ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ಗೂ ಇಮೋಜಿ..!

Last Updated 21 ಜೂನ್ 2015, 19:30 IST
ಅಕ್ಷರ ಗಾತ್ರ

ಇಮೋಜಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ದಿನವಿಡೀ ಸೋಷಿಯಲ್ ನೆಟ್‌ವರ್ಕಿಂಗ್ ಮತ್ತು ಮೆಸೇಜಿಂಗ್‌, ಚಾಟ್‌ನಲ್ಲಿ ಮುಳುಗಿರುವವರಿಗೆ ಇಮೋಜಿ ಎಂದರೆ ಅದೇನೋ ಮೋಹ. ನಮ್ಮ ಮನಸ್ಸಿನ ಭಾವನೆಗಳನ್ನು ಸಂಕೇತದ ಮೂಲಕ ವ್ಯಕ್ತಪಡಿಸಲು ಮತ್ತು ಟೆಕ್ಸ್ಟ್ ಟೈಪ್ ಮಾಡಲು ಉದಾಸೀನ ಹೊಂದಿರುವವರಿಗೆ ಇಮೋಜಿ ಒಂದು ಉತ್ತಮ ಆಯ್ಕೆ. ಕೇವಲ ಒಂದು ಇಮೋಜಿ ಒತ್ತಿ ಬಿಟ್ಟರಾಯಿತು!

ಕೋಪ ಬರಲಿ, ಖುಷಿಯಾಗಲಿ, ಪ್ರೀತಿಯಾಗಲಿ, ಜಗಳವಾಗಲಿ.. ಹೀಗೆ ಎಲ್ಲಕ್ಕೂ ಒಂದು ಇಮೋಜಿ ಇದ್ದೇ ಇದೆ. ಇನ್ನು ನಲ್ಲೆಯೊಡನೆ ಮಾತು ಬಿಟ್ಟು ಜಗಳವಾಡುವವರಿಗಂತೂ ಇಮೋಜಿ ಮಹದುಪಕಾರ ಮಾಡುತ್ತದೆ. ಮೆಚ್ಚುಗೆ ಸೂಚಿಸಲು ಮತ್ತು ಕಮೆಂಟ್ ಮಾಡಲು, ಹೀಗೆ ಇಮೋಜಿ ಮಹಿಮೆ ಅಪಾರ.

ಹೀಗೆ ಬಹುವಿಧವಾಗಿ ಜನಪ್ರಿಯವಾಗಿರುವ ಇಮೋಜಿಯನ್ನು ಬ್ರಿಟನ್ ಮೂಲದ ಬ್ಯಾಂಕಿಂಗ್ ಸೇವೆ ಒದಗಿಸುವ ಸಂಸ್ಥೆಯೊಂದು ತನ್ನ ಮೊಬೈಲ್-ಟ್ಯಾಬ್ಲೆಟ್ ಬ್ಯಾಂಕಿಂಗ್‌ ಆ್ಯಪ್‌ಗೆ ಪಾಸ್‌ವರ್ಡ್ ಆಗಿ ಬಳಸಿಕೊಳ್ಳುತ್ತಿದೆ. ಅಚ್ಚರಿ ಎನಿಸಿದರೂ, ಹಲವು ವಿಧದಲ್ಲಿ ಈ ವ್ಯವಸ್ಥೆಯನ್ನು ಪರೀಕ್ಷಿಸಿಯೇ ಬಳಿಕ ನಿರ್ಧಾರ ಕೈಗೊಂಡಿದ್ದಾರೆ. ಈ ಆ್ಯಪ್‌ ಮೂಲಕ ಬ್ಯಾಂಕಿಂಗ್‌ಗೆ ಲಾಗಿನ್ ಆಗಲು ನೀವು ಯಾವುದೇ ಪಾಸ್‌ವರ್ಡ್ ಅಥವಾ ಪಿನ್ ನಮೂದಿಸಬೇಕಾಗಿಲ್ಲ. ಬದಲಾಗಿ ನಾಲ್ಕು ಇಮೋಜಿಗಳನ್ನು ಬಳಸಿದರಾಯಿತು.

ಅಂಕಿ- ಸಂಖ್ಯೆಗಳನ್ನು ಪಿನ್ ನಂಬರ್ ಆಗಿ ಬಳಸುವ ಸಾಂಪ್ರದಾಯಿಕ ವಿಧಾನಕ್ಕಿಂತ ಈ ರೀತಿಯಲ್ಲಿ ಇಮೋಜಿ ಬಳಸಿ ಲಾಗಿನ್ ಆಗುವುದು ತುಂಬಾ ಸುಲಭ ಮತ್ತು ಸುರಕ್ಷಿತ ಎನ್ನುವುದು ಇದನ್ನು ತಯಾರಿಸಿದವರ ಅಭಿಪ್ರಾಯ. ಈ ಹಿಂದೆ ಮೈಕ್ರೋಸಾಫ್ಟ್ ತನ್ನ ವಿಂಡೋಸ್ 8 ಆವೃತ್ತಿಯಲ್ಲಿ ‘ಪಿಕ್ಚರ್ ಪಾಸ್‌ವರ್ಡ್‌’ ಎಂಬ ಆಯ್ಕೆಯನ್ನು ಹೊಂದಿತ್ತು. ಅಂದರೆ ಬಳಕೆದಾರರು ಅಲ್ಲಿ ತಮ್ಮ ಆಯ್ಕೆಯ ಚಿತ್ರದ ಮೂಲಕ ಲಾಗಿನ್ ಆಗಲು ಅವಕಾಶವಿತ್ತು. ಬಳಿಕ ಆ್ಯಪಲ್ ಕೂಡಾ ತನ್ನ ಆ್ಯಪ್‌ಗಳಿಗೆ ಇಮೋಜಿ ಪಾಸ್‌ವರ್ಡ್‌ನ ಆಯ್ಕೆಯನ್ನು ನೀಡಿತ್ತು.

ಇದೀಗ ಬ್ಯಾಂಕಿಂಗ್‌ ಆ್ಯಪ್‌ಗೆ ಇಮೋಜಿ ಪಾಸ್‌ವರ್ಡ್ ನೀಡಿರುವುದು ಹೊಸತು. ಬಳಕೆದಾರರು ತಮ್ಮ ಪಾಸ್‌ ವರ್ಡ್‌ ಸಂಖ್ಯೆಗಳಿಗಿಂತ ಚಿತ್ರಗಳನ್ನು ಬಹಳ ಸುಲಭವಾಗಿ ನೆನಪಿಟ್ಟುಕೊಳ್ಳುತ್ತಾರೆ, ಒಂದು ಚಿತ್ರವನ್ನು ನೋಡಿದಾಕ್ಷಣ ಅದರ ಹಿಂದೆ ಯಾವುದೋ ನೆನಪು ಅವರಿಗೆ ಇರುತ್ತದೆ. ಅದರ ಬದಲಾಗಿ ಸಂಖ್ಯೆಯನ್ನು ನೋಡಿದರೆ ಆ ರೀತಿ ಅನ್ನಿಸುವುದಿಲ್ಲ ಎನ್ನುವುದು ಇದರ ಹಿಂದಿನ ತರ್ಕ.

ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ ಜನರು ನಿಯಮಿತವಾಗಿ ಚಾಟ್ ಮಾಡುವಾಗ ಅಕ್ಷರದ ಬದಲು, ಇಮೋಜಿಯನ್ನೇ ಹೆಚ್ಚಾಗಿ ಬಳಸುತ್ತಾರಂತೆ. ಅಲ್ಲದೇ 44 ಇಮೋಜಿಗಳಿಂದ ವಿಭಿನ್ನ ಕಾಂಬಿನೇಷನ್‌ನಲ್ಲಿ ಪುನಾರಾವರ್ತನೆಯಾಗದಂತೆ ಸುಮಾರು 35 ಲಕ್ಷ ಪಾಸ್‌ವರ್ಡ್‌ಗಳನ್ನು ಸೃಷ್ಟಿಸಬಹುದು. ಆದರೆ ಸಂಖ್ಯೆಗಳಿಂದ ಕೇವಲ 7290 ಕಾಂಬೀನೇಷನ್‌ಗಳನ್ನು ಸೃಷ್ಟಿಸ ಬಹುದು. ಇಮೋಜಿ ಪಾಸ್‌ವರ್ಡ್‌ಗಳು ಪಿನ್‌ ನಂಬರ್‌ಗಳಿಗಿಂತ 400 ಪಟ್ಟು ಹೆಚ್ಚು ಸುರಕ್ಷಿತ ಎನ್ನುವುದು ಬ್ಯಾಂಕಿಂಗ್‌ ಸಂಸ್ಥೆಯ ಅಭಿಪ್ರಾಯ.

ಹಾಗಾಗಿ ಇನ್ನು ಮುಂದೆ ಸಾಂಪ್ರದಾಯಿಕ 4 ಸಂಖ್ಯೆಯ ಪಿನ್‌ ಬದಲಾಗಿ ಇಮೋಜಿಗಳೇ ಎಲ್ಲ ಕಡೆಯೂ ಬರುವ ದಿನಗಳು ದೂರವಿಲ್ಲ. ಅದರಲ್ಲೂ ಕೇವಲ ಇಮೋಜಿಯನ್ನೇ ಬಳಸುವ ಯುವಜನತೆಯನ್ನು ಗುರಿಯಾಗಿರಿಸಿಕೊಂಡು ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಇದು ಯುವ ಜನಾಂಗದ ಪಾಸ್‌ವರ್ಡ್ ಎಂದು ಬಳಕೆದಾರರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT