ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗುತಿ ಮುತ್ತು ಚೆಂದ...

Last Updated 30 ಜೂನ್ 2015, 19:39 IST
ಅಕ್ಷರ ಗಾತ್ರ

ಮಹಿಳೆಯರ ಆಭರಣಗಳಿಗೆ ಸಂಬಂಧಿಸಿದಂತೆ ದೊಡ್ಡ ಪಟ್ಟಿಯನ್ನೆ ತಯಾರಿಸಬಹುದು. ಇದರಲ್ಲಿ ಚಿಕ್ಕ ಗಾತ್ರದ ಮೂಗುತಿಗೆ ಮಾರು ಹೋಗದ ಮಹಿಳೆಯರೆ ಇಲ್ಲವೆಂದು ಹೇಳಬಹುದು. ಆಭರಣ ಪ್ರಿಯ ಮಹಿಳೆಯರು ಮೂಗುತಿಗೆ ವಿಶೇಷ ಆದ್ಯತೆ ನೀಡುತ್ತಾರೆ.

ಎಷ್ಟೇ ಬಡವರಾದರೂ ಕನಿಷ್ಠ ಪಕ್ಷ ಒಂದು ಗ್ರಾಂ ಚಿನ್ನವನ್ನಾದರೂ ಮೂಗುತಿಯ ರೂಪದಲ್ಲಿ ಹೊಂದಲು ಆಸೆ ಪಡುತ್ತಾರೆ.
ನತ್ತು, ಮೂಗುತಿ, ಮುಕ್ಕುಪುಡುಕ, ನತೂರಿ, ಬೌರಿಯಾ... ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುವ ಮೂಗುತಿಯು ಭಿನ್ನ ಸಂಪ್ರದಾಯ, ಆಚರಣೆಗಳು ಹಾಗೂ ಜೀವನಶೈಲಿಗೆ ತಕ್ಕಂತೆ ಗಾತ್ರ, ವಿನ್ಯಾಸದಲ್ಲೂ ಹಲವು ವಿಧಗಳನ್ನು ಹೊಂದಿದೆ. 

ಮಧ್ಯ ಪ್ರಾಚ್ಯದ ಮೊಗಲರ ಕಾಲದಲ್ಲಿ ವಾಡಿಕೆಗೆ ಬಂದಿರುವ ಮೂಗುತಿಯ ಬಳಕೆಯನ್ನು ದಕ್ಷಿಣ ಏಷ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಬಹುದು.

ಮೂಗುತಿಯು ಕೇವಲ ಮಹಿಳೆಯರ ಮುಖದ ಅಂದವನ್ನು ಹೆಚ್ಚಿಸುವ ಆಭರಣವಾಗಿರದೆ ಸಂಪ್ರದಾಯದ ಪ್ರತೀಕವಾಗಿದೆ.
ಆಧುನಿಕ ದಿನಗಳಲ್ಲಿ ಫ್ಯಾಶನ್‌ ಆಗಿದ್ದರೂ ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡುವ ಭಾರತದಲ್ಲಿ  ಮೂಗುತಿಗೆ  ನೀಡಿರುವ ಮೌಲ್ಯವನ್ನು ವಿವಿಧ ಸಾಂಪ್ರದಾಯಿಕ ಆಚರಣೆಗಳಲ್ಲಿ ಕಾಣಬಹುದು.

ಚಿಕ್ಕ ಗಾತ್ರದ ಮುತ್ತಿನ ಮಣಿಯಿಂದ ಹಿಡಿದು ಬಳೆ ಗಾತ್ರದ ಜೊತೆಗೆ ಮೂಗಿನಿಂದ ಕೂದಲಿಗೆ ಸಿಗಿಸಿಕೊಳ್ಳುವ ಕೊಂಡಿ ವಿನ್ಯಾಸದ ಮೂಗುತಿಗಳನ್ನು ಕಾಣಬಹುದು.

ಫ್ಯಾಶನ್‌ಗಾಗಿ ಚಿಕ್ಕ ಗಾತ್ರದ ಮೂಗುತಿಗಳನ್ನು ಧರಿಸಿದರೂ, ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ತಮ್ಮ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ವಾಡಿಕೆಯಲ್ಲಿರುವ ವಿಶೇಷ ವಿನ್ಯಾಸದ ಮೂಗುತಿಗಳನ್ನು ಮಹಿಳೆಯರು ತಪ್ಪದೇ ಧರಿಸುತ್ತಾರೆ. ಮುಖದ ಅಂದ ಹೆಚ್ಚಿಸುವ  ಜೊತೆಗೆ ತುಂಬಾ ಅಂದವಾಗಿ ಕಾಣುವ ಮಹಿಳೆಯರನ್ನು ‘ಮೂಗುತಿ ಸುಂದರಿ’ ಎಂದೂ ವರ್ಣಿಸುತ್ತಾರೆ. ಅಷ್ಟರ ಮಟ್ಟಿಗೆ ಮೂಗುತಿ ಜನಪ್ರಿಯವಾಗಿದೆ.

ಸಾಮಾನ್ಯವಾಗಿ ಚಿನ್ನದ ಮೂಗುತಿಯು ಹೆಚ್ಚಾಗಿ ಕಾಣುತ್ತೇವೆ. ಆದರೆ ಕೆಲವರು ತಮ್ಮ ಆಸಕ್ತಿಗೆ ತಕ್ಕಂತೆ ಬೆಳ್ಳಿಯದ್ದನ್ನೂ ಧರಿಸುತ್ತಾರೆ. ಶಾಶ್ವತವಾಗಿ ಮೂಗುತಿ ಧರಿಸಲು ಇಷ್ಟಪಡದೆ ಇರುವವರು ಸಂದರ್ಭಕ್ಕೆ ತಕ್ಕಂತೆ ಪ್ರೆಸ್ಸಿಂಗ್‌ ಮೂಗುತಿಯನ್ನು  ಇಟ್ಟುಕೊಳ್ಳುತ್ತಾರೆ.
ಫ್ಯಾನ್ಸಿಯ ಜೊತೆಗೆ ಆರ್ಟಿಫಿಶಿಯಲ್‌ ಮೂಗುತಿಗಳನ್ನು ಆಯ್ಕೆ ಮಾಡಿಕೊಳ್ಳುವವರ ಅಭಿರುಚಿಗೆ ತಕ್ಕಂತೆ  ಪ್ರೆಸ್ಸಿಂಗ್‌ ಮೂಗುತಿಗಳನ್ನು ಚಿನ್ನದ ರೂಪದಲ್ಲೂ ಕಾಣಬಹುದು.

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಮೂಗುತಿಯನ್ನು ಇಡುವುದು ಹಲವು ಸಂಸ್ಕೃತಿಗಳಲ್ಲಿ ವಿಶೇಷ ಆಚರಣೆಯಾಗಿದೆ.
ಮೂಗಿನ ಯಾವುದಾದರೂ ಒಂದು ಬದಿಯಲ್ಲಿ ಮೂಗುತಿಯನ್ನು ಧರಿಸುವುದು ಸಾಮಾನ್ಯ. ಆದರೆ ಹಿಂದಿನ ಕಾಲದಲ್ಲಿ ಮೂಗಿನ ಎರಡು ಬದಿಯ ಜೊತೆಗೆ, ಮೂಗಿನ ಕೆಳಭಾಗದಲ್ಲೂ ಅಲಂಕಾರಿಕ ಮೂಗುತಿಗಳನ್ನು ಧರಿಸುತ್ತಿದ್ದರು. ಫ್ಯಾಶನ್‌ಗಾಗಿ ಇತ್ತೀಚೆಗೆ ಈ ರೀತಿಯಲ್ಲಿ ಮೂಗುತಿಗಳನ್ನು ಧರಿಸುವುದನ್ನು ಕಾಣಬಹುದು. ಕೇವಲ ಚಿನ್ನದ ಕುಸುರಿಯ ಮೂಗುತಿಗಳು ಮಾತ್ರವಲ್ಲದೇ, ಚಿನ್ನದ ಜೊತೆಗೆ ಕುಂದನ್‌, ವಿವಿಧ ಬಣ್ಣದ ಹರಳುಗಳು, ವಜ್ರ, ಮುತ್ತಿನ ಮಣಿಗಳಿಂದ ತಯಾರಿಸಿದ ವಿವಿಧ ವಿನ್ಯಾಸದ  ಮೂಗುತಿಗಳು ಜನಪ್ರಿಯವಾಗಿವೆ.

ಕೂದಲಿಗೆ ಸಿಕ್ಕಿಸಿಕೊಳ್ಳುವ ಬಳೆ ಗಾತ್ರದ ದೊಡ್ಡ ಮೂಗುತಿ ಇತ್ತೀಚೆಗೆ ಹೆಚ್ಚಾಗಿ ಜನರನ್ನು ಆಕರ್ಷಿಸುತ್ತಿದೆ. ಕೆಲವೊಂದು ಸಂಸ್ಕೃತಿಗೆ ಮೀಸಲಾಗಿದ್ದ ಈ ಮೂಗುತಿಯನ್ನು  ಆಧುನಿಕ ದಿನಗಳಲ್ಲಿ ಸೌಂದರ್ಯದ ಬಗೆಗೆ ಮಹಿಳೆಯರು ಹೆಚ್ಚು ಕಾಳಜಿ ಹೊಂದುತ್ತಿರುವುದರಿಂದ ಯಾವುದೇ ತಾರತಮ್ಯವಿಲ್ಲದೆ ಮದುವೆಯ ಸಂದರ್ಭದಲ್ಲಿ ಮದುಮಗಳು ಅಲಂಕಾರಕ್ಕಾಗಿ ಬಳೆ ಆಕಾರದ ಮೂಗುತಿ ಧರಿಸುವುದು  ಫ್ಯಾಶನ್‌ ಆಗಿದೆ.

ಮೂಗುತಿಯ ಬೆಲೆ   ಅದರ  ಗಾತ್ರ, ವಿನ್ಯಾಸ ಹಾಗೂ ಬ್ಯಾಂಡ್‌ಗೆ ತಕ್ಕಂತೆ ಇರುತ್ತದೆ. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ ಹಿಂದೆ ಮಹಿಳೆಯರು ಮಾತ್ರವಲ್ಲದೇ  ಪುರುಷರು ಸಹ ಮೂಗುತಿ ಧರಿಸುತ್ತಿದ್ದರು. ಕ್ರಮೇಣ ಪುರುಷರಲ್ಲಿ ಮೂಗುತಿ ಧರಿಸುವ ವಾಡಿಕೆ ಕಡಿಮೆ ಆಗಿದೆ. ಆದರೆ ಫ್ಯಾಶನ್‌ ವಿಷಯದಲ್ಲಿ ಮಹಿಳೆಯಷ್ಟೇ ಆಸಕ್ತಿ ಹೊಂದಿರುವ ಈಗಿನ ಕಾಲದ ಪುರುಷರು ಫ್ಯಾಶನ್‌ಗಾಗಿ ಫ್ಯಾನ್ಸಿ ಮೂಗುತಿಯನ್ನು ಧರಿಸಿ ನೋಡುಗರ ಗಮನ ಸೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT