ಭಾಷೆಯ ಕೀಲಿಮಣೆಯನ್ನು ಅಳವಡಿಸಬೇಕು; 22 ಭಾಷೆಗಳನ್ನೂ ಓದಲು ಬರುವಂತಿರಬೇಕು ಎಂದು ಸೂಚಿಸಿದೆ. ಇದನ್ನು ಓದಿ ಹೌಹಾರಿದ ಮೊಬೈಲ್‌ ಸಂಸ್ಥೆಗಳು ಫೀಚರ್‌ ಮೊಬೈಲ್‌ಗಳಲ್ಲಿ ಇದು ಅಸಾಧ್ಯ ಎಂದು ಅಹವಾಲು ಸಲ್ಲಿಸಲು ಮುಂದಾಗಿವೆ.

ವಾಸ್ತವದಲ್ಲಿ ಯುನಿಕೋಡ್‌ ಬೆಂಬಲ ಇರುವ ಎಲ್ಲ ಮೊಬೈಲ್ ಆಪರೇಟಿಂಗ್‌ ವ್ಯವಸ್ಥೆಗಳಲ್ಲೂ ಈ ಷರತ್ತನ್ನು ಪಾಲಿಸಬಹುದು. ಫೀಚರ್‌ ಫೋನಿನಲ್ಲಿ ಸೂಕ್ತ ತಂತ್ರಜ್ಞಾನ ರೂಪಿಸುವುದು ಕಷ್ಟವೇನಲ್ಲ.

ಅತಿ ಖಾಸಗೀಕರಣದ ಫಲವಾಗಿ ತಂತ್ರಜ್ಞಾನ ಮುಂದುವರಿದಂತೆಲ್ಲ, ಅವುಗಳನ್ನು ಅಳವಡಿಸುವುದೇ ಸಮಸ್ಯೆಯಾಗಿದೆ. ಆದರೆ ಕಿಂಡಲ್‌ನಂತಹ ಸಾಧನಗಳಿಗೆ ಇದಾವುದೂ ಕಷ್ಟವಲ್ಲ. ಕಿಂಡಲ್‌ನಲ್ಲಿ ಕನ್ನಡ ಇರಲಿ ಎಂದು ಕೇಳುವುದು ಗುಲಾಮಗಿರಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಕನ್ನಡವೇಕೆ, ಯಾವ ಭಾರತೀಯ ಭಾಷಾ ಲೇಖಕರೂ ಕಿಂಡಲ್‌ ಮುಂದೆ ಕೈಯೊಡ್ಡಿ ನಿಲ್ಲಬಾರದು. ಆದರೆ ಕಿಂಡಲ್‌ ಪಠ್ಯ ಆಧಾರಿತ ಅನುಕೂಲಗಳನ್ನು ಹೊಂದಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ನೂರಾರು ಸಾಧನಗಳ ಸಂಕೇತ ಮಾತ್ರ.

‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌’ ಎಂಬುದೇ ಮುಂದಿನ ದೊಡ್ಡ ಮಾಹಿತಿ ಕ್ರಾಂತಿ ಎಂಬ ಚರ್ಚೆ ಎಲ್ಲೆಡೆ ನಡೆದಿದೆ. ಮನೆಬಳಕೆಯ ಹತ್ತು ಹಲವು ಸಾಧನಗಳು, ವಾಹನಗಳು, ಕಟ್ಟಡಗಳು ಎಲ್ಲವೂ ಪಠ್ಯದ, ಮಾತಿನ ಆದೇಶದ ಅನುಸಾರ ವರ್ತಿಸುತ್ತವೆ. ಕಿಂಡಲ್‌ನಲ್ಲಿ ಕನ್ನಡ ಇರಲಿ ಎಂದು ಆಶಿಸುವುದು ಅತ್ಯಂತ ಚಿಕ್ಕ ಬೇಡಿಕೆ. ಇಲ್ಲವಾದರೆ, ವಸ್ತುಗಳಿಗೆ ಆದೇಶ ಕೊಡುವಾಗಲೂ ನಾವು ಇಂಗ್ಲಿಷ್‌ ಭಾಷೆಯ ಮೊರೆ ಹೋಗಬೇಕಾಗುತ್ತದೆ.

ಈಗ ಚಾಲ್ತಿಯಲ್ಲಿರುವ ಸ್ಮಾರ್ಟ್‌ ಟಿ.ವಿ.ಗಳು ಕೇವಲ ಇಂಗ್ಲಿಷನ್ನೇ ಬಳಸಿವೆ; ಇದು ಭಾರತೀಯ ಭಾಷೆಗಳು ಎದುರಿಸಬೇಕಾದ ದುರಂತಕ್ಕೆ ಮುನ್ನುಡಿ. ಮುಂದಿನ ಪೀಳಿಗೆಯು ನಮ್ಮ ಭಾಷೆಗಳನ್ನು ಕಲಿಯುವುದಿಲ್ಲ ಎಂಬುದಿರಲಿ, ಹಿಂದಿನ ಪೀಳಿಗೆಯವರೂ ಭಾಷೆ ಮರೆಯಬೇಕಾದ ಪ್ರಸಂಗ ಅದಾಗಲೇ ಬಂದುಬಿಟ್ಟಿದೆ.

ಪ್ರಸ್ತಾವಿತ ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣದ ಬಗ್ಗೆ ಕಾಳಜಿ ತೋರಿರುವ ಕೇಂದ್ರ ಸರ್ಕಾರವು ಐಟಿ ಸಾಧನಗಳಲ್ಲಿ ಭಾಷೆಗಳು ಇರುವಂತೆ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿಯೇ ನಾನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರನ್ನು ಉದ್ದೇಶಿಸಿ ಆನ್‌ಲೈನ್‌ ಅರ್ಜಿ ಚಳವಳಿಯನ್ನು ಆರಂಭಿಸಿದ್ದೇನೆ. ಕನ್ನಡಿಗರು ಈ ಅರ್ಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಹಾಕಿದರೆ ಕನ್ನಡದ ಜೊತೆಗೇ ಉಳಿದೆಲ್ಲ ಭಾಷೆಗಳಿಗೂ ಸ್ಥಾನ ಸಿಗುವ ಸಾಧ್ಯತೆ ಇದೆ.

ಕಿಂಡಲ್‌ನಲ್ಲಿ ಕನ್ನಡ ಬಳಸುವುದರಿಂದ ಕಾಗದದ ಪುಸ್ತಕಗಳ ಮಾರಾಟ ಕುಸಿಯುತ್ತದೆ ಎಂಬ ವಾದ ಹುರುಳಿಲ್ಲದ್ದು. ಇ-ಪುಸ್ತಕಗಳ ಮಾರಾಟ ಏರಿ, ಇಳಿದು ಸ್ಥಿರವಾಗಿದೆ, ಕಾಗದದ ಪುಸ್ತಕಗಳ ಮಾರಾಟ ಹೆಚ್ಚಾಗಿದೆ. ಈ ಬೆಳವಣಿಗೆಗೂ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಸಂಸ್ಥೆಗಳೇ ಕಾರಣ.

ಇ-ಪುಸ್ತಕಗಳನ್ನು ಮಾರಿ ದುಡ್ಡು ಮಾಡುವ ಅಮೆಜಾನ್‌ ರಾಕ್ಷಸನೂ ಅಲ್ಲ; ನಮ್ಮೆಲ್ಲರ ಸ್ಟೇಟಸ್‌ಗಳಿಂದಲೇ ದುಡ್ಡು ಮಾಡುವ ಫೇಸ್‌ಬುಕ್‌ ದೇವತೆಯೂ ಅಲ್ಲ. ಮ್ಯಾಗ್ನಟ್ಯೂನ್‌ನಂತಹ ಸಂಸ್ಥೆಗಳು ಹತ್ತು ವರ್ಷಗಳಿಂದಲೇ ಸಂಗೀತಗಾರರಿಗೇ ಅವರ ಆಲ್ಬಮ್‌ಗಳ ಮುಖಬೆಲೆಯ ಅರ್ಧದಷ್ಟು ಹಣ ತಲುಪಿಸಿ, ಸಂಗೀತ ಮಾರುವ ಕಂಪೆನಿಗಳಿಗೆ ಚಿಕ್ಕ ಪ್ರಮಾಣದಲ್ಲಾದರೂ ಸೆಡ್ಡು ಹೊಡೆದಿವೆ.

ನೇರ ಮಾರಾಟದಿಂದ ಪುಸ್ತಕ ದಲ್ಲಾಳಿಗಳು ಕಡಿಮೆಯಾಗುತ್ತಾರೆಯೇ ಹೊರತು ಪುಸ್ತಕ ಸಂಸ್ಕೃತಿಗೆ ಧಕ್ಕೆ ಆಗದು; ಲೇಖಕರಿಗೂ ಹೆಚ್ಚಿನ ಶೇಕಡಾವಾರು ಲಾಭಾಂಶ ಸಿಗುತ್ತದೆ. ಪುಸ್ತಕ ಮಾರುವವರು ತಮ್ಮ ವರಮಾನದ ಮೂಲ ಬದಲಿಸಿಕೊಳ್ಳುವುದು ಅನಿವಾರ್ಯ.

ವಿಶ್ವದ ಅತಿದೊಡ್ಡ ಭಾಷಾ ಮಾರುಕಟ್ಟೆಯಾದ ಭಾರತದಲ್ಲಿ ಮಾರಾಟವಾಗುವ ಸಾಧನಗಳಲ್ಲಿ ಭಾಷಾ ತಂತ್ರಾಂಶಗಳಿರಲಿ ಎಂದು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿರುವುದು ವಿಚಿತ್ರವಾದರೂ ನಿಜ. ಹಾಗಂತ ಇದೇನು ಭಿಕ್ಷೆಯಲ್ಲ, ಖರೀದಿದಾರರಾದ ನಮ್ಮ ಹಕ್ಕು. ಡಿಜಿಟಲ್‌ ಮಾಧ್ಯಮದಲ್ಲಿ ನಮ್ಮ ಭಾಷೆ-ಲಿಪಿಗಳು ಕಾಣಿಸಿಕೊಳ್ಳದಿದ್ದರೆ, ನಮ್ಮ ಜಾನಪದ, ದೇಸೀಯತೆ, ಪರಂಪರೆಯನ್ನೂ ಕಳೆದುಕೊಳ್ಳುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT