ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸಾಗಲಿಲ್ಲ ಮುಂದೇನು?

Last Updated 24 ಮೇ 2015, 19:30 IST
ಅಕ್ಷರ ಗಾತ್ರ

ಪರೀಕ್ಷೆಯಲ್ಲಿ ಫೇಲಾಗುವುದು ವಿದ್ಯಾರ್ಥಿಗೆ ಆಘಾತಕಾರಿ ಅನುಭವ. ಅದರಲ್ಲೂ ವಿಶೇಷವಾಗಿ ಇಂತಹ ಫಲಿತಾಂಶ ನಿರೀಕ್ಷಿತವಾಗಿಲ್ಲದಿದ್ದರೆ. ನಿರಾಸೆ, ಭಯ, ದು:ಖ, ಅಸಹಾಯಕತೆ ಈ ಎಲ್ಲಾ ಭಾವನೆಗಳೂ ವಿದ್ಯಾರ್ಥಿಯನ್ನು ಒಮ್ಮೆಲೇ ಮುತ್ತುತ್ತವೆ.

ಸಹಪಾಠಿಗಳೆದುರು ಅವಮಾನ, ಮನೆಯವರ ಹೀಗಳಿಕೆ ಬಂಧು ಮಿತ್ರರೆದುರು ಪಾಲಕರ ಅವಮರ್ಯಾದೆ ಇದೆಲ್ಲ  ಕಣ್ಮುಂದೆ ಬಂದು ಮನಸ್ಸು ಕುಗ್ಗಿ ಹೋಗುತ್ತದೆ. ಈ ಪರಿಸ್ಥಿತಿಯಲ್ಲಿ ಅವನಿಗೆ ಸಿಗುವುದು ಮತ್ತಷ್ಟು ಮೂದಲಿಕೆ. ‘ನೋಡಿದ್ಯ? ನಾನು ಮೊದಲೇ ಹೇಳಿದ್ದೆ ಚೆನ್ನಾಗಿ ಓದು ಅಂತ. ಈಗ ನೋಡು ಮಣ್ಣು ತಿನ್ನೋ ಕೆಲಸ ಮಾಡ್ಕೊಂಡೆ’ ಎಂದು ಶಿಕ್ಷಕರು ಹೇಳಿದರೆ,  ‘ಅಯ್ಯೋ, ಹೇಗೆ ಮುಖ ಎತ್ಕೊಂಡು ತಿರುಗೋದು’ ಎಂದು ಪಾಲಕರು ಹೀಯಾಳಿಸುತ್ತಾರೆ.  

ಆದರೆ ವಿದ್ಯಾರ್ಥಿಯಾಗಲೀ, ಪಾಲಕರಾಗಲೀ, ಈ ವೇಳೆಯಲ್ಲಿ ನೆನಪಿಡಬೇಕಾದ ವಿಷಯವೆಂದರೆ ಫೇಲಾದರೆ ಜೀವನವೇ ಮುಗಿಯಿತು ಎಂದರ್ಥವಲ್ಲ. ವಿದ್ಯಾರ್ಹತೆ ಗಳಿಸಿಕೊಳ್ಳಲು ಎಲ್ಲರೂ ದಾಟುವ ಒಂದು ಮಜಲು ಅಷ್ಟೆ. ಈ ಕ್ಷಣದಲ್ಲಿ ವಾಸ್ತವವನ್ನು ಒಪ್ಪಿಕೊಂಡು  ಹೆಜ್ಜೆಯ ಬಗ್ಗೆ ಗಮನ ಹರಿಸಬೇಕೇ ಹೊರತು ಆಗಿ ಹೋಗಿದ್ದರ ಬಗ್ಗೆ ಕೊರಗಿ ಫಲವಿಲ್ಲ. ಜೀವನವೇ ಮುಳುಗಿತು ಎಂದು ಸೋಲೊಪ್ಪಿಕೊಂಡು ಸವಾಲಿಗೆ ಬೆನ್ನು ಕೊಡುವುದು ನಿಜವಾಗಿ ನಾಚಿಕೆಗೇಡು. ಜೀವನದಲ್ಲಿ ಬಹಳಷ್ಟು ವಿಷಯಗಳು ಕಷ್ಟಸಾಧ್ಯ, ಆದರೆ ಅಸಾಧ್ಯ ಅಲ್ಲ.

ಪರೀಕ್ಷೆಯೆಂಬುದು  ಯೋಗ್ಯತೆಯ ಒರೆಯೇ?
ಖಂಡಿತಾ ಅಲ್ಲ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ್ಳೊಬ್ಬರಾದ ಐನ್‌ಸ್ಟೈನ್, ಥಾಮಸ್ ಆಲ್ವ ಎಡಿಸನ್, ಜೀವ ವಿಕಾಸವಾದ ಪ್ರಖ್ಯಾತಿಯ ಚಾರ್ಲ್ಸ್ ಡಾರ್ವಿನ್ ಇವರೆಲ್ಲರೂ  ಕೂಡ ಶಾಲೆಯಲ್ಲಿ ಫೇಲಾದವರೇ! ‘ನಾನು ಕೆಲವು ವಿಷಯಗಳಲ್ಲಿ ಫೇಲಾದೆ. ಆದರೆ ನನ್ನ ಸ್ನೇಹಿತ ಎಲ್ಲದರಲ್ಲೂ ಪಾಸಾದ. ಈಗ ಅವನು ಮೈಕ್ರೋಸಾಫ್‌್ಟನಲ್ಲಿ ಎಂಜಿನಿಯರ್, ನಾನು ಮೈಕ್ರೋಸಾಫ್ಟ್  ಮಾಲೀಕ’ ಎಂದು ಬಿಲ್ ಗೇಟ್ಸ್ ಹೇಳಿದ್ದು ಕೇಳಿಲ್ಲವೇ?  ಪರೀಕ್ಷೆಯ ವೇಳೆಯಲ್ಲಿ ಆರೋಗ್ಯ ಕೈಕೊಡುವುದು, ಅನಿರೀಕ್ಷಿತ ಕೌಟುಂಬಿಕ ಅಡಚಣೆಗಳು ಮುಂತಾದ ಸಂಧರ್ಭಗಳಿಂದಾಗಿ ಆಗುವ ವೈಫಲ್ಯಕ್ಕೆ ವಿದ್ಯಾರ್ಥಿಗಳೇ  ಹೊಣೆಯಾಗಿರುವುದಿಲ್ಲ. ಇನ್ನು ಕೆಲವೊಮ್ಮೆ ಪ್ರಾಮಾಣಿಕವಾಗಿ ಓದಿ ಸಾಕಷ್ಟು ಪರಿಶ್ರಮಪಟ್ಟಿದ್ದರೂ ತೇರ್ಗಡೆಯಾಗುವುದು ಕೆಲವೇ ಅಂಕಗಳಿಂದ ತಪ್ಪಿಹೋಗುವ ಸಾಧ್ಯತೆ ಗಳಿರುತ್ತದೆ. ಹಾಗಿದ್ದಲ್ಲಿ ಅಭ್ಯಾಸ ಮಾಡುವ ವಿಧಾನ, ಪರೀಕ್ಷಾ ತಯಾರಿಯ ಬಗ್ಗೆ ಹೆಚ್ಚಿನ ಗಮನದ ಅವಶ್ಯಕತೆ ಇತ್ತು ಎಂದರ್ಥ. ಒಂದು ವೇಳೆ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸದಿದ್ದ ಪಕ್ಷದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿದ್ದಿರಬಹುದು.  

ಈ ಸಲದ ಪ್ರಯತ್ನದಲ್ಲಿ ಏನು ನ್ಯೂನ್ಯತೆಗಳಿದ್ದವು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ಅತ್ಯವಶ್ಯಕ. ಇದನ್ನು ಶಿಕ್ಷಕರು, ಪಾಲಕರು ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ಪಟ್ಟಿಮಾಡಿದರೆ ಒಳ್ಳೆಯದು.  ‘ಈ ಪರೀಕ್ಷೆ, ಓದು ಕೈಲಾದುದಲ್ಲ’ ಎಂದು ಬುದ್ಧಿಮತ್ತೆಯನ್ನು ಹಳಿಯುವುದಲ್ಲ. ಕೆಲವು ಸಲ ಪಿಯುಸಿ ಹಂತದಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಗಳ ವೈಫಲ್ಯದ ಹಿಂದೆ ಅವರು ಆಯ್ಕೆ ಮಾಡಿಕೊಂಡ ವಿಷಯ ಒಕ್ಕೂಟವೂ ಒಂದು ಕಾರಣವಿರಬಹುದು. ಇಂತಹ ಸಂದರ್ಭಗಳಲ್ಲಿ ಪೋಷಕರು ಮತ್ತು ಶಿಕ್ಷಕರೊಂದಿಗೆಚರ್ಚಿಸಿ ಡಿಗ್ರಿ ಹಂತದಲ್ಲ್ಲಿ ಅವರ ಆಸಕ್ತಿಗೆ, ಪ್ರತಿಭೆಗೆ ಅನುಗುಣವಾದ ವಿಷಯಕ್ಕೆ ಬದಲಾಯಿಸುವ ತೀರ್ಮಾನ ಕೈಗೊಂಡರೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲೇ ಪಾಸಾಗಬೇಕು ಎಂಬ ಒತ್ತಡವಿರುವುದಿಲ್ಲ. ಪಾಸಾಗುವ ಸಾಧ್ಯತೆ ಗಣನೀಯವಾಗಿ ಹೆಚ್ಚಾಗುತ್ತದೆ. ಪಿಯುಸಿಯಲ್ಲಿ ಜಸ್ಟ್ ಪಾಸಾದ ವಿದ್ಯಾರ್ಥಿಗಳು  ಬಿ.ಕಾಂ ನಲ್ಲಿ ರ್‌್ಯಾಂಕ್ ಪಡೆದ ಉದಾಹರಣೆಗಳು ಸಾಕಷ್ಟಿವೆ.

ಪಾಲಕರ ಪಾತ್ರ
ಅನಿರೀಕ್ಷಿತ ಫಲಿತಾಂಶದ ಆಘಾತದಿಂದ ವಿದ್ಯಾರ್ಥಿ ಹೊರಬರುವಲ್ಲಿ ಪಾಲಕರ ಪಾತ್ರ ಮಹತ್ವದ್ದು. ನಿರಾಸೆಯಾಗಿದ್ದರೂ ಸಾವರಿಸಿಕೊಂಡು ವಿದ್ಯಾರ್ಥಿಯು ಎದೆಗುಂದದಂತೆ ನೋಡಿಕೊಳ್ಳಬೇಕು. ‘ಅಯ್ಯೋ ಹೀಗಾಯಿತಲ್ಲಾ’ ಎಂಬ ಸಹಾನುಭೂತಿ ವಿದ್ಯಾರ್ಥಿಗೆ ಬೇಕಾಗಿಲ್ಲ.  ಹೀಗೆ ಮಾಡಬಾರದಾಗಿತ್ತು ಎಂಬ ಉಪದೇಶವೂ ಅಲ್ಲ.  ಪ್ರೋತ್ಸಾಹ ಬೇಕು ಅಷ್ಟೆ.

ಕೆಲವೊಮ್ಮೆ ನಾವಿಷ್ಟು ಕಷ್ಟಪಟ್ಟು ಓದಿಗೆ ಬೆಂಬಲಿಸಿದರೂ ಹೀಗಾಯಿತಲ್ಲ ಎಂಬ ಹತಾಶೆ ಭಾವನೆ ಗೊತ್ತಿಲ್ಲದಂತೆ ಹಾವ ಭಾವದಲ್ಲಿ, ಮಾತಲ್ಲಿ, ಕಾಣುವ ರೀತಿಯಲ್ಲಿ ಪ್ರಕಟಿಸುತ್ತೇವೆ. ಮೊದಲೇ ನೋವಾದ ಮನಸ್ಸಿನಲ್ಲಿ ತಾನು ತಂದೆ ತಾಯಿಯ ನಿರೀಕ್ಷೆಯನ್ನು ತಲುಪಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕವೂ ಮನೆ ಮಾಡುತ್ತದೆ. ನೆನಪಿಡಿ, ನೆರೆಮನೆಯವರಿಗೆ, ನೆಂಟರಿಷ್ಟರಿಗೆ ಯಾವ ಸ್ಪಷ್ಟೀಕರಣ ಕೊಡುವ ಅಗತ್ಯವೂ ಇಲ್ಲ. ಅವರ ಪ್ರತಿಕ್ರಿಯೆ, ಅಭಿಪ್ರಾಯ ಬಹಳ ತಾತ್ಕಾಲಿಕ, ಮಿಗಿಲಾಗಿ, ಮಗನ ಭವಿಷ್ಯಕ್ಕಿಂತ ದೊಡ್ಡದಲ್ಲ.

ಫಲಿತಾಂಶದಿಂದ ಬಹಳವಾಗಿ ನೊಂದ ಮಕ್ಕಳನ್ನು ಆದಷ್ಟು ಒಂಟಿಯಾಗಿರಲು ಬಿಡಬಾರದು. ಬಹಳ ದಿನಗಳವರೆಗೆ ಒಬ್ಬಂಟಿಯಾಗಿದ್ದರೆ, ಸದಾಕಾಲ ದುಃಖಿಯಾಗಿದ್ದರೆ, ನಡುವಳಿಕೆಯಲ್ಲಿ ಗಣನೀಯವಾಗಿ ಬದಲಾಗುತ್ತಿದರೆ ಅವರ ದಿನಚರಿಯ ಬಗ್ಗೆ ಕೊಂಚ ಗಮನ ಹರಿಸಬೇಕು. ಅದು ಖಿನ್ನತೆಗೆ ಒಳಗಾಗುತ್ತಿರುವ ಸೂಚನೆಗಳಿರಬಹುದು. ಆಗ ವೃತ್ತಿಪರ ಆಪ್ತಸಲಹೆಗಾರನ್ನು ಸಂಪರ್ಕಿಸುವುದು ಒಳಿತು.

ಶಿಕ್ಷಣ ಸಂಸ್ಥೆಯ ಪಾತ್ರ
ಶಾಲೆ ಮತ್ತು ಕಾಲೇಜುಗಳು ಸಾಮಾನ್ಯವಾಗಿ  ರಿಸಲ್ಟ್ ದಿನದ ತಯಾರಿ ದೊಡ್ಡ ನೋಟೀಸ್ ಬೋರ್ಡ್‌ಗಷ್ಟೇ ಸೀಮಿತಗೊಳಿಸಿಕೊಂಡಿರುತ್ತವೆ. ಬದಲಾಗಿ ಪ್ರತಿಯೊಬ್ಬ ಶಿಕ್ಷಕರೂ ಅಂದು ಹಾಜರಿರುವಂತೆ ನೋಡಿಕೊಂಡು ಅವರು ವಿದ್ಯಾರ್ಥಿಗಳ ಅಥವಾ ಪಾಲಕ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಬೇಕು.  ಅನುತ್ತೀರ್ಣರಾದ ವಿದ್ಯಾರ್ಥಿಗಳ  ಪಟ್ಟಿ ತಯಾರಿಸಿಕೊಂಡು ಅವರಿಗೆ  ಕೌನ್ಸೆಲಿಂಗ್ ಕೊಡುವ ಯೋಜನೆ ರೂಪಿಸಿಕೊಳ್ಳಬೇಕು. ಫಲಿತಾಂಶದ ದಿನವೇ ಫೇಲಾದ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಿಕ್ಷಕರ ಜೊತೆ ಒಂದು ಮೀಟಿಂಗ್ ಆಯೋಜನೆ ಮಾಡುವುದು ಬಹಳ ನಿರ್ಣಾಯಕ. ಇದರಿಂದ ಫಲಿತಾಂಶದಿಂದ ಘಾಸಿಗೊಂಡ ವಿಧ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ನೈತಿಕವಾಗಿ ಬೆಂಬಲ ಸಿಗುವುದರ ಜೊತೆಗೆ ಇವರು ನಮ್ಮೊಂದಿಗಿದ್ದಾರೆ ಎಂಬ ಧೈರ್ಯ ಸಿಕ್ಕು, ಶಿಕ್ಷಣ ಸಂಸ್ಥೆಯ ಬಗ್ಗೆ ಅಭಿಮಾನವೂ ಹೆಚ್ಚಾಗುತ್ತದೆ. ಸಂಸ್ಥೆಯ ಹಿರಿಮೆ ಹೆಚ್ಚುತ್ತದೆ. ವಿಧಾರ್ಥಿಗೇನಾದರೂ ಪರಿಣತರ ಆಪ್ತಸಲಹೆ (ಪ್ರೊಫೆಷನಲ್ ಕೌನ್ಸೆಲಿಂಗ್) ಬೇಕಿದ್ದಲ್ಲಿ ಪಾಲಕರಿಗೆ ಮಾರ್ಗದರ್ಶನ ನೀಡುವುದೂ ಶಿಕ್ಷಣ ಸಂಸ್ಥೆಯ ಜವಾಬ್ದಾರಿ.

ಸಮಾಜದ ಪಾತ್ರ
ಈ ಪಾಸು–ಫೇಲಿನ  ಅರ್ಥಹೀನ ಪರಿಕಲ್ಪನೆಗೆ ಮಕ್ಕಳ ಜೀವ ಬಲಿಯಾಗದಂತೆ ನೋಡಿಕೊಳ್ಳಬೇಕು. ಬರೀ ಓದಿನಲ್ಲಿ ಮಾತ್ರವಲ್ಲ, ಕ್ರೀಡೆಯಲ್ಲಿ, ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿದಂತಹ ಮಕ್ಕಳನ್ನೂ ಗುರುತಿಸಿ ಬೆನ್ನು ತಟ್ಟಬೇಕು.  ಫೇಲಾದ ಹುಡುಗರು ಸಿಕ್ಕಾಗ ಪರೀಕ್ಷೆ, ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾತಾಡುವುದಕ್ಕಿಂತ ಕಬ್ಬಡಿ ಆಟದಲ್ಲಿ ಅವನ ಪ್ರಾವೀಣ್ಯ ಬಗ್ಗೆಯೋ ಅಥವಾ ಅವಳು ಹಾಕಿದ ರಂಗೋಲಿಗೋ  ಮೆಚ್ಚುಗೆ ಸೂಚಿಸಿದರೆ ಅವರ ಮನಸ್ಸಿಗೆ ಎಷ್ಟೋ ಉಲ್ಲಾಸ ಉಂಟಾಗುತ್ತದೆ. ಸೋಲೇ ಗೆಲುವಿನ ಸೋಪಾನ ಎಂಬುದನ್ನು ನಾವು ಮೊದಲು ನೆನಪಿಸಿಕೊಂಡು ಸ್ಪಷ್ಟ ಗುರಿ ಮತ್ತು ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಪ್ರೋತ್ಸಾಹ ಪೂರ್ವಕವಾಗಿ ಮನನ ಮಾಡಿಸಿದರೆ ಅವರ ಬಾಳು ಬೆಳೆಗಿಸಿದಂತೆ.

ವಿದ್ಯಾರ್ಥಿಗಳೇ, ಪರಿಸ್ಥಿತಿ ಹೀಗೆ ನಿಭಾಯಿಸಿ
ನಿಮ್ಮ ಭಾವನೆಗಳನ್ನು ಸೂಕ್ತ ವ್ಯಕ್ತಿಯೊಡನೆ ಹಂಚಿಕೊಳ್ಳಿ.
ಎಲ್ಲರಿಂದ ದೂರ ಇರದೇ ಕುಟುಂಬದವರೊಡನೆ, ಸ್ನೇಹಿತರೊಡನೆ ಮಾತಾಡಿ. ಫೇಲಾದುದರ ತೀವ್ರ ಪರಿಣಾಮಗಳ ಬಗ್ಗೆಯಾಗಲೀ, ಮುಂದೊದಗಬಹುದಾದ ಅತೀ ಕೆಟ್ಟ ಸಂಧರ್ಭಗಳನ್ನಾಗಲೀ ಊಹಿಸಿಕೊಳ್ಳುವುದು ಬೇಡ. ಅವು ಎದುರಾದಾಗ ನೋಡಿಕೊಂಡರಾಯಿತು ಎಂದುಕೊಳ್ಳಿ.  ಆತಂಕ, ಅನಾಸಕ್ತಿ ಕಾಡುತ್ತಿದ್ದರೆ ನಿಮ್ಮ ಶಿಕ್ಷಕರೊಂದಿಗೋ, ಹಿತೈಷಿಯೊಂದಿಗೋ ಮಾತಾಡಿ ಸಹಾಯ ಪಡೆದುಕೊಳ್ಳಿ. ಚಿಂತಿಸಿ ಫಲವಿಲ್ಲ. ವಾಸ್ತವವನ್ನು ಅರ್ಥಮಾಡಿಕೊಂಡು, ಮುಂದಿನ ಹೆಜ್ಜೆಯ ಜವಾಬ್ದಾರಿ ತೆಗೆದುಕೊಳ್ಳಲು ಸಜ್ಜಾಗಿ.

ನಿಮ್ಮ ಪ್ರಾಮುಖ್ಯತೆಗಳನ್ನು, ಎದುರಿಗಿರುವ ಅಡಚಣೆಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಸೂಕ್ತರೊಡನೆ ಚರ್ಚಿಸಿ ನಿಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಗಮನಹರಿಸಿ.  ದಿನಚರಿಯಲ್ಲಿ ಭಾರೀ ಬದಲಾವಣೆ ಬೇಡ. ಸಕಾರಾತ್ಮಕ ಮನೋಭಾವ  ಇರಲಿ.
ಪರೀಕ್ಷೆಯ ಬೇಗುದಿಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮಂಡಳಿಗಳು ಕೆಲವು ಸರ್ಕಾರೇತರ ಸಂಘಟನೆಗಳ ಸಹಯೋಗದಲ್ಲಿ ಸಹಾಯವಾಣಿ (helpline)ಗಳನ್ನು ಆಯೋಜಿಸುತ್ತವೆ. ಫೋನ್ ಮೂಲಕ ಈ NGO ಗಳಿಂದ ಕೌನ್ಸೆಲಿಂಗ್ ಸಹಾಯ ಪಡೆದುಕೊಳ್ಳಬಹುದು. 
NGO ‘ಆಸರಾ’: 91-22-27546669 (24/7)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT