ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದ ಮಾದರಿ ಶಿಕ್ಷಕಿ ಹನನ್ ಅಲ್‌ಹುರೂಬ್

Last Updated 9 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ಯಾಲೆಸ್ಟೈನ್ ಅಂದ ತಕ್ಷಣ ಕಣ್ಣೆದುರಿಗೆ ಗೋಚರಿಸುವುದು ಯುದ್ಧದ ಭೀತಿ! ಅಲ್ಲಿ ನಿತ್ಯವೂ ಆಕ್ರಂದನ, ಹೊಡೆದಾಟ, ರಕ್ತದೋಕುಳಿಯಾಟ. ರಾಶಿ ರಾಶಿ ಹೆಣಗಳು ಧರೆಗೆ ಉರುಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಅಲ್ಲಿಯ ಮರಳುಗಾಡಿನಲ್ಲಿ ಸದೃಢವಾಗಿ ಬೆಳೆದಿರುವ ಆಲಿವ್ ಮರಗಳ ಬೇರಿನಂತೆ ಮೂಲಭೂತವಾದವೂ ಆಳವಾಗಿ ಬೇರು ಬಿಟ್ಟದೆ. ದಿನಂಪ್ರತಿ ಒಂದು ಕಡೆ ಶತ್ರು(ಇಸ್ರೇಲ್) ಪಾಳೆಯದವರು, ಮತ್ತೊಂದು ಕಡೆ ಮೂಲಭೂತವಾದಿ ಸರ್ಕಾರದ ಸೈನಿಕರು ಯಾವ ಕ್ಷಣದಲ್ಲಾದರೂ ದಾಳಿ ಮಾಡಬಹುದಾದ ಅನಿಶ್ಚಿತತೆಯಲ್ಲಿ ಬದುಕು ಸಾಗುತ್ತಿರುತ್ತದೆ.

ಕಳೆದ ಮಾರ್ಚ್ 16 ; ಅದು ಪ್ಯಾಲಿಸ್ಟೀನ್ ಮತ್ತು ಇಸ್ರೇಲ್‌ದೇಶದ ಗಡಿಯಲ್ಲಿರುವ ಅಲ್-ಬಿರಹ್ ಎಂಬ ಸಣ್ಣಪಟ್ಟಣ ಸಂತಸದ ಕಡಲಲ್ಲಿ ತೇಲಿತ್ತು. ಯಾವಾಗಲೂ ಭಯದ ನಡುವೆ ಕಾಲ ಕಳೆಯುತ್ತಿದ್ದ ನಿರಾಶ್ರಿತತಾಣದಲ್ಲಿ ಖುಷಿ ಮನೆಮಾಡಿತ್ತು. ಕಾರಣ ಜಗತ್ತಿನ ಅತಿ ದೊಡ್ಡ ಮೊತ್ತದ ಗ್ಲೋಬಲ್ ಟೀಚರ್ ಪ್ರಶಸ್ತಿ ಇದೇ ನಿರಾಶ್ರಿತತಾಣದ ಶಿಕ್ಷಕಿ ಹನನ್ ಅಲ್‌ಹುರೂಬ್‌ಗೆ ದೊರೆತಿತ್ತು.

ಪ್ರಶಸ್ತಿಯ ಮೊತ್ತ ಎಂಟು ಕೋಟಿ ರೂಪಾಯಿಗಳು. ಇಷ್ಟು ದೊಡ್ಡ ಮೊತ್ತದ ಪ್ರಶಸ್ತಿ ನೀಡುತ್ತಿರುವವರು ಮತ್ತ್ಯಾರು ಅಲ್ಲ, ಭಾರತೀಯ ಮೂಲದ ಸನ್ನಿ ವರ್ಕೆ ಎನ್ನುವುದು ವಿಶೇಷ. ಈ ಪ್ರಶಸ್ತಿ 2015ರಿಂದ ಪ್ರತಿ ವರ್ಷ ಕೇವಲ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತದೆ. ಹನನ್ ಅಲ್‌ಹುರೂಬ್‌ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಎರಡನೆಯವರು. ಈ ಪ್ರಶಸ್ತಿಗೆ ತುಂಬಾ ಪೈಪೋಟಿ ಇರುತ್ತದೆಯಾದರೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ.

ಪ್ರಶಸ್ತಿಯ ಕೊನೆಯ ಸುತ್ತಿಗೆ ಅಸ್ಟ್ರೇಲಿಯಾ, ಫಿನ್‌ಲ್ಯಾಂಡ್, ಬ್ರಿಟನ್, ಯು.ಎಸ್.ಎ., ಪ್ಯಾಲಿಸ್ಟೈನ್ ಮತ್ತು ನಮ್ಮ ಭಾರತದಿಂದ (ಮುಂಬೈಯ ಕಾಮಾಟಿಪುರದಲ್ಲಿ ನಿರಾಶ್ರಿತ ಹಡುಗಿಯರಿಗಾಗಿಯೇ ಶಾಲೆಯೊಂದನ್ನು ನಡೆಸುತ್ತಿರುವ ರಾಬಿನ್ ಚೌರಾಸಿಯಾ)  ಹತ್ತು ಉತ್ತಮ ಶಿಕ್ಷಕರು ಅಂತಿಮ ಹಂತಕ್ಕೆ ಬಂದಿದ್ದರು. ಪೋಪ್ ಫ್ರಾನ್ಸಿಸ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ಯಾಲೆಸ್ಟೈನ್ ದೇಶದ ಶಿಕ್ಷಕಿ ಹನನ್ ಅಲ್‌ಹುರೂಬ್‌ರನ್ನು ಪ್ರಶಸ್ತಿ ವಿಜೇತರೆಂದು ಘೋಷಿಸಿದಾಗ ದುಬೈನಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರಂಭ ಭಾವಪರವಶವಾಗಿತ್ತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಲ್‌ಹುರೂಬ್‌ ‘ನಮ್ಮ ಶಾಲೆಗೆ ದೂರದ ಊರುಗಳಿಂದ ಮಕ್ಕಳು ಬರುತ್ತಾರೆ. ಅವರಂತೆ ಶಿಕ್ಷಕರೂ ಬರುತ್ತಾರೆ. ಮತ್ತೆ ಮರಳಿ ಎಲ್ಲರೂ ಮನೆಗೆ ಹೋಗುತ್ತಾರೆ. ಆದರೆ ಅವರ ಮುಖದಲ್ಲಿ ಬದುಕಿನ ವಿಶ್ವಾಸಕ್ಕಿಂತ ಸಾವಿನ ಭಯ ಎದ್ದು ಕಾಣುತ್ತಿರುತ್ತದೆ. ಇಲ್ಲಿಯ ಮಕ್ಕಳು ಪಾಪದವರು.

ವಿಶ್ವದ ಎಲ್ಲ ಮಕ್ಕಳು ಪಾಲಕರ ಪ್ರೀತಿ ಹಾಗೂ ಹಕ್ಕಿಗಳ ಕಲರವದ ಧ್ವನಿ ಕೇಳುತ್ತಾ ಬೆಳೆದರೆ ಇವರು ಸದಾ ಬಂದೂಕು ಮತ್ತು ಬಾಂಬಿನ ಸದ್ದು ಕೇಳುತ್ತ ಬೆಳೆಯುತ್ತಿದ್ದಾರೆ’ ಎನ್ನುತ್ತ ವೇದಿಕೆಯ ಮೇಲೆ ಕಣ್ಣೀರಿಡುತ್ತಿದ್ದಂತೆ ಇಡೀ ಸಭಾಂಗಣವೇ ಶೋಕಸಾಗರದಲ್ಲಿ ಮುಳುಗಿ ಹೋಗಿತ್ತು. ಅದೇ ಸಂದರ್ಭಕ್ಕೆ ‘ರಕ್ತ ಚಿಮ್ಮುವ ಪಟ್ಟಣವೆಂದು ಕರೆಯಿಸಿಕೊಳ್ಳುವ ಗಲಭೆಪೀಡಿತ ನಿರಾಶ್ರಿತ ಪ್ರದೇಶವಾದ ಅಲ್-ಬಿರಹ್ ಪಟ್ಟಣವು- ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಆದ ಸಂಘರ್ಷದಲ್ಲಿ ಅಲ್ಲಿ 179 ಪ್ಯಾಲಿಸ್ಟೀನಿಯರು, 28  ಇಸ್ರೇಲಿಗಳು ಮತ್ತು ಇಬ್ಬರು ಅಮೆರಿಕನ್ನರು ಸಾವಿಗೀಡಾದ ದುರ್ಘಟನೆಯ ನೋವನ್ನು ಮರೆತು - ಅಕ್ಷರಶಃ ಸಂಭ್ರಮಾಚಾರಣೆಯಲ್ಲಿ ತೊಡಗಿತ್ತು. 

ಅಲ್‌ಹುರೂಬ್‌ಗೆ ಈ ಪ್ರಶಸ್ತಿ ಸುಮ್ಮನೆ ದೊರೆತ್ತಿದ್ದಲ್ಲ. 40ರ ಪ್ರಾಯದ ಅಲ್‌ಹುರೂಬ್‌ರ ಜೀವನ ಕಲ್ಲು–ಮುಳ್ಳುಗಳಲ್ಲಿ ಬೆಳೆದು ಬಂದಿರುವಂಥದ್ದು. ಗಲಭೆಪೀಡಿತ ನಿರಾಶ್ರಿತ ತಾಣದಲ್ಲಿಯೇ ಬೆಳೆದು, ಅದೇ ಗಲಭೆಪೀಡಿತ ಅನಾಥ ಮಕ್ಕಳಿಗೆ ಊಟ, ವಸತಿ ಮತ್ತು ಶಿಕ್ಷಣ ನೀಡುವುದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ‘ವಿ ಫ್ಲೇ ಅಂಡ್ ವಿ ಲರ್ನ್ ’ಎನ್ನುವ ಪುಸ್ತಕವನ್ನು ಬರೆದಿರುವ ಅವರು ನಮ್ಮಲ್ಲಿಯ ನಲಿ-ಕಲಿಯ ಬೋಧನಾ ವಿಧಾನದಂತೆ ಅನೇಕ ನವೀನ ಬೋಧನವಿಧಾನಗಳನ್ನು ಅವಿಷ್ಕರಿಸಿದ್ದಾರೆ. ಅವರ ಶಾಲೆಯ ಗೋಡೆಗಳು ಬಣ್ಣ ಬಣ್ಣದಿಂದ ತುಂಬಿ ತುಳುಕುತ್ತಿವೆ. ಮಕ್ಕಳಲ್ಲಿ ಆತಂಕ ಭಾವನೆಯನ್ನು ದೂರ ಮಾಡಿ ಅವರಲ್ಲಿ ಆತ್ಮವಿಶ್ವಾಸದ ಬಣ್ಣವನ್ನು ತುಂಬಿ ಶಾಂತಿಯನ್ನು ನೆಲೆಗೊಳಿಸುವಂತಹ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಹೆಣ್ಣು ಎಂದರೆ ಭೋಗದ ವಸ್ತು ಎಂದು ಭಾವಿಸಿರುವ ದೇಶಕ್ಕೆ ಪ್ರಶಸ್ತಿಯನ್ನು ಪಡೆದು ಹಿಂದಿರುಗಿದಾಗ ಪ್ಯಾಲಿಸ್ಟೀನ್ ಶಿಕ್ಷಣಮಂತ್ರಿ ಡಾ. ಸಬಾರಿ ಸೈದಂರವರೇ ವಿಮಾನ ನಿಲ್ದಾಣಕ್ಕೆ ಬಂದು ನೀವು ನಮ್ಮ ದೇಶದ ಹೆಮ್ಮೆಯ ಶಿಕ್ಷಕಿ ಎಂದು ಹೇಳಿ ಹೂಗುಚ್ಛ ನೀಡಿ ಸ್ವಾಗತಿಸಿದರು. ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಅಲ್‌ಹುರೂಬ್‌ ಕಟೌಟ್‌ಗಳು ರಾರಾಜಿಸುತ್ತಿದ್ದವು.

ಶಾಲೆಯ ಮಕ್ಕಳು ಹೂ ಗುಚ್ಛಗಳನ್ನು ಹಿಡಿದುಕೊಂಡು ತಮ್ಮ ನೆಚ್ಚಿನ ಶಿಕ್ಷಕಿಗಾಗಿ ಕಾದು ಕುಳಿತಿದ್ದರು. ಅಲ್‌ಹುರೂಬ್‌ ಮೇಡಂ ಬಂದ ತಕ್ಷಣ ಹೂಗುಚ್ಛ ನೀಡಿ ಮುದ್ದಾಡಿದರು.

ಶಿಕ್ಷಕಿಯ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಪ್ರಶಸ್ತಿಯ ಮೊತ್ತಕ್ಕಿಂತ ಮಕ್ಕಳು ತೋರುವ ಪ್ರೀತಿಯ ಭಾರ ಹೆಚ್ಚಾಗಿತ್ತು, ಒಬ್ಬ ಶಿಕ್ಷಕಿಗೆ ಇದಕ್ಕಿಂತ ದೊಡ್ಡದು ಮತ್ತೇನು ಬೇಕು? ಶಿಕ್ಷಣ ಮಕ್ಕಳ ಹಕ್ಕು. ಅದನ್ನು ಅವರು ಆಟದ ಮೂಲಕ ಖುಷಿಯಿಂದಲೇ ಸಂಪಾದಿಸಬೇಕು ಎಂದು ಹೇಳುವ ಅಲ್‌ಹುರೂಬ್‌ ವಿಶ್ವ ಶಿಕ್ಷಕ ಬಳಗಕ್ಕೆ ಪ್ರೇರಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT