ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆಯಾಕಾರದ ಮನೆ!

Last Updated 9 ಜೂನ್ 2015, 19:30 IST
ಅಕ್ಷರ ಗಾತ್ರ

ಕ್ಷಣಕ್ಕೆ ನೋಡಿದರೆ ಉಷ್ಟ್ರಪಕ್ಷಿಯ  ಮೊಟ್ಟೆಯೋ, ಇಲ್ಲವೆ ಡೈನೋಸಾರ್‌ನ ಮೊಟ್ಟೆಯಂತೆಯೋ ಕಾಣಿಸುವ ಇದು ಮೊಟ್ಟೆಯಲ್ಲ. ಬದಲಾಗಿ ಮೊಟ್ಟೆಯಂತೆಯೇ ಕಾಣಿಸುವ ಮನೆ! ಹೌದು ಮೊಟ್ಟೆಯಾಕಾರದ ಇದು ವಾಸಕ್ಕೆ ಯೋಗ್ಯವಾದ ಮನೆ. ಇದು ಇರುವುದು ಸ್ಲೋವಾಕಿಯದಲ್ಲಿ. ಅಲ್ಲಿನ ನೈಸ್ ಆರ್ಕಿಟೆಕ್ಟ್ ಸಂಸ್ಥೆಯ ಇಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳ ವಿನ್ಯಾಸದಿಂದ ಸಿದ್ಧಗೊಂಡಿದೆ.

ಸ್ವಂತ ಮನೆ ಕೊಳ್ಳುವುದೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ, ಹಾಗು ಸೂರಿಲ್ಲದೆ ಸೊರಗುತ್ತಿರುವವರಿಗೆ ಪರಿಹಾರವಾಗಿ ಈ ಪ್ರಯೋಗ ಕೈಗೊಂಡ ವಿನ್ಯಾಸಕಾರರು, ಇದೀಗ ಸಂಪೂರ್ಣ ಪರಿಸರ ಸ್ನೇಹಿ ಮತ್ತು ಸ್ವಾವಲಂಬಿಯಾಗಿ ತನಗೆ ಬೇಕಾಗುವ ವಿದ್ಯುತ್ ಉತ್ಪಾದಿಸುವ ಮನೆಯನ್ನು ತಯಾರಿಸಿದ್ದಾರೆ.

ಈ ಮನೆಯನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು, ಅಲ್ಲದೆ ಇದನ್ನು ಇರಿಸಲು ಹೆಚ್ಚುವರಿ ಏನೂ ಮಾಡಬೇಕಾಗಿಲ್ಲ. ತಂದು ಸ್ಥಾಪಿಸಿದರೆ ಮುಗಿಯಿತು, ಬಳಿಕ ಬೇಡವೆಂದಾದರೆ ಬೇರೆಡೆಗೆ ಸ್ಥಳಾಂತರಿಸಬಹುದು.

ಈ ಮನೆಯ ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ. ಜೊತೆಗೆ ಚಿಕ್ಕದೊಂದು ಗಾಳಿಯಂತ್ರವೂ ಇದೆ. ಇವೆರಡೂ ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತವೆ. ಸಾಕಷ್ಟು ಬಿಸಿಲು ಇದ್ದಾಗ, ಸೋಲಾರ್ ಕೆಲಸ ಮಾಡುತ್ತದೆ. ಗಾಳಿ ಬೀಸುವಾಗ, ಗಾಳಿಯಂತ್ರಕ್ಕೆ ಅಳವಡಿಸಿರುವ ಟರ್ಬೈನ್ ತಿರುಗಿ ವಿದ್ಯುತ್ ಉತ್ಪಾದನೆಯಾಗಿ, ಬ್ಯಾಟರಿಯಲ್ಲಿ ಶೇಖರವಾಗುತ್ತದೆ. ಇಷ್ಟಕ್ಕೇ ನಿಲ್ಲದೇ ಮಳೆ ಬಂದಾಗ ಮತ್ತು ಮಂಜು ಬಿದ್ದಾಗ, ಆ ನೀರನ್ನೂ ಈ ಮನೆ ಸಂಗ್ರಹಿಸುತ್ತದೆ, ಮಳೆಕೊಯ್ಲಿನ ಮೂಲಕ ಸಂಗ್ರಹಿಸಿದ ನೀರನ್ನು ಶುದ್ಧೀಕರಿಸಿ, ಮನೆಯ ಉಪಯೋಗಕ್ಕೆ ಒದಗಿಸುತ್ತದೆ, ಹೀಗಾಗಿ ಈ ಮನೆ ಸಂಪೂರ್ಣ ಪರಿಸರ ಸ್ನೇಹಿ ಮತ್ತು ಸ್ವಾವಲಂಬಿ.

ಇದರ ನಿರ್ವಹಣೆಯೂ ತುಂಬ ಸುಲಭ, ಮನೆಯೊಳಗೆ ಉತ್ಪತ್ತಿಯಾಗುವ ಬ್ಯಾಕ್ಟೀರಿಯ, ಕ್ರಿಮಿಗಳನ್ನು ಸ್ವಯಂ ನಾಶಪಡಿಸುವ ತಂತ್ರಜ್ಞಾನ ಹೊಂದಿದೆ. ಈ ಮನೆ 4.5 ಮೀಟರ್ ಉದ್ದ, 2.5 ಮೀಟರ್ ಅಗಲ ಮತ್ತು 2.5 ಮೀಟರ್ ಎತ್ತರವಿದೆ. ಈ ಪುಟ್ಟ ಮನೆಯಲ್ಲಿ ಒಂದು ಅಡುಗೆ ಕೋಣೆ, ಸ್ನಾನದ ಕೋಣೆ-ಶೌಚಾಲಯ, ಮತ್ತು ಒಂದು ರೂಮು ಇರುತ್ತದೆ. ಒಂದು ಮಡಚಬಲ್ಲ ಬೆಡ್ ಮತ್ತು ಒಂದು ಟೇಬಲ್, ಎರಡು ಚಯರ್‌ಗಳಿಗೆ ಸ್ಥಳಾವಕಾಶವಿದ್ದು, ಇಬ್ಬರು ವಯಸ್ಕರು ಯಾವುದೇ ತೊಂದರೆಯಿಲ್ಲದೇ ಜೀವಿಸಬಹುದು. ದಂಪತಿಗಳಿಗೆ, ಬ್ಯಾಚುಲರ್‌ಗಳಿಗೆ ಇದು ಒಂದು ಉತ್ತಮ ಆಯ್ಕೆ ಮತ್ತು ಯಾವುದೇ ಕಿರಿಕಿರಿ ಇಲ್ಲದೇ ಜೀವನ ಮಾಡಲು ಸಹಕಾರಿ. ಒಂದೇ ಜಾಗ ಬೋರ್ ಎನಿಸಿದರೆ ಬೇರೆಡೆಗೆ ಸಾಗಿಸಿದರಾಯಿತು.

750 ವಾಟ್ ವಿದ್ಯುತ್ ಶೇಖರಿಸುವ ಬ್ಯಾಟರಿಯಿಂದ ಮನೆಯಲ್ಲಿ ಬಳಸುವ ಉಪಕರಣಗಳನ್ನು ಚಾರ್ಜ್ ಮಾಡಬಹುದು. ಯಾವುದೇ ಸಂದರ್ಭವಿರಲಿ, ವಿದ್ಯುತ್ ಕೈಕೊಡುವ ಪ್ರಶ್ನೆಯೇ ಇರುವುದಿಲ್ಲ. ಈ ಮನೆಗೆ ನೈಸ್ ಆರ್ಕಿಟೆಕ್ಟ್ ಕಂಪೆನಿ ‘ಇಕೋ ಕ್ಯಾಪ್ಸೂಲ್’ ಎಂದು ಹೆಸರು ನೀಡಿದೆ. ಇತ್ತೀಚಿಗೆ ವಿಯೆನ್ನಾದಲ್ಲಿ ನಡೆದ ಜಾಗತಿಕ ಮೇಳದಲ್ಲಿ ಈ ಮೊಟ್ಟೆ ಮನೆಯನ್ನು ಪರಿಚಯಿಸಿದ್ದು, ಈಗಾಗಲೇ ಬುಕಿಂಗ್ ಆರಂಭವಾಗಿದೆ. ಬುಕ್ ಮಾಡಿದವರಿಗೆ 2016ರ ವೇಳೆಗೆ ಕಂಪೆನಿಯು ಮನೆಯನ್ನು ಒದಗಿಸಲಿದೆ.

ಈಗಾಗಲೇ ಮನೆ ಹೊಂದಿದ್ದು, ಹೆಚ್ಚುವರಿ ಕೋಣೆ ಜೋಡಿಸುವವರು ಇನ್ನು ಚಿಂತಿಸಬೇಕಾಗಿಲ್ಲ, ಮನೆಯ ತಾರಸಿಯಲ್ಲಿ ಈ ಮೊಟ್ಟೆ ಮನೆಯನ್ನು ಸ್ಥಾಪಿಸಿದರೆ ಆಯಿತು, ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕೆ ಚಿಂತಿಸಬೇಕಾಗಿಲ್ಲ. ಅಲ್ಲದೇ ಇಬ್ಬರಿಗೆ ಆರಾಮವೆನಿಸುವಷ್ಟು ಸ್ಥಳಾವಕಾಶ ಲಭಿಸುವುದರಿಂದ ಬಾಡಿಗೆಗೆ ಕೊಡಲೂ ಅಡ್ಡಿಯಿಲ್ಲ.

ಹೋಮ್ ಸ್ಟೇ, ಕಾಟೇಜ್ ಸೇವೆ ನೀಡುವವರಿಗೂ ಇದರಿಂದ ಅನುಕೂಲವಾಗಲಿದೆ. ಇದರ ಬೆಲೆಯ ಬಗ್ಗೆ ಸದ್ಯ ಕಂಪೆನಿಯು ಯಾವುದೇ ಮಾಹಿತಿ ನೀಡಿಲ್ಲ, ಅದಾಗ್ಯೂ ಇತರ ದೇಶಗಳಿಗೆ ಇದನ್ನು ಸಾಗಿಸಲು ಬೇಕಾಗುವ ಅಂದಾಜು ವೆಚ್ಚವನ್ನು ನೀಡಿದೆ. ನಮ್ಮಲ್ಲೂ ಈ ರೀತಿಯ ಮೊಟ್ಟೆ ಮನೆ ಕಾಲಿಟ್ಟರೆ ಮನೆಯ ಸಮಸ್ಯೆಯಲ್ಲಿರುವವರಿಗೆ ಉಪಕಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT